ಹನುಮಮಾಲಾ ಕಾರ್ಯಕ್ರಮಕ್ಕೆ ಮುಜರಾಯಿ ಇಲಾಖೆಯಿಂದ ಅನುದಾನ-ರಾಮಲಿಂಗಾರೆಡ್ಡಿ

Get real time updates directly on you device, subscribe now.

ಐತಿಹಾಸಿಕ ಹನುಮಮಾಲಾ ಕಾರ್ಯಕ್ರಮದ ಸಿದ್ದತೆ ಪರಿಶೀಲಿಸಿದ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ

ಕೊಪ್ಪಳ :  ಅಂಜನಾದ್ರಿಯಲ್ಲಿ
ಡಿಸೆಂಬರ್ 23 ಮತ್ತು ಡಿಸೆಂಬರ್ 24ರಂದು ನಡೆಯಲಿರುವ ಐತಿಹಾಸಿಕ ಹನುಮಮಾಲಾ ಕಾರ್ಯಕ್ರಮದ ಸಿದ್ದತೆ ಕುರಿತು ಸಾರಿಗೆ ಹಾಗೂ ಮುಜರಾಯಿ ಇಲಾಖೆಯ ಸಚಿವರಾದ ರಾಮಲಿಂಗಾರೆಡ್ಡಿ ಅವರು ಡಿಸೆಂಬರ್ 19ರಂದು ಸಭೆ ನಡೆಸಿ ಚರ್ಚಿಸಿದರು.
ಪೂರ್ವ ನಿಗದಿಯಂತೆ ಹುಲಿಗಿಯ ದೇವಸ್ಥಾನ ಭೇಟಿ ಬಳಿಕ ನೇರವಾಗಿ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಆಂಜನೇಯ ದೇವರ ದರ್ಶನ ಪಡೆದು ಬಳಿಕ ವಿರುಪಾಪುರ ಗಡ್ಡಿಯ ನಿರೀಕ್ಷಣಾ ಮಂದಿರದಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗಂಗಾವತಿಯ ಶಾಸಕರ ಸಮ್ಮುಖದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಹಲವಾರು ವಿಷಯಗಳನ್ನು ಚರ್ಚಿಸಿ ಸಿದ್ಧತೆಯ ಬಗ್ಗೆ ಮಾಹಿತಿ ಪಡೆದರು.
ಈ ವೇಳೆ ಮಾತನಾಡಿದ ಸಚಿವರು, ವಾಹನಗಳಿಗೆ ಪಾರ್ಕಿಂಗ್, ಸಾರ್ವಜನಿಕರಿಗೆ ಸಹಾಯವಾಣಿ ಕೇಂದ್ರ,‌ ಭಕ್ತಾಧಿಗಳಿಗೆ ವಿರಮಿಸಲು ಪೆಂಡಾಲ್ ವ್ಯವಸ್ಥೆ ಎಲ್ಲಾ ಕಡೆಗೆ ಅಚ್ಚುಕಟ್ಟಾಗಿ ನಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಹನುಮಮಾಲಾ
ಕಾರ್ಯಕ್ರಮಕ್ಕೆ ಹಣಕಾಸಿನ ತೊಂದರೆಯಾಗದಂತೆ ಮುಜರಾಯಿ ಇಲಾಖೆಯಿಂದ ಅನುದಾನ ನೀಡಲಾಗುವುದು ಎಂದರು.
ಸಿಸಿಟಿವಿ ಹೆಚ್ಚಿಗೆ ಅಳವಡಿಸಿ ಅಪರಾಧ ಕೃತ್ಯಗಳನ್ನು ತಡೆಯಬೇಕು. ಗುಣಮಟ್ಟದ ಆಹಾರ ನೀಡಬೇಕು. ಅಗತ್ಯ ಸಂಖ್ಯೆಯಲ್ಲಿ ಬ್ಯಾರಿಕೇಡ್ ತರಿಸಿ ಜನಸಂದಣಿ ತಡೆಯಬೇಕು. ಜನರ ಆರೋಗ್ಯ ಹಿತದೃಷ್ಟಿಯಿಂದ ಎರಡು ದಿನಗಳ ಕಾಲ ಆಯಾ ಕಡೆಗಳಲ್ಲಿ ಅಗತ್ಯ ಸಂಖ್ಯೆಯಲ್ಲಿ ಚಿಕಿತ್ಸಾ ಕೇಂದ್ರಗಳನ್ನು ತೆಗೆಯಬೇಕು ಎಂದು ತಿಳಿಸಿದರು. ಕಾಡು ಪ್ರಾಣಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಮಾತನಾಡಿ, ಭಕ್ತರಿಗೆ ರಕ್ಷಣೆ ನೀಡುವುದು ನಮ್ಮ ಆದ್ಯ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿದ 100 ಕಡೆಗಳಲ್ಲಿ ಸಿಸಿಟಿವಿ ಅಳವಡಿಸಬೇಕು. ಎಲ್ಲಾ ಕಡೆಯ ಚೆಕ್ ಪೋಸ್ಟಗಳಲ್ಲಿ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಿ ಪ್ರತಿಯೊಂದು ವಾಹನವನ್ನು ತಪಾಸಣೆಗೊಳಪಡಿಸಬೇಕು. ಪ್ರತಿಯೊಂದು ವಾಹನದ ವಿಡಿಯೋ ಚಿತ್ರೀಕರಣವಾಗಬೇಕು ಎಂದು ಸೂಚಿಸಿದರು.
ಕಳೆದ ವರ್ಷಕ್ಕಿಂತ ಈ ವರ್ಷ ಅಂಜನಾದ್ರಿ ಬೆಟ್ಟ ಮತ್ತು ಬೆಟ್ಟದ ಸುತ್ತಲೂ ಅಚ್ಚುಕಟ್ಟಾದ
ಅಲಂಕಾರ ವ್ಯವಸ್ಥೆ ಮಾಡಿ ಜನತೆಗೆ ಉತ್ತಮ ಸಂದೇಶ ಹೋಗಬೇಕು ಎಂದು ತಿಳಿಸಿದರು. ಅರಣ್ಯ ಇಲಾಖೆಯವರು ಮುತುವರ್ಜಿ ವಹಿಸಿ ಕಾಡು ಪ್ರಾಣಿಗಳ ರಕ್ಷಣೆಗೆ ಅಗತ್ಯ ಕ್ರಮ ವಹಿಸಬೇಕು ಎಂದರು.
ಸಭೆಯಲ್ಲಿ ಶಾಸಕರಾದ ಜನಾರ್ಧನರೆಡ್ಡಿ,  ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿ, ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಾದ ಬಸವರಾಜೇಂದ್ರ ಹೆಚ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಕಡಿ, ತಹಸೀಲ್ದಾರರಾದ ವಿಶ್ವನಾಥ, ಶ್ರುತಿ, ಗಂಗಾವತಿ ತಾಪಂ ಇಓ ಲಕ್ಷ್ಮೀದೇವಿ
ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು. ಉಪ ವಿಭಾಗಾಧಿಕಾರಿಗಳಾದ ಕ್ಯಾಪ್ಟನ್‌ ಮಹೇಶ ಮಾಲಗಿತ್ತಿ ಅವರು ನಿರ್ವಹಿಸಿದರು.

Get real time updates directly on you device, subscribe now.

Comments are closed.

error: Content is protected !!