ಕರ್ನಾಟಕದ ಕಾರ್ಲ್ ಮಾರ್ಕ್ಸ್ ಸಂತ ಶ್ರೇಷ್ಠ ಶ್ರೀ ಕನಕದಾಸರು: ಸೋಮಶೇಖರಗೌಡ
ಗಂಗಾವತಿ: ನವೆಂಬರ್-೧೮ ಸೋಮವಾರ ಸರ್ಕಾರಿ ಪದವಿಪೂರ್ವ ಕಾಲೇಜು ಗಂಗಾವತಿಯಲ್ಲಿ ಸಂತ ಶ್ರೇಷ್ಠ ಕನಕದಾಸರ ಜಯಂತಿಯ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಕೊಪ್ಪಳ ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಸೋಮಶೇಖರ ಗೌಡ ಅವರು ಸಂತ ಶ್ರೇಷ್ಠ ಕನಕದಾಸರನ್ನು ಕರ್ನಾಟಕದ ಕಾರ್ಲ್ ಮಾರ್ಕ್ಸ್ ಎಂದು ಹೇಳುತ್ತಾ, ಸಮಾಜದಲ್ಲಿನ ವರ್ಣಶ್ರಮದ ವಿರುದ್ಧ ಅಸ್ಪೃಶ್ಯತೆ, ಮೂಡನಂಬಿಕೆ, ಲಿಂಗ ತಾರತಮ್ಯ ಮುಂತಾದ ಸಾಮಾಜಿಕ ಅನಿಷ್ಟ ಕಂದಾಚಾರಗಳನ್ನು ಅಳಿಸಿ ಸಮತೆಯ ಸಮಾಜವನ್ನು ನಿರ್ಮಿಸಲು ಪ್ರಯತ್ನಿಸಿ, ಶ್ರಮ ಸಂಸ್ಕೃತಿಯ ಮಹತ್ವವನ್ನು ತಿಳಿಸಿದರು. ಭಕ್ತ ಹಾಗೂ ಭಗವಂತ ಇಬ್ಬರ ಶ್ರದ್ದೆಗಳ ಕುರಿತು ಪ್ರಶ್ನಿಸಿದರು. ವೈಚಾರಿಕ ದೃಷ್ಟಿಕೋನದ ಮೂಲಕ ಕರ್ನಾಟಕದ ಕೆಳ ವರ್ಗದ ಅಭಿವೃದ್ಧಿಗೆ ಶ್ರಮಿಸಿದ ಮೊದಲ ಸಾಂಸ್ಕೃತಿಕ ನಾಯಕ ಬಸವಣ್ಣನಾದರೆ, ನಂತರ ಬಂದ ಸಾಂಸ್ಕೃತಿಕ ನಾಯಕ ಸಂತ ಶ್ರೇಷ್ಠ ಕನಕದಾಸರು ಎಂದು ಹೇಳಿದರು.
ಪ್ರಗತಿಪರ ಚಿಂತಕ ಡಾ. ಲಿಂಗಣ್ಣ ಜಂಗಮರಳ್ಳಿ ಮಾತನಾಡುತ್ತಾ, ಸರಳ ಕೀರ್ತನೆಗಳ ಮೂಲಕ ಜನಸಾಮಾನ್ಯರ ಸಾಮಾಜಿಕ ತಳಮಳಗಳಿಗೆ ಚಿಕಿತ್ಸೆ ನೀಡಿದ ಸಂತ ಶ್ರೇಷ್ಠ ಕನಕದಾಸರ ಹೆಸರನ್ನು ಕೊಪ್ಪಳ ನೂತನ ವಿಶ್ವವಿದ್ಯಾಲಯಕ್ಕೆ ನಾಮಕರಣ ಮಾಡುವ ಮೂಲಕ ಗೌರವ ಸಲ್ಲಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕನಕದಾಸರ ಸಾಮಾಜಿಕ ಕಳಕಳಿ, ಲೋಕ ವಿಮರ್ಶೆ, ಸಂಪ್ರದಾಯ ವಿರೋಧಿ ಧೋರಣೆ, ಸಾಮಾಜಿಕ ಚಿಂತನೆ ಮತ್ತು ವೈಚಾರಿಕ ಮನೋಭಾವಗಳು ಕಂಡುಬರುವುದು ಅವರ ಕೀರ್ತನೆಗಳಲ್ಲಿ. ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಜನರ ನಡುವಳಿಕೆ ಸಮಾಜದಲ್ಲಿ ಬೇರುಬಿಟ್ಟ ರೂಡಿ ಸಂಪ್ರದಾಯಗಳು ಜಾತಿ ಮತ ವ್ಯವಸ್ಥೆಗಳು ಬಡವ-ಬಲ್ಲಿದ, ಮೇಲು-ಕೀಳು ಎಂಬ ತಾರತಮ್ಯಗಳು, ಬದುಕಿನ ಆಡಂಬರ, ಮೊದಲಾದ ವಿಚಾರಗಳನ್ನು ತಮ್ಮ ಕೀರ್ತನೆಗಳಲ್ಲಿ ವಿವರಿಸುತ್ತಾ ತಮ್ಮ ವಿಚಾರ, ಸ್ವಾತಂತ್ರ್ಯ, ಉತ್ತಮ ವಿವೇಕ, ಪರಿಪಕ್ವ ಪ್ರಪಂಚ, ಅನುಭವ ಜನಭಾಷೆಯ ಅರಿವಿನಿಂದ ಸಮಾಜಕ್ಕೆ ಅವಶ್ಯವಾದ ನೀತಿ ತತ್ವಗಳನ್ನು ಬೋಧಿಸಿದ್ದಾರೆ ಎಂದು ನುಡಿದರು.
ಪ್ರಾಚಾರ್ಯರಾದ ಬಸಪ್ಪ ನಾಗೋಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಉಪನ್ಯಾಸಕರಾದ ಚಿದಾನಂದ ಮೇಟಿ, ರುದ್ರೇಶ್, ನಾಗಪ್ಪ, ಈಶ್ವರ, ರಮಾ, ಲಲಿತಾಬಾಯಿ, ಸಾವಿತ್ರಿ ಹಾಜರಿದ್ದರು. ಗ್ರಂಥಪಾಲಕರಾದ ರಮೇಶ್ ಕನಕದಾಸರ ಕೀರ್ತನೆಗಳನ್ನು ಹಾಡಿದರು.
ಶ್ರೀಮತಿ ರಮಾ ಅವರು ಸ್ವಾಗತಿಸಿದರೆ, ಈಶ್ವರ ವಂದಿಸಿದರು, ಕಾರ್ಯಕ್ರಮದ ನಿರೂಪಣೆಯನ್ನು ಲಲಿತಾಬಾಯಿ ನೆರವೇರಿಸಿದರು.