ಕ್ಲಷ್ಟರ್ ವ್ಯಾಪ್ತಿಗೆ ಜಿಲ್ಲೆ ಪರಿಗಣನೆ: ಸಂಗಣ್ಣ ಮನವಿ
ತೋಟಗಾರಿಕೆ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರ ಭೇಟಿ | ಸಕಾರಾತ್ಮಕವಾಗಿ ಸ್ಪಂದನೆ
ಕೊಪ್ಪಳ: ಚಿತ್ರದುರ್ಗ ದಲ್ಲಿ ನಿರ್ಮಿಸುವ ತೋಟಗಾರಿಕೆ ಕ್ಲಸ್ಟರ್ ವ್ಯಾಪ್ತಿಗೆ ಕೊಪ್ಪಳ ಜಿಲ್ಲೆಯನ್ನು ಸೇರಿಸಬೇಕು ಹಾಗೂ ಜಿಲ್ಲೆಯಲ್ಲಿ ದಾಳಿಂಬೆ ಬೆಳೆಯುವ ರೈತರಿಗೆ ಸಿಡಿಪಿ ಕಾರ್ಯಕ್ರಮದಡಿ ಪ್ರೋತ್ಸಾಹಧನ ನೀಡಬೇಕು ಎಂದು ಸಂಸದ ಸಂಗಣ್ಣ ಕರಡಿ ಅವರು ಕೇಂದ್ರ ತೋಟಗಾರಿಕೆ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ರಂಜನ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ದೆಹಲಿಯಲ್ಲಿ ಕೇಂದ್ರ ತೋಟಗಾರಿಕೆ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ರಂಜನ್ ಅವರನ್ನು ಭೇಟಿ ಮಾಡಿದ ಸಂಸದರು, ರಾಷ್ಟ್ರೀಯ ತೋಟಗಾರಿಕಾ ಮಂಡಳಿಯು ದೇಶದಾದ್ಯಂತ ತೋಟಗಾರಿಕೆ ಕ್ಲಸ್ಟರ್ ಅಭಿವೃದ್ಧಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದೆ. ಯೋಜನೆಯ ಭಾಗವಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಕ್ಲಸ್ಟರ್ ನಿರ್ಮಾಣ ಅಂತಿಮಗೊಳಿಸಲಾಗಿದೆ ಎಂದರು.
ಈ ನಿಟ್ಟಿನಲ್ಲಿ ದಾಳಿಂಬೆ ರಫ್ತುದಾರರು ಹಾಗೂ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ಚರ್ಚೆಯ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ 5 ಸಾವಿರ ಕ್ಕೂ ಹೆಚ್ಚು ಹೆಕ್ಟೇರ್ ದಾಳಿಂಬೆ ಬೆಳೆ ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ ಸರಿಯಾದ ಮಾರುಕಟ್ಟೆ, ಮೂಲಸೌಕರ್ಯಗಳ ಕೊರತೆ ಎದುರಿಸಲಾಗುತ್ತಿದೆ. ಗುಣಮಟ್ಟದ ದಾಳಿಂಬೆ ಬೆಳೆದ ರೈತರಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಬೇಕಿದೆ ಎಂದು ತಿಳಿಸಿದರು.
ಚಿತ್ರದುರ್ಗದಲ್ಲಿ ನಿರ್ಮಾಣವಾಗುವ ಕ್ಲಷ್ಟರ್ ಗೆ ಕೊಪ್ಪಳ ಜಿಲ್ಲೆಯನ್ನು ಸೇರಿಸಿಲ್ಲ. ಇಲ್ಲಿನ ರೈತರು ಸಿಡಿಪಿ ಕಾರ್ಯಕ್ರಮದ ಅಡಿಯಲ್ಲಿ ಪ್ರೋತ್ಸಾಹಧನಗಳನ್ನು ಪಡೆಯಲು ಅರ್ಹರಲ್ಲ. ಆದ್ದರಿಂದ ಕೊಪ್ಪಳ ಜಿಲ್ಲೆಯ ದಾಳಿಂಬೆ ರೈತ ಸಮುದಾಯದವರಿಗೆ ಸಿಡಿಪಿ ಕಾರ್ಯಕ್ರಮದಡಿ ಪ್ರೋತ್ಸಾಹಧನವನ್ನು ಪಡೆಯಲು, ಕೊಪ್ಪಳ ಜಿಲ್ಲೆಯನ್ನು ಕ್ಲಸ್ಟರ್ ವ್ಯಾಪ್ತಿ ಗೆ ಸೇರಿಸಲು ಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ದಾಳಿಂಬೆ ಬೆಳೆಯಲಾಗುತ್ತಿದೆ. ರೈತರಿಗೆ ಸಿಡಿಪಿ ಕಾರ್ಯಕ್ರಮದಡಿ ಪ್ರೋತ್ಸಾಹಧನ, ಚಿತ್ರದುರ್ಗ ಜಿಲ್ಲೆಯಲ್ಲಿ ನಿರ್ಮಾಣವಾಗುವ ಕ್ಲಸ್ಟರ್ ವ್ಯಾಪ್ತಿಗೆ ಜಿಲ್ಲೆಯನ್ನು ಸೇರ್ಪಡೆಗೊಳಿಸಲು ಮನವಿ ಸಲ್ಲಿಸಿದ್ದೇನೆ. ತೋಟಗಾರಿಕೆ ವ್ಯವಸ್ಥಾಪಕ ನಿರ್ದೇಶಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
– ಸಂಗಣ್ಣ ಕರಡಿ, ಸಂಸದ.
Comments are closed.