ಮನುಕುಲಕ್ಕೆ ಕನಕದಾಸರು ಅಪಾರ ಸಂದೇಶಗಳನ್ನು ನೀಡಿದ್ದಾರೆ: ಶಾಸಕ ಕೆ.ರಾಘವೇಂದ್ರ ಹಿಟ್ನಾಳ

ಸಂತ ಶ್ರೇಷ್ಠ ಶ್ರೀ ಭಕ್ತ ಕನಕದಾಸರ 537ನೇ ಜಯಂತಿ ಕಾರ್ಯಕ್ರಮ

0

Get real time updates directly on you device, subscribe now.

ಸಂತ ಶ್ರೇಷ್ಠ ಶ್ರೀ ಭಕ್ತ ಕನಕದಾಸರ 537ನೇ ಜಯಂತಿ ಕಾರ್ಯಕ್ರಮ
ಕೊಪ್ಪಳ,  :  ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಮನುಕುಲಕ್ಕೆ ಅಪಾರ ಸಂದೇಶಗಳನ್ನು ನೀಡಿದ್ದಾರೆ ಎಂದು ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.
ಅವರು ಸೋಮವಾರ ನಗರದ ಸಾಹಿತ್ಯ ಭವನದಲ್ಲಿ ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಸಂತ ಶ್ರೇಷ್ಠ ಶ್ರೀ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಕನಕದಾಸರ ಬದುಕು ಹಾಗೂ ತತ್ವಗಳು ಅಪಾರವಾಗಿವೆ. ಕನಕದಾಸರು ಎಲ್ಲಾ ಸಮಾಜದ ಸಮಾನತೆ ಮತ್ತು ಏಕತೆಗಾಗಿ ಶ್ರಮಿಸಿ, ತಮ್ಮ ಕೀರ್ತನೆಗಳ ಮೂಲಕ ಅಂದಿನ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ್ದಾರೆ. ಬಸವಣ್ಣ, ಮಹರ್ಷಿ ವಾಲ್ಮೀಕಿ, ಡಾ. ಬಿ.ಆರ್.ಅಂಬೇಡ್ಕರ್, ಕನಕದಾಸರಂತಹ ಅನೇಕ ಮಹನೀಯರು, ಸಂತರು, ಶರಣರು ಸಮಾಜದ ಒಳಿತಿಗಾಗಿಯೇ ತಮ್ಮ ಸಂದೇಶಗಳನ್ನು ನೀಡಿರುವುದರಿಂದ, ಯಾವುದೇ ಮಹನೀಯರ ಜಯಂತಿ ಆಚರಣೆಗಳು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಬಾರದು. ಎಲ್ಲಾ ಸಮಾಜದವರೂ ಪಾಲ್ಗೊಂಡಾಗ ಮಾತ್ರ ಈ ಮಹನೀಯರ ಜಯಂತಿಗಳ ಆಚರಣೆಗೆ ನಿಜವಾದ ಅರ್ಥ ಬರುತ್ತದೆ ಎಂದರು.
ಕೊಪ್ಪಳ ನಗರದ ಕನಕದಾಸ ವೃತ್ತದಲ್ಲಿ ನೂತನವಾಗಿ ನಿರ್ಮಾಣಗೊಂಡ ಕನಕದಾಸರ ಪುತ್ಥಳಿಯ ಉದ್ಘಾಟನೆ ಹಾಗೂ ಕನಕ ಭವನದ ಅಡಿಗಲ್ಲು ಸಮಾರಂಭವನ್ನು ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರಿಂದ ನೆರವೇರಿಸಬೇಕೆಂದು ಸಮಾಜದವ ಕೋರಿಕೆಯಂತೆ ಕನಕದಾಸರ ಜಯಂತಿಯನ್ನು ಸರಳವಾಗಿ ಆಚರಿಸಿದ್ದೇವೆ. ಇದರ ಜೊತೆಗೆ ಕೊಪ್ಪಳದಲ್ಲಿ 400 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ, ಏತ ನೀರಾವರಿ ಯೋಜನೆ ಹಾಗೂ ಇತರೆ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿಗಳಿಂದ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಲಿದೆ ಎಂದು ಹೇಳಿದರು.
ಶಿಕ್ಷಕರಾದ ಅರುಣಾ ನರೇಂದ್ರ ಪಾಟೀಲ್ ಅವರು ಸಂತ ಶ್ರೇಷ್ಠ ಶ್ರೀ ಭಕ್ತ ಕನಕದಾಸರ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಸಮಾನತೆ, ಸಮಬಾಳ್ವೆಯ ದಾರಿಯನ್ನು ತೋರಿದ ಮಹಾನ ದಾಸರು ಕನಕದಾಸರಾಗಿದ್ದಾರೆ. ಲೋಕದ ಅಂಕುಡೊಂಕನ್ನು ತಿದ್ದಲು ತಮಗಿರುವ ಭಾಗ್ಯವನ್ನೆ ತೊರೆದಿರುವ ಖ್ಯಾತಿ ಅವರದ್ದಾಗಿದೆ. ಜನರ ನಡೆವೆ ಇದ್ದುಕೊಂಡು ಜೀವನದ ಪಾಠವನ್ನು ಕಲಿಸಿದ ಮೇಧಾವಿಗಳು ಅವರು. ಧಮನಿತರ ಹಾಗೂ ತಳ ಸಮುದಾಯಗಳ ಒಳಿತಾಗಿ ಸ್ವಾಭಿಮಾನದ ಕಿಚ್ಚನ್ನು ಹೊರಡಿಸಿದವರು. ದಾಸ ಪರಂಪರೆಯ ಹೊನ್ನಸಿರಿಯಾಗಿರುವ ಕನಕದಾಸರು ದಾರ್ಶನಿಕ ಲೋಕದ ದೃವತಾರೆಯಾಗಿದ್ದಾರೆ. ತಮ್ಮ ಕೀರ್ತನೆಗಳ ಮೂಲಕ ಅಂದಿನ ಹರಿದಾಸ ಪರಂಪರೆಯಲ್ಲಿ ಅವರು ಉನ್ನತ ಹಾಗೂ ಗೌರವದ ಸ್ಥಾನವನ್ನು ಪಡೆದುಕೊಂಡಿದ್ದರು. ದಾಸ ಶ್ರೇಷ್ಠ ಎನಿಸಿಕೊಂಡ, ಕನಕದಾಸರು ದಾಸ ಪರಂರೆಯ ಮಹತ್ವ, ಸಾಮಾಜಿಕ ಕಳಕಳಿ, ಸಮಾನತೆ, ಮಾನವೀಯ ಮೌಲ್ಯಗಳಿಗಾಗಿ ಅಪಾರ ಕೊಡುಗೆಗಳನ್ನು ತಮ್ಮ ಕೀರ್ತನೆಗಳ ಮೂಲಕ ಸಮಾಜಕ್ಕೆ ನೀಡಿದ್ದಾರೆ. ಕೀರ್ತನೆಗಳನ್ನಷ್ಟೆ ಅಲ್ಲದೇ ಹಲವಾರು ಕಾವ್ಯಗಳನ್ನು ರಚಿಸುವುದರ ಮೂಲಕ ಕನ್ನಡ ಸಾಹಿತ್ಯಕ್ಕೂ ಅವರು ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಕರ್ನಾಟಕ ಸುವರ್ಣ ಸಂಭ್ರಮ ಪ್ರಶಸ್ತಿ ಪಡೆದವರು, ಸಹಕಾರ ರತ್ನ ಪ್ರಶಸ್ತಿ ಪಡೆದವರು ಮತ್ತು ನೂತನವಾಗಿ ಪಿ.ಎಸ್.ಐ.ಗಳಾಗಿ ಆಯ್ಕೆಯಾದ ಸಮಾಜದ ಅಭ್ಯರ್ಥಿಗಳಿಗೆ ಇದೇ ಸಂದರ್ಭದಲ್ಲಿ ಗಣ್ಯರಿಂದ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಕೊಪ್ಪಳ ನಗರಸಭೆ ಅಧ್ಯಕ್ಷರಾದ ಅಮ್ಜದ್ ಪಟೇಲ್, ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀನಿವಾಸ ಗುಪ್ತಾ, ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್ ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಕೊಪ್ಪಳ ತಹಶಿಲ್ದಾರ ವಿಠ್ಠಲ ಚೌಗಲಾ, ತಾ.ಪಂ ಇಓ ದುಂಡಪ್ಪ ತುರಾದಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಶ್ರೀಶೈಲ ಬಿರಾದಾರ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎ.ವಿ ಕಣವಿ, ನಗರಸಭೆ ಸದಸ್ಯರಾದ ಉಮಾ ಪಾಟೀಲ್, ಅಕ್ಬರಪಾಶಾ ಪಲ್ಟನ್ ಹಾಗೂ ಅಜೀಮುದ್ದಿನ್ ಅತ್ತಾರ, ಸಮಾಜದ ಮುಖಂಡರಾದ ಕೆ.ಬಸವರಾಜ ಹಿಟ್ನಾಳ, ಜುಮ್ಮಣ್ಣ ನಂದಾಪುರ, ಭರಮಪ್ಪ ನಗರ, ಜಿಡಿಯಪ್ಪ ಬಂಗಾಳಿ, ಡಾ.ಚಂದ್ರಪ್ಪ,  ಗುಡದಪ್ಪ ಬಾನಪ್ಪನವರ, ಹನುಮಂತಪ್ಪ ಕೌದಿ, ದ್ಯಾಮಣ್ಣ ಚಿಲವಾಡಗಿ, ಬೀರಪ್ಪ ಅಂಡಗಿ, ಹನುಮೇಶ ಮುರಡಿ, ಅಮರೇಶ ಉಪಲಾಪುರ ಸೇರಿದಂತೆ ಸಮಾಜದ ಇತರೆ ಹಲವಾರು ಜನರು ಮತ್ತು ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!