ಮಕ್ಕಳ ಕಾಯ್ದೆ ಅನುಷ್ಠಾನದಲ್ಲಿ ಮೂಲತತ್ವಗಳನ್ನು ಪಾಲಿಸಿ: ಶೇಖರಗೌಡ ರಮತ್ನಾಳ

Get real time updates directly on you device, subscribe now.

Kannadanet NEWS 24×7: ಮಕ್ಕಳಿಗೆ ಸಂಬಂಧಿಸಿದ ಕಾಯ್ದೆಗಳನ್ನು ಅನುಷ್ಠಾನಗೊಳಿಸುವಾಗ ಕಾಯ್ದೆಯ ಮೂಲತತ್ವಗಳನ್ನು ಪರಿಗಣಿಸಿ ಅನುಷ್ಠಾನಗೊಳಿಸಿ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯರಾದ ಶೇಖರಗೌಡ ಜಿ.ರಾಮತ್ನಾಳ ಅವರು ಹೇಳಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯುನಿಸೆಫ್-ಮಕ್ಕಳ ಸಂರಕ್ಷಣಾ ಯೋಜನೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಬ್ರೆಂಟ್ ಇಂಡಿಯಾ ಸೂಸೈಟಿ, ಕೊಪ್ಪಳ ಇವರುಗಳ ಸಂಯುಕ್ತಾಶ್ರಯದಲ್ಲಿ ಶನಿವಾರದಂದು ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರದ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಭಾರತ ದೇಶವು ಸಹ ಅನುಮೋದಿಸಿದ್ದು, ಸರಕಾರ ಹಾಗೂ ಭಾರತ ಸಂವಿಧಾನದಲ್ಲಿ ಪ್ರದತ್ತವಾದ ಅಧಿಕಾರದನ್ವಯ ವಿಶೇಷ ಕಾಯ್ದೆಗಳನ್ನು ಜಾರಿಗೊಳಿಸಿದೆ. ಅವುಗಳಲ್ಲಿ ಮಕ್ಕಳ ನ್ಯಾಯ(ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015, ತಿದ್ದುಪಡಿ-2021, ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012 ತಿದ್ದುಪಡಿ-2019 ಇನ್ನೂ ಮುಂತಾದವುಗಳು ಜಾರಿಯಲ್ಲಿ ತಂದಿರುತ್ತದೆ. ಕಾಯ್ದೆಯ ಅನುಷ್ಠಾನದ ಸಂದರ್ಭದಲ್ಲಿ, ನಿರ್ಣಯಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ಮೂಲತತ್ವಗಳನ್ನು ಪರಿಗಣಿಸಿ ಅನುಷ್ಠಾನಗೊಳಿಸಿ ಎಂದು ಕಾಯ್ದೆಯಲ್ಲಿಯೇ ಹೇಳಿರುವ ಕಾಯ್ದೆ ಇದಾಗಿರುತ್ತದೆ ಎಂದು ಅವರು ಹೇಳಿದರು.
ಅಲ್ಲದೇ ಪೊಲೀಸ್ ಠಾಣೆಗಳು ಅಧಿಕಾರಿಗಳನ್ನು ಮಕ್ಕಳ ಸ್ನೇಹಿಯನ್ನಾಗಿಸಲು ಕಾಯ್ದೆಯಲ್ಲಿಯೇ “ಮಕ್ಕಳ ವಿಶೇಷ ಪೊಲೀಸ್ ಘಟಕಗಳನ್ನಾಗಿ ಹಾಗೂ ಪ್ರತಿ ಠಾಣೆಯಲ್ಲೂ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳನ್ನಾಗಿಸಿದೆ”.  ಕಾನೂನು ಸಂಘರ್ಷಕ್ಕೊಳಗಾದ ಹಾಗೂ ಪೋಷಣೆ ಮತ್ತು ರಕ್ಷಣೆ ಅವಶ್ಯವಿರುವ ಮಕ್ಕಳು ಅಥವಾ ಮಕ್ಕಳ ಪ್ರಕರಣಗಳು ನಿಮ್ಮ ಮುಂದೆ ಬಂದಾಗ, ಮಕ್ಕಳ ಸ್ನೇಹಿಯಾಗಿ ನಿರ್ವಹಿಸಿ. ಮಕ್ಕಳ ಮೇಲಿನ ಅಪರಾಧಗಳಿಗೂ ಸಹ ಶಿಕ್ಷೆಯನ್ನು ಈ ಕಾಯ್ದೆಯಡಿಯಲ್ಲಿ ನಿರೂಪಿತವಾಗಿವೆ ಹಾಗೂ ಮಿಷನ್ ವಾತ್ಸಲ್ಯ ಯೋಜನೆಯಡಿಯಲ್ಲಿ ಮಕ್ಕಳ ಸಹಾಯವಾಣಿ-1098ನ್ನು ತುರ್ತು ಪ್ರತಿಕ್ರಿಯೆ ಮತ್ತು ಬೆಂಬಲ ವ್ಯವಸ್ಥೆ (ಇ.ಆರ್.ಎಸ್.ಎಸ್)-112ರಡಿಯಲ್ಲಿ ತಂದಿದ್ದು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ನಿರ್ವಹಣೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಪೋಷಣೆ ಮತ್ತು ರಕ್ಷಣೆ ಅವಶ್ಯವಿರುವ ಮಕ್ಕಳ ಸಹಾಯಕ್ಕಾಗಿ ಮಕ್ಕಳ ಸಹಾಯವಾಣಿಗೂ ಸಹ ಕರೆ ಮಾಡಬಹುದಾಗಿದ್ದು, ಈ ಎರಡು ಘಟಕಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ಗಂಗಪ್ಪ ಮಾತನಾಡಿ, ಮಕ್ಕಳ ರಕ್ಷಣಾ ನಿರ್ದೇಶನಾಲಯದಡಿಯಲ್ಲಿನ ಸೇವೆಗಳು ಹಾಗೂ ಪೊಲೀಸ್ ಇಲಾಖೆ, ಮಕ್ಕಳ ನ್ಯಾಯ(ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015 ತಿದ್ದುಪಡಿ -2021ರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಮಕ್ಕಳ ರಕ್ಷಣೆಯನ್ನು ಸರಕಾರವು ಆದ್ಯತಾ ಮತ್ತು ತುರ್ತು ಸೇವೆ ಎಂದು ಗುರುತಿಸಿದೆ. ಕಾನೂನಿನೊಡನೆ  ಸಂಘರ್ಷದಲ್ಲಿರುವ, ಪೋಷಣೆ ಮತ್ತು ರಕ್ಷಣೆ ಅವಶ್ಯವಿರುವ ಮಕ್ಕಳ ಪುನರವಸತಿಗಾಗಿ ಸರಕಾರವು “ಮಿಷನ್ ವಾತ್ಸಲ್ಯ” ಯೋಜನೆಯನ್ನು ಜಾರಿಗೊಳಿಸಿದ್ದು, ಯೋಜನೆಯ ಸಾಂಸ್ಥಿಕ ಸೇವೆಗಳಡಿಯಲ್ಲಿ ಬಾಲಕರ, ಬಾಲಕಿಯರ ಬಾಲಮಂದಿರ ಹಾಗೂ ದತ್ತು ಸೇವಾ ಕೇಂದ್ರಗಳು, ಅಸಾಂಸ್ಥಿಕ ಸೇವೆಗಳಡಿಯಲ್ಲಿ ಪ್ರಾಯೋಜಕತ್ವ, ಪೋಷಕತ್ವ, ನಂತರದ ಸೇವೆಗಳನ್ನು ನೀಡಲಾಗುತ್ತಿದೆ. ಆದ್ದರಿಂದ ನಿಮ್ಮ ವ್ಯಾಪ್ತಿಯಲ್ಲಿ  ಪೋಷಣೆ ಮತ್ತು ರಕ್ಷಣೆ ಅವಶ್ಯವಿರುವ ಮಕ್ಕಳು ಕಂಡುಬದಲ್ಲಿ ಅಂತಹ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿ ಎಂದು ವಿವರಿಸಿದರು.
ಯುನಿಸೆಫ್-ಮಕ್ಕಳ ಸಂರಕ್ಷಣಾ ಯೋಜನೆಯ ಪ್ರಾದೇಶಿಕ ಸಂಯೋಜಕರಾದ ಡಾ. ಕೆ. ರಾಘವೇಂದ್ರ ಭಟ್ ಅವರು ಮಕ್ಕಳ ನ್ಯಾಯ(ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015 ತಿದ್ದುಪಡಿ-2021ರ ಹಾಗೂ ಮಿಷನ್ ವಾತ್ಸಲ್ಯ ಕುರಿತು,  ಯುನಿಸೆಫ್-ಮಕ್ಕಳ ಸಂರಕ್ಷಣಾ ಯೋಜನೆಯ ವ್ಯವಸ್ಥಾಪಕರಾದ ಹರೀಶ್ ಜೋಗಿ ಅವರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ-2012 ಮತ್ತು ತಿದ್ದುಪಡಿ- 2019ರ ಕುರಿತು ತರಬೇತಿಯನ್ನು ನೀಡಿದರು.  ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ಸಹಾಯಕ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳು, ಶಿವಲೀಲಾ ವನ್ನೂರು, ಪ್ರತಿಭಾ ಕಾಶಿಮಠ, ಮಹಾಂತಸ್ವಾಮಿ ಪೂಜಾರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಪ್ರಶಾಂತ ರಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!