ಮ್ಯಾಕ್ಸ್ ಸಿನಿಮಾ ವಿಮರ್ಶೆ :ಆ್ಯಕ್ಷನ್ “ಮ್ಯಾಕ್ಸ್” ಜೊತೆಗೆ ಥ್ರಿಲ್ಲಿಂಗ್ ಸ್ಟೋರಿ
//ಮ್ಯಾಕ್ಸ್ ಸಿನಿಮಾ ವಿಮರ್ಶೆ//
*ಆ್ಯಕ್ಷನ್ “ಮ್ಯಾಕ್ಸ್” ಜೊತೆಗೆ ಥ್ರಿಲ್ಲಿಂಗ್ ಸ್ಟೋರಿ*
ಮಾಸ್ ಆಗಿ ನಡೆಯುವ, ಲುಕ್ ಕೊಡುವ, ಸಿಗರೇಟ್ ಹಚ್ಚುವ ಕಿಚ್ಚ, ಅಭಿಮಾನಿಗಳಿಗೆ ಮತ್ತಷ್ಟು ಹುಚ್ಚು ಹಿಡಿಸುವ ಸಿನಿಮಾ ಇದು. ಅಭಿಮಾನಿಗಳನ್ನ ಗಮನದಲ್ಲಿ ಇಟ್ಟುಕೊಂಡು ಮಾತ್ರವಲ್ಲ, ಒಂದೊಳ್ಳೆ ಕಂಟೆಂಟ್ ಇರೋ ಕಥೆಯನ್ನು ಹೊತ್ತು ತೆರೆಗೆ ಬಂದಿರುವ ಸಿನಿಮಾ ಮ್ಯಾಕ್ಸ್. ಮಾಸ್ ಪ್ರಿಯರು ಫುಲ್ ಫಿದಾ ಆಗುವ ಈ ಸಿನಿಮಾ ಮಧ್ಯಂತರದವರೆಗೆ ಪಿ.ವಾಸು ನಿರ್ದೇಶನದ ದೃಶ್ಯ ಸಿನಿಮಾದ ಕೊಂಚ ರಿವರ್ಸ್ ಆರ್ಡರ್ ಮೂವಿ ಅನ್ಸುತ್ತೆ. ಆನಂತರ ಕಥೆಯ ಟ್ರ್ಯಾಕ್ ಡಿಫರೆಂಟ್ ಪಥಕ್ಕೆ ತೆರೆದುಕೊಳ್ಳುತ್ತದೆ.
ಸಂಜೆ 7 ರಿಂದ ಬೆಳಗ್ಗೆ 7 ಗಂಟೆಯೊಳಗೆ ನಡೆಯುವ ಎಲಿಮೆಂಟ್ಸ್ ಪೋಣಿಸಿ ಮಾಸ್ ಡೈಲಾಗ್, ಫೈಟ್ಸ್ ಜೊತೆ ಕಥೆಯ ಚಿಕ್ಕ ಎಳೆಯೊಂದನ್ನ ಅನಗತ್ಯವಾಗಿ ಎಳೆದಾಡದೇ, ರೋಚಕವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ವಿಜಯ್ ಕಾರ್ತಿಕೇಯ. ಮರ ಸುತ್ತುವ, ಮೈ ಬಳುಕುವುದಷ್ಟೇ ಹೀರೋಯಿನ್ ಸೀಮಿತ ಎನ್ನುವ ಈಚೆಗಿನ ಸಿನಿಮಾ ಫಾರ್ಮುಲಾ ಹೊಡೆದು ಹಾಕಿರುವ ನಿರ್ದೇಶಕರು ಹೀರೋಯಿನ್ ಬೇಡ ಎಂದು ತೀರ್ಮಾನಿಸಿದ್ದು ಕಥೆಯ ಓಟಕ್ಕೆ ಸೂಕ್ತವಾಗಿದೆ.
ಅಮಾನತು, ವರ್ಗಾವಣೆಗೆ ಒಗ್ಗಿಕೊಂಡಿರುವ ಪೊಲೀಸ್ ಅಧಿಕಾರಿ ಅರ್ಜುನ್, ಅಮಾನತು ಶಿಕ್ಷೆ ಮುಗಿಸಿ ಬೆಂಗಳೂರಿಗೆ ವರ್ಗವಾಗಿ ಬಂದು ಕರ್ತವ್ಯಕ್ಕೆ ಹಾಜರಾಗುವ ಮುನ್ನ ನಡೆಯುವ ಕಥೆ ಮ್ಯಾಕ್ಸ್. ಚಿತ್ರದಲ್ಲಿ ನಾಯಕನ ಹೆಸರಿನ ಸರ್‌ನೇಮ್‌ನ ಸಂಕ್ಷಿಪ್ತರೂಪವೇ ಮ್ಯಾಕ್ಸ್. ಚಿತ್ರದ ಈ ಟೈಟಲ್‌ಗೆ ಇದನ್ನ ಬಿಟ್ಟರೆ ಬೇರಾವ ಕಾರಣಗಳಿಲ್ಲ. ಮಾಸ್ ಆಡಿಯನ್ಸ್ ರೀಚ್‌ಗೆ ಈ ಟೈಟಲ್ ಸಹಕಾರಿ ಸಹ.
ಮಂತ್ರಿ ಮಕ್ಕಳ ಅಟ್ಟಹಾಸ ಎಷ್ಟೆಂದರೆ ಡ್ಯೂಟಿ ಮೇಲಿರುವ ಮಹಿಳಾ ಪೊಲೀಸ್ ಪೇದೆ ಬಟ್ಟೆ ಹರಿಯುವಷ್ಟು. ಇದನ್ನ ಕಂಡ ಅರ್ಜುನ್, ಡ್ಯೂಟಿಗೆ ಹಾಜರಾಗುವ ಮುನ್ನವೇ ಮಂತ್ರಿ ಮಕ್ಕಳನ್ನ ಕಂಬಿ ಹಿಂದೆ ಹಾಕುತ್ತಾನೆ. ಬೆಳಗ್ಗೆ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳುವ ಮುನ್ನವೇ ಅಂದ್ರೆ ಹಿಂದಿನ ದಿನ ರಾತ್ರಿ ಮಂತ್ರಿ ಮಕ್ಕಳನ್ನ ಜೈಲಿಗೆ ಹಾಕಿದ ಕೆಲವೇ ನಿಮಿಷಗಳಲ್ಲಿ ಅವರ ಸಾವು. ಕಂಬಿ ಹಿಂದೆ ಇದ್ದ ಮಂತ್ರಿ ಮಕ್ಕಳು ಹೇಗೆ ಸತ್ತರು? ಮ್ಯಾಕ್ಸ್ ಏನು ಮಾಡುತ್ತಾನೆ? ಮಂತ್ರಿ ಕಡೆಯವರ ದುಷ್ಟತನಕ್ಕೆ ಸಂಕಷ್ಟ ಎದುರಿಸಿದ ಪೋಲೀಸ್ ಕುಟುಂಬಗಳ ಹಿನ್ನೆಲೆ ಏನು? ಸಾವಿನ ಘಟನೆಯಿಂದ ಪೊಲೀಸರ ಪರಿಸ್ಥಿತಿ.. ಇವುಗಳನ್ನು ಥೇಟರ್‌ನಲ್ಲೇ ನೋಡಬೇಕು.
ಕಿಚ್ಚ ಸುದೀಪ್ ಮತ್ತೊಮ್ಮೆ ಪೊಲೀಸ್ ಬ್ಯಾಕ್‌ಗ್ರೌಂಡ್‌ನಲ್ಲಿ ಯುನಿಫಾರ್ಮ್ ಇಲ್ಲದೇ ಅಬ್ಬರಿಸಿ, ಬೊಬ್ಬಿರಿದಿದ್ದಾರೆ. ನಟನೆ, ಆ್ಯಕ್ಷನ್‌ನಲ್ಲಿ ಕಿಚ್ಚ ಬಾದಶಹನೇ ಸರಿ. ವರಲಕ್ಷ್ಮೀ ಶರತ್‌ಕುಮಾರ್ ನೆಗೆಟಿವ್ ಶೇಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಕೃತಾ ವಾಗ್ಲೆ, ಸಂಯುಕ್ತಾ ಹೊರನಾಡು ಮಹಿಳಾ ಪೊಲೀಸ್ ಪೇದೆ ಪಾತ್ರದಲ್ಲಿ ಇಷ್ಟವಾಗುತ್ತಾರೆ. ಪ್ರಮೋದ್ ಶೆಟ್ಟಿ ಮಹತ್ವ ಅಲ್ಲದ ಪಾತ್ರದಲ್ಲಿ ಹೀಗೇ ಬಂದು, ಹಾಗೇ ಹೋಗುತ್ತಾರೆ. ಉಗ್ರಂ ಮಂಜುಗೆ ಈ ಸಿನಿಮಾದಲ್ಲಿ ಸಖತ್ ಸ್ಪೇಸ್ ಸಿಕ್ಕಿದೆ. ಅದನ್ನವರು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಇಡೀ ಸಿನಿಮಾದ ಹೈಲೈಟ್ ಅಂದರೆ ಅಜನೀಶ್ ಲೋಕನಾಥ್‌ರ ಬ್ಯಾಕ್‌ಗ್ರೌಂಡ್ ಮ್ಯೂಜಿಕ್, ಶೇಖರ ಚಂದ್ರ ಅವರ ನೈಟ್ ವಿಜ್ಯುವಲ್ಸ್ ಕ್ಯಾಪ್ಚರಿಂಗ್ ಮತ್ತು ಅನೂಪ್ ಬರೆದಿರುವ ಜಬರ್‌ದಸ್ತ್ ಡೈಲಾಗ್ಸ್. ಅಜನೀಶ್ ಸಂಗೀತದಲ್ಲಿ ಮೂಡಿ ಬಂದಿರುವ ಹಾಡುಗಳಿಗೆ ಅಂಥ ಗುನುಗುನಿಸುವ ಗುಣವಿಲ್ಲ.
ದೃಶ್ಯ ಸಿನಿಮಾದ ಗುಂಗಿನಲ್ಲೇ ಕಥೆ ಸಾಗಿದರೂ ಮತ್ತೊಂದು ಮಗ್ಗುಲಿಗೆ ತೆರೆದುಕೊಳ್ಳುವ ಮ್ಯಾಕ್ಸ್, ಎರಡನೇ ಭಾಗದಲ್ಲಿ ಬರುತ್ತಿಲ್ಲವಲ್ಲ ಎಂದೆನಿಸುವಷ್ಟು ಆಪ್ತವಾಗುತ್ತದೆ. ಕೊಂಚಮಟ್ಟಿಗೆ ಹಿಂಸೆ ಸಹಿಸುವ ಸಾಮರ್ಥ್ಯ ಇದ್ದವರು ಕುಟುಂಬ ಸಮೇತ ಮ್ಯಾಕ್ಸ್ ಕಣ್ತುಂಬಿಕೊಳ್ಳಬಹುದು.
ರೇಟಿಂಗ್: ***1/2
=========
*ರೇಟಿಂಗ್ ಡೀಟೆಲ್ಸ್…*
*= ಚನ್ನಾಗಿಲ್ಲ
**= ಪರವಾಗಿಲ್ಲ
***= ಚನ್ನಾಗಿದೆ
****= ತುಂಬಾ ಚನ್ನಾಗಿದೆ
*****= ಮಿಸ್ ಮಾಡ್ದೆ ನೋಡಿ
ರೇಟಿಂಗ್: ***1/2
ಬಾಕ್ಸ್-2
*ಮ್ಯಾಕ್ಸ್ ಸಿನಿಮಾ ತಂಡ*
ತಾರಾಗಣ: ಕಿಚ್ಚ ಸುದೀಪ್. ಸಂಯುಕ್ತಾ ಹೊರನಾಡು, ವರಲಕ್ಷ್ಮೀ ಶರತ್‌ಕುಮಾರ, ಸುಕೃತಾ ವಾಗ್ಲೆ, ಉಗ್ರಂ ಮಂಜು, ಶರತ್ ಲೋಹಿತಾಶ್ವ ಮತ್ತಿತರರು.
ನಿರ್ಮಾಣ: ಕಲಿಪುಲ್ಲಿ ತನು, ಸುದೀಪ್
ನಿರ್ದೇಶನ : ವಿಜಯ್ ಕಾರ್ತಿಕೇಯನ್
ಛಾಯಾಗ್ರಹಣ ನಿರ್ದೇಶಕ: ಎ.ಜೆ.ಶೆಟ್ಟಿ.
ಸಂಗೀತ-ಹಿನ್ನೆಲೆ-ಧ್ವನಿ ವಿನ್ಯಾಸ : ಬಿ. ಅಜನೀಶ್ ಲೋಕನಾಥ್.
ಛಾಯಾಗ್ರಹಣ: ಶೇಖರ ಚಂದ್ರ
ಸಂಭಾಷಣೆ: ಅನೂಪ್ ಭಂಡಾರಿ
ಪ್ರದರ್ಶನ: ಶ್ರೀ ಲಕ್ಷ್ಮೀ ಚಿತ್ರಮಂದಿರ, ಕೊಪ್ಪಳ.
=========
-ಬಸವರಾಜ ಕರುಗಲ್
==========