fbpx

ಸ್ಲಂನಲ್ಲಿದ್ದಾಳೆ ಟಿಪ್ಪು ಕುಟುಂಬದ ತಮನ್ನಾ!

ತಮನ್ನಾ ಬೇವ!!!

tippu-family tippu-family-members-karnataka

ಹೆಸರು ಕೇಳುವಾಗ ಯಾರಪ್ಪಾ ಇದು ಸೆಲೆಬ್ರಿಟಿ ಅಂತ ಭಾವಿಸಬೇಡಿ. ಆದರೆ ಈಕೆ ಸೆಲೆಬ್ರಿಟಿಯಾಗಿ ಮೆರೆಯಬೇಕಿತ್ತು. ದೇಶದ ಉದ್ದಗಲ ರಾಣಿಯಾಗಿ ಗುರುತಿಸಬೇಕಿತ್ತು. ಸರಕಾರದ ಸಕಲ ಗೌರವಕ್ಕೂ ಅರ್ಹರಾಗಬೇಕಿತ್ತು. ಅರಮನೆ ಜೀವನ ಸವೆಸ ಬೇಕಾಗಿತ್ತು. ಸಕಲ ಐಶ್ವರ್ಯದೊಂದಿಗೆ ಐಶಾರಾಮ ಬದುಕಲ್ಲಿ ತಲ್ಲೀನರಾಗಬೇಕಿತ್ತು. ತನ್ನ ತಲೆಮಾರು ಪೂರ ವೈಭವೋಪೇತವಾಗಿ ಬಾಳಬೇಕಾಗಿತ್ತು. ಸುಖದ ಸುಪ್ಪತ್ತಿಗೆಯಲ್ಲಿ ಕೂತು ತಿನ್ನಬೇಕಿತ್ತು.

ಆದರೆ 70 ರ ಹರೆಯದ ತಮನ್ನಾ ಬೇವ ಕೊಲ್ಕತ್ತಾದ ಟೋಲಿಗಂಜ್ ನ ಸ್ಲಂ ಏರಿಯಾದ ಹರುಕು ಮುರುಕು ಗುಡಿಸಲಿನಲ್ಲಿ ತನ್ನ ಮಕ್ಕಳು ಮೊಮ್ಮಕ್ಕಳ ಜೊತೆ ದಯನೀಯ ಜೀವನಕ್ಕೆ ಮೊರೆ ಹೋಗಿದ್ದಾರೆ. ತಮನ್ನಾ ಅವರ ಮಗ ಅನ್ವರ್ ಶಾ ಸೈಕಲ್ ರಿಕ್ಷಾ ತುಳಿದು ದಿನಕ್ಕೆ ನೂರು ರೂಪಾಯಿಗಾಗಿ ಪರದಾಡುತ್ತಿದ್ದಾರೆ. ಮತ್ತೊಬ್ಬ ಮಗ ಸನ್ವರ್ ಶಾ ಕೂಡಾ ಇದೇ ಸೈಕಲ್ ತುಳಿದು ದುಡಿಯುವ ಕಾಯಕದಲ್ಲಿದ್ದಾರೆ. ಇವರಿಬ್ಬರದ್ದೂ ಸ್ವಂತವಲ್ಲದ ಸೈಕಲ್ ರಿಕ್ಷಾ. ಇತರರ ಕೈಕೆಳಗೆ ದುಡಿಯುವ ದುರವಸ್ಥೆ. ತಮನ್ನಾರ ಇನ್ನೋರ್ವ ಮಗ ದಿಲಾವರ್ ಶಾ ಸೆಕ್ಯುರಿಟಿ ಗಾರ್ಡ್. ಮತ್ತೊಬ್ಬ ಹೈದರಲಿ ಶಾ ಸಣ್ಣಪುಟ್ಟ ಕೂಲಿ ಕೆಲಸ ಮಾಡಿ ಅನ್ನವನ್ನು ಅರಸುತ್ತಿದ್ದಾರೆ. ಒಟ್ಟಿನಲ್ಲಿ ಈ “ರೋಯಲ್” ಕುಟುಂಬ ಸಣ್ಣ ಗುಡಿಸಲೊಂದರಲ್ಲಿ ಸ್ವಾಭಿಮಾನದ ಜೀವನ ನಡೆಸುತ್ತಿದ್ದಾರೆ. ನಾಣ್ಯ-ನಾಣ್ಯ ಗಳನ್ನು ಕೂಡಿಸಿ ದಿನನಿತ್ಯದ ಕೂಲಿ ಕೆಲಸದಲ್ಲಿ ನೆಮ್ಮದಿ ಬಯಸುತ್ತಿದ್ದಾರೆ. ರಾಜಮರ್ಯಾದೆ ನೀಡಬೇಕಾಗಿದ್ದ ಈ ಕುಟುಂಬಕ್ಕೆ ಹೇಳೋರಿಲ್ಲ ಕೇಳೋರಿಲ್ಲ. ಒಪ್ಪೊತ್ತಿನ ಊಟಕ್ಕೂ ತತ್ವಾರಪಡುವ ದಯನೀಯ ಸ್ಥಿತಿ.

ಹಾಗಾದರೆ ಯಾರಿವರು…? ಬೇರಾರೂ ಅಲ್ಲ…! ಇವರು ಬ್ರಿಟಿಷರ ವಿರುದ್ಧ ಹೋರಾಡಿ ಜೈಸಿದ, ಅವರಿಂದಲೇ ಮೋಸದಿಂದ ಬಲಿಯಾದ “ಮೈಸೂರು ಹುಲಿ” ಟಿಪ್ಪು ಸುಲ್ತಾನ್ ಅವರ ಕುಟುಂಬ. ತಮನ್ನಾ ಬೇವ ಟಿಪ್ಪು ಸುಲ್ತಾನರ ಆರನೇ ತಲೆಮಾರಿನ ಸಂತತಿ. ಟಿಪ್ಪೂ ವಧೆಯ ಬಳಿಕ ಬ್ರಿಟಿಷರು ಟಿಪ್ಪು ಅವರ 12 ಮಕ್ಕಳ ಸಹಿತ ಟಿಪ್ಪು ಕುಟುಂಬದ 300 ಸದಸ್ಯರನ್ನು ಕರ್ನಾಟಕದಿಂದ ಕೊಲ್ಕತ್ತಾಕ್ಕೆ ಗಡಿಪಾರು ಮಾಡಿದರು. ಅಲ್ಲಿಂದೀಚೆಗೆ ಟಿಪ್ಪುಸುಲ್ತಾನ್ ಸಂತತಿ ಕೊಲ್ಕತ್ತಾ, ಪಶ್ಚಿಮ ಬಂಗಾಳ ಮೊದಲಾದೆಡೆ ಪಸರಿಸಿದೆ. ತಮನ್ನಾ ಬೇವ ಒಂದು ಉದಾಹರಣೆ ಮಾತ್ರ. ಇಂತಹ ಹಲವು ಟಿಪ್ಪು ಕುಟುಂಬಿಕರು ಕೊಲ್ಕತ್ತಾದ ಗಲ್ಲಿ ಗಲ್ಲಿಗಳಲ್ಲಿದ್ದಾರೆ. ಇಲ್ಲೆಲ್ಲಾ ಇರುವ ಟಿಪ್ಪು ಸಂತತಿ ಇಂದು ಒಪ್ಪೊತ್ತಿನ ಊಟಕ್ಕೂ ಪರಿತಪಿಸುತ್ತಿದೆ. ಗೌರವದ ಜೀವನಕ್ಕಾಗಿ ಹಂಬಲಿಸುತ್ತಿದೆ.

ಕೊಲ್ಕತ್ತಾದಲ್ಲಿ ಟಿಪ್ಪು ಅವರಿಗೆ ಕೋಟಿಗಟ್ಟಲೆಯ ಆಸ್ತಿಗಳಿದ್ದರೂ ಅದನ್ನು ಅನುಭವಿಸಲು ಕಾನೂನಿನ ತೊಡಕುಗಳಿವೆ. ಸರಕಾರ, ವಕ್ಫ್ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು ಇದನ್ನು ಅನುಭವಿಸುತ್ತಿವೆ. ಇದರ ಕಿಂಚಿತ್ ಮೊತ್ತ ಕೂಡಾ ಟಿಪ್ಪು ಕುಟುಂಬಕ್ಕೆ ದಕ್ಕುತ್ತಿಲ್ಲ. ಅವರಿಗೆ ಅನುಭವಿಸುವ ಭಾಗ್ಯವಿಲ್ಲ.

ಕರ್ನಾಟಕ ಸರಕಾರ ನವಂಬರ್ 10 ರಂದು ಎರಡನೇ ವರ್ಷದ “ಟಿಪ್ಪು ಜಯಂತಿ” ಆಚರಿಸಲು ಹೊರಟಿದೆ. ಆದರೆ ಟಿಪ್ಪು ಸಂತತಿ ಬಗ್ಗೆ ಏನು ಮಾಡಿದೆ. ಟಿಪ್ಪು ಅವರ 200 ನೇ ಜನ್ಮದಿನಾಚರಣೆ ಪ್ರಯುಕ್ತ 2009 ರಲ್ಲಿ ಕರ್ನಾಟಕ ಸರಕಾರ ಕೊಲ್ಕತ್ತಾದಲ್ಲಿರುವ ಟಿಪ್ಪು ಕುಟುಂಬವನ್ನು ಸಂದರ್ಶಿಸಿ ಅವರ ವಿಳಾಸ, ಮೊಬೈಲ್ ನಂಬ್ರ ಪಡೆದು ಹಿಂದಿರುಗಿದೆ ಎಂದು ಟಿಪ್ಪು ಕುಟುಂಬಿಕರು ಹೇಳುತ್ತಾರೆ. ಆದರೆ ನಮ್ಮ ಸರಕಾರ ಆ ನಂತರ ಈ ತನಕ ಹಿಂದಿರುಗಿ ನೋಡಿಲ್ಲ. ಪರಿಹಾರದ ಆಸೆಯಲ್ಲಿದ್ದ ಟಿಪ್ಪುಸುಲ್ತಾನ್ ಕುಟುಂಬಿಕರು ಈಗಲೂ ಬೆರಗುಕಣ್ಣಿನಿಂದ ಕಾಯುತ್ತಿದ್ದಾರೆ. ಟಿಪ್ಪು ಜಯಂತಿ ಆಚರಿಸುತ್ತಿರುವ ಈ ಸಂದರ್ಭದಲ್ಲಾದರೂ ಸರಕಾರಕ್ಕೆ ಅವರ ಸಂತತಿಯ ಏಳಿಗೆಯ ಬಗ್ಗೆ ಕ್ರಮ ಕೈಗೊಳ್ಳಬಹುದಲ್ಲವೇ?

ಟಿಪ್ಪು ಜಯಂತಿಗಾಗಿ ಕರ್ನಾಟಕ ಸರಕಾರ ಕಳೆದ ವರ್ಷ ಕೋಟ್ಯಾಂತರ ರೂ. ಖರ್ಚು ಮಾಡಿದೆ. ರಾಜ್ಯದ ಪ್ರತಿ ತಾಲೂಕು ಮಟ್ಟದಲ್ಲಿ ಒಂದೆರಡು ಗಂಟೆಯ ಕಾರ್ಯಕ್ರಮಕ್ಕಾಗಿ ತಲಾ 25,000/- ಖರ್ಚು ಮಾಡಿದೆಯೆಂಬ ಮಾಹಿತಿಯಿದೆ. ಜಿಲ್ಲಾ ಮತ್ತು ರಾಜ್ಯ ಮಟ್ಟದ ಕಾರ್ಯಕ್ರಮಗಳಿಗೆ ಬೇರೆಯೇ ಖರ್ಚುವೆಚ್ಚ. ಒಟ್ಟಿನಲ್ಲಿ ಕೋಟ್ಯಾಂತರ ರೂ. ವ್ಯಯ. ಜಯಂತಿ ಹೆಸರಿನಲ್ಲಿ ಹಲವು ಹೊಟ್ಟೆಬಾಕರ ಜೇಬಿನಲ್ಲೂ ಕಾಂಚಾಣ ಕುಣಿದಿರಬಹುದು. ಇದು ನಮ್ಮ ಆಡಳಿತ ವ್ಯವಸ್ಥೆ. ಇದರಲ್ಲಿ ಸಾಧಿಸುವುದಾದರೂ ಏನು? ಈ ವರ್ಷ ಕೂಡಾ ಟಿಪ್ಪು ಜಯಂತಿಗೆ ಸಿದ್ಧತೆಗಳು ನಡೆಯುತ್ತಿವೆ. ಸರಕಾರಕ್ಕೆ ಟಿಪ್ಪು ಜಯಂತಿ ಆಚರಣೆ ಬೇಕೆಂದಾದಲ್ಲಿ ಇರಲಿ ಬಿಡಿ. ಆಕ್ಷೇಪ ಇಲ್ಲ. ಅದರ ಜೊತೆಗೆ ಜಯಂತಿಗೆ ವ್ಯಯಿಸುವ ಒಂದು ಪಾಲು ಮೊತ್ತವನ್ನು ಟಿಪ್ಪು ಸಂತತಿಯ ಕಲ್ಯಾಣಕ್ಕೆ ಮೀಸಲಿರಿಸಿದರೆ ಮೂರಾಬಟ್ಟೆಯಾಗಿರುವ ಅವರ ಬದುಕು ಬೆಳಗಬಹುದಿತ್ತು. ಆ ಮೂಲಕ ಟಿಪ್ಪು ಜಯಂತಿಯನ್ನು ಅರ್ಥಪೂರ್ಣವಾಗಿಸಬಹುದಿತ್ತು. ಆದರೆ ಸರಕಾರದ ಬಹುತೇಕ ಯೋಜನೆಗಳಿಗೆ ಕಣ್ಣು, ಬಾಯಿ, ಮೂಗು ಎಂಬುವುದು ಇರುವುದಿಲ್ಲವಲ್ಲಾ..!

– ರಶೀದ್ ವಿಟ್ಲ.

varthabharati

Please follow and like us:
error

Leave a Reply

error: Content is protected !!