ಸೌಜನ್ಯಕ್ಕೆ ಸಮನಾದ ಮಾಲಾ ಮೇಡಂ…
ಎಲ್ಲರಿಗೂ ಸಂಪತ್ತು, ಜ್ಞಾನ, ವಿವೇಕ, ಪರೋಪಕಾರ ಮನಸ್ಥಿತಿ ಸಿಗದು. ಕೆಲವರಿಗೆ ಮಾತ್ರ ಇಂಥ ಅವಕಾಶಗಳು ಲಭ್ಯವಾಗುತ್ತವೆ. ‘Cour-tesy seeks rare souls’ ಅನ್ನುವುದು ಆಫ್ರಿಕಾದ ಒಂದು ಸುಭಾಷಿತ. ಅಂಥ ವಿರಳಾತೀ ವಿರಳರಲ್ಲಿ ಒಬ್ಬರು ಮಾಲಾ ದೇವೇಂದ್ರ ಬಡಿಗೇರ.
ಇವರು ಬೆಳಗಾವಿ ಜಿಲ್ಲೆ, ಸವದತ್ತಿ ತಾಲೂಕಿನ ಚುಳಕಿ ಹೆಸರಿನ ಗ್ರಾಮದವರು. ತಂದೆ ನಿಷ್ಟಾವಂಥ ವ್ಯಕ್ತಿ. ದುಡಿದು ಬದುಕು ಕಟ್ಟಿಕೊಳ್ಳುವಲ್ಲಿ ಸೋತು ಹುಬ್ಬಳ್ಳಿ ಶಹರಕ್ಕೆ ವಲಸೆ ಬರುತ್ತಾರೆ. ಹುಬ್ಬಳ್ಳಿಯ ‘ದುರ್ಗದಬೈಲು’ ಪ್ರದೇಶದಲ್ಲಿ ಅವರ ತಂದೆ ಗುರಪ್ಪ ಪತ್ತಾರ ತಮ್ಮ ಮನೆತನದ ವೃತ್ತಿ ಅಕ್ಕಸಾಲಿಕೆಯನ್ನು ಮಾಡುತ್ತಿದ್ದರು.
ತಾಯಿ ಈರಮ್ಮ ಮನೆಗೆಲಸದ ಒಡತಿ. ಹುಬ್ಬಳ್ಳಿಯ ಗೋಪನ ಕೊಪ್ಪದಲ್ಲಿ ವಾಸ. ಹುಬ್ಬಳ್ಳಿಯ ರಾಜರ್ಷಿ ಜಗದ್ಗುರು ಗಂಗಾಧರ ಶಿವಯೋಗಿಗಳ ಮೂರು ಸಾವಿರ ಮಠದ ವಿದ್ಯಾಲಯದಲ್ಲಿ ಶಿಕ್ಷಣ ಪಡೆದು, ಅಲ್ಲಿಯೇ ಬಿ ಎ ಪದವಿಯನ್ನು ಗಳಿಸಿಕೊಳ್ಳುತ್ತಾರೆ. ತಮ್ಮ ಬಿ ಇಡಿ ಅಧ್ಯಯನಕ್ಕೆ ಗಂಗಾವತಿಯ ಟಿ ಎಂ ಎ ಈ ಶಿಕ್ಷಣ ಸಂಸ್ಥೆಗೆ ಸೇರಿ ಬಿ ಇಡಿ ಪದವಿ ೧೯೮೦ ರಲ್ಲಿ ಪಡೆದು ಹುಬ್ಬಳ್ಳಿಗೆ ಹಿಂತಿರುಗಿದರು. ೧೯೮೪ ರಲ್ಲಿ ಉಪ್ಪಿನ ಬೆಟಗೇರಿಯ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆಗೆ ಸೇರುತ್ತಾರೆ. ತದನಂತರ ಯಲಬುರ್ಗಾ ತಾಲೂಕು ಮಂಗಳೂರು ಹೋಬಳಿಗೆ ಪ್ರೌಢ ಶಾಲಾ ಶಿಕ್ಷಕಿಯಾಗಿ ವರ್ಗವಾಗುತ್ತಾರೆ. ಕಿನ್ನಾಳ ಹಾಗೂ ಭಾಗ್ಯನಗರದಲ್ಲಿ ಪ್ರೌಢಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಬಳಿಕ, ಕೊಪ್ಪಳ ತಾಲೂಕಿನ ಕವಲೂರು ಗ್ರಾಮದಲ್ಲಿ ಪ್ರೌಢಶಾಲಾ ಪ್ರಧಾನ ಅಧ್ಯಾಪಕಿಯಾಗಿ ಸೇವೆ ಸಲ್ಲಿಸಿ ಅಲ್ಲಿಯೇ ನಿವೃತ್ತರಾದರು. ಸಾಹಿತ್ಯ, ಸಂಗೀತ, ಗಾಯನ, ಅಭಿನಯದಲ್ಲಿ ಅವರಿಗೆ ಎಲ್ಲಿಲ್ಲದ ಆಸಕ್ತಿ. ಕೆಲವು ನಾಟಕಗಳಲ್ಲಿ ಮನೋಜ್ಞ ಅಭಿನಯ ನೀಡಿದ್ದಾರೆ.
ಮಾಲಾ ಮೇಡಂ ಅವರು ತಮ್ಮ ಶಾಲಾ ದಿನಗಳಲ್ಲಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಉಪಾಧ್ಯಾಯಿನಿಯಾಗಿ ಈಗಲೂ ಉಳಿದಿದ್ದಾರೆ. ಅನೇಕ ಶಿಷ್ಯರು ಈಗಲೂ ಅವರ ಭೇಟಿಗಾಗಿ ಬರುವುದುಂಟು.
ತಮ್ಮ ಬಿಡುವಿನ ವೇಳೆಯಲ್ಲಿ ಸಾಹಿತ್ಯ ರಚನೆಗೆ ತೊಡಗುತ್ತಾರೆ. ಆಗಾಗ ಬರೆದು ಇಟ್ಟಂತಹ ಕವಿತೆಗಳನ್ನು ಒಟ್ಟುಗೂಡಿಸಿ ‘ಮೊದಲು ಮನಸು ಕಟ್ಟಿ’ ಶೀರ್ಷಿಕೆಯ ಕವನ ಸಂಕಲವನ್ನು ೨೦೧೨ ರಲ್ಲಿ ಬೆರಗು ಪ್ರಕಾಶನದ ಅಡಿಯಲ್ಲಿ ಪ್ರಕಟಿಸಿ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡುತ್ತಾರೆ. ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ನೀಲಗಂಗಾ ದತ್ತಿ ಪ್ರಶಸ್ತಿ ಈ ಕೃತಿಗೆ ಲಭಿಸಿದ್ದು ಗಮನಾರ್ಹ. ಅದೇ ಪ್ರಕಾಶನ ಅವರ ಪ್ರಬಂಧ ಸಂಕಲನ ‘ಮನದಾಳ’ ೨೦೨೪ ರಲ್ಲಿ ಮುದ್ರಿಸಿ ಅವರಿಗೆ ಪ್ರೋತ್ಸಾಹ ನೀಡಿದೆ.
ಸಂಕೋಚ ಅವರ ವ್ಯಕ್ತಿತ್ವದ ಚಿಲುಮೆ. ಪ್ರೀತಿ, ವಾತ್ಸಲ್ಯ ಅವರ ಬದುಕಿನ ಸುಗಮ ಹಾದಿಗಳು. ಮನುಷ್ಯ ಮಿಡಿತದ ಇಂಥ ಕವಯಿತ್ರಿಗೆ ಕೊಪ್ಪಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಲಗೇರಿ ಗ್ರಾಮದಲ್ಲಿ ೨೦೨೫ ಮಾರ್ಚ್ ೨೩ ರಂದು ಜರಗುವ ಹತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿಕೊಂಡಿದ್ದು ಸ್ತುತ್ಯರ್ಹ ಹಾಗೂ ಅಭಿನಂದನಾರ್ಹ. ಸಮ್ಮೇಳನದ ಸರ್ವಾಧ್ಯಕ್ಷೆಗೆ ನಾಡಿನ ಜನತೆಯ ಪರವಾಗಿ ಅಭಿನಂದನೆಗಳು. ಪರಿಷತ್ತಿಗೆ ಧನ್ಯವಾದಗಳು.
Comments are closed.