ವೈಭವದ ಕನಕಗಿರಿ ಉತ್ಸವ: ಮೆರವಣಿಗೆಯಲ್ಲಿ ಮೈನವಿರೇಳಿಸಿದ ಕಲಾತಂಡದ ಪ್ರದರ್ಶನ
ಕನಕಗಿರಿ, ಮಾ.2
ರಾಜಬೀದಿಯಲ್ಲಿ ಕಲಾ ತಂಡಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿಬಂದ ಸಾರೋಟು, ಕನಕಾಚಲ ಲಕ್ಷ್ಮೀ ನರಸಿಂಹಸ್ವಾಮಿಯನ್ನು ಹೊತ್ತುತಂದ ಗಜರಾಜನ ರಾಜಗಾಂಭೀರ್ಯ, ಕಳಸ ಹೊತ್ತ ಮಹಿಳೆಯರು, ಶ್ರೀ ಕನಕಾಚಲ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಇತಿಹಾಸ ಸಾರುವ ಸಾರೋಟ, ಪಲ್ಲಕ್ಕಿ, ಉಡಚ್ಚಪ್ಪನಾಯಕ ವೇಷಧಾರಿಗಳು. ಮತ್ತೊಂದೆಡೆ ಕಿವಿಗಡಚಿಕ್ಕುವ ತಮಟೆಯ ಸದ್ದು, ಮತ್ತೊಂದೆಡೆ ವಾಲಗ, ನೆರೆದಿದ್ದ ಜನಸ್ತೋಮದಿಂದ ಜೈಕಾರದ ಘೋಷಣೆ, ಮೈನವಿರೇಳಿಸಿದ ಜಾನಪದ ಕಲಾ ತಂಡಗಳ ಮನಮೋಹಕ ಪ್ರದರ್ಶನ…!
ಇದು ಕೊಪ್ಪಳ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಮೊದಲ ದಿನವಾದ ಶನಿವಾರ ಕೊಪ್ಪಳ ಜಿಲ್ಲೆಯ ಕನಕಗಿರಿ ಉತ್ಸವದಲ್ಲಿ ಕಂಡುಬಂದ ದೃಶ್ಯಗಳು. ಅತ್ಯಂತ ವಿಜೃಂಭಣೆಯಿಂದ ನಡೆದ ಉತ್ಸವದಲ್ಲಿ ಹಬ್ಬದ ವಾತಾವರಣ ಕಂಡುಬಂತು.
ಎದುರು ಆಂಜನೇಯ ದೇವಸ್ಥಾನದಿಂದ ಹೊರಟ ಮೆರಣಿಗೆ ಕನಕಾಚಲಪತಿ ದೇವಾಸ್ಥಾನಕ್ಕೆ ಬಂದು ಸೇರಿದವು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಕನಕಾಚಲ ಲಕ್ಷ್ಮೀ ನರಸಿಂಹಸ್ವಾಮಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಇದಕ್ಕೂ ಮುನ್ನ ಸಚಿವರು ಕನಕಾಚಲಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಕನಕಾಚಲ ಲಕ್ಷ್ಮೀ ನರಸಿಂಹಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.
ಮೇಳೈಸಿದ್ದ ಸಾಂಸ್ಕೃತಿಕ ರಂಗು: ಮೆರವಣಿಗೆಯಲ್ಲಿ ಸಾಗಿಬಂದ ಕನಕಾಚಲಪತಿಯನ್ನು ಹೊತ್ತು ರಾಜಗಂಭೀರ್ಯದಿಂದ ಸಾಗಿದ ಗಜರಾಜನ ನಡಿಗೆ, ಸಾರೋಟು, ಕಾಣಲು ರಸ್ತೆಯುದ್ದಕ್ಕೂ ಜನಸ್ತೋಮವೇ ನೆರೆದಿತ್ತು. ಇದಕ್ಕೆ ಡೊಳ್ಳು ಕುಣಿತ, ಪೂಜಾ ಕುಣಿತ, ಪಟ ಕುಣಿತ, ಲಂಬಾಣಿ ಕುಣಿತ, ಕಂಸಾಳೆ, ವೀರಗಾಸೆ, ಕೀಲು ಕುದುರೆಯಾಟ, ಬೊಂಬೆಯಾಟ, ಸೋಮನ ಕುಣಿತ, ನಗಾರಿ, ನಂದಿಧ್ವಜ ತಂಡಗಳು ಸಾಥ್ ನೀಡಿದವು.
——-
ಕನಕಗಿರಿ ಉತ್ಸವದ ವೇಳೆ ಇಂದು ಎದುರು ಆಂಜನೇಯ ದೇವಸ್ಥಾನದಿಂದ ಕನಕಾಚಲಪತಿ ದೇವಸ್ಥಾನದವರೆಗೆ ರಾಜಬೀದಿಯಲ್ಲಿ ಸಾಗಿದ ಕಲಾತಂಡಗಳೊಂದಿಗೆ ಹೆಜ್ಜೆ ಹಾಕಿ, ಡೊಳ್ಳು ಬಾರಿಸಿದ ಕನ್ನಡ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ.
ಈ ವೇಳೆ ಸಚಿವರಿಗೆ ಜಿಲ್ಲಾಧಿಕಾರಿ ನಳಿನ್ ಅತುಲ್, ಸಿಇಓ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧ ವಂಟಿಗೋಡಿ ಸಾಥ್ ನೀಡಿದರು.
Comments are closed.