ಜೆಸ್ಕಾಂ ಇಇ ಹೆಸರಿನಲ್ಲಿ ವಂಚನೆ ಪ್ರಕರಣ : ಕಳೆದುಕೊಂಡ ಹಣ ವಾಪಸ್ ಪಡೆದ ಗ್ರಾಹಕ

Get real time updates directly on you device, subscribe now.

ವಕೀಲ-ಪೊಲೀಸರ ಜಾಣ್ಮೆ ನೆರವು: ಸೈಬರ್ ವಂಚನೆ ಪ್ರಕರಣ ಇತ್ಯರ್ಥ

ಕುಷ್ಟಗಿ : ಜೆಸ್ಕಾಂ ಇಇ ಹೆಸರೇಳಿಕೊಂಡು ಸೈಬರ್ ವಂಚಕನೊಬ್ಬ, ತಾಲೂಕಿನ ವಿದ್ಯುತ್ ಗುತ್ತಿಗೆದಾರನೊಬ್ಬನಿಂದ 1,10, 000 ರೂಪಾಯಿ ಹಣ ಲಪಟಾಯಿಸಿದ್ದು, ನಾಲ್ಕು ತಿಂಗಳ ಬಳಿಕ ವಕೀಲರು ಹಾಗೂ ಪೊಲೀಸರ ಜಾಣ್ಮೆ ನೆರವಿನಿಂದ ಹಣ ಮರಳಿ ಪಡೆಯುವಲ್ಲಿ ಯಶಸ್ವಿಯಾದ ಘಟನೆ ಸೋಮವಾರ ಜರುಗಿದೆ.

 

ತಾಲೂಕಿನ ತಾವರಗೇರಾ ಪಟ್ಟಣದ ನಿವಾಸಿ ವಿದ್ಯುತ್ ಗುತ್ತಿಗೆದಾರ ಮಹಮದಲಿ ತಂದೆ ಬುಡನಸಾಬ ನಾಯಕ ಹಣ ಕಳೆದುಕೊಂಡ ವ್ಯಕ್ತಿ. ಮಹಾರಾಷ್ಟ್ರ ಮೂಲದ ವ್ಯಕ್ತಿಯೋರ್ವ ನಾನು ರಾಯಚೂರಿನ ಜೆಸ್ಕಾಂ ಕಚೇರಿಯಲ್ಲಿ ಇಇ ಶಿವಾನಂದ ಅಂತ ತಮಗೆ ಬಹಳ ಪರಿಚಿತನಿದ್ದೇನೆ. ಕೊಪ್ಪಳ ಜೆಸ್ಕಾಂ ಕಚೇರಿಗೆ ಸಿಒ ಆಗಿ ಪ್ರಮೋಷನ್ನಾಗಿದೆ. ಶೀಘ್ರದಲ್ಲೇ ಚಾರ್ಜ್ ತೆಗೆದುಕೊಳ್ಳಲಿದ್ದೇನೆ. ಪ್ರಮೋಷನ್ ದೊರೆತ ಖುಷಿಯಲ್ಲಿ ಕುಟುಂಬ ಸಮೇತ ಉತ್ತರ ಪ್ರದೇಶದ ಪ್ರಯಾಗರಾಜಗೆ ಪ್ರವಾಸ ಬಂದಿದ್ದೇನೆ. ಹಿಮಾಲಯ, ಪೆಹಲಗಾಂವ, ಪ್ರಯಾಗರಾಜ ಪ್ರವಾಸ ಮುಗಿಸಿ ಟ್ಯಾಕ್ಸಿಯಲ್ಲಿ ಬರುವಾಗ ತಮ್ಮ ಪತ್ನಿ ಮತ್ತು ಮಗಳ ಬಳಿಯಿದ್ದ ಸುಮಾರು 40 ಲಕ್ಷ ರೂಪಾಯಿ ಮೌಲ್ಯದ

ಒಡವೆ, ಮೊಬೈಲ್, ಬ್ಯಾಗ್ ಕಳ್ಳತನ ಮಾಡಿಕೊಂಡು ಹೊರಟು ಹೋಗಿದ್ದಾನೆ. ಕೂಡಲೇ ಎಚ್ಚೆತ್ತು ರಾಯಚೂರಿನ ಸಿಪಿಐ ಅವರ ಗಮನಕ್ಕೆ ತಂದು ಅವರ ಮುಖಾಂತರ ಸಹಾಯ ಪಡೆದು ಉತ್ತರ ಪ್ರದೇಶದ ಪೊಲೀಸರಿಂದ ಕಳ್ಳನನ್ನು ಸೆರೆ ಹಿಡಿಯಲಾಯಿತು. ನಮ್ಮ ವಸ್ತು ನಾವು ಪಡೆಯಬೇಕಾದರೆ ಕಛೇರಿ, ನ್ಯಾಯಾಲಯಗೆ ಅಲೆದಾಡಬೇಕಾಗುತ್ತದೆ. ನೌಕರಿಯಲ್ಲಿರುವ ನನಗೆ ಸಮಸ್ಯೆಯಾಗುತ್ತದೆ. ಹಾಗಾಗಿ ಅಲ್ಲಿನ ಸಿಪಿಐ ಅವರು ಅದೆಲ್ಲ ಅಲೆಯುವುದು ಬೇಡ ಎಲ್ಲಾ ಇಲ್ಲಿಯೇ ಮಾತನಾಡಿ ಬಗೆಹರಿಸಿಕೊಳ್ಳೋಣ ಅಂಥ ಹೇಳುತ್ತಿದ್ದಾರೆ. ತಮಗೆ ಹಿಂದಿ ಮಾತನಾಡಲು ಬರುವುದಿಲ್ಲ ಹಾಗಾಗಿ ತಾವು ಅವರೊಂದಿಗೆ ಮಾತನಾಡಿ ಎಂದು ಅಲ್ಲಿನ ಪೊಲೀಸ್ ಅಧಿಕಾರಿಯೊಂದಿಗೆ ಮಾತನಾಡಿಸಿ ಲಾತೂರು ಎಕ್ಸಿಸ್ ಬ್ಯಾಂಕ್ ಖಾತೆಯೊಂದಕ್ಕೆ ಹಣ ಹಾಕಲು ಹೇಳಿದ್ದಾರೆ.

 

ಇಇ ಎಂದು ಆತ್ಮೀಯತೆಯಿಂದ ಹೇಳಿಕೊಂಡ ವ್ಯಕ್ತಿಯ ಮಾತಿಗೆ ಮಾರುಹೋದ ವಿದ್ಯುತ್ ಗುತ್ತಿಗೆದಾರ ಮಹಮ್ಮದ್ ಅಲಿ ತನ್ನ ಹೆಂಡತಿಯ ಒಡುವೆಗಳನ್ನು ಬ್ಯಾಂಕಿನಲ್ಲಿ ಅಡವಿಟ್ಟು ಫೆ.11 ರಂದು 1,10.000 ಸಾವಿರ ರೂಪಾಯಿಗಳನ್ನು ಕುಷ್ಟಗಿಯ ಎಕ್ಸಿಸ್ ಬ್ಯಾಂಕ್ ಮೂಲಕ ಹಣ ಹಾಕಿದ್ದಾರೆ. ಬಳಿಕ ಇಇ ಮೊಬೈಲಗೆ ಕರೆ ಮಾಡಿದಾಗ ನಂಬರ್ ಸ್ವಿಚ್ ಆಫ್ ಆಗಿದೆ. ಅನುಮಾನಗೊಂಡ ಮಹಮದಲಿ ತಾವರಗೇರಾದ ವಕೀಲ ಸುರೇಶ ಎಂಬುವರ ಸಹಾಯ ಪಡೆದು ಕಾನೂನು ಹೋರಾಟ ನಡೆಸಿದ್ದಾರೆ. ನಂತರ ಕುಷ್ಟಗಿಯ ಸಿಪಿಐ ವಿಶ್ವನಾಥ ಹಿರೇಗೌಡರ ಅವರಿಗೆ ಮಾಹಿತಿ ನೀಡಿ ಅವರ ಸಲಹೆಯಂತೆ ಸೈಬರ್ ಪ್ರಕರಣ ದಾಖಲಿಸಿ ಹಣ ಜಮೆ ಮಾಡಿಸಿಕೊಂಡ ಖಾತೆಯನ್ನು ಫ್ರೀಜ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ವಿಭಾಗದ ಹೆಡ್ ಕಾನ್ಸ್ಟೇಬಲ್ ಜುಬೇದಾ ಬೇಗಂ ಎಂಬುವರು ಇಂದು ಏಪ್ರಿಲ್ 27 ರಂದು ಕುಷ್ಟಗಿ ಭೇಟಿ ನೀಡಿ ಎಕ್ಸಿಸ್ ಬ್ಯಾಂಕ್ ಖಾತೆಯಿಂದ ಮಹಮದ್ ಅಲಿ ಅವರಿಗೆ 1,10, 000 ರೂಪಾಯಿ ಹಣವನ್ನು ಸಿಪಿಐ ವಿಶ್ವನಾಥ ಹಿರೇಗೌಡರ ಸಮ್ಮುಖದಲ್ಲಿ ನೀಡಿದರು.

 

ಕಳೆದ ನಾಲ್ಕು ತಿಂಗಳು ಹಿಂದೆ ಹಣ ಪಾವತಿಸಿ ಪೇಚಿಗೆ ಸಿಲುಕಿದ್ದ ವಿದ್ಯುತ್ ಗುತ್ತಿಗೆದಾರ ಮಹಮದ್ ಅಲಿ ನಾಯಕ ಅವರಿಂದ ಯಾವುದೇ ಫೀ  ನಿರೀಕ್ಷೆ ಮಾಡದೆ ವಕೀಲ ಸುರೇಶ ಅವರು ಉಚಿತವಾಗಿ ಕಾನೂನು ನೆರವು ನೀಡಿ ಮಾನವೀಯತೆ ತೋರಿದ್ದಕ್ಕೆ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ತಾಲೂಕು ಘಟಕದ ವತಿಯಿಂದ ಗೌರವಿಸಲಾಯಿತು.

 

ಅದೇರೀತಿ ಬೇರೆ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಿದ್ದ ಒಂದು ಲಕ್ಷ ಹತ್ತು ಸಾವಿರ ರೂಪಾಯಿಗಳನ್ನು ಮಹಮದ್ ಅಲಿ ಅವರಿಗೆ ಮರು ಪಾವತಿಗೆ ಕ್ರಮಕೈಗೊಂಡ ಸಿಪಿಐ ವಿಶ್ವನಾಥ ಹಿರೇಗೌಡರ ಅವರ ಸೇವಾ ದಕ್ಷತೆಗೆ ಸಂಘದ ಸದಸ್ಯರು ಅಭಿನಂದನೆ ಸಲ್ಲಿಸಿದರು.

 

ಯಾರೇ ಅಪರಿಚಿತರು ಫೋನ್ ಕರೆ ಮಾಡಿ  ಪರಿಚಿತರಂತೆ ಮಾತನಾಡುವ ಸೈಬರ್ ಕಳ್ಳರಿರುತ್ತಾರೆ. ತನ್ನಂತೆ ಇತರರು ಮೋಸ ಹೋಗಬಾರದು. ಸದಾ ಜಾಗೃತರಾಗಿರುವಂತೆ ಮಹಮದಲಿ ನಾಯಕ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!