೧೫ನೇ ವರ್ಷದ ಶ್ರೀ ದತ್ತಾತ್ರೇಯ ಜಯಂತೋತ್ಸವ
ಗುರುದೋಷ ನಿವಾರಣೆಗೆ ದತ್ತ ನಾಮಸ್ಮರಣೆ ಅವಶ್ಯಕ: ಧರ್ಮದರ್ಶಿ ನಾರಾಯಣರಾವ್ ವೈದ್ಯ.
ಗಂಗಾವತಿ: ಹರ ಮುನಿದರು ಗುರು ಕಾಯುವ ಎಂಬ ಮಾತಿನಂತೆ ಪ್ರತಿಯೊಬ್ಬರ ಬದುಕಿನಲ್ಲಿ ಮುಂದೆ ಗುರಿ ಹಿಂದೆ ಗುರುವಿನ ಅನುಗ್ರಹ ಅವಶ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಗುರುದೋಷ ನಿವಾರಣೆಗೆ ತ್ರಿಮೂರ್ತಿ ಅವತಾರಿಗಳಾದ ಶ್ರೀ ದತ್ತಾತ್ರೇಯ ಗುರುಗಳ ನಾಮಸ್ಮರಣೆ ಅತ್ಯಂತ ಅವಶ್ಯಕವಾಗಿದೆ ಎಂದು ಶಂಕರ ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಹೇಳಿದರು.
ಅವರು ಶಂಕರ ಮಠದ ಶಾರದಾ ದೇಗುಲದಲ್ಲಿ ಶೃಂಗೇರಿ ಜಗದ್ಗುರುಗಳ ಸುವರ್ಣ ಮಹೋತ್ಸವದ ಪ್ರಯುಕ್ತ ಉಭಯ ಜಗದ್ಗುರುಗಳ ಅನುಗ್ರಹದ ಮೇರೆಗೆ ೧೫ನೇ ವರ್ಷದ ದತ್ತಾತ್ರೇಯ ಜಯಂತೋತ್ಸವ ಉಪಯುಕ್ತ ಧರ್ಮಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಶ್ರೀ ದತ್ತ ಕ್ಷೇತ್ರಗಳಾದ ಗಾಣಗಾಪುರ, ರಾಯಚೂರು ಸಮೀಪದ ಕೃಷ್ಣ ನದಿಯ ನಡುಗಡ್ಡೆಯಾದ ಕುರುವಪುರ ಕ್ಷೇತ್ರದ ದರ್ಶನ ಪಡೆಯಲು ಕಷ್ಟಕರವಾಗಿತ್ತು. ಈ ಹಿನ್ನೆಲೆಯಲ್ಲಿ ನಮ್ಮ ಸಮಾಜದ ಹಿರಿಯರು ಕಳೆದ ೧೫ ವರ್ಷದ ಶ್ರೀ ದತ್ತಾತ್ರೇಯ ಜಯಂತಿ, ಗುರುದ್ವಾದಶಿ ಆಚರಣೆಯ ಮೂಲಕ ಗುರುಗಳ ಕೃಪೆಗೆ ಪಾತ್ರರಾಗುತ್ತಾ ಬರಲಾಗಿದೆ ಎಂದು ತಿಳಿಸಿದರು.
ಸಮಾರಂಭದ ಸಂಯೋಜಕರಾದ ಜಗನ್ನಾಥ ರಾವ್ ಅಳವಂಡಿಕರ ಮಾತನಾಡಿ, ದತ್ತ ಜಯಂತಿ ಉತ್ಸವಕ್ಕೆ ಶೃಂಗೇರಿ ಉಭಯ ಜಗದ್ಗುರುಗಳ ಪ್ರೇರಣೆ ಸಹಕಾರದಿಂದಾಗಿ ಸಂಪೂರ್ಣ ಯಶಸ್ಸಿಗೊಂಡಿದೆ. ಧಾರ್ಮಿಕತೆ ಬೆಳೆಸುವುದರ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗಿದೆ ಎಂದರು.
ಸಮಾರಂಭಕ್ಕೆ ಪೂರ್ವದಲ್ಲಿ ಪಾದುಕೆಗಳಿಗೆ ಅಭಿಷೇಕ, ಅಷ್ಟೋತ್ತರ ಪಾರಾಯಣ, ಪಾಲಕಿ ಉತ್ಸವ, ತೊಟ್ಟಿಲು ಉತ್ಸವ ಸೇರಿದಂತೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ದೇವಸ್ಥಾನದ ಪ್ರಧಾನ ಅರ್ಚಕ ಕುಮಾರ್ ಭಟ್ ಹಾಗೂ ವೇದಮೂರ್ತಿ ಮಹೇಶಭಟ್ ಜೋಶಿ ನೆರವೇರಿಸಿದರು. ಚಿಕ್ಕಮಕ್ಕಳಿಂದ, ಹಿರಿಯರ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಶೇಷ ಗಮನಸೆಳೆದವು.
ಈ ಸಂದರ್ಭದಲ್ಲಿ ಶಂಕರ ಮಠದ ಸೇವಾ ಟ್ರಸ್ಟ್ ಹಿರಿಯರಾದ ರಾಘವೇಂದ್ರ ಅಳವಂಡಿಕರ್, ಬಾಲಕೃಷ್ಣ ದೇಸಾಯಿ, ಶ್ರೀಪಾದರಾವ್ ಮುಧೋಳಕರ್, ದತ್ತಾತ್ರೇಯ ಹೊಸಳ್ಳಿ, ವಿಶ್ವನಾಥ್ ಅಳವಂಡಿಕರ್, ಸುಧಾಕರ್ ಜೋಶಿ, ಸೇರಿದಂತೆ ವಿವಿಧ ಭಜನಾ ಮಂಡಳಿಯ ಮಹಿಳೆಯರು ಪಾಲ್ಗೊಂಡಿದ್ದರು.
Comments are closed.