ಶಾಸಕರ ವಿರುದ್ಧ ಕ್ಷೇತ್ರದ್ಯಾಂತ ಜನಾಕ್ರೋಶ ಮಡುಗಟ್ಟಿದೆ-ಸಿ ವಿ ಚಂದ್ರಶೇಖರ್

ಕೊಪ್ಪಳ: ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶಾಸಕರ ವಿರುದ್ಧ ಜನಾಕ್ರೋಶ ತುಂಬಿ ತುಳುಕುತ್ತಿದೆ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಹೇಳಿದರು.
ಶುಕ್ರವಾರ ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ರಾಘವೇಂದ್ರ ಹಿಟ್ನಾಳ್ ಮೂರನೇ ಸಲ ಶಾಸಕರಾಗಿದ್ದಾರೆ. ಆದರೂ ಕ್ಷೇತ್ರದ ಅಭಿವೃದ್ಧಿಯನ್ನು ನಿರ್ಲಕ್ಷಿಸಿದ್ದಾರೆ. ಅನುದಾನ ಬಂದಿದೆ ಎಂದು, ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನಡೆಸಿದ್ದೇವೆ ಎಂದು ಪ್ರಚಾರಗಿಟ್ಟಿಸಿಕೊಂಡಿದ್ದಾರೆ. ವಾಸ್ತವದಲ್ಲಿ ಕೊಪ್ಪಳ
ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ಕ್ಷೇತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡಿದೆ,” ಎಂದು ಹೇಳಿದರು.
ಕ್ಷೇತ್ರಾದ್ಯಂತ ರಸ್ತೆಗಳು ಹದಗೆಟ್ಟಿವೆ, ಒಳಚರಂಡಿ ವ್ಯವಸ್ಥೆ ಕನಿಷ್ಠ ಮಟ್ಟದಲ್ಲಿದೆ. ಮರಳು ದಂಧೆ, ಅಕ್ರಮ ಚಟುವಟಿಕೆಗಳು ಹಾಗೂ ಮಾದಕ ವಸ್ತುಗಳ ಮಾರಾಟ ಜೋರಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ನಗರ ಸಭೆಯಲ್ಲಿ ಹಗರಣಗಳು
ನಡೆದಿವೆ. ಕೈಗಾರಿಕೆಗಳ ಮಾಲಿನ್ಯದಿಂದ ಜನ ತತ್ತರಿಸಿದ್ದರೂ ಇವರು ಬಾಯಿ ಮುಚ್ಚಿಕೊಂಡಿದ್ದಾರೆ. ಕಳೆದ 15 ವರ್ಷಗಳಲ್ಲಿ ಇವರು ವಿಧಾನಸಭೆಯಲ್ಲಿ ಕ್ಷೇತ್ರದ ಸಮಸ್ಯೆ ಪ್ರಸ್ತಾಪಿಸಿದ್ದು ಅತ್ಯಂತ ಕಡಿಮೆ. ಈ ಎಲ್ಲಾ ಸಂಗತಿಗಳು ಜನರ ಗಮನದಲ್ಲಿವೆ. ಮತದಾರ ಇವರಿಗೆ ಪಾಠ ಕಲಿಸಲು ನಿರ್ಧರಿಸಿದ್ದಾನೆ ಎಂದು ಹೇಳಿದರು.
“ತಮ್ಮನ್ನು ಮಂತ್ರಿ ಮಾಡಲಿಲ್ಲ ಎಂಬ ಕಾರಣಕ್ಕಾಗಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ವಿರುದ್ಧ ಪ್ರತಿಭಟನೆ ನಡೆಸಿ ಮತದಾರರ ವಿರೋಧ ಕಟ್ಟಿಕೊಂಡಿದ್ದಾರೆ. ವಿಶೇಷವಾಗಿ ಯುವಕರು ಶಾಸಕರ ವಿರುದ್ಧ ಸಂಪೂರ್ಣವಾಗಿ ಭ್ರಮನಿರಸನಗೊಂಡಿದ್ದಾರೆ. ಆದ್ದರಿಂದ ದೊಡ್ಡ ಪ್ರಮಾಣದಲ್ಲಿ ಯುವಕರು ಜೆಡಿಎಸ್ ಪಕ್ಷವನ್ನು ಸೇರುತ್ತಿದ್ದಾರೆ. ಇದನ್ನು ನೋಡಿದರೆ ಮುಂದಿನ ವಿಧಾನಸಭಾ ಚುನಾವಣೆಗಳಲ್ಲಿ ಎನ್‌ಡಿಎ ಒಕ್ಕೂಟದ ಅಭ್ಯರ್ಥಿಯ ಗೆಲುವು ಅತ್ಯಂತ ಸ್ಪಷ್ಟ,” ಎಂದು ಜಿಲ್ಲಾ ಒಬಿಸಿ ಘಟಕದ ಅಧ್ಯಕ್ಷ ಕರಿಯಪ್ಪ ಹಾಲವರ್ತಿ ಹೇಳಿದರು.
ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ ಏಣಗಿ ಹಾಗೂ ನಗರ ಘಟಕದ ಉಪಾಧ್ಯಕ್ಷರಾದ ಗಂಗಾಧರ ವಸ್ತ್ರದ ಮತ್ತು ಭರತ ಗೊಂದಿಹೊಸಳ್ಳಿ ಅವರ ನೇತೃತ್ವದಲ್ಲಿ ಮಹೇಶ್ ಕುಮಾರ್ ಮೇದಾರ್, ಪ್ರಸಾದ್, ಕಲ್ಲಯ್ಯ, ಮಹಾಂತೇಶ ವಾಲ್ಮೀಕಿ, ಕಾರ್ತಿಕ್ ಗೊಂದಿಹೊಸಹಳ್ಳಿ, ಸಂದೀಪ್ ಕಳ್ಳಿ, ಶಶಾಂಕ ಕೌಲಿ, ಅನಿಲ್ ಮೇದಾರ್, ಕಾಶಿನಾಥ್, ಶಶಾಂಕ ಸೂಪ್ಲಿಮಠ, ಮಾರುತಿ
ಚುಕ್ಕನಕ್ಕಲ್, ಗವಿಸಿದ್ದಪ್ಪ ಚುಕ್ಕನಕಲ್, ಪ್ರಶಾಂತ್, ಮದಕರಿ, ಪ್ರದೀಪ್, ಮಾರುತಿ, ಚಂದ್ರಶೇಖರ್, ಸಮೀರ್ ವಾಲಿಕಾರ್, ಬಾಬಾ ಕಲಿಕೇರಿ, ಮೊಹಮ್ಮದ್ ವಾಸಿಂ, ಕಪಾಲಿ, ಮಹೆಬೂಬ್ ಸೇರಿದಂತೆ ಇನ್ನೂ ಅನೇಕ ಯುವಕರು ಪಕ್ಷ ಸೇರ್ಪಡೆಗೊಂಡರು. ಪಕ್ಷದ ಶಾಲ್ ಹಾಕುವ ಮೂಲಕ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲಾಯಿತು.
jds koppal, cvchandrashekarkoppal