ಡಾ.ಬಿ.ಆರ್.ಅಂಬೇಡ್ಕರ್ ರವರ ಕೊಡುಗೆಗಳು ಅಪಾರವಾಗಿವೆ – ಸಚಿವ ಶಿವರಾಜ ಎಸ್. ತಂಗಡಗಿ

0

Get real time updates directly on you device, subscribe now.

ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ರವರ 134ನೇ ಜನ್ಮ ದಿನಾಚರಣೆ
ಕೊಪ್ಪಳ ಏಪ್ರಿಲ್ 14  : ಜನರ ಬಾಳಿಗೆ ಬೆಳಕನ್ನು ನೀಡಿರುವ ಡಾ.ಬಿ.ಆರ್.ಅಂಬೇಡ್ಕರ್ ರವರ ಕೊಡುಗೆಗಳು ಅಪಾರವಾಗಿದ್ದು, ನಾವೆಲ್ಲರೂ ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆಯೋಣ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ ಹೇಳಿದರು.
ಅವರು ಸೋಮವಾರ ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಕೊಪ್ಪಳ ನಗರಸಭೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ರವರ 134ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ದೇಶವು ನೆಮ್ಮದಿಯಿಂದ ಇದೆ. ಎಲ್ಲಾ ಜಾತಿ, ಜನಾಂಗದವರು ಜೊತೆಯಾಗಿದ್ದೇವೆ ಎಂದರೆ, ಅದಕ್ಕೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಕಾರಣರಾಗಿದ್ದಾರೆ. ಕೆಳ ವರ್ಗದವರು, ಸಾಮಾನ್ಯರು, ಎಸ್ಸಿ-ಎಸ್ಟಿ, ಹಿಂದುಳಿದವರು ಮತ್ತು ಮಹಿಳೆಯರಿಗೆ ಸಮಾನ ಅವಕಾಶಗಳನ್ನು ಸಿಗುವಂತಹ ವ್ಯವಸ್ಥೆಯನ್ನು ಸಂವಿಧಾನದ ಮೂಲಕ ಕಲ್ಪಿಸಿಕೊಟ್ಟ ಅಂಬೇಡ್ಕರ್ ಅವರು ಸರ್ವರಿಗೂ ಶಕ್ತಿಯಾಗಿದ್ದಾರೆ. ಅವರ ಆಶಿರ್ವಾದದಿಂದ ಇಂದು ನಾನು ಸಚಿವನಾಗಿ ಈ ವೇದಿಕೆ ಮೇಲೆ ನಿಲ್ಲಲು ಸಾಧ್ಯವಾಗಿದೆ. ಅವರು ಸಂವಿಧಾನದಲ್ಲಿ ಸರ್ವರಿಗು ಸಮಾನ ಹಕ್ಕುಗಳನ್ನು ನೀಡಿದ್ದಾರೆ. ಮಹಿಳೆಯರಿಗೂ ಸಮಾನ ಅವಕಾಶ ಮತ್ತು ಚುನಾವಣೆಯಲ್ಲಿ ನಿಲ್ಲಲು ಮೀಸಲಾತಿ ಕಲ್ಪಿಸಿ ಕೊಟ್ಟಿದ್ದಾರೆ. ಹಲವಾರು ಪದವಿಗಳನ್ನು ಪಡೆದಿರುವ ಅಂಬೇಡ್ಕರ್ ರವರು ಲಂಡನ್‌ನಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ನಮ್ಮ ದೇಶದ ಪ್ರತಿಯೊಬ್ಬ ನಾಗರಿಕರ ಹಕ್ಕುಗಳ ಸಮಾನತೆಗಾಗಿ ಹಲವಾರು ದಿನಗಳ ಕಾಲ ಶ್ರಮಪಟ್ಟು ಸಂವಿಧಾನವನ್ನು ಬರೆದಿದ್ದಾರೆ ಎಂದರು.
ಡಾ. ಬಿ.ಆರ್.ಅಂಬೇಡ್ಕರ್ ಸೇರಿದಂತೆ ಇತರೆ ಎಲ್ಲಾ ಮಹಾನ ನಾಯಕರುಗಳನ್ನು ಕೇವಲ ಒಂದು ಜಾತಿ-ಜನಾಂಗಕ್ಕೆ ಸೀಮಿತ ಮಾಡಬಾರದು. ಅವರು ತಮ್ಮದೇ ಆದ ಕೊಡುಗೆಗಳನ್ನು ನೀಡುವ ಮೂಲಕ ಈಡಿ ಮಾನಕುಲದ ಉದ್ದಾರಕ್ಕಾಗಿ ಶ್ರಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಂತಹ ಮಹನೀಯರ ಜಂತಿಯನ್ನು ಆಚರಿಸುವಂತಹ ಕೆಲಸವಾಗುತ್ತಿದೆ. ಪ್ರತಿಯೊಂದು ಜಿಲ್ಲಾ ಕೇಂದ್ರಗಳಿಂದ ಪ್ರತಿಯೊಂದು ಶಾಲಾ-ಕಾಲೇಜುಗಳಲ್ಲಿಯೂ ಸಹ ಸಂವಿಧಾನದ ಪೀಠಿಕೆ ಓದುವ ಕಾರ್ಯಕ್ರಮವನ್ನು ನಮ್ಮ ಸರ್ಕಾರವು ಹಮ್ಮಿಕೊಂಡಿದ್ದು, ಇದರ ಮೂಲಕ ಸಂವಿಧಾನದ ಜನ ಜಾಗೃತಿ ಕಾರ್ಯಕ್ರಮವಾಗುತ್ತಿದೆ. ಎಲ್ಲಾ ವರ್ಗದ ಬಡ ಜನರಿಗಾಗಿ ನಮ್ಮ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, ವಿಶ್ವದಲ್ಲಿಯೇ ಅತ್ಯಂತ ಸುಂದರವಾದ ಮತ್ತು ಬಹುದೊಡ್ಡ ಸಂವಿಧಾನವನ್ನು ನಮ್ಮ ದೇಶಕ್ಕೆ ನೀಡಿರುವ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ರವರ ಜನ್ಮ ದಿನವಾದ ಏಪ್ರಿಲ್ 14 ನಮ್ಮೆಲ್ಲರಿಗೂ ಪ್ರವಿತ್ರವಾಗಿದೆ. ಅಸಮಾನತೆಯಿಂದ ಕೂಡಿದ್ದ ನಮ್ಮ ದೇಶದಲ್ಲಿ ಸಮಾನತೆಯನ್ನು ತರಲು ಹಾಗೂ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಶಿಕ್ಷಣ, ಸಂಘಟನೆ, ಹೋರಾಟಗಳ ಮೂಲಕ ದೇಶದಲ್ಲಿ ಸಮ ಸಮಾಜವನ್ನು ನಿರ್ಮಿಸಲು ಅವರು ಶ್ರಮಿಸಿದ್ದರು. ಇಂದು ನಮ್ಮಂತಹ ಜನಪ್ರತಿನಿಧಿಗಳು, ಗ್ರಾ.ಪಂ., ತಾ.ಪಂ., ಜಿ.ಪಂ ಮತ್ತು ಸ್ಥಳೀಯ ನಗರ ಸಂಸ್ಥೆಗಳು ಸದಸ್ಯರು ಹಾಗೂ ಶಾಸಕರು, ಸಂಸದರಾಗಲು ಸಂವಿಧಾನವೇ ಕಾರಣವಾಗಿದೆ ಎಂದರು.
ಕೊಪ್ಪಳ ಸಂಸದರಾದ ಕೆ.ರಾಜಶೇಖರ ಬಸವರಾಜ ಹಿಟ್ನಾಳ ಅವರು ಮಾತನಾಡಿ, ಡಾ. ಬಿ.ಆರ್.ಅಂಬೇಡ್ಕರ್ ರವರು ವ್ಯಕ್ತಿಯಲ್ಲ, ಅವರೊಂದು ಶಕ್ತಿಯಾಗಿದ್ದಾರೆ. ಹಿಂದುಳಿದವರು, ಮಹಿಳೆಯರು ಹಾಗೂ ಅಲ್ಪಸಂಖ್ಯಾತರಿಗೆ ಬದುಕನ್ನು ಕಟ್ಟಿಕೊಳ್ಳಲು ಅವರು ರಚಿಸಿದ ಸಂವಿಧಾನವು ನಮಗೆ ಒಂದು ಶಕ್ತಿಯಾಗಿದೆ. ಅಂಬೇಡ್ಕರ್ ಎಂದರೇ, ಒಂದು ಚಳುವಳಿ, ಸಮಾನತೆ. ಸಮಾನತೆಯ ಬದುಕು ಕಟ್ಟಿಕೊಟ್ಟವರು. ಅವರು ಎಲ್ಲಾ ವರ್ಗದವರಿಗೂ ರಾಜಕೀಯ, ಸಾಮಾಜಿಕ, ಆರ್ಥಿಕ ಸಮಾನತೆಯನ್ನು ನೀಡಿದ್ದಾರೆ ಎಂದರು.
ಕಲಬುರಗಿಯ ಬರಹಗಾರಾದ ಡಾ. ವಿಠ್ಠಲ್ ವಗ್ಗನ್ ಅವರು ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ರವರ ಕುರಿತು ವಿಶೇಷ ಉಪನ್ಯಾಸ ನೀಡಿ, ಡಾ.ಬಿ.ಆರ್. ಅಂಬೇಡ್ಕರ್ ರವರ ಕೊಡುಗೆಗಳು ಅಪಾರವಾಗಿವೆ. ಅವರು ಹಲವಾರು ಪದವಿಗಳನ್ನು ಪಡೆದಿದ್ದರು. ಭಾರತ ಸಂವಿಧಾನವನ್ನು ಅವರು ಸರ್ವಜನಾಂಗದ ಅಭಿವೃದ್ಧಿಗಾಗಿ ನೀಡಿದ್ದಾರೆ. ಪ್ರಪಂಚದಲ್ಲಿರುವ ರಾಷ್ಟ್ರಗಳು ತಮ್ಮದೇ ಆದ ಬೇರೆ-ಬೇರೆ ಧರ್ಮಗಳನ್ನು ಹೊಂದಿದ್ದು, ಅವುಗಳ ಆಚರಣೆ  ಚೊತೆಗೆ 2016ರ ನಂತರ ವಿಶ್ವ ಸಂಸ್ಥೆಯ 193 ಸದಸ್ಯ ರಾಷ್ಟ್ರಗಳು ಡಾ. ಬಿ.ಆರ್. ಅಂಬೇಡ್ಕರ್ ರವರ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ. ಚೈನಾ ದೇಶದಲ್ಲಿ ಯಾವುದೇ ದೇಶಗಳ ಗ್ರಂಥ ಅಥವಾ ಪುಸ್ತಗಳನ್ನು ಓದುವಂತಿಲ್ಲ. ಆದರೆ, 2018ರಲ್ಲಿ ಚೈನಾದ ಶೇನ್‌ಜಾನ್ ಇನ್ವರ್ಸಿಟಿಯಲ್ಲಿ ಅಂಬೇಡ್ಕರ್ ರವರ 22 ಸಂಪುಟಗಳನ್ನು ಚೈನಾ ಭಾಷೆಗೆ ಭಾಷಾಂತರಿಸಿ ಅಲ್ಲಿ, ಅಧ್ಯಯನ ಮಾಡಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಸಂವಿಧಾನ ಪೀಠಿಕೆ ಓದುವ ಹಾಗೂ ಸಂವಿಧಾನ ಜಾಗೃತಿ ಜಾಥವನ್ನು ಹಮ್ಮಿಕೊಂಡಿರುವ ಕಾರ್ಯಕ್ರಮ ಮಾದರಿಯಾಗಿದೆ. ಇದಲ್ಲದೇ ಬುದ್ಧನ ಚಿಂತನೆಗಳನ್ನು ಪ್ರತಿ ಮನೆ-ಮನೆಗೂ ಮುಟ್ಟಬೇಕೆನ್ನುವ ಕಾರಣದಿಂದಾಗಿ ಸರ್ಕಾರದ ವತಿಯಿಂದ ಬುದ್ಧ ಜಯಂತಿಯನ್ನು ಆಚರಣೆ ಮಾಡಲು ಶಾಸನ ರೂಪಿಸಿರುವ ರಾಜ್ಯ ಸರ್ಕಾರಕ್ಕೆ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.
ಜೈನ್ ಮುನಿ ಕಮಲಮುನಿ ಕಮಲೇಶ್ ಅವರು ಕಾರ್ಯಕ್ರದಲ್ಲಿ ಮಾತನಾಡಿದರು. ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್ ಅವರು ಸಂವಿಧಾನ ಪೀಠಿಕೆಯನ್ನು ಎಲ್ಲರಿಗೂ ಬೋಧಿಸಿದರು.
*ಸನ್ಮಾನ:* ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಪರಿಮಳ ಚನ್ನಪ್ಪ, ಗಂಗಮ್ಮ ಸ್ವಾರೆಪ್ಪ, ಪೂಜಾ ಆಂಜನೇಯ, ಕರಿಯಮ್ಮ ಗಂಗಪ್ಪ ಹಾಗೂ ಡಾ. ಬಾಬು ಜಗಜೀವನ್ ರಾಮ್ ಪ್ರಶಸ್ತಿ ಪುರಸ್ಕೃತರಾದ ಮಾಯಮ್ಮ, ದೆಹಲಿಯಲ್ಲಿ ನಡೆದ ಗಣ್ಯರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಯ್ಕೆಯಾದ್ದ ಕೋಳೂರು ಗ್ರಾಪಂ ಅಧ್ಯಕ್ಷರಾದ ಶಿವಮ್ಮ ಪೂಜಾರ ಮತ್ತು ಭಾರತಿಯ ಸೇನೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಕಾರ್ಯಕ್ರಮದಲ್ಲಿ ಗಣ್ಯರಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೊಪ್ಪಳ ನಗರಸಭೆ ಅಧ್ಯಕ್ಷರಾದ ಅಮ್ಜದ್ ಪಟೇಲ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್ ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಗಲದ್, ನಗರಸಭೆ ಸದಸ್ಯರಾದ ಮುತ್ತುರಾಜ ಕುಷ್ಟಗಿ, ಸಿದ್ದು ಮ್ಯಾಗೇರಿ, ಮಹೇಂದ್ರ ಛೋಪ್ರಾ, ಗುರುರಾಜ ಹಲಗೇರಿ, ರಾಜಶೇಖರ ಆಡೂರು ಹಾಗೂ ಇತರರು, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ್, ಉಪಾಧ್ಯಕ್ಷರಾದ ಮಂಜುನಾಥ ಗೊಂಡಬಾಳ, ಸಮಾಜದ ಮುಖಂಡರಾದ ಗಾಳೆಪ್ಪ ಪೂಜಾರ, ಗೂಳಪ್ಪ ಹಲಗೇರಿ, ಡಾ. ಜ್ಞಾನಸುಂದರ, ಗವಿಸಿದ್ದಪ್ಪ ಕಂದಾರಿ, ಸಿದ್ದೇಶ ಪೂಜಾರ, ರಾಮಣ್ಣ ಕಂದಾರಿ, ಯಲ್ಲಪ್ಪ ಬಳಗನೂರ, ಗವಿಸಿದ್ದಪ್ಪ ಬೆಲ್ಲದ್, ಕೃಷ್ಣ ಇಟ್ಟಂಗಿ, ಗಾಳೆಪ್ಪ ಕಡೆಮನಿ ಸೇರಿದಂತೆ ಸಮಾಜದ ಮತ್ತಿತರರು ಉಪಸ್ಥಿತರಿದ್ದರು.
ಮೆರವಣಿಗೆ: ಕಾರ್ಯಕ್ರಮದ ನಿಮಿತ್ತ ಬೆಳಿಗ್ಗೆ ಡಾ. ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರದ ಮೆರವಣಿಗೆಯು ತಹಶೀಲ್ದಾರ ಕಛೇರಿಯಿಂದ ಆರಂಭಗೊಂಡು ಸಾಲಾರಜಂಗ್ ರಸ್ತೆ, ಅಶೋಕ ವೃತ್ತದ ಮೂಲಕ ಸಾಹಿತ್ಯ ಭವನದವರೆಗೆ ಅದ್ದೂರಿಯಾಗಿ ಮೆರವಣಿಗೆ ನಡೆಯಿತು. ಇದರಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಿ, ಸಾರ್ವಜನಿಕರ ಗಮನ ಸೆಳೆದವು.

Get real time updates directly on you device, subscribe now.

Leave A Reply

Your email address will not be published.

error: Content is protected !!