–ಕನಕಗಿರಿ ಉತ್ಸವದ ಮೆರುಗು ಹೆಚ್ಚಿಸಿದ ಎತ್ತಿನ ಬಂಡಿ ಸಿಂಗಾರ ಸ್ಪರ್ಧೆ

Get real time updates directly on you device, subscribe now.

* ಎತ್ತಿನ ಬಂಡಿ ಏರಿದ ಸ್ಪರ್ಧೆಗೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರು

ಕನಕಗಿರಿ ಉತ್ಸವ-2024ರ ಅಂಗವಾಗಿ ಎ.ಪಿ.ಎಮ್.ಸಿ ಆವರಣದಲ್ಲಿ ಮಾ.03ರಂದು ಆಯೋಜಿಸಲಾಗಿದ್ದ, ಎತ್ತಿನಬಂಡಿ ಸಿಂಗಾರ ಸ್ಪರ್ಧೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್ ತಂಗಡಗಿ ಅವರು ಚಾಲನೆ ನೀಡಿದರು.
ಉತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ರೈತರ ಸಂಗಾತಿ, ಉಳುಮೆಗೆ ಸಹಕಾರಿಯಾಗಿರುವ ವಿವಿಧ ದೇಶಿ ತಳಿಯ ಎತ್ತಿನಬಂಡಿ ಸಿಂಗಾರ ಸ್ಪರ್ಧೆಯು ಬಹಳ ಆಕರ್ಷಕವಾಗಿ ಪ್ರದರ್ಶನವಾಯಿತು. ಸ್ಪರ್ಧೆಯಲ್ಲಿ ಎತ್ತಿನಬಂಡಿಗಳ ಸಿಂಗಾರ ಪ್ರದರ್ಶನ ಜನಮನ ಸೂರೆಗೊಂಡಿತ್ತು.
ಸ್ಪರ್ಧೆಯಲ್ಲಿ ವಿವಿಧ ರೀತಿಯ ದೇಶಿ ತಳಿಯ ಎತ್ತಿನಬಂಡಿಗಳು ಪಾಲ್ಗೊಂಡಿದ್ದವು. ರೈತರು ತಮ್ಮ ಎತ್ತಿನಬಂಡಿಗಳಿಗೆ ಬಾಳೆಗೊನೆ, ಬಲೂನ್, ಗೆಜ್ಜೆ, ಮಗೋಡ, ಹಾಗೂ ಪುಷ್ಪಾಲಂಕಾರ ಮಾಡುವುದರ ಮೂಲಕ ಸಾರ್ವಜನಿಕರನ್ನು ತಮ್ಮತ್ತ ಗಮನಸೆಳೆದರು. ಮದುವನಗಿತ್ತಿಯ ಹಾಗೇ ಸಿಂಗಾರಗೊಂಡ ಎತ್ತು ಮತ್ತು ಬಂಡಿ ನೋಡುಗರ ಕಣ್ಣನ್ನು ಕಂಗೋಳಿಸುತ್ತಿದ್ದವು. ಜಿಲ್ಲಾ ಉಸ್ತುವಾರಿ ಸಚಿವರು ಅಲಂಕಾರಗೊಂಡ ಎತ್ತಿನಬಂಡಿ ಏರಿ, ಎತ್ತಿನಬಂಡಿ ಓಡಿಸಿದ್ದು, ಬಹಳ ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಉತ್ಸವ ಕ್ರೀಡಾ ಸಮಿತಿಯ ಅಧ್ಯಕ್ಷರಾದ ವಿಠ್ಠಲ್ ಜಾಬಗೌಡರ, ಕನಕಗಿರಿ ತಹಶೀಲ್ದಾರರಾದ ವಿಸ್ವನಾಥ ಮುರುಡಿ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಹಲವು ಗಣ್ಯರು, ರೈತರು, ಸಾರ್ವಜನಿಕರು ಉಪಸ್ಥಿತರಿದ್ದರು.

ಕನಕಗಿರಿ ಉತ್ಸವ: ಕವಿಗೋಷ್ಠಿಯಲ್ಲಿ ಹಿರಿಯ ಸಾಹಿತಿ ಎ.ಎಂ ಮದರಿ ಸಲಹೆ


ಬರಹದ ಮೂಲಕ ಸಮಾಜವನ್ನು ಬಡಿದೆಬ್ಬಿಸುವ ಕೆಲಸ ಮಾಡಬೇಕು

—-
ಕೊಪ್ಪಳ ಮಾರ್ಚ್ 03 (ಕರ್ನಾಟಕ ವಾರ್ತೆ): ಬರಹದ ಮೂಲಕ ಸಮಾಜವನ್ನು ಬಡಿದೆಬ್ಬಿಸುವ ಕೆಲಸ ಮಾಡಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿಗಳಾದ ಎ.ಎಂ ಮದರಿ ಅವರು ಸಲಹೆ ನೀಡಿದರು.
ಕನಕಗಿರಿ ಉತ್ಸವ-2024ರ ಹಿನ್ನೆಲೆಯಲ್ಲಿ ಡಾ.ಪಂಡಿತ ಪುಟ್ಟರಾಜ ಗವಾಯಿಗಳ ವೇದಿಕೆಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ಸಾಹಿತಿಯಾದವರು ಕಾವ್ಯದ ಮೂಲಕ ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕು. ಸಾಹಿತಿ ಕಾವ್ಯದ ಮೂಲಕ ನಾಯಕನಾಗಬೇಕು. ರೈತನ ಸಂಕಷ್ಟ, ಹಸಿವು, ಮಹಿಳೆಯ ದೌರ್ಜನ್ಯ ತಡೆ ಕುರಿತಾದ ಕವಿತೆಗಳನ್ನು ರಚಿಸಬೇಕು. ಬರಹವು ಜನರ ಮನಸ್ಸುಗಳಿಗೆ ಮುಟ್ಟಬೇಕು. ಕವಿಗಳು ನಿರಂತರ ಅಧ್ಯಯನ ಮತ್ತು ಅನುಭವದಿಂದ ಬೆಳೆಯುತ್ತಾರೆ. ಅಂತೆಯೇ ಇಂದಿನ ದಿನಗಳಲ್ಲೂ ಗಟ್ಟಿಯಾಗಿ ಬರೆಯುವರಿದ್ದಾರೆ. ಬಂಡಾಯ, ನವ್ಯ, ನವೋದಯ, ಸಾಹಿತ್ಯದೊಂದಿಗೆ ಗಜಲ್, ಹೈಕ್, ಟಂಕಾ ಕಾವ್ಯಗಳಂತ ಸಾಹಿತ್ಯ ಪ್ರಕಾರಗಳು ಬೆಳೆಯುತ್ತಿವೆ. ವಚನಗಳು, ದಾಸರ ಸಾಹಿತ್ಯ ಕಲ್ಯಾಣ ಕರ್ನಾಟಕದಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ಗಜಲ್ ಕವಿ ಅಲ್ಲಾಗಿರಿರಾಜ್ ಅವರು ಆಶಯ ನುಡಿಗಳನ್ನಾಡಿ, ಕವಿಗಳು ಬರೆಯುವ ಸಾಲುಗಳಿಗೆ ಎಂದು ಸಾವಿಲ್ಲ. ಕವಿತೆಗಳನ್ನು ಅನುಭವಿಸಬೇಕು. ಹಸಿದವನಿಗೆ ಅನ್ನ ಕೊಡುವ ಕವಿತೆಗಳನ್ನು ರಚಿಸಿ, ದೇಶದ ರಾಜಕಾರಣವನ್ನು ತಿದ್ದಲು ಕವಿ ಜನಿಸಬೇಕು. ಜಾತಿ, ಧರ್ಮದ, ರಾಜಕಾರಣವನ್ನು ಸರಿಪಡಿಸುವ ಪ್ರಯತ್ನ ಕವಿಯದು. ರೀಲ್ಸ್ ಹಾಡುಗಳಿಗೆ ವೇದಿಕೆಯ ಅವಶ್ಯವಿಲ್ಲ. ಕವಿ, ಸಾಹಿತಿ, ಹಗಲು ವೇಷಾಧಾರಿಗಳಿಗೆ ಕೊಟ್ಯಾಂತರ ವೇದಿಕೆಯನ್ನು ಬಳಸಿ, ಉತ್ಸವಗಳು ಜನರ ನಾಡಿ ಮೀಡಿತ ಅರಿಯಬೇಕೆಂದರು.
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳದ ಹಿರಿಯ ಸಾಹಿತಿಗಳಾದ ಅಲ್ಲಮ ಪ್ರಭು ಬೆಟ್ಟದೂರು ಮಾತನಾಡಿ, ಇಂತಹ ಕವಿಗೋಷ್ಠಿಗೆ ಬೆಳೆಯುವಂತಹ ಮಕ್ಕಳನ್ನು ಕರೆತರುವ ವ್ಯವಸ್ಥೆಯಾಗಬೇಕು. ಕೇವಲ ಗಂಭೀರ ಕವಿತೆ, ಹೊರಾಟದ ಕವಿತೆಗಳು ಅಷ್ಟೆ ಅಲ್ಲದೆ, ಲಘು ಕವಿತೆಗಳನ್ನು ಸಹ ಬರೆಯುವಂತಹ ರೂಡಿ ನಮ್ಮ ಕವಿಗಳಲ್ಲಿ ಬರಬೇಕು. ಬರಹ, ಕವಿತೆಗಳು ನಮ್ಮ ಸಂವಿಧಾನ ಬಹುಸಂಸ್ಕೃತಿಯನ್ನು ಎತ್ತಿಹಿಡಿದಿವೆ. ಬೌದ್ಧ, ಶೈವ, ಜೈನ, ವೀರಶೈವ, ಲಿಂಗಾಯತ, ಪಾರ್ಸಿ, ಮುಸಲ್ಮಾನ, ಕ್ರೈಸ್ತ  ಇನ್ನೂ ಅನೇಕ ಧರ್ಮಿಯರು ಇಲ್ಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ 60ಕ್ಕೂ ಹೆಚ್ಚು ಕವಿಗಳು ಭಾಗಿಯಾಗಿ, ವಿಭಿನ್ನ ರೀತಿಯ ಕವಿತೆಗಳನ್ನು ವಾಚನ ಮಾಡುವುದರ ಮೂಲಕ ಜನರ ಮನಸ್ಸಿಗೆ ಮುದನೀಡಿದರು.
ಈ ಸಂದರ್ಭದಲ್ಲಿ ಸಾಹಿತಿ ಡಾ.ಅಜಮೀರ್ ನಂದಾಪೂರ, ಉಪನ್ಯಾಸಕ ಡಾ.ಬೆಟ್ಟಪ್ಪ ಜೀರಾಳ, ಪ್ರಾಧ್ಯಾಪಕಿ ಡಾ.ಆಶಿಕಾ ಎಚ್.ಸಿ., ಸಂಶೋಧಕ ಡಾ. ಎಚ್ ಮಂಜುನಾಥ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!