ಕೊಡತಗೇರಿ | ರಸ್ತೆಗಾಗಿ ರೈತರು ಪ್ರತಿಭಟನೆ, ಆಕ್ರೋಶ

ಕುಷ್ಟಗಿ : 250ಕ್ಕೂ ಹೆಚ್ಚು ಜಮೀನುಗಳಿಗೆ ಸಂಪರ್ಕ ಹೊಂದಿರುವ ರಸ್ತೆಯನ್ನು ಅತಿಕ್ರಮಿಸಿ ಸಂಚಾರ ಸ್ಥಗಿತಗೊಳಿಸಿರುವ ಕೆಲ ಜಮೀನುದಾರರ ನಡೆಯನ್ನು ಖಂಡಿಸಿ ಸುಮಾರು ಮುವತ್ತಕ್ಕೂ ಹೆಚ್ಚು ರೈತರು ರಸ್ತೆ ಅಗೆದು ಪ್ರತಿಭಟನೆ ನಡೆಸಿದ ಪ್ರಸಂಗ ತಾಲೂಕಿನ ಕೊಡತಗೇರಾ ಗ್ರಾಮದ ಹೊರ ವಲಯ ನಡೆದಿದೆ.
ಹನುಮನಾಳ ಹೋಬಳಿ ವ್ಯಾಪ್ತಿಯಲ್ಲಿ ಬರುವ ಬಿಳೇಕಲ್ ಗ್ರಾಮ ಪಂಚಾಯಿತಿ ವ್ಯಪ್ತಿಯ ಕೊಡತಗೇರಾ ಗ್ರಾಮ ಸೀಮಾ ವ್ಯಪ್ತಿಯ ರೈತಾಪಿ ವರ್ಗ ರಸ್ತೆಗಾಗಿ ಪ್ರತಿಭಟನೆ ಕೈಗೊಂಡಿದ್ದಾರೆ.
ಸುಮಾರು ನಾಲ್ಕು ಎಕರೆ ಇಪ್ಪತ್ತು ಗುಂಟೆ ವ್ಯಾಪ್ತಿಯ ಕೆರೆಯ ಪಕ್ಕದಲ್ಲಿ ಜಮೀನುಗಳಿಗೆ ತೆರಳಲು ರಸ್ತೆಯಿತ್ತು. ಪ್ರಸ್ತುತ ಸುತ್ತಮುತ್ತಲಿನ ಜಮಿನುಗಳ ಕೆಲ ರೈತರು ಕೆರೆ ಅಂಗಳ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಮುಂದಿನ ಜಮೀನುಗಳಿಗೆ ತೆರಳುವ ರಸ್ತೆಯನ್ನು ಅತೌಕ್ರಮಿಸಿಕೊಂಡು ಉಳುಮೆ ಮಾಡುತ್ತಿದ್ದಾರೆ. ಇದರಿಂದ ಸುಮಾರು 250ಕ್ಕೂ ಹೆಚ್ಚು ಜಮೀನುಗಳಿಗೆ ತೆರಳಲು ರಸ್ತೆಯಿಲ್ಲದೆ ರೈತರು ತೊಂದರೆ ಅನುಭವಿಸುತಿದ್ದಾರೆ.
ಒತ್ತುವರಿ ತೆರವುಗೊಳಿಸಿ ರೈತರಿಗೆ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ, ಕಂದಾಯ ಅಧಿಕಾರಿಗಳಿಗೆ, ತಾಲೂಕು ಪಂಚಾಯಿತಿ ಇಒ ಸೇರಿದಂತೆ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೂ ಹಾಗೂ ಶಾಸಕ ದೊಡ್ಡನಗೌಡ ಎಚ್. ಪಾಟೀಲ್ ಅವರಿಗೆ ಮನವಿ ಪತ್ರ ಸಲ್ಲಿಸಿ ಗಮನಕ್ಕೆ ತರಲಾಗಿದೆ.
ಸರ್ವೆ ಇಲಾಖೆಯಿಂದ ಕೆರೆ ಪ್ರದೇಶವನ್ನು ಸರ್ವೆ ಮಾಡಿಸಿ ರಸ್ತೆ ಮಾರ್ಗ ತೋರಿಸಲಾಗಿದ್ದರೂ ಸಹ ಕೆಲ ಜಮೀನುದಾರರು ಮಾತ್ರ ಒತ್ತುವರಿ ಮಾಡಿಕೊಂಡ ಕೆರೆಯಂಗಳ ಪ್ರದೇಶ ಬಿಟ್ಟುಕೊಡುತ್ತಿಲ್ಲ. ಮುಂಗಾರ ಬಿತ್ತನೆ ಆರಂಭಗೊಂಡಿದ್ದು, ರೈತರಿಗೆ ರಸ್ತೆ ಇಲ್ಲದ ಕಾರಣ ತುಂಬಾ ತೊಂದರೆ ಅನುಭವಿಸುವಂತಾಗಿದೆ. ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಇದರಿಂದ ಬೇಸತ್ತು ಸಂಪೂರ್ಣ ರಸ್ತೆಯನ್ನು ಹರಿಗೆಡವಿ ಪ್ರತಿಭಟನೆ ಕೈಗೊಳ್ಳಲಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಶಾಶ್ವತ ಪರಿಹಾರ ಕಲ್ಪಿಸುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಬಿಳೇಕಲ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದಪ್ಪ ಕವಡಿಕಾಯಿ ಪ್ರತಿಕ್ರಿಯೆ ನೀಡಿ ಕೆರೆ ಅಃಗಳ ಪ್ರದೇಶ ನಮ್ಮ ವ್ಯಾಪ್ತಿಯಲ್ಲಿ ಬರುತ್ತದೆ. ಅದರ ಸರ್ವೆ ಕಾರ್ಯ ಮಾಡಿಸಲಾಗಿದೆ. ಆದರೆ, ರಸ್ತೆಗೆ ಸಂಬಂಧಿಸಿದ ವಿಷಯ ಕಂದಾಯ ಇಲಾಖೆಗೆ ಮತ್ತು ಗ್ರಾಮಸ್ಥರಿಗೆ ಬಿಟ್ಟಿದೆ. ತಮಗೆ ಸಂಬಂಧಿಸಿದ್ದಲ್ಲ ಎಂದಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಅವರು, ಕಳೆದ ಕೆಲ ದಿನಗಳ ಹಿಂದೆ ಸರ್ವೆ ಇಲಾಖೆ ಅಧಿಕಾರಿಗಳಿಂದ ಸರ್ವೆ ಕಾರ್ಯ ಮಾಡಿಸಿ ರಸ್ತೆ ಒದಗಿಸಲಾಗಿದೆ. ರೈತರು ರಸ್ತೆ ಬಂದ್ ಮಾಡಿರುವುದು ತಮ್ಮ ಗಮನಕ್ಕೆ ಬಂದಿಲ್ಲ. ಕೂಡಲೆ ಸರ್ವೆ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಸಮಸ್ಯೆಗೆ ಪರಿಹಾರ ತರಲಾಗುವದು ಎಂದು ಹೇಳಿದ್ದಾರೆ.
Comments are closed.