ಅಣು ಸ್ಥಾವರ ಸ್ಥಾಪನೆಗೆ    “ಎಸ್. ಯು. ಸಿ. ಐ (ಕಮ್ಯುನಿಸ್ಟ್ ) ಪಕ್ಷದ”  ವಿರೋಧ…

0

Get real time updates directly on you device, subscribe now.

 

ಕೊಪ್ಪಳ :  ಜಿಲ್ಲೆಯಲ್ಲಿ ಅಣು ವಿದ್ಯುತ್ ಸ್ಥಾವರದ ಸ್ಥಾಪನೆಗಾಗಿ ಭೂಮಿ ಹುಡುಕುತ್ತಿರುವುದನ್ನು  ಸೋಶಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್ ) ಪಕ್ಷವು ಉಗ್ರವಾಗಿ ಖಂಡಿಸುತ್ತದೆ ಎಂದು SUCI (ಕಮ್ಯುನಿಸ್ಟ್) ಪಕ್ಷದ ಪರವಾಗಿ ಶರಣು ಗಡ್ಡಿ  ಪ್ರಕಟಣೆಯಲ್ಲಿ ಹೇಳಿದ್ದಾರೆ.

 

ಕಳೆದ ಕೆಲವು ದಿನಗಳಿಂದ  ಕೊಪ್ಪಳ ಜಿಲ್ಲೆಯಲ್ಲಿ  “ಅಣು ವಿದ್ಯುತ್ ಸ್ಥಾವರದ ಸ್ಥಾಪನೆಗಾಗಿ”  ಜಾಗ ಹುಡುಕುವ ಕೆಲಸ ಜಿಲ್ಲಾಡಳಿತ ನೇತೃತ್ವದಲ್ಲಿ  ನಡೆಯುತ್ತಿದೆ.. ಮೊದಲಿಗೆ ಕೊಪ್ಪಳ ಜಿಲ್ಲೆ, ಕೊಪ್ಪಳ ತಾಲೂಕಿನ ಅರಸಿನಕೆರೆ  ಹತ್ತಿರ ಇರುವ  ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ  ಜಾಗ ಹುಡುಕಲು   ಪ್ರಯತ್ನ  ನಡೆದಿದೆ. ಅವಶ್ಯಕತೆ ಇರುವಷ್ಟು ಭೂಮಿ ಸಿಗದ ಕಾರಣ  ಅದನ್ನು ಬಿಟ್ಟು, ಗಂಗಾವತಿ ತಾಲೂಕಿನಲ್ಲಿ ಈ ಕೆಲಸ ಜಿಲ್ಲಾಡಳಿತದ ಆದೇಶದ ಮೇರೆಗೆ ತಾಲೂಕು ಆಡಳಿತದಿಂದ ಗುಪ್ತವಾಗಿ ನಡೆದಿದೆ..  ಸಾವಿರಾರು ವರ್ಷಗಳ  ಇತಿಹಾಸವನ್ನು ಹೊಂದಿರುವ  ಹಿರೇಬೆಣಕಲ್ ಗ್ರಾಮದ ಹತ್ತಿರವಿರುವ  ನೂರಾರು ಮೊರೆರ ತಟ್ಟೆಗಳು  ಇರುವಂತಹ ಐತಿಹಾಸಿಕ ಜಾಗದಲ್ಲಿ  ಈಗಾಗಲೇ  ಜಾಗವನ್ನು ಗುರುತಿಸಲಾಗಿದೆ. ಅರಣ್ಯ ಇಲಾಖೆಯವರೇ ಹೇಳುವಂತೆ  ಸರ್ವೆ ನಂಬರ್ 35 ಮತ್ತು 55 ರಲ್ಲಿ  ಈ ಜಾಗವನ್ನು ಗುರುತಿಸಲಾಗಿದ್ದು  ಇಲ್ಲಿ ವಿವಿಧ ಪ್ರಭೇದದ ನೂರಾರು ಪ್ರಾಣಿಗಳು ಪಕ್ಷಿಗಳು ವಾಸಿಸುತ್ತಿವೆ. ಇದರಲ್ಲಿ ಚಿರತೆಗಳು, ನವಿಲುಗಳು, ಕರಡಿಗಳು , ತೋಳಗಳು, ಕತ್ತೆಕಿರುಬ ಇನ್ನಿತರ ಪ್ರಭೇದದ ಪ್ರಾಣಿಗಳು ಇವೆ… ಹಾಗೂ ಕಾಯ್ದಿಟ್ಟ ಅರಣ್ಯದ ಭೂಮಿಯನ್ನು ಯಾವುದೇ ಬೇರೆ ಚಟುವಟಿಕೆಗೆ ಬಳಸಲು ಅವಕಾಶವಿರುವುದಿಲ್ಲ. ಇದೆಲ್ಲ ಗೊತ್ತಿದ್ದರೂ,   ಜಿಲ್ಲಾಡಳಿತದ ನಡೆ  ಜನರಲ್ಲಿ ಆಕ್ರೋಶವನ್ನು ಉಂಟುಮಾಡಿದೆ. ಅಣುಸ್ಥಾವರಕ್ಕಾಗಿ ಗುರುತಿಸಲ್ಪಟ್ಟ ಜಾಗದ ಸುತ್ತಲಿರುವ  ಹಳ್ಳಿಗಳಾದ, ಹೇಮಗುಡ್ಡ, ಮುಕ್ಕುಂಪಿ, ಲಿಂಗದಹಳ್ಳಿ, ಚಿಕ್ಕಬೆಣಕಲ್, ಎಡಹಳ್ಳಿ  ಭಾಗದ ರೈತರು  ಭೂಮಿ ಕಳೆದುಕೊಳ್ಳುವ  ಆತಂಕಕ್ಕೆ ಒಳಗಾಗಿದ್ದಾರೆ..

ಕೇವಲ ಜಾಗವನ್ನು ನೋಡಲು  ಕೇಂದ್ರದಿಂದ ಆದೇಶ ಬಂದಿದೆ, ಯಾವ ಜಾಗವು ಅಂತಿಮವಾಗಿಲ್ಲ  ಎನ್ನುವ ಜಿಲ್ಲಾಧಿಕಾರಿಯವರ ಹೇಳಿಕೆಯು  ಸಹ ಸಂಶಯಕ್ಕೆ ಅವಕಾಶ ಮಾಡಿಕೊಟ್ಟಿದೆ.. ಗಂಗಾವತಿಯ ತಹಸಿಲ್ದಾರರು  ಕೊಪ್ಪಳದ ಉಪ ವಿಭಾಗಾಧಿಕಾರಿಗಳಿಗೆ ಕಳಿಸಿರುವ  ಪತ್ರ ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ಲಭ್ಯವಿದೆ..

ವಿದ್ಯುತ್ ಉತ್ಪಾದನೆ ಮಾಡುವ ತಂತ್ರಜ್ಞಾನ ಈಗಾಗಲೇ ಬಹಳಷ್ಟು ಮುಂದುವರೆದಿದ್ದು, ಅರಣ್ಯ ಮೀಸಲು ಮತ್ತು ಜನವಸತಿ  ಪ್ರದೇಶಗಳಲ್ಲಿ  ಅಣು ವಿದ್ಯುತ್ ಸ್ಥಾವರದಂತಹ ಹಳೆಯ ಮತ್ತು ಅಪಾಯಕಾರಿ  ವಿದ್ಯುತ್ ತಯಾರಿಕಾ ಘಟಕಗಳನ್ನು ಮಾಡುವುದೇ ಅವೈಜ್ಞಾನಿಕ ನಡೆ .. ಕೇವಲ ಕೊಪ್ಪಳ ಜಿಲ್ಲೆ ಅಷ್ಟೇ ಅಲ್ಲ  ಕರ್ನಾಟಕದ ಯಾವುದೇ ಜಾಗದಲ್ಲಾಗಲಿ  ವನ್ಯಜೀವಿಗಳಿಗೆ ಮತ್ತು  ಜನಗಳಿಗೆ ತೊಂದರೆಯಾಗುವಂತಹ ಸ್ಥಳಗಳಲ್ಲಿ  ಅಣುಸ್ಥಾವರಗಳನ್ನು ನಿರ್ಮಿಸುವುದನ್ನು ನಾವು ವಿರೋದಿಸುತ್ತೇವೆ.  ನಿರ್ಜನ ಮತ್ತು ಬರಡುಭೂಮಿಗಳಲ್ಲಿ  ಇಂತಹ ಸ್ಥಾವರಗಳನ್ನು ನಿರ್ಮಿಸಿದರು ಸಹ ಅಗತ್ಯ ಮುನ್ನೆಚ್ಚರಿಕೆಯ ಕ್ರಮಗಳನ್ನು  ವಹಿಸಬೇಕೆಂದು ಆಗ್ರಹಿಸುತ್ತೇವೆ ಎಂದು SUCI (ಕಮ್ಯುನಿಸ್ಟ್) ಪಕ್ಷದ ಪರವಾಗಿ ಶರಣು ಗಡ್ಡಿ  ಪ್ರಕಟಣೆಯಲ್ಲಿ ಹೇಳಿದ್ದಾರೆ.

Get real time updates directly on you device, subscribe now.

Leave A Reply

Your email address will not be published.

error: Content is protected !!