ಸೇವಾ ನ್ಯೂನತೆ: ಎಲೆಕ್ಟ್ರಿಕ್ ವಾಹನ ಖರೀದಿ ಮೊತ್ತ ಪಾವತಿಸಲು ಆದೇಶ
ಗ್ರಾಹಕ ಫಿರ್ಯಾದು ಸಂಖ್ಯೆ: 57/2024 ರಲ್ಲಿನ ಅಂತಿಮ ತೀರ್ಪಿನ ಸಾರಾಂಶದ ಅನ್ವಯ ಫಿರ್ಯಾದುದಾರರಾದ ಕೊಪ್ಪಳ ಜಿಲ್ಲೆಯ ಹಲಗೇರಿಯ ಗೋಪಾಲ ತಂದೆ ನಿಂಗಪ್ಪ ಇವರು ಎದುರುದಾರರಾದ ಮಾಲೀಕರು ಓಲಾ ಎಲೆಕ್ಟ್ರಿಕ್ ವಾಹನ ಮಾರಾಟಗಾರರು, ಗದಗ ರೋಡ್ ಕೊಪ್ಪಳ, ರವರ ವಿರುದ್ಧ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ನೀಡಿರುತ್ತಾರೆ. ಈ ದೂರಿನ ಸಾರಂಶ ಏನೆಂದರೆ, ದೂರುದಾರನು ಎದುರುದಾರರಲ್ಲಿ ಎಲೆಕ್ಟ್ರಿಕ್ ವಾಹನವನ್ನು ಖರೀದಿಸುವ ಸಲುವಾಗಿ 2023ರ ಡಿಸೆಂಬರ್ 27 ರಂದು 1,04,303 ರೂ.ಗಳನ್ನು ಪಾವತಿಸಿರುತ್ತಾರೆ. ಎದುರುದಾರರು ಹಣ ಪಡೆದ 30 ದಿನಗಳಲ್ಲಿ ಓಲಾ ಎಲೆಕ್ಟ್ರಿಕ್ ವಾಹನವನ್ನು ನೀಡುವುದಾಗಿ ಭರವಸೆಯನ್ನು ಕೊಟ್ಟಿದ್ದರೂ ವಾಹನವನ್ನು ನೀಡಿರುವುದಿಲ್ಲ. ದೂರುದಾರರು ಎದುರುದಾರರಿಗೆ ತಮ್ಮ ವಕೀಲರ ಮೂಲಕ ವಾಹನವನ್ನು ನೀಡುವಂತೆ ಅಥವಾ ವಾಹನಕ್ಕೆ ಪಾವತಿಸಿದ ಮೊತ್ತವನ್ನು ಹಿಂದಿರುಗಿಸುವಂತೆ ನೋಟಿಸನ್ನು ನೀಡಿದಾಗ್ಯೂ ಸಹ ಸ್ಪಂದಿಸದೇ ನಿರ್ಲಕ್ಷ ತೋರಿ ಸೇವಾ ನ್ಯೂನತೆ ಎಸಗಿರುತ್ತಾರೆ. ಅದ್ದರಿಂದ ದೂರುದಾರರು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿರುತ್ತಾರೆ.
ಈ ದೂರನ್ನು ದಾಖಲಿಸಿಕೊಂಡ ಕೊಪ್ಪಳ ಜಿಲ್ಲಾ ಆಯೋಗದ ಅಧ್ಯಕ್ಷರಾದ ಜಿ.ಇ.ಸೌಭಾಗ್ಯಲಕ್ಷ್ಮೀ ಹಾಗೂ ಸದಸ್ಯರಾದ ರಾಜು.ಎನ್.ಮೇತ್ರಿ ರವರು ವಾದ ಪ್ರತಿವಾದಗಳನ್ನು ಆಲಿಸಿ, ಎದುರುದಾರರಿಂದ ಉಂಟಾದ ಸೇವಾ ನ್ಯೂನತೆಗಾಗಿ ಹಾಗೂ ಅನುಚಿತ ವ್ಯಾಪಾರ ಪದ್ಧತಿಗಾಗಿ ಎದುರುದಾರರು ದೂರುದಾರರಿಂದ ಪಡೆದ ವಾಹನ ಖರೀದಿ ಮೊತ್ತ 1,04,303 ರೂ.ಗಳನ್ನು 2023ರ ಡಿಸೆಂಬರ್ 27 ರಿಂದ ಪಾವತಿಯಾಗುವವರೆಗೆ ವಾರ್ಷಿಕ ಶೇ.6ರ ಬಡ್ಡಿ ಸಮೇತ ದೂರುದಾರರಿಗೆ ನೀಡುವಂತೆ ಆದೇಶಿಸಿರುತ್ತಾರೆ ಹಾಗೂ ದೂರುದಾರರಿಗೆ ಉಂಟಾದ ಮಾನಸಿಕ ಯಾತನೆಗಾಗಿ 10,000 ರೂ.ಗಳನ್ನು ಹಾಗೂ ದೂರಿನ ಖರ್ಚು 5000 ರೂ.ಗಳನ್ನು ಈ ಆದೇಶದ ದಿನಾಂಕದಿಂದ 45 ದಿನಗಳ ಒಳಗಾಗಿ ಎದುರುದಾರರು ದೂರುದಾರರಿಗೆ ಪಾವತಿಸುವಂತೆ ಆದೇಶವನ್ನು ನೀಡಿರುತ್ತಾರೆ ಎಂದು ಕೊಪ್ಪಳ ಜಿಲ್ಲಾ ಗ್ರಾಹಕರ ಆಯೋಗದ ಸಹಾಯಕ ರಿಜಿಸ್ಟ್ರಾರ ಹಾಗೂ ಸಹಾಯಕ ಆಡಳಿತಾಧಿಕಾರಿ ಪಿ.ಎಸ್ ಅಮರದೀಪ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.