ಮಳೆಹಾನಿ ವರದಿಯನ್ನು ಕೂಡಲೇ ಸರ್ಕಾರ ಸಲ್ಲಿಸಿ- ಸಚಿವ ಶಿವರಾಜ ಎಸ್. ತಂಗಡಗಿ
ಕೊಪ್ಪಳ. ಏಪ್ರಿಲ್. 14 :- ಏಪ್ರಿಲ್. 10 ರಂದು ಸುರಿದ ಮಳೆ ಹಾಗೂ ಆಲಿಕಲ್ಲು ಮಳೆಯಿಂದ ಕಾರಟಗಿ. ಗಂಗಾವತಿ ಮತ್ತು ನವಲಿ ಭಾಗದಲ್ಲಿ ಭತ್ತ ನಾಶವಾಗಿದ್ದು ಇದರ ವರದಿಯನ್ನು ಕೂಡಲೇ ಸರ್ಕಾರಕ್ಕೆ ಸಲ್ಲಿಸುವ ಮೂಲಕ ರೈತರಿಗೆ ಪರಿಹಾರ ಒದಗಿಸುವ ಕೆಲಸವನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮಾಡಬೇಕೆಂದು ಹಿಂದುಳಿದ ವರ್ಗಗಳ ಕಲ್ಯಾಣ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ ಹೇಳಿದರು.
ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಏಪ್ರಿಲ್. 10 ರಂದು ಸುರಿದ ಮಳೆಯಿಂದ ಕಾರಟಗಿ. ಗಂಗಾವತಿ ಹಾಗೂ ನವಲಿ ಭಾಗದಲ್ಲಿ ಹಾನಿಯಾದ ಭತ್ತಕ್ಕೆ ಪರಿಹಾರ ನೀಡುವ ಕುರಿತು ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು. ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮತ್ತು ತಹಶಿಲ್ದಾರೊಂದಿಗೆ ಸಭೆ ನಡೆಸಿ ಮಾತನಾಡಿದರು.
ಮಳೆಯಿಂದ ಭತ್ತದ ಜೊತೆಗೆ ತೋಟಗಾರಿಕೆ ಬೆಳೆಗಳು ಹಾನಿಯಾಗಿದ್ದು ಕೂಡಲೇ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಜಂಟಿ ಸರ್ವೆಮಾಡಿ ಸರಿಯಾದ ರೀತಿಯಲ್ಲಿ ಸರ್ಕಾರಕ್ಕೆ ವರದಿಯನ್ನು ನೀಡಿ ಬೆಳೆ ಹಾನಿಯಾದ ರೈತರಿಗೆ ಪರಿಹಾರ ಒದಗಿಸಲು ಕ್ರಮವಹಿಸಬೇಕು. ಅದೇ ರೀತಿ ಇನ್ಸ್ಯೂರೆನ್ಸ್ ಮಾಡಿಸಿದ ರೈತರಿಗೆ ಆ ಇನ್ಸ್ಯೂರೆನ್ಸ್ ಕಂಪನಿಗಳಿಗೆ ಮಳೆ ಹಾನಿ ದೂರನ್ನು ದಾಖಲಿಸಿ ಅವರಿಂದಲು ಬೆಳೆ ಹಾನಿಯ ಪರಿಹಾರ ನೀಡುವಂತೆ ಅವರಿಗೆ ಸೂಕ್ತ ಮಾಹಿತಿ ನೀಡಬೇಕು ಎಂದರು.
ಇನ್ನೂ ಬಾಕಿ ಇರುವ ಕ್ರಾಫ್ ಸರ್ವೆ ಕಾರ್ಯವನ್ನು ಕೂಡಲೆ ಮಾಡಿ ಮುಗಿಸಬೇಕು. ಮುಂದೆಯೂ ಜಿಲ್ಲೆಯಲ್ಲಿ ಆಗುವ ಮಳೆ ಹಾನಿಯ ವರದಿಯನ್ನು ಕೂಡಲೇ ಸರ್ಕಾರಕ್ಕೆ ಒದಗಿಸುವ ಕಾರ್ಯವನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮಾಡಬೇಕು. ರೈತರಿಗೆ ಆದಷ್ಟು ಬೇಗನೆ ಅವರ ಬೆಳೆ ಹಾನಿಗೆ ಪರಿಹಾರ ನೀಡಲು ಅಧಿಕಾರಿಗಳು ಕ್ರಮವಹಿಸಬೇಕೆಂದು ಹೇಳಿದರು.
ಈ ಸಭೆಯಲ್ಲಿ ಕೊಪ್ಪಳ ಸಂಸದರಾದ ಕೆ. ರಾಜಶೇಖರ ಬಸವರಾಜ ಹಿಟ್ನಾಳ. ಜಿಲ್ಲಾಧಿಕಾರಿ ನಲಿನ್ ಅತುಲ್. ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ. ಸಹಾಯಕ ಆಯುಕ್ತರಾದ ಕ್ಯಾ. ಮಹೇಶ್ ಮಾಲಗಿತ್ತಿ. ಕೃಷಿ ಇಲಾಖೆಯ ಜಂಟಿ ನಿರ್ದೆಶಕರಾದ ರುದ್ರೇಶಪ್ಪ ಟಿ. ತೋಟಗಾರಿಕೆ ಇಲಾಖೆಯ ಉಪನಿರ್ದೆಶಕರಾದ ಕೃಷ್ಣ ಸಿ. ಉಕ್ಕುಂದ. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ. ವಿವಿಧ ತಾಲೂಕಿನ ತಹಶಿಲ್ದಾರರು. ಕೃಷಿ ಇಲಾಖೆಯ ಇತರೆ ಅಧಿಕಾರಿಗಳು ಸೇರಿದಂತೆ ಹಲವಾರು ಉಪಸ್ಥಿತರಿದ್ದರು.