ಬದುಕಿನ ತಲ್ಲಣಗಳಿಗೆ ಗಾಂಧಿ ಮಾರ್ಗ ಪರಿಹಾರ -ಡಾ. ಸಂಜೀವ ಕುಲಕರ್ಣಿ ಅಭಿಮತ

ಕಾಮನೂರು (ಕೊಪ್ಪಳ ತಾ.): ಆಧುನಿಕ ಬದುಕಿನ ತಲ್ಲಣಗಳಿಗೆ ಗಾಂಧಿ ಮಾರ್ಗ ತುಂಬಾ ಸಮರ್ಪಕವಾದ ಪರಿಹಾರ ತೋರುತ್ತದೆ. ಸತ್ಯ, ಅಹಿಂಸೆ, ಸರಳತೆಯನ್ನು ಬದುಕಿನುದ್ದಕ್ಕೂ ಪ್ರತಿಪಾದಿಸಿದ ಗಾಂಧೀಜಿ, ಈ ಕಾಲಮಾನದ ಮಹಾನುಭಾವ ಎಂದು ಧಾರವಾಡದ ಪ್ರಸೂತಿ ತಜ್ಞ ಹಾಗೂ ಸಹಜ ಕೃಷಿಕ ಡಾ.ಸಂಜೀವ ಕುಲಕರ್ಣಿ ಹೇಳಿದರು.
ಕೊಪ್ಪಳದ ಗಾಂಧಿ ಬಳಗವು ಭಾನುವಾರ ಇಲ್ಲಿ ಆಯೋಜಿಸಿದ್ದ ‘ಗಾಂಧಿ ಎಂಬ ಕ್ರಿಯಾಪದ’ ಸಂವಾದದಲ್ಲಿ ಮಾತನಾಡಿದ ಅವರು, ತನ್ನನ್ನು ತಾನು ಮತ್ತೆ ಮತ್ತೆ ಪರೀಕ್ಷೆಗೆ ಒಡ್ಡಿಕೊಳ್ಳುತ್ತಲೇ ಸಮಾಜದ ಓರೆಕೋರೆಗಳನ್ನು ತಿದ್ದಿದ ಮಹನೀಯರ ಸಾಲಿನಲ್ಲಿ ಗಾಂಧೀಜಿ ಅಗ್ರಗಣ್ಯರು ಎಂದು ಬಣ್ಣಿಸಿದರು.

“ಗಾಂಧೀಜಿ ಒಂದರ್ಥದಲ್ಲಿ ಬಂಡಾಯಗಾರ. ಸಮಾಜದಲ್ಲಿ ಬೇರೂರಿದ್ದ ಪಿಡುಗುಗಳನ್ನು ನಿರ್ಮೂಲನೆ ಮಾಡಲು ಬದುಕನ್ನೇ ಪಣವಾಗಿಟ್ಟರು. ವ್ಯಾಸಂಗಕ್ಕೆಂದು ವಿದೇಶಕ್ಕೆ ಹೊರಡುವ ದಿನದಿಂದಲೇ ಅವರಲ್ಲಿ ಇದ್ದ ಬಂಡಾಯ ಮನೋಭಾವ ಹೊರಗೆ ಬರಲು ಶುರುವಾಯಿತು. ಆಂಗ್ಲರ ದಬ್ಬಾಳಿಕೆಯನ್ನು ಕೊನೆಗೊಳಿಸಲು ಹೋರಾಡಿದ ಗಾಂಧೀಜಿ, ಅದೇ ಸಮಯದಲ್ಲಿ ದೇಶದೊಳಗಿನ ಅಸಮಾನತೆ, ಅಸ್ಪೃಶ್ಯತೆ ಹಾಗೂ ಮೂಢನಂಬಿಕೆಯನ್ನು ಹೋಗಲಾಡಿಸಲು ಶ್ರಮಿಸಿದರು” ಎಂದು ಡಾ. ಸಂಜೀವ ಕುಲಕರ್ಣಿ ವಿವರಿಸಿದರು.
ಗಾಂಧಿ ಭೌತಿಕವಾಗಿ ನಮ್ಮನ್ನು ಅಗಲಿ ಮುಕ್ಕಾಲು ಶತಮಾನ ಕಳೆದಿದ್ದು, ಅವರ ಮೌಲ್ಯಗಳಿಗೆ ಈಗಲೂ ಸಿಗುತ್ತಿರುವ ಮನ್ನಣೆ ಗಮನಿಸಿದರೆ ಗಾಂಧೀಜಿ ಎಂಬುದು ಕೇವಲ ವ್ಯಕ್ತಿಯಲ್ಲ; ಬದಲಾಗಿ ಅದೊಂದು ಅದಮ್ಯ ಚೇತನ ಎಂದು ಡಾ. ಕುಲಕರ್ಣಿ ನುಡಿದರು.
ನಂತರ ನಡೆದ ಸಂವಾದದಲ್ಲಿ ಗಾಂಧಿ ಬಳಗದ ಸದಸ್ಯರಾದ ಬಸವರಾಜ ಸವಡಿ, ಶರಣಪ್ಪ ಬಾಚಲಾಪುರ, ಪ್ರಭುರಾಜ ನಾಯಕ, ಗುರುರಾಜ, ಶಿವಪ್ಪ ಪಾಲ್ಗೊಂಡಿದ್ದರು.
ಚರಖಾ ಪ್ರಾತ್ಯಕ್ಷಿಕೆ:
ಸಂವಾದದ ಬಳಿಕ ನೂಲುವ ಪ್ರಾತ್ಯಕ್ಷಿಕೆಯನ್ನು ಡಾ. ಸಂಜೀವ ಕುಲಕರ್ಣಿ, ವಿಜಯ್ ಹಾಗೂ ಚನ್ನಪ್ಪ ನಡೆಸಿಕೊಟ್ಟರು. ‘ಸ್ವಾವಲಂಬನೆ ಹಾಗೂ ಗ್ರಾಮೀಣ ಆರ್ಥಿಕತೆಯ ಸಂಕೇತವಾದ ಚರಖಾ, ಹಳ್ಳಿಗಳ ಪುನಶ್ಚೇತನಕ್ಕೆ ಸಹಕಾರಿ ಆಗಬಲ್ಲದು’ ಎಂದು ಡಾ.ಕುಲಕರ್ಣಿ ಪ್ರತಿಪಾದಿಸಿದರು.
ಕೃಷಿಕ ಆನಂದತೀರ್ಥ ಪ್ಯಾಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕೊಪ್ಪಳ ಸಾವಯವ ಕೃಷಿಕರ ಬಳಗದ ಸದಸ್ಯರಾದ ಶ್ರೀಪಾದರಾಜ ಮುರಡಿ, ಮಲ್ಲಪ್ಪ ಕುಂಬಾರ, ದೇವೇಂದ್ರ ಜಿರ್ಲಿ, ದೇವರಾಜ ಮೇಟಿ, ಶರಣಪ್ಪ ಕುರಬಡಗಿ, ಹನುಮೇಶ ಕುಂಬಾರ ಉಪಸ್ಥಿತರಿದ್ದರು.