ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಕೆಗೆ ಸರಕಾರ ಬದ್ಧ: ತಂಗಡಗಿ

Get real time updates directly on you device, subscribe now.

ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಕೆಗೆ ಸರಕಾರ ಬದ್ಧ: ತಂಗಡಗಿ

ಕೊಪ್ಪಳ: ಅತಿಥಿ ಉಪನ್ಯಾಸಕರ ಕಾಯಮಾತಿ ಬೇಡಿಕೆ ಇವತ್ತಿನದ್ದೇನಲ್ಲ. ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಅವರ ಬೇಡಿಕೆ ಈಡೇರಿಕೆಗೆ ಸರಕಾರ ಬದ್ಧವಾಗಿದೆ ಎಂದು ಕನ್ಬಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ‌ ತಂಗಡಗಿ ಭರವಸೆ ನೀಡಿದರು.

ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಅನುರ್ದಿಷ್ಟಾವಧಿ ಧರಣಿನಿರತ ಅತಿಥಿ ಉಪನ್ಯಾಸಕರನ್ನು ಶುಕ್ರವಾರ ಭೇಟಿ ಮಾಡಿ, ಅವರ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಸರಕಾರಕ್ಕೆ ಅತಿಥಿ ಉಪನ್ಯಾಸಕರ ಕುರಿತು ಅಪಾರ ಗೌರವವಿದೆ ಎಂದರು.

ಹಿಂದಿನ ಸರಕಾರದಲ್ಲೂ ಅತಿಥಿ ಉಪನ್ಯಾಸಕರು ಹೋರಾಟ ನಡೆಸಿದ್ದು, ಗೌರವಧನ ಹೆಚ್ಚಳವಾಗಿರುವುದು ಗೊತ್ತಿದೆ. ಈಗ ಸೇವಾ ಕಾಯಂ ಬೇಡಿಕೆಯ ಆಗ್ರಹವನ್ನು ಸರಕಾರ ಗಮನಿಸುತ್ತಿದೆ. ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗುತ್ತಿದೆ. ಸರಕಾರ ನಿಮ್ಮ ಪರವಾಗಿದ್ದು ಧರಣಿ ಹಿಂಪಡೆಯುವಂತೆ ಮನವಿ ಮಾಡಿದರು.

ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆಯಾದರೆ ಬಹುಶಃ ಬೇಡಿಕೆ ಈಡೇರಿಕೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸುತ್ತದೆ. ಆದರೆ ನಾನು ಬೇರೆ ಇಲಾಖೆಯ ಸಚಿವವಾಗಿ ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಯ ಈ ಧರಣಿ ಕುರಿತು ಪ್ರಸ್ತಾಪಿಸುವುದು ಸಮಂಜಸವಲ್ಲ. ವಿವಿಧ ಶಾಸಕರು ಈ ಬಗ್ಗೆ ಧ್ವನಿ ಎತ್ತಿದರೆ ಅಧಿವೇಶನದಲ್ಲಿ ಖಂಡಿತವಾಗಿ ಅತಿಥಿ ಉಪನ್ಯಾಸಕರ ಪರ ಮಾತನಾಡುವುದಾಗಿ ಆಶ್ವಾಸನೆ ನೀಡಿದರು.

ಅತಿಥಿ ಉಪನ್ಯಾಸಕರಾದ ಪ್ರಕಾಶ್ ಬಳ್ಳಾರಿ ನಿರೂಪಿಸಿದರು. ಸಣ್ಣದೇವೇಂದ್ರಸ್ವಾಮಿ ಸ್ವಾಗತಿಸಿದರು. ಬಸವರಾಜ ಕರುಗಲ್ ವಂದಿಸಿದರು. ಡಾ.ವೀರಣ್ಣ ಸಜ್ಜನರ್, ಜ್ಞಾನೇಶ್ವರ ಪತ್ತಾರ, ಗೀತಾ ಬನ್ನಿಕೊಪ್ಪ, ಶಿವಬಸಪ್ಪ ಮಸ್ಕಿ, ವಿಜಯಕುಮಾರ್ ಕುಲಕರ್ಣಿ, ಡಾ.ಗಿರಿಜಾ ತುರುಮುರಿ ಸಚಿವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಹಾಂತೇಶ ನೆಲಾಗಣಿ, ಕಲ್ಲಯ್ಯ ಅಬ್ಬಿಗೇರಿ, ವಿಜಯ ತೋಟದ, ಪ್ರಕಾಶ್ ಜಡಿಯವರ, ಡಾ.ತುಕಾರಾಂ ನಾಯಕ, ಸಂತೋಷಿ ಬೆಲ್ಲದ್, ಪ್ರದೀಪ್ ಪಲ್ಲೇದ್, ಮಹೇಶ, ಮಹಾಂತೇಶ, ತಾಯಪ್ಪ, ರಾಘವೇಂದ್ರ, ಮಂಜುನಾಥ, ಮಲ್ಲಿಕಾರ್ಜುನ, ಬಸವರಾಜ, ಶಿವರಾಜ, ಕಲ್ಲಯ್ಯಸ್ವಾಮಿ, ಡಾ.ಗೀತಾ, ಸರಸ್ವತಿ, ಉಷಾ, ಆಶಾ, ಗೋಣಿಬಸಪ್ಪ, ಶಿವಪ್ರಸಾದ್ ಮತ್ತಿತರರು ಇದ್ದರು.

ಬಾಕ್ಸ್…
ಮೂಗಿಗೆ ತುಪ್ಪ ಸವರುವ ಕೆಲಸ ಬೇಡ:
ಸರಕಾರ ಅತಿಥಿ ಉಪನ್ಯಾಸಕ ಮುಖಂಡರ ಸಭೆ ಕರೆದು ಮೂಗಿಗೆ ತುಪ್ಪ ಸವರುವ ಕೆಲಸ ಮಾಡುವುದು ಬೇಡ. ಸರಕಾರದ ಇಂದಿನ ಸಭೆಗೆ ಧರಣಿ ಬೇಡ ಎಂದವರನ್ನು ಆಹ್ವಾನಿಸಿ ನಮ್ಮಲ್ಲೇ ಒಡಕುಂಟು ಮಾಡುವ ಕೆಲಸಕ್ಕೆ ಕೈ ಹಾಕಿದೆ ಎಂದು ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಡಾ.ಹನುಮಂತಗೌಡ ಕಲ್ಮನಿ ಆಕ್ರೋಶ ವ್ಯಕ್ತಪಡಿಸಿದರು.

ಶುಕ್ರವಾರ ಅತಿಥಿ ಉಪನ್ಯಾಸಕರ ಪ್ರತಿಭಟನಾ ಮೆರವಣಿಗೆಗೆ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮನ್ನು ಒಡೆಯುವ ಸರಕಾರದ ಹುನ್ನಾರ ಫಲ‌ ನೀಡದು. ಸೇವಾ ಕಾಯಮಾತಿಯ ಲಿಖಿತ ಉತ್ತರ ಬರುವವರೆಗೆ ಹೋರಾಟ ನಿಲ್ಲದು ಎಂದು ಎಚ್ಚರಿಕೆ ನೀಡಿದರು.

ಶಿಕ್ಷಣ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಅತಿಥಿ ಉಪನ್ಯಾಸಕರ ಬದುಕು ಮೊದಲಿನಿಂದಲೂ ದುಸ್ತರವಾಗಿದೆ. ಅವರಿಗೆ ಯುಜಿಸಿ ವೇತನ ನೀಡಲಾಗದಿದ್ದರೆ, ರಾಜ್ಯ ಸರಕಾರ ಪ್ರತ್ಯೇಕ ವೇತನ ನಿಗದಿ ಮಾಡಲಿ ಎಂದು ಆಗ್ರಹಿಸಿದರು.

ಬಾಕ್ಸ್…
ಸಿಡಿಸಿ ಸದಸ್ಯರ ಸೇವೆ ಕೊಂಡಾಡಿದ ಅತಿಥಿ ಉಪನ್ಯಾಸಕರು:
ಶುಕ್ರವಾರ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನಾ ಮೆರವಣಿಗೆಯ ಕರೆಗೆ ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ಆಗಮಿಸಿದ್ದರು. ಅತಿಥಿ ಉಪನ್ಯಾಸಕರ ಸಮಸ್ಯೆ ಅರಿತ ಕೊಪ್ಪಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಮಂಜುನಾಥ ಜಿ. ಗೊಂಡಬಾಳ, ಸಲೀಂ ಅಳವಂಡಿ, ಶ್ರೀನಿವಾಸ್ ಪಂಡಿತ್, ನಿಂಗಪ್ಪ ಕಟ್ಟಿಮನಿ ಮತ್ತಿತರ ಸದಸ್ಯರು ಸೇರಿ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಿದರು ಅಲ್ಲದೇ ತಾವೇ ಅಡುಗೆ ಉಸ್ತುವಾರಿ ವಹಿಸಿ ಸಿದ್ಧಪಡಿಸಿದ್ದಲ್ಲದೇ ಪ್ರತಿಭಟನಾ ಮೆರವಣಿಗೆಯಲ್ಲಿ ಬಳಲಿದ ಅತಿಥಿ ಉಪನ್ಯಾಸಕರಿಗೆ ಊಟ ಬಡಿಸಿ ಎಲ್ಲರ ಮೆಚ್ಚುಗೆ ಗಳಿಸಿದರು.

ಕೋಟ್-1
“ಅತಿಥಿ ಉಪನ್ಯಾಸಕರ ಸೇವಾಭದ್ರತೆಗೆ ಸಂಬಂಧಿಸಿದಂತೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ನಮ್ಮ ಸರಕಾರ ನಡೆದುಕೊಳ್ಳುತ್ತದೆ. ಈಗಾಗಲೇ 5 ಗ್ಯಾರಂಟಿ ಯೋಜನೆಗಳ ಪೈಕಿ 4 ಯೋಜನೆಗಳು ಜಾರಿಯಾಗಿವೆ. ಯುವನಿಧಿ ಹೊಸ ವರ್ಷಾರಂಭಕ್ಕೆ ಚಾಲನೆಗೊಳ್ಳಲಿದೆ. 6ನೇ ಗ್ಯಾರಂಟಿಯಾಗಿ ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಕೆಗೆ ಸರಕಾರದ ಗಮನಕ್ಕೆ ತರಲಾಗುವುದು.”
-ಶಿವರಾಜ ತಂಗಡಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು.

“ಸರಕಾರ ನಮ್ಮ ಸೇವೆಯನ್ನು ಕಾಯಂಗೊಳಿಸದ ಹೊರತು ಹೋರಾಟವನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ‌. ಇದು ವೇತನರಹಿತ ಹೋರಾಟವಾಗಿದ್ದು ಪಾಠ-ಪ್ರವಚನಕ್ಕೆ ಮುಂದಾಗುವ ಅತಿಥಿ ಉಪನ್ಯಾಸಕರಿಗೆ ಒತ್ತಾಯ ಮಾಡುವುದಿಲ್ಲ. ಅನಗತ್ಯ ಊಹಾಪೋಹಗಳಿಗೆ ಕಿವಿಗೊಡಬೇಡಿ. ವರ್ಷದ ಸೇವೆ ಇರುವವರನ್ನು ಸಹ ಸರಕಾರ ಹಂತ ಹಂತವಾಗಿಯಾದರೂ ಕಾಯಂ ಮಾಡಲೇಬೇಕು.”
-ಡಾ.ಹನುಮಂತಗೌಡ ಕಲ್ಮನಿ, ರಾಜ್ಯಾಧ್ಯಕ್ಷರು, ಅತಿಥಿ ಉಪನ್ಯಾಸಕರ ಸಂಘ.

Get real time updates directly on you device, subscribe now.

Comments are closed.

error: Content is protected !!
%d bloggers like this: