ಕಣ್ಣಿಗೆ ಕಪ್ಪುಪಟ್ಟಿ, ಕಿವಿಗೆ ಬೆರಳಿಟ್ಟು ಅಣಕು- ಮುಂದುವರಿದ ಅತಿಥಿ ಉಪನ್ಯಾಸಕರ ಪ್ರತಿಭಟನೆ
//ಕಣ್ತೆರೆದು ನೋಡಿ//
-ಭವಿಷ್ಯ ರೂಪಿಸುವವರ ಬದುಕೇ ಬೀದಿಗೆಂದು ವಿದ್ಯಾರ್ಥಿಗಳ ಅಳಲು
ಕೊಪ್ಪಳ: ಸೇವಾ ಕಾಯಂಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರ ಅನಿರ್ದಿಷ್ಟಾವಧಿ ಧರಣಿ 27ನೇ ದಿನಕ್ಕೆ ಕಾಲಿಟ್ಟಿದೆ. ಸರಕಾರದ ನಿರ್ಲಕ್ಷ್ಯ ಧೋರಣೆ ಅಣುಕು ಮಾಡುವ ವಿನೂತನ ಪ್ರತಿಭಟನೆಯನ್ನು ಮಂಗಳವಾರ ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಅತಿಥಿ ಉಪನ್ಯಾಸಕರ ಜಿಲ್ಲಾ ಘಟಕ ಹಮ್ಮಿಕೊಂಡಿತ್ತು.
ಧರಣಿನಿರತ ಅತಿಥಿ ಉಪನ್ಯಾಸಕರು ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿಕೊಂಡು, ಕಿವಿಯಲ್ಲಿ ಬೆರಳಿಟ್ಟು, ಸರಕಾರದ ನಮ್ಮ ಅಳಲು ಕೇಳುತ್ತಿಲ್ಲ, ನಮ್ಮ ಪಾಡು ನೋಡುತ್ತಿಲ್ಲ ಎಂದು ನೋವು ತೋಡಿಕೊಂಡರು.
ಅತಿಥಿ ಉಪನ್ಯಾಸಕರ ಧರಣಿ ಬೆಂಬಲಿಸಿ ನ್ಯಾಯವಾದಿ ಉದಯಸಿಂಗ್, ಆರೋಗ್ಯ ಇಲಾಖೆಯ ಸುವರ್ಣ ಕರುಗಲ್ ಕೆಲ ಕಾಲ ಧರಣಿಯಲ್ಲಿ ಭಾಗವಹಿಸಿದರು.
ಆನಂತರ ಮಾತನಾಡಿದ ಉದಯ್ ಸಿಂಗ್ ಅವರು, ಸುಮಾರು 10-15 ವರ್ಷಗಳಿಗಿಂತಲೂ ಹೆಚ್ಚು ಕಾಲ ಅತಿಥಿಗಳಾಗಿ ಪಾಠ ಮಾಡಿದ ಹಾಗೂ ಶೈಕ್ಷಣಿಕ ಅರ್ಹತೆ ಹೊಂದಿದ ಅತಿಥಿ ಉಪನ್ಯಾಸಕರನ್ನು ಕಾಯಂ ಮಾಡುವಂತೆ ಆಗ್ರಹಿಸುತ್ತಿರುವ ಬೇಡಿಕೆ ನ್ಯಾಯಸಮ್ಮತವಾಗಿದೆ. ಹಿಂದೆ ಎರಡು ಸಲ ಅರೆಕಾಲಿಕ ಉಪನ್ಯಾಸಕರನ್ನು ಕಾಯಂ ಮಾಡಿದ ಇತಿಹಾಸ ರಾಜ್ಯದಲ್ಲಿದೆ. ಹೋರಾಟದ ಕಿಚ್ಚು ಆರದಿದ್ದರೆ ಬೇಡಿಕೆ ಈಡೇರುತ್ತದೆ. ನೇತೃತ್ವ ವಹಿಸಿದವರು ಎಚ್ಚರ ತಪ್ಪಬಾರದು ಎಂದು ಕಿವಿಮಾತು ಹೇಳಿದರು.
ಈ ಹಿಂದೆ ತಾವೂ ಅರೆಕಾಲಿಕ, ತಾತ್ಕಾಲಿಕ ಉಪನ್ಯಾಸಕರಾಗಿ ಆನಂತರ ಕೋರ್ಟ್ ಮೊರೆ ಹೋಗಿ ಕಾಯಂಗೊಂಡ ನಿದರ್ಶನವನ್ನು ಧರಣಿನಿರತರ ಜೊತೆ ಹಂಚಿಕೊಂಡ ಉದಯಸಿಂಗ್ ಅವರು, ಈ ಹೋರಾಟಕ್ಕೆ ಅಗತ್ಯ ಬೆಂಬಲ ನೀಡುವುದಾಗಿ ಘೋಷಿಸಿದರು.
“ಕಣ್ಣು ತೆರೆದು ನೋಡಿ ಮತ್ತು ಕಿವಿಯಿಂದ ಕೇಳಿಸಿಕೊಳ್ಳಿ ” ಎಂಬ ಘೋಷ ವಾಕ್ಯವನ್ನು ಇಟ್ಟುಕೊಂಡು ಪ್ರತಿಭಟನೆ ನಡೆಸಿದರು. ನೂರಾರು ಅತಿಥಿ ಉಪನ್ಯಾಸಕರು ಕಣ್ಣಿಗೆ ಮತ್ತು ಕಿವಿಗಳಿಗೆ ಕಪ್ಪು ಬಟ್ಟೆಯನ್ನು ಕಟ್ಟಿಕೊಂಡು ಸರ್ಕಾರ ಪ್ರಣಾಳಿಕೆಯಲ್ಲಿ ಹೇಳಿದಂತೆ ತಮ್ಮನ್ನು ಕಾಯಂಗೊಳಿಸಬೇಕೆಂದು ಆಗ್ರಹಿಸಿದರು.
ಈ ವೇಳೆ ಅತಿಥಿ ಉಪನ್ಯಾಸಕರಾದ ಎಂ ಶಿವಣ್ಣ, ಶಿವಮೂರ್ತಿ ಗುತ್ತೂರು, ಪ್ರಕಾಶ್ ಬಳ್ಳಾರಿ, ಬಸವರಾಜ ಕರುಗಲ್, ವಿಜಯಕುಮಾರ ಕುಲಕರ್ಣಿ, ವಾಸು ಬುರ್ಲಿ, ಶಿವಬಸಪ್ಪ ಮಸ್ಕಿ, ಸೋಮೇಶ್ ಉಪ್ಪಾರ, ತುಕಾರಾಂ ನಾಯ್ಕ, ವಸಂತ್, ನವೀನ್, ನಾಗರಾಜ್ ದೊರೆ, ಸಿ ಬಸವರಾಜ, ಸಂಗಮೇಶ್ವರ, ಮೆಹಬೂಬ್ ಎಂ, ಬಸವರಾಜ್ ಎಚ್, ವೆಂಕಟೇಶ್ ನಾಯಕ್, ರವಿ ಹಿರೇಮಠ, ಹುಚ್ಚಪ್ಪ ನರೇಗಲ್, ಜಗದೀಶ್ ಹೂಗಾರ್, ಮಹೇಶ್ ಕುಮಾರ್, ಜ್ಞಾನೇಶ್ ಪತ್ತಾರ್, ಕಲ್ಲಯ್ಯ ಪೂಜಾರಿ, ಕಲ್ಲೇಶ್ವರ, ಗಿರಿಜಾ ತುರುಮರಿ, ಗೀತಾ, ಸಾವಿತ್ರಿ, ಪೈಮಾ, ಶೈಲಜಾ, ಅಶೋಕ ಯಕ್ಲಾಸಪುರ ಇತರರು ಇದ್ದರು.
ರಕ್ತದಲ್ಲಿ ಸರಕಾರಕ್ಕೆ ಪತ್ರ!:
ಅತಿಥಿ ಉಪನ್ಯಾಸಕರ ಹೋರಾಟ ತಿಂಗಳಾಗುತ್ತಾ ಬಂದರೂ ಸರಕಾರದಿಂದ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ. ಹಾಗಾಗಿ ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ಬುಧವಾರ ರಕ್ತವನ್ನು ಕೊಟ್ಟೇವು, ಸೇವಾ ಕಾಯಂ ಬೇಡಿಕೆ ಬಿಡೇವು” ಎಂಬ ಘೋಷವಾಕ್ಯದಡಿ ರಕ್ತದಲ್ಲಿ ಸರಕಾರಕ್ಕೆ ಪತ್ರ ಬರೆದು ವಿಭಿನ್ನ ಹೋರಾಟ ನಡೆಸಲಿದ್ದಾರೆ.
ಕೋಟ್-1
“ಬೆಳಗಾವಿ ಅಧಿವೇಶನದ ವೇಳೆ ನಮ್ಮ ಬೇಡಿಕೆ ಈಡೇರಿಕೆಯ ಕನಸು ನುಚ್ಚು ನೂರಾಗಿದೆ. ಅದಕ್ಕಾಗಿ ನಾವೆಲ್ಲರೂ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಹೋರಾಟಕ್ಕೆ ಮುಂದಾಗಿದ್ದೇವೆ ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸಲೇಬೇಕು ಎಂಬ ಎಚ್ಚರಿಕೆಯ ಸಂದೇಶದ ಸರಕಾರದ ನಿರ್ಲಕ್ಷ್ಯ ಧೋರಣೆಯ ಅಣಕು ಪ್ರದರ್ಶನವನ್ನು ಮಾಡಿದ್ದೇವೆ. ಸರಕಾರ ನಮ್ಮ ಬೇಡಿಕೆಗೆ ಸ್ಪಂದಿಸುವವರೆಗೂ ವಿಭಿನ್ನ ಹೋರಾಟದ ಪ್ರಯತ್ನಗಳನ್ನು ನಡೆಸುತ್ತೇವೆ”
-ಡಾ.ವೀರಣ್ಣ ಸಜ್ಜನರ್, ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ, ಕೊಪ್ಪಳ.
“ಕಾಲೇಜು ಆರಂಭಗೊಂಡು ಎರಡು ತಿಂಗಳಾಗುತ್ತಾ ಬಂದಿದೆ. ಕಳೆದೊಂದು ತಿಂಗಳಿನಿಂದ ಪಾಠ-ಪ್ರವಚನಗಳು ಕಾಲೇಜಿನಲ್ಲಿ ನಡೆಯುತ್ತಿಲ್ಲ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವವರ ಬದುಕೇ ಬೀದಿಗೆ ಬಿದ್ದಿರುವುದನ್ನು ಕಂಡು ಬೇಸರವಾಗುತ್ತಿದೆ. ಸರಕಾರ ೀ ಕೂಡಲೇ ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಿ, ನಮಗಾಗುವ ತೊಂದರೆ ನಿವಾರಿಸಬೇಕು.”
-ಕವನ, ಬಿಬಿಎ ವಿದ್ಯಾರ್ಥಿನಿ, ಕೊಪ್ಪಳ.
=======ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಬುಧವಾರ ಅತಿಥಿ ಉಪನ್ಯಾಸಕರು ಕಣ್ಣಿಗೆ ಕಪ್ಪುಪಟ್ಟಿ ಕೊಟ್ಟಿಕೊಂಡು ಸರಕಾರದ ನಿರ್ಲಕ್ಷ್ಯ ಧೋರಣೆಯ ಅಣುಕು ಪ್ರದರ್ಶನ ಮಾಡಿದರು.
ಕೊಪ್ಪಳದಲ್ಲಿ ನಡೆಯುತ್ತಿರುವ ಅತಿಥಿ ಉಪನ್ಯಾಸಕರ ಅನಿರ್ದಿಷ್ಟಾವಧಿ ಧರಣಿ ಬೆಂಬಲಿಸಿ ಬುಧವಾರ ನ್ಯಾಯವಾದಿ ಉದಯ್ ಸಿಂಗ್ ಮಾತನಾಡಿದರು.
=================
Comments are closed.