ಕೊಪ್ಪಳಕ್ಕೆ ಕಾಂಗ್ರೆಸ್ ಪಕ್ಷದಿಂದ ಅನ್ಯಾಯ: ಸಿವಿಸಿ ವಾಗ್ದಾಳಿ

Get real time updates directly on you device, subscribe now.

ಕೊಪ್ಪಳ: ಕೊಪ್ಪಳವನ್ನು ಬರಪೀಡಿತ ತಾಲೂಕು ಎಂದು ಘೋಷಿಸದಿರುವುದು ಅನ್ಯಾಯದ ಪರಮಾವಧಿ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಟೀಕಿಸಿದ್ದಾರೆ.

“ಹವಾನಿಯಂತ್ರಿತ ಕಚೇರಿಯಲ್ಲಿ ಕೂತು ಕಂಪ್ಯೂಟರ್ ಗಳಲ್ಲಿನ
ಅಂಕಿ ಅಂಶಗಳನ್ನು ಪರಿಗಣಿಸಿ, ಕೇಂದ್ರದ ಮಾನದಂಡಗಳ ಕಡೆಗೆ ಕೈ ತೋರಿಸಿ ಕೊಪ್ಪಳವನ್ನು ಬರಪೀಡಿತ ಎಂದು ಘೋಷಿಸಲು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಇದು
ಕೊಪ್ಪಳ ಕುರಿತು ಕಾಂಗ್ರೆಸ್ ಸರಕಾರದ ತಾತ್ಸಾರ ಮತ್ತು ಅನ್ಯಾಯ ತೋರಿಸುತ್ತದೆ. ನಮ್ಮ ಪಕ್ಷದ ನಾಯಕರು ತಾಲೂಕಿನಾದ್ಯಂತ ಜಮೀನುಗಳಿಗೆ ಭೇಟಿಕೊಟ್ಟು ವಾಸ್ತವ ಅಂಶಗಳನ್ನು ಸಂಗ್ರಹಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದರು. ಸರಕಾರ ಕೊಪ್ಪಳ ತಾಲೂಕಿನ ಕುರಿತು ಸಂಗ್ರಹಿಸಿರುವ ಅಂಕಿ ಅಂಶಗಳಿಗೂ ಹಾಗೂ ವಾಸ್ತವಕ್ಕೂ ಅಜಗಜಾಂತರ ವ್ಯತ್ಯಾಸವಿದೆ,” ಎಂದು ಪತ್ರಿಕಾ ಪ್ರಕಟಣೆಯಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಜಿಲ್ಲೆಯ ಇಬ್ಬರು ಮಂತ್ರಿಗಳು, ಶಾಸಕ ರಾಘವೇಂದ್ರ ಹಿಟ್ನಾಳ್ ಮತ್ತು ಸಂಸದ ರಾಜಶೇಖರ್ ಹಿಟ್ನಾಳ್ ಈ ಅನ್ಯಾಯಕ್ಕೆ ನೇರ ಹೊಣೆಗಾರರು. ಈ ಕೂಡಲೇ ಕೊಪ್ಪಳವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಬೇಕು. ಇಲ್ಲವೇ ವಿಶೇಷ ಅನುದಾನ ಬಿಡುಗಡೆ ಮಾಡಿಸಿ ಅನ್ಯಾಯ ಸರಿ ಪಡಿಸಬೇಕು. ಇದಾಗದಿದ್ದರೆ ರಾಜೀನಾಮೆ ನೀಡಿ ಮನೆಯಲ್ಲಿ ಕುಳಿತುಕೊಳ್ಳಬೇಕು. ಜಿಲ್ಲೆಯ ರೈತರು ಬರದಿಂದ ತತ್ತರಿಸಿ ಕಂಗಾಲಾಗಿದ್ದಾಗ ಇವರು
ಮಂತ್ರಿಗಿರಿಗಾಗಿ ದೆಹಲಿಯಲ್ಲಿ ಹೋರಾಡುತ್ತಿದ್ದರು. ರೈತರ ಜಮೀನುಗಳಿಗೆ ಭೇಟಿ ನೀಡಲೇ ಇಲ್ಲ. ಸರಕಾರದ ಮೇಲೆ ಒತ್ತಡವನ್ನೂ ಹಾಕಲಿಲ್ಲ. ಇವರ ನಿಷ್ಕ್ರಿಯತೆ ಮತ್ತು ಅದಕ್ಷತೆಯಿಂದ ಕೊಪ್ಪಳ ಕ್ಷೇತ್ರದ ಜನ, ಜಾನುವಾರು ಮತ್ತು ರೈತರು ತತ್ತರಿಸಿ ಹೋಗುವಂತಾಗಿದೆ ಎಂದು
ಟೀಕಿಸಿದ್ದಾರೆ.

ತಾಲೂಕಿನಲ್ಲಿ ಬರ ಇಲ್ಲದಿದ್ದರೆ ರೈತರು ಏಕೆ ಗುಳೆ ಹೋಗಿದ್ದಾರೆ? ಸುಮಾರು 40% ಜಮೀನಿನಲ್ಲಿ ಬಿತ್ತನೆ ಕಾರ್ಯ ಏಕೆ ಪ್ರಾರಂಭವಾಗಿಲ್ಲ? ಸುಮಾರು 70% ಜಮೀನುಗಳಲ್ಲಿ ಬೆಳೆ ಏಕೆ ಒಣಗಿ ಹೋಗಿದೆ? ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ನೀರಿಗೆ ಆಹಾಕಾರ ಏಕೆ ಉಂಟಾಗಿದೆ? ಬರದಿಂದ ಕಂಗೆಟ್ಟ ಜನ ಮತ್ತು ಜೀವಿಗಳ ಒಳಿತಿಗಾಗಿ ಇವರು ಏನು ಕ್ರಮ ಕೈಗೊಂಡಿದ್ದಾರೆ? ಈ ಪ್ರಶ್ನೆಗಳಿಗೆ ಉತ್ತರ ಹೇಳುವ ಧೈರ್ಯ ಮಂತ್ರಿದ್ವಯರಿಗೆ, ಶಾಸಕರಿಗೆ ಹಾಗೂ ಸಂಸದರಿಗೆ ಇದೆಯೇ? ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

“ನಾವು ಕೊಂಚ ಕಾಲಾವಕಾಶ ನೀಡುತ್ತಿದ್ದೇವೆ. ಈ ಅನ್ಯಾಯ ಸರಿಪಡಿಸಿ ಶಾಸಕರು ತಮ್ಮ ಹೊಣೆಗಾರಿಕೆ ನಿಭಾಯಿಸಬೇಕು. ಇಲ್ಲದಿದ್ದರೆ ಕ್ಷೇತ್ರಾದ್ಯಂತ ಸುನಾಮಿಯಂತೆ ರೈತರು ಇವರ ವಿರುದ್ಧ ತಿರುಗಿ ಬೀಳಲಿದ್ದಾರೆ. ನಮ್ಮ ಪಕ್ಷ ಅನ್ಯಾಯದ ವಿರುದ್ಧ ಹೋರಾಟ ಹಮ್ಮಿಕೊಳ್ಳಲಿದೆ. ನಮ್ಮ ಬೇಡಿಕೆಯಂತೆ ಪ್ರತಿ ಎಕರೆಗೆ ಕನಿಷ್ಠ 30,000 ರೂಪಾಯಿ ಪರಿಹಾರ, ಹಿಂಗಾರು ಕೃಷಿಗಾಗಿ ಉಚಿತ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಸಬೇಕು,” ಎಂದು ಒತ್ತಾಯಿಸಿದ್ದಾರೆ. koppal jds cvchandrashekar

Get real time updates directly on you device, subscribe now.

Comments are closed.

error: Content is protected !!