ಕೊಪ್ಪಳ ತಾಲ್ಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಶ್ರೀಮತಿ ಮಾಲಾ ಬಡಿಗೇರ ಅವರ ‘ಮನದಾಳ’

Get real time updates directly on you device, subscribe now.

ಶ್ರೀಮತಿ ಮಾಲಾ ಬಡಿಗೇರ ಅವರ ‘ಮನದಾಳ’

(ದಿನಾಂಕ;-23-03-2025ರಂದು ಹಲಗೇರಿ ಗ್ರಾಮದಲ್ಲಿ ನಡೆಯುವ ಕೊಪ್ಪಳ ತಾಲ್ಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಶ್ರೀಮತಿ ಮಾಲಾ ಬಡಿಗೇರ ಅವರ ‘ಮನದಾಳ’ ಕೃತಿ ಅವಲೋಕನ)

ಬಹುಶಃ ಶಿಕ್ಷಕನಿಗೆ ಆಗುವಷ್ಟು ಅನುಭವಗಳು, ತಲ್ಲಣಗಳಂತಹ ಪ್ರಸಂಗಗಳು ಬೇರೆ ಯಾವುದೇ ಕ್ಷೇತ್ರದ ವ್ಯಕ್ತಿಗೆ ಆಗಲಾರವು ಎನ್ನುವುದು ನನ್ನ ಸ್ವ-ಅನುಭವದ ಮಾತು. ಶಿಕ್ಷಕನು ನಾಲ್ಕು ಗೋಡೆಗಳ ಮಧ್ಯೆ ನಿಂತು ಪಾಠ ಮಾಡುತ್ತಿದ್ದರೂ ಅಲ್ಲಿಯೇ ನೂರಾರು-ಸಾವಿರಾರು ಪ್ರಸಂಗಗಳು ನಡೆದುಹೋಗುತ್ತವೆ. ಒಬ್ಬೊಬ್ಬ ವಿದ್ಯಾರ್ಥಿ ಒಂದೊಂದು ರೀತಿಯ ನಡೆ-ನುಡಿ, ಆಚಾರ-ವಿಚಾರಗಳಿಂದ ಒಬ್ಬರಿಗಿಂತ ಮತ್ತೊಬ್ಬ ಭಿನ್ನವಾಗಿಯೇ ಇರುತ್ತಾನೆ. ವರ್ಗಕೋಣೆಯಲ್ಲಿಯೇ ಅನೇಕ ಸಂಗತಿಗಳು, ಪ್ರಸಂಗಗಳು ನಡೆದುಹೋದರೆ; ವರ್ಗಕೋಣೆಯ ಆಚೆಗೂ ನೂರಾರು ಘಟನಾವಳಿಗಳು ಶಿಕ್ಷಕನ ಮುಂದೆ ಸಾಗಿಹೋಗುತ್ತವೆ. ಕೆಲವು ಹೇಳಿಕೊಳ್ಳುವಂತಹವುಗಳಾಗಿದ್ದರೆ ಇನ್ನು ಕೆಲವು ಹೇಳಿಕೊಳ್ಳಲಾಗದ ಪರಿಸ್ಥಿತಿಯಲ್ಲಿ ಮನದಲ್ಲಿಯೇ ಉಳಿದುಕೊಳ್ಳುತ್ತವೆ. ಅವುಗಳು ವರ್ಷದಿಂದ ವರ್ಷಕ್ಕೆ ಗುಡ್ಡೆಯಾಗುತ್ತಾ ಹೋಗುತ್ತವೆ. ಅವು ಶಿಕ್ಷಕನ ಮನದಲ್ಲಿ ತುಮುಲ ಉಂಟುಮಾಡುತ್ತವೆ. ಅಂತಹ ಅನುಭವಗಳನ್ನು, ಘಟನಾವಳಿಗಳನ್ನು, ತಳಮಳಗಳನ್ನು ಹೊರಹಾಕಬೇಕಿದೆ. ಅಂತಹ ಪ್ರಯತ್ನದ ಕೆಲಸವೇ ಶ್ರೀಮತಿ ಮಾಲಾ ಬಡಿಗೇರಾರವರ ‘ಮನದಾಳ’ ಎನ್ನುವ ಈ ಕೃತಿ.
ಶ್ರೀಮತಿ ಮಾಲಾ ಬಡಿಗೇರರವರು ಮೂಲತಃ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಚುಳಕಿ ಗ್ರಾಮದವರು. ಕಳೆದ ಸುಮಾರು 34 ವರ್ಷಗಳ ಕಾಲ ಶಿಕ್ಷಕಿಯಾಗಿ ಮತ್ತು ಮುಖ್ಯೋಪಾಧ್ಯಾಯರಾಗಿ ಸೇವೆಸಲ್ಲಿಸಿ ನಿವೃತ್ತಿಯಾದವರು. ಕವಲೂರು, ಭಾಗ್ಯನಗರ, ಮಂಗಳೂರು, ಕಿನ್ನಾಳ ಮುಂತಾದ ಗ್ರಾಮಗಳಲ್ಲಿ ಸೇವೆಸಲ್ಲಿಸಿ ನಿವೃತ್ತಿಯಾಗಿದ್ದಾರೆ. ವೃತ್ತಿಯ ಜೊತೆಗೆ ಸಾಹಿತ್ಯಿಕ ಸೇವೆಮಾಡಿದ್ದಾರೆ. ಬಿಡಿಲೇಖನ, ಕವನಗಳನ್ನು ಬರೆಯುತ್ತಾ ಅಲ್ಲಲ್ಲಿ ಕವಿಗೋಷ್ಠಿಗಳಲ್ಲಿ ಕವನ ವಾಚಿಸಿ ಸೈ ಎನಿಸಿಕೊಂಡಿದ್ದಾರೆ. ಅಲ್ಲದೇ 2014ರಲ್ಲಿ ಮೊದಲ ಪ್ರಯತ್ನವಾಗಿ ‘ಮೊದಲು ಮನಸು ಕಟ್ಟಿ’ ಎಂಬ ಕವನ ಸಂಕಲನವನ್ನು ಪ್ರಕಟಿಸುವ ಮೂಲಕ ಸಾಹಿತ್ಯದಲ್ಲಿ ಅಧಿಕೃತವಾಗಿ ಹೆಸರು ನೋಂದಾಯಿಸಿಕೊಂಡರು. ಈ ಕೃತಿಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನಿಂದ ದತ್ತಿಪ್ರಶಸ್ತಿ ದೊರಕಿರುವುದ ಮೊದಲ ಪ್ರಯತ್ನವೇ ಅಭೂತಪೂರ್ವವಾಗಿದೆ. ಈಗ ‘ಮನದಾಳ’ ಎಂಬ ಪ್ರಬಂಧ ಸಂಕಲನ ಪ್ರಕಟಿಸುವ ಮೂಲಕ ವೈಚಾರಿಕ ಲೋಕದೊಳಗೆ ಪ್ರವೇಶಿಸಿದ್ದಾರೆ.
ಪ್ರತಿಯೊಬ್ಬ ವ್ಯಕ್ತಿಗೂ ಮನದಾಳದಲ್ಲಿ ತಮ್ಮದೇ ಆದ ತುಮುಲಗಳಿರುತ್ತವೆ. ಆದರೆ ಶಿಕ್ಷಕನಲ್ಲಿ ಇರುವಷ್ಟು ಮನದಾಳದ ಭಾವನೆಗಳು, ತೊಳಲಾಟಗಳು ಬೇರೆ ಯಾವುದೇ ಕ್ಷೇತ್ರದ ವ್ಯಕ್ತಿಗೆ ಇರಲಾರವು ಎಂಬುವುದು ನನ್ನ ಅಭಿಪ್ರಾಯ. ಶಿಕ್ಷಕನ ಬದುಕಿನಲ್ಲಿ ಮತ್ತು ವಿಶೇಷವಾಗಿ ಸೇವಾ ವೃತ್ತಿಯಲ್ಲಿ ಆದ ಅನುಭವಗಳು ಅಪಾರ. ಅಂತಹ ಅನುಭವಗಳನ್ನೇ ಈ ಸಂಕಲನದಲ್ಲಿ ಮಾಲಾರವರು ಬರೆದಿದ್ದಾರೆ.
ಈ ಕೃತಿಯು ಮೇಲ್ನೋಟಕ್ಕೆ ಪ್ರಬಂಧಗಳ ಸಂಕಲನ ಎನಿಸಿದರೂ ಓದಿದಂತೆ ಅದರ ಆಳ-ಅಗಲ ತಿಳಿಯುತ್ತದೆ. ಇದು ಆತ್ಮಕಥನಕವೋ ಅಥವಾ ಪ್ರಬಂಧಗಳ ಸಂಗ್ರಹವೋ ಎಂದು ತುಸು ಗೊಂದಲ ಎನಿಸಬಹುದು. ಅದನ್ನು ಓದಿದಾಗ ಎರಡೂ ಸರಿ ಎನಿಸಬಹುದೇನೋ.
ಆದರೆ ನಾನಿಲ್ಲಿ ಈ ಕೃತಿಯನ್ನು ಜೀವನಾನುಭವ ಎನ್ನುವಂತೆ ನೋಡುತ್ತಾ ಹೋಗುತ್ತೇನೆ. ಹೀಗಾಗಿ ಇದು ಒಂದರ್ಥದಲ್ಲಿ ಜೀವನ ಚರಿತ್ರೆ ಎನಿಸಬಹುದು. ವಾಸ್ತವದಲ್ಲಿ ಈ ಕೃತಿಯಲ್ಲಿ 15 ಅಧ್ಯಯಗಳಲ್ಲಿ ಹರವಿಕೊಂಡಿದೆ. ಆದರೆ ಈ ಕೃತಿಯಲ್ಲಿ ಲೇಖಕಿ 14 ಭಾಗಗಳಲ್ಲಿ ತನ್ನ ಬದುಕಿನಲ್ಲಿ ಕಂಡುAಡ ಅನುಭವಗಳು, ಅನುಭವಿಸಿದ ನೋವುಗಳನ್ನು ತನ್ನ ಮನದಾಳದ ನೆನಪಿನ ಬುತ್ತಿಯ ಮೂಲಕ ಓದುಗರಿಗೆ ಉಣಬಡಿಸಿದ್ದಾರೆ. ಕೊನೆಯ 15ನೇ ಭಾಗದಲ್ಲಿ ಲೇಖಕಿ ತನ್ನ ಕೃತಿಗಳನ್ನು ಅಧ್ಯಯನ ಮಾಡಿದ ಓದುಗರ ಅಭಿಪ್ರಾಯಗಳನ್ನು ಇಲ್ಲಿ ಪ್ರಕಟಿಸಿದ್ದಾರೆ. ಈ ಕೃತಿಯು ‘ನನ್ನ ಬಾಲ್ಯ’ ಎಂಬ ಅನುಭವಗಳಿಂದ ಪ್ರಾರಂಭಗೊಂಡು ‘ಶಿಷ್ಯ ಸಂಪತ್ತು’ ಎಂಬುದರೊಂದಿಗೆ ಮುಕ್ತಾಯವಾಗುತ್ತದೆ. ಮಧ್ಯದಲ್ಲಿ ಬರುವ ಪ್ರಬಂಧಗಳು ಬೇರೆ-ಬೇರೆ ಸಂಗತಿಗಳ ಕುರಿತಾಗಿದ್ದರೂ ಅವು ಮನದಾಳದ ಮಾತುಗಳೇ ಹೌದು.
ಬದುಕಿನಲ್ಲಿ ಮೊದಲ ಅನುಭವವೇ ಬಾಲ್ಯ. ಈ ಬಾಲ್ಯ ಸವಿದಷ್ಟು ಸಿಹಿ, ಉಂಡಷ್ಟು ರುಚಿ, ಅನುಭವಿಸಿದಷ್ಟು ಅಮೃತವೇ ಸರಿ. ಪ್ರತಿಯೊಬ್ಬ ವ್ಯಕ್ತಿಯೂ ಇದನ್ನು ಅನುಭವಿಸಿಯೇ ಇರುತ್ತಾನೆ. ಕೆಲವು ಮಕ್ಕಳ ಬದುಕಿನಲ್ಲಿ ಬಡತನದ ಕಾರಣದಿಂದಾಗಿ ಬಾಲ್ಯ ಕಷ್ಟದಲ್ಲೇ ಕಳೆದುಹೋಗಿರುತ್ತದೆ. ಆದರೆ ಮಕ್ಕಳಿಗೆ ಅದರ ಬೇಗೆ ತಾಗಬಾರದೆಂದು ತಂದೆ-ತಾಯಿ ಅವಿರತ ಪ್ರಯತ್ನ ಮಾಡಿರುತ್ತಾರೆ. ಅದರಂತೆ ಲೇಖಕಿ ಮಾಲಾರವರು ತಮ್ಮ ಬಾಲ್ಯದಲ್ಲಿ ನಡೆದ ಘಟನಾವಳಿಗಳನ್ನು ಈ ಕೃತಿಯ ಮೊದಲ ಭಾಗದಲ್ಲಿ ‘ನನ್ನ ಬಾಲ್ಯ’ ಎಂಬುದರಲ್ಲಿ ಸುಧೀರ್ಘವಾಗಿ ಬರೆಯುತ್ತಾ ಹೋಗಿದ್ದಾರೆ. ಮನೆಯಲ್ಲಿ ಬಡತನವಿದ್ದರೂ ನನಗೆ ಅದರ ಛಾಯೆ ಬಿದ್ದಿರಲಿಲ್ಲವೋ ಅಥವಾ ತಿಳಿಯುತ್ತಿರಲಿಲ್ಲವೋ ಎನ್ನುವಾಗ ಬಾಲ್ಯ ಹೀಗೆ ಎನಿಸುತ್ತದೆ. ಅವು ಮಕ್ಕಳಿಗೆ ಅರ್ಥವಾಗುವುದೇ ಇಲ್ಲ. ಯಾಕೆಂದರೆ ಅಪ್ಪ-ಅಮ್ಮ ಎಂಬ ಆಲದ ಮರದ ಕೆಳಗೆ ಬದುಕುವ ನಮಗೆ ಬಿಸಿಲಿನ ತಾಪ ತಿಳಿಯುವುದಾದರೂ ಹೇಗೇ?
ಮಕ್ಕಳಿಗೆ ಆಟಗಳೆಂದರೆ ಅಪಾರ ಪ್ರೀತಿ. ಕಬ್ಬಡಿ, ಚಿಣಿದಂಡು, ಲಗೋರಿ, ಮರಕೋತಿ ಮುಂತಾದ ಆಟಗಳು ಅತ್ಯಂತ ಪ್ರಿಯವಾದವುಗಳು. ಆದರೆ ಆಧುನಿಕ ಕಾಲಕ್ಕೆ ತಕ್ಕಂತೆ ಸೈಕಲ್ ಸವಾರಿಯ ಆಟ ತುಸು ತುರುಸಾಗಿ ಪ್ರಾರಂಭವಾಯಿತು. ಮಕ್ಕಳಿಗೆ ಸೈಕಲ್ ಕಲಿಯುವುದೇ ಒಂದು ಬಹುದೊಡ್ಡ ಅನುಭವ. ಆ ಅನುಭವವನ್ನು ವರ್ಣಿಸಲು ಸಾಧ್ಯವೇ? ಅಂತಹ ಅನುಭವವನ್ನು ಲೇಖಕಿ ಈ ಕೃತಿಯಲ್ಲಿ ಹೇಳಿಕೊಂಡಿದ್ದಾರೆ. ಸೈಕಲ್ ಕಲಿಯುವುದೆಂದರೆ ಏಳು-ಬೀಳು ಸರ್ವೆ ಸಾಮಾನ್ಯ. ಮಾಲಾರವರು ತಾವು ಸೈಕಲ್ ಕಲಿಯುವಾಗ ತಮಗಾದ ಅನುಭವವನ್ನು ಬರೆದುಕೊಂಡಿದ್ದಾರೆ. ಕಲಿಯುವಾಗ ಬಿದ್ದು ಮನೆಯವರಿಂದ ಬಯಿಸಿಕೊಂಡ್ಡದ್ದು ನೆನಪಿಸಿಕೊಂಡಿದ್ದಾರೆ. ನಾನು ಭಾವಿಸಿದಂತೆ ಇದು ಜೀವನ ಅನುಭವದ ಕಥೆಯಾಗಿರುವುದರಿಂದ ಲೇಖಕಿ ಇಲ್ಲಿ ಎಲ್ಲವುಗಳಿಗೂ ಸ್ಥಾನ ನೀಡಿದ್ದಾರೆ.
ಶಿಕ್ಷಕನ ಮಾತುಗಳು ಎಷ್ಟು ಪರಿಣಾಮ ಬೀರುತ್ತವೆ ಎಂದರೆ ಕೇಳಿ ಅನುಸರಿಸಿದವರ ಬದುಕನ್ನೇ ಬದಲಾಯಿಸುತ್ತದೆ ಎನ್ನುದರಲ್ಲಿ ಅನುಮಾನವಿಲ್ಲ. ಅಂತಹ ಶಕ್ತಿ ಶಿಕ್ಷಕನ ಮಾತಿನಲ್ಲಿ ಅಡಗಿರುತ್ತದೆ. ಕೇವಲ ಅವರ ಮಾತುಗಳಿಂದಲೇ ವಿದ್ಯಾರ್ಥಿಗಳು ಅಷ್ಟೇ ಅಲ್ಲಾ ಸಮಾಜವೂ ಕೂಡಾ ಬದಲಾವಣೆಯಾದ ಎಷ್ಟೋ ಪ್ರಸಂಗಗಳು ಕಾಣಸಿಗುತ್ತವೆ. ಅವರ ಮಾತುಗಳನ್ನು ನೆಚ್ಚಿ ನಡೆದವರಿಗೆ ಬದುಕಲ್ಲಿ ಏನೇಲ್ಲಾ ಬದಲಾವಣೆಯಾಗುತ್ತದೆ ಎನ್ನುವುದನ್ನು ಇಲ್ಲಿನ ಪ್ರಸಂಗಗಳು ಸಾಕ್ಷೀಕರಿಸಿವೆ. ಲೇಖಕಿ ಮಾಲಾರವರು ತಮ್ಮ ಬದುಕಿನಲ್ಲಿ ‘ನಾಲ್ಕು’ ಮಾತುಗಳು ಏನೇಲ್ಲಾ ಬದಲಾವಣೆ ತಂದಿವೆ ಎನ್ನುವುದನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಶಾಲೆಯಲ್ಲಿ ಹಠಮಾರಿ ವಿದ್ಯಾರ್ಥಿ, ಕುಡಿತ ಚಟಕ್ಕೆ ಬಿದ್ದ ವ್ಯಕ್ತಿ, ಹೆಂಡತಿ ಇದ್ದರೂ ಎರಡನೇ ಮದುವೆಮಾಡಿಕೊಳ್ಳಲು ಹೊರಟ ವ್ಯಕ್ತಿಗಳಿಗೆ ಮಾಲಾರವರು ಹೇಳಿದ ನಾಲ್ಕು ಬುದ್ಧಿ ಮಾತುಗಳು ಬಹುದೊಡ್ಡ ಬದಲಾವಣೆ ತಂದಿವೆ ಎನ್ನುವುದನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಇದೇ ಅಲ್ಲವೇ ಶಿಕ್ಷಕನ ಸಾರ್ಥಕತೆ.
ದೇಶಕ್ಕೆ ಮಾರಿಯಾಗಿ ಕಾಡಿದ ಕರೋನಾ ರೋಗ, ಅದರಿಂದ ಸಮಾಜ ಎದುರಿಸಿದ ಪ್ರಸಂಗಗಳು ಮತ್ತು ಅದರಿಂದ ಕೆಲ ಅನುಕೂಲಗಳನ್ನೂ ಇಲ್ಲಿ ಚರ್ಚಿಸಿದ್ದಾರೆ. ಕೊಪ್ಪಳದ ಬಿಸಿಲಿಗೆ ಹೆದರಿಕೊಂಡು ಕೊರೋನಾ ಕೊಪ್ಪಳಕ್ಕೆ ಕಾಲಿಟ್ಟಿಲ್ಲಾ ಎಂಬ ಜನರ ಮಾತುಗಳು ಇಲ್ಲಿ ವ್ಯಕ್ತಪಡಿಸಿದ್ದಾರೆ. ಹಿಂದೆ ಪ್ಲೇಗ್ ಎಂಬ ಮಹಾಮಾರಿ ರೋಗದಂತೆ ಇಂದು ಕೊರೋನಾ ಕಾಡಿದ ಸಂಗತಿಗಳು ಇಲ್ಲಿವೆ. ದೇಶದ ಪ್ರಧಾನಿಗಳು ಈ ಮಹಾಮಾರಿ ರೋಗ ನಿಗ್ರಹಕ್ಕೆ ಮಾಡಿದ ಪ್ರಯತ್ನಗಳನ್ನು ಒಂದೊಂದಾಗಿ ವಿವರಿಸಿದ್ದಾರೆ.
‘ಸೀರೆ ಅಂದರೆ ಸುಮ್ಮನೆ ಅಲ್ಲ!’ “ಜಗಳ ಐತಿ, ಪ್ರೀತಿ ಐತಿ, ಬಿಂಕ ಬಿನ್ನಾಣ ಐತಿ, ಸಿಟ್ಟು ಸೆಡುವು ಐತಿ, ಕೃತಜ್ಞತಾ ಭಾವ ಹೀಗೆ ಭಾವ ತಂತುಗಳನ್ನು ಮೀಟೋ ಸೀರೆ ಸಣ್ಣ ವಿಷಯ ಏನ್ರೀ?” ಎಂದು ಪ್ರಶ್ನಿಸುವ ಲೇಖಕಿಯ ಮಾತುಗಳು ಸೀರೆಯ ಕುರಿತ ವರ್ಣನೆಯ ಮಾತುಗಳಲ್ಲಾ. ಸೀರೆಯುಡುವ ನಾರಿಯರ ಕುರಿತ ಮಾತುಗಳಿವು. ಅವಳಲ್ಲಿರುವ ಪ್ರೀತಿ-ಮಮತೆಯ ಭಾವನೆಗಳು ಮತ್ತು ತುಸು ಸೆಡುವುಗಳನ್ನು ಆ ಮಾತುಗಳ ಮೂಲಕ ಹೇಳಿದ್ದಾರೆ. ಇಲ್ಲಿ ಸೀರೆ ಎಂದರೆ ಬರೀ ಸೀರೆ ಎಂದು ಭಾವಿಸದೇ ನಾರಿ ಎಂದು ಭಾವಿಸಬೇಕಾಗಿದೆ.
ಬಹುಶಃ ಮನುಷ್ಯನ ಬದುಕಿನಲ್ಲಿ ‘ಹೊಂದಾಣಿಕೆ’ ಎನ್ನುವುದು ಬಹಳ ಮುಖ್ಯ. ಅದು ಕುಟುಂಬವಿರಲಿ, ಹೊರಸಂಬಂಧವಿರಲಿ ಹೊಂದಾಣಿಕೆ ಎನ್ನುವುದು ಅತ್ಯಗತ್ಯ. ಮುಖ್ಯವಾಗಿ ಕುಟುಂಬದಲ್ಲಿ ಹೊಂದಾಣಿಕೆಯೆನ್ನುವುದು ಎಷ್ಟು ಮುಖ್ಯವಾಗುತ್ತದೆ ಎನ್ನುವುದನ್ನು ಇಲ್ಲಿ ತಾವು ಕಂಡ ಅನುಭವಗಳ ಸಾಲುಗಳನ್ನೇ ಇಲ್ಲಿ ಕಾಣಿಸಿದ್ದಾರೆ. ಈ ಹೊಂದಾಣಿಕೆಯೆನ್ನುವುದು ಹೆಣ್ಣುಮಕ್ಕಳಿಗೆ ಅತಿ ಮುಖ್ಯ ಎನ್ನುತ್ತಾರೆ. ಮನೆಯಲ್ಲಿ ಅದಿಲ್ಲಾ, ಇದಿಲ್ಲಾ ಎನ್ನುತ್ತಾ ಕೂತರೆ ಕುಟುಂಬ ನಡೆಯುವುದಿಲ್ಲ. ಮುಖ್ಯವಾಗಿ ಹೆಂಗಸು ಕುಟುಂಬದ ದಡ ಸೇರಿಸುವ ಹಡಗಿದ್ದಂತೆ. ಎಲ್ಲರನ್ನು ದಡ ಮುಟ್ಟಿಸುವಾಗ ಹೊಂದಾಣಿಕೆಯಿಂದ ಇರಬೇಕು ಎಂಬ ಮಾತುಗಳನ್ನು ಸಮಾಜ ಅರಿಯಬೇಕಿದೆ.
ಕಚೇರಿ, ಕಂಪನಿ-ಕಾರ್ಖಾನೆ ಯಾವುದೇ ಸಂಸ್ಥೆ ಇರಲಿ ಕೆಲಸಗಳ ಒತ್ತಡ ಕಡಿಮೆಯಿರಲಾರವು. ಅದಕ್ಕೆ ಶಾಲೆಯೂ ಹೊರತಲ್ಲಾ. ಹಾಗೆ ನೋಡಿದರೆ ಇಂದು ಉಳಿದವುಗಳಿಗಿಂತ ಶಾಲೆಗಳ ಕೆಲಸಗಳೇ ಹೆಚ್ಚಿವೆ. ಫಲಿತಾಂಶದ ಸುಧಾರಣೆ ಮಾಡಬೇಕು, ಮಕ್ಕಳ ಗಲಾಟೆ ತಡಿಬೇಕು, ಅವರ ಹಾಜರಾತಿ ಹೆಚ್ಚಿಸಬೇಕು, ಬಿಸಿಯೂಟ, ಕ್ರೀಡೆ-ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಬೇಕು ಹೀಗೆ ನೂರಾರು ಕೆಲಸಗಳ ಒತ್ತಡಗಳು. ಇದರ ಮಧ್ಯೆ ಮಕ್ಕಳನ್ನು ಹೊಡಿಬರ‍್ದು, ಬಡಿಬರ‍್ದು ಎಂಬ ಸರಕಾರದ ನಿಯಮಗಳು ಬೇರೆ. ಅವೆಲ್ಲವುಗಳನ್ನು ಲೇಖಕಿ ‘ನೆನಪಿನಂಗಳದಲ್ಲಿ’ ಬಿಚ್ಚಿದ್ದಾರೆ.
‘ಕುರಾನ ಓದಲು’ ಮತ್ತು ‘ಬಂದಾವಲ್ಲಾ ಹಾಲ್ ಟಿಕೆಟ್ ಕೊಡ್ರೀ’ ಎಂಬ ಎರಡೂ ಭಾಗಗಳಲ್ಲಿ ತನ್ನ ವೃತ್ತಿ ಬದುಕಿನಲ್ಲಿ ಆದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಒಬ್ಬ ಶಿಕ್ಷಕ ತನ್ನ ಎಲ್ಲಾ ಬದುಕನ್ನು ವಿದ್ಯಾರ್ಥಿಗಳ ಶ್ರೇಯೋಭಿವೃದ್ದಿಗಾಗಿ ಮೀಸಲಿಟ್ಟಿರುತ್ತಾನೆ. ಈ ಕೃತಿಯಲ್ಲಿ ಪರೀಕ್ಷೆ ಫೀ ತುಂಬದ ವಿದ್ಯಾರ್ಥಿ, ಫೀ ತುಂಬಿದರೂ ಕ್ಲಾಸ್‌ಗೆ ಬರದ ವಿದ್ಯಾರ್ಥಿ, ಕುರಾನ ಓದಲು ಶಾಲೆಯನ್ನೇ ಬಿಟ್ಟ ಮಕ್ಕಳನ್ನು ಮಾಲಾರವರು ಮನೆ-ಮನೆಗೆ ಹೋಗಿ ಕರೆದುಕೊಂಡು ಪುನಃ ಶಾಲೆಗೆ ಸೇರಿಸುವ ಪರಿ ನಿಜಕ್ಕೂ ಮೆಚ್ಚುವಂತಹದ್ದೇ. ಇಲ್ಲಿ ಲೇಖಕಿ ವೃತ್ತಿಯನ್ನು ಬದುಕಲಷ್ಟೇ ಸೀಮಿತ ಮಾಡಿಕೊಂಡವರಲ್ಲ ಎನ್ನುವುದು ಈ ಭಾಗಗಳನ್ನು ಓದಿದಾಗ ತಿಳಿಯುತ್ತದೆ. ಇದು ಶಿಕ್ಷಕನಿಗಿರಬೇಕಾದ ಕಳಕಳಿ. ‘ಪಗಾರ ಆಗೈತೋ ಇಲ್ಲೋ?’ ಎಂಬ ಪ್ರಸಂಗದಲ್ಲಿ ಮೇಲಾಧಿಕಾರಿಗಳು ಶಿಕ್ಷಕರನ್ನು ಪೇಚಿಗೆ ಸಲುಕಿಸಲು ಹೋಗಿ ಸ್ವತಃ ತಾನೇ ಅವಮಾನಿತರಾದ ಪ್ರಸಂಗವು ನಗೆ ತಂದಿರಬಹುದೇನೋ.
ಜನಪ್ರತಿನಿಧಿಗಳು, ರಾಜಕಾರಣಿಗಳು, ಅಧಿಕಾರಿ ವರ್ಗದವರು ರಾತ್ರಿ ಗ್ರಾಮವಾಸ್ತವ್ಯ ಮಾಡಿದ್ದು ಕೇಳಿದ್ದೇವೆ ಮತ್ತು ನೋಡಿದ್ದೇವೆ. ಆದರೆ ಶಿಕ್ಷಕರು ಗ್ರಾಮವಾಸ್ತವ್ಯ ಮಾಡಿದ್ದು ನಾನು ಕೇಳಿಯೇ ಇಲ್ಲ. ಮಾಲಾರವರು ತಾನು ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಕವಲೂರು ಗ್ರಾಮದಲ್ಲಿ ಫಲಿತಾಂಶ ಸುಧಾರಣೆಗಾಗಿ ಮಕ್ಕಳನ್ನು ರಾತ್ರಿಯೂ ಓದುವಂತೆ ಪ್ರೇರೇಪಿಸಬೇಕು ಎಂಬ ಆಲೋಚನೆ ಬರುತ್ತದೆ. ಅದಕ್ಕಾಗಿ ತಾನೇ ಊರಲ್ಲಿ ರಾತ್ರಿ ವಾಸ್ತವ್ಯಮಾಡಿ ಮಕ್ಕಳ ಓದನ್ನು ಹೆಚ್ಚಿಸಬೇಕು ಎಂದು ನಿರ್ಧರಿಸುತ್ತಾರೆ ಮತ್ತು ಅದರಂತೆ ಆ ಗ್ರಾಮದಲ್ಲಿ ವಾಸ್ತವ್ಯ ಮಾಡುತ್ತಾರೆ. ಮಕ್ಕಳನ್ನು ಓದಲು ಪ್ರೇರೇಪಿಸುತ್ತಾರೆ. ಇದರಿಂದ ಫಲಿತಾಂಶ ಉತ್ತಮವಾಗಿ ಬರುತ್ತದೆ. ಇಂತಹ ಪ್ರಯತ್ನ ಎಲ್ಲಾ ಶಿಕ್ಷಕರಿಗೂ ಅನುಕರಣೀಯ.
ಮೇಲಾಧಿಕಾರಿಗಳು ಶಾಲೆಗೆ ಭೇಟಿನೀಡಿದಾಗ 4-5 ದಿನಗಳ ಪಾಠ ಟಿಪ್ಪಣಿ ಬರೆಯದೇ ಖಾಲಿ ಬಿಟ್ಟಿದ್ದು ಪೇಚಿಗೆ ಸಿಲುಕಿಸದೇ ಶಹಾಬ್ಬಾಶ್ ಗಳಿಸಿಕೊಂಡಿದ್ದು ನಿರೀಕ್ಷಿತವಾಗಿರಲಿಲ್ಲ. ಲೇಖಕಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದ ನಿಮಿತ್ಯವಾಗಿ ಅನಿವಾರ್ಯವಾಗಿ 4-5 ದಿನಗಳ ಟಿಪ್ಪಣಿ ಬರೆಯಲಾಗಿರಲಿಲ್ಲ. ಮೇಲಾಧಿಕಾರಿ ಖಾಲಿ ಇರುವುದನ್ನು ಪ್ರಶ್ನಿಸಿದಾಗ ಲೇಖಕಿ ಸಾಂಸ್ಕೃತಿಕ ಕಾರ್ಯಕ್ರಮದ ಆಯೋಜನೆ ಸಲುವಾಗಿ ಬರೆಯಲಾಗಿಲ್ಲ ಎಂದು ಉತ್ತರಿಸುತ್ತಾರೆ. ಆಗ ಮೇಲಾಧಿಕಾರಿಗಳು ಬೈಯದೇ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ತೋರಿಸಲು ಹೇಳಿದ್ದು ಮತ್ತು ಲೇಖಕಿಗೆ ಶಹಾಬ್ಬಾಶ್ ಹೇಳಿದ್ದು ನಂತರ ಮಕ್ಕಳ ಹಾಡು, ಕೋಲಾಟ ನೋಡಿ ಅಧಿಕಾರಿಗಳು ಸಂತೋಷಪಟ್ಟದ್ದು ಅವರ ಪ್ರಾಮಾಣಿಕತೆಗೆ ಮೆಚ್ಚಿಕೊಂಡಿದ್ದರು.
ಶಿಕ್ಷಕನಿರಲಿ, ವೈದ್ಯನಿರಲಿ, ರೈತನಿರಲಿ, ಸೈನಿಕನಿರಲಿ ಎಲ್ಲರಿಗೂ ಒಂದಲ್ಲಾ ಒಂದು ನೋವುಗಳು ಕಾಡುತ್ತಿರುತ್ತವೆ. ಅದನ್ನೇ ನಾವು ಬದುಕು ಎನ್ನುತ್ತೇವೆ. ಈ ಕಷ್ಟಗಳು ಯಾರನ್ನೂ ಬಿಟ್ಟಿಲ್ಲ. ಮಹಿಳೆಗೆ ಕುಟುಂಬದಲ್ಲಿ ಗಂಡ-ಮಕ್ಕಳನ್ನು ಸರಿದಾರಿಗೆ ಕರೆದುಕೊಂಡು ಹೋಗುವುದೇ ಬಹುದೊಡ್ಡ ಸವಾಲು. ಅತಂಹ ಸಮಸ್ಯೆಯುಂಟಾದಾಗ ಒಬ್ಬ ಮಹಿಳೆಯಾಗಿ ನೋವು ಅನುಭವಿಸುವುದು ಸಾಮಾನ್ಯ. ಅಂತಹ ‘ನೋವುಂಡದ್ದನ್ನು’ ಲೇಖಕಿ ಇಲ್ಲಿ ಮನಬಿಚ್ಚಿ ಹೇಳಿದ್ದಾಳೆ.
ಒಬ್ಬ ಶಿಕ್ಷಕನಿಗೆ ‘ಶಿಷ್ಯ ಸಂಪತ್ತು’ ಅಪಾರ. ಸುಖ-ದುಃಖಗಳಲ್ಲಿ ಶಿಷ್ಯರು ಶಿಕ್ಷಕರನ್ನು ತಮ್ಮ ಕುಟುಂಬ ಸದಸ್ಯರು ಎಂಬಂತೆ ಭಾವಿಸಿಕೊಳ್ಳುತ್ತಾರೆ. ಒಬ್ಬ ಶಿಕ್ಷಕ ಗಳಿಸಿದ ಆಸ್ತಿ ಎಂದರೆ ಅದು ಶಿಷ್ಯ ಸಂಪತ್ತು ಆಗಿದೆ. ಒಬ್ಬ ಶಿಕ್ಷಕನಿಗೆ ಸಿಗುವಷ್ಟು ಗೌರವ ಇನ್ಯಾವಾ ವ್ಯಕ್ತಿಗೂ ಸಿಗಲಾರದು. ಶ್ರೀಮತಿ ಮಾಲಾರವರು 34 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದವರು. ಇಂದು ಸಾವಿರಾರು ಶಿಷ್ಯ ಬಳಗವನ್ನು ಗಳಿಸಿಕೊಂಡಿದ್ದಾರೆ. ಅದೇ ನಮ್ಮ ಸಂಪತ್ತು ಎಂದುಕೊಂಡಿದ್ದಾರೆ. ಇಂದು ನೂರಾರು ಕ್ಷೇತ್ರಗಳಲ್ಲಿ ತಮ್ಮ ಕೈಯಲ್ಲಿ ಅಭ್ಯಾಸ ಮಾಡಿದ ಮಕ್ಕಳನ್ನು ನೆನಪಿಸಿಕೊಂಡಿದ್ದಾರೆ.
ಹೀಗೆ ಶ್ರೀಮತಿ ಮಾಲಾ ಬಡಿಗೇರ ಅವರ ‘ಮನದಾಳ’ ಎಂಬ ತಮ್ಮ ಕೃತಿಯಲ್ಲಿ ತಾವು ಅನುಭವಿಸಿದ ಸಂಗತಿಗಳನ್ನು ತಮ್ಮ ‘ಮನದಾಳ’ದಿಂದ ಹೊರಹಾಕಿದ್ದಾರೆ. ಈಗಾಗಲೇ ವಿವರಿಸಿದಂತೆ ಇದು ಪ್ರಬಂಧಗಳ ಸಂಕಲನ ಎನ್ನುವುದಕ್ಕಿಂತ ಜೀವನಾನುಭವಗಳೇ ಇಲ್ಲಿವೆ. ಅವುಗಳನ್ನು ಓದಿದಂತೆ ಮಾಲಾರವರು ಎಂತಹವರು ಎನ್ನುವುದು ಪರಿಚಯವಾಗುತ್ತದೆ.

ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್
ಕನ್ನಡ ಉಪನ್ಯಾಸಕರು
ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ,
ಕೊಪ್ಪಳ-583231
ಮೊ ಸಂ : 9448570340
e-mail: skotnekal@gmail.com

Get real time updates directly on you device, subscribe now.

Comments are closed.

error: Content is protected !!