ತುಂಗಭದ್ರಾ ಸ್ಪಿಲ್ ವೇ ಗೇಟ್ ಗಳ ಅಳವಡಿಕೆ:  ಕ್ಷಿಪ್ರ ಕಾರ್ಯಾಚರಣೆಯ ಅಪ್ರತಿಮ ಸಾಧನೆ

Get real time updates directly on you device, subscribe now.

ಡಿ ಕೆ ಶಿವಕುಮಾರ್ ಇಚ್ಛಾಶಕ್ತಿಗೆ ಮತ್ತೊಂದು ನಿದರ್ಶನ

ಬೆಂಗಳೂರು, ಜೂ. 25:

ತುಂಗಭದ್ರಾ ಅಂತಾರಾಜ್ಯ ಯೋಜನೆಯಾಗಿದ್ದು, ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮಲ್ಲಾಪುರ ಗ್ರಾಮದ ಹತ್ತಿರ ತುಂಗಭದ್ರಾ ಆಣೆಕಟ್ಟನ್ನು ನಿರ್ಮಿಸಲಾಗಿದೆ. ಈ ಯೋಜನೆಯನ್ನು 1945 ರಲ್ಲಿ ಪ್ರಾರಂಭಿಸಿ 1953 ರಲ್ಲಿ ಕಾಲುವೆಗೆ ನೀರು ಹರಿಬಿಡಲಾಗಿದೆ.

ಅಣೆಕಟ್ಟಿನ ಸ್ಪಿಲ್ ವೇ ಗೇಟುಗಳನ್ನು 1955 ರಲ್ಲಿ ಅಳವಡಿಸಲಾಗಿದ್ದು, ಈ ಗೇಟುಗಳು ಸುಮಾರು 69 ವರ್ಷಗಳ ಕಾಲ ಕಾರ್ಯನಿರ್ವಹಿಸಿರುತ್ತವೆ.

ಕೃಷ್ಣಾ ಜಲವಿವಾದ ನ್ಯಾಯಮಂಡಳಿಯ ಐತೀರ್ಪು-1 ರನ್ವಯ ಯೋಜನೆಗೆ 230 ಟಿ.ಎಂ.ಸಿ (18.00 ಟಿ.ಎಂ.ಸಿ. ಜಲಾಶಯದ ಬಾಷ್ಪೀಕರಣ ಸೇರಿ) ನೀರನ್ನು ಹಂಚಿಕೆ ಮಾಡಲಾಗಿದ್ದು, ಇದರಲ್ಲಿ ಕರ್ನಾಟಕ ಪಾಲು 151.49 ಟಿ.ಎಂ.ಸಿ, ಆಂದ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಪಾಲು 78.51 ಟಿಎಂಸಿ ಇರುತ್ತದೆ. ಈ ಯೋಜನೆಯಡಿ 17.33 ಲಕ್ಷ ಎಕರೆ (7.02 ಲಕ್ಷ ಹೆಕ್ಟರ್) ಪ್ರದೇಶಕ್ಕೆ ನೀರಾವರಿ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಅದರಲ್ಲಿ 9.26 ಲಕ್ಷ ಎಕರೆ (3.75 ಲಕ್ಷ ಹೆಕ್ಟರ್) ಕರ್ನಾಟಕ ರಾಜ್ಯದ ವ್ಯಾಪ್ತಿಗೆ ಬರುತ್ತದೆ, 7.20 ಲಕ್ಷ ಎಕರೆ (2.91 ಲಕ್ಷ ಹೆಕ್ಟರ್) ಆಂಧ್ರಪ್ರದೇಶ ರಾಜ್ಯದ ವ್ಯಾಪ್ತಿಗೆ ಬರುತ್ತದೆ ಮತ್ತು 0.87 ಲಕ್ಷ ಎಕರೆ (0.35 ಲಕ್ಷ ಹೆಕ್ಟರ್) ತೆಲಂಗಾಣ ರಾಜ್ಯದ ವ್ಯಾಪ್ತಿಗೆ ಬರುತ್ತದೆ. 2024ರ ಆಗಸ್ಟ್ 10ರಂದು ರಾತ್ರಿ 10.50ಕ್ಕೆ ಸ್ಪಿಲ್ ವೇ ಗೇಟ್ ಸಂ.19, ಗ್ರೂವಿನಿಂದ ಕೊಚ್ಚಿ ಹೋಗಿ ದೊಡ್ಡ ಆತಂಕವನ್ನು ಸೃಷ್ಟಿಸಿತ್ತು. ಅತ್ಯಮೂಲ್ಯ ಜಲರಾಶಿ, ಜಲ ಸಂಪನ್ಮೂಲದ ಸಂರಕ್ಷಣೆ ಅಂದಿನ ಪ್ರಮುಖ ಆದ್ಯತೆ ಆಗಿತ್ತು ಈ ಘಟನೆಯ ನಂತರ ಆಗಸ್ಟ್ 11ರಂದು ಅಂದಿನ ಮಾನ್ಯ ಉಪಮುಖ್ಯ ಮಂತ್ರಿಗಳು ಹಾಗೂ ಜಲಸಂಪನ್ಮೂಲ ಇಲಾಖೆ ಸಚಿವರು ಮತ್ತು ಪ್ರಸ್ತುತ ಮುಖ್ಯ ಮಂತ್ರಿಗಳಾದ ಡಿ ಕೆ ಶಿವಕುಮಾರ್ ಅವರು ಸ್ಥಳಕ್ಕೆ ಧಾವಿಸಿದರು. ತೆಗೆದು ಕೊಳ್ಳಬಹುದಾದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅಧಿಕಾರಿಗಳೊಂದಿಗೆ ಚರ್ಚಿಸಿದರು.

ದಿನಾಂಕ:13.08.2024 ರಂದು, ಅಂದಿನ ಮಾನ್ಯ ಮುಖ್ಯ ಮಂತ್ರಿಗಳು ಕರ್ನಾಟಕ ಸರ್ಕಾರ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿ, ಅಣೆಕಟ್ಟು ಗೇಟ್‌ಗಳ ವಿನ್ಯಾಸ ತಜ್ಞರಾದ ಶ್ರೀ.ಕನ್ನಯ್ಯನಾಯ್ಡು ಮತ್ತು ಜಿಂದಾಲ್ ಸ್ಟೀಲ್ಸ್, ಹಿಂದೂಸ್ತಾನ್ ಇಂಜಿನೀಯರಿಂಗ್ ವರ್ಕ್ಸ್, ನಾರಾಯಣ ಇಂಜಿನೀಯರ್‌ಗಳಂತಹ ಗೇಟ್ ತಯಾರಿಕಾ ಕಂಪನಿಗಳೊಂದಿಗೆ ಚರ್ಚಿಸಿ ಕೂಡಲೇ ಸ್ಟಾಪ್ ಲಾಗ್ ಗೇಟ್ ಅಳವಡಿಸಲು ಸೂಚಿಸಿದರು.

ಕೇವಲ 6 ದಿನಗಳಲ್ಲಿ ಸ್ಟಾಪ್ ಲಾಗ್ ಗೇಟ್ ಅಳವಡಿಕೆ

ಅದರನ್ವಯ ಗೇಟ್ ಸಂಖ್ಯೆ:19 ಕ್ಕೆ ಸ್ಟಾಪ್‌ಲಾಗ್ ಗೇಟ್ ಅಳವಡಿಕೆಯನ್ನು ಕೇವಲ 6 ದಿನಗಳಲ್ಲಿ ದಿನಾಂಕ:17.08.2024 ರಂದು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು ಸದರಿ ದಿನದಂದು ಜಲಾಶಯದಲ್ಲಿ 71.35 ಟಿಎಂಸಿ ರಷ್ಟು ನೀರು ಸಂಗ್ರಹವಾಗಿತ್ತು.

ಇದರಿಂದಾಗಿ 2024 ರಲ್ಲಿ ಮುಂಗಾರು ಹಾಗೂ ಹಿಂಗಾರು ಬೆಳೆಗಳಿಗೆ ನೀರು ಒದಗಿಸಲು ಸಾಧ್ಯವಾಯಿತು.

ಎಲ್ಲಾ ಸ್ಪಿಲ್ ವೇ ಗೇಟುಗಳನ್ನು ಬದಲಿಸಲು ನಿರ್ಧಾರ

ತದ ನಂತರ ತಾಂತ್ರಿಕ ಸಮಿತಿಗಳ ಶಿಫಾರಸ್ಸಿನನ್ವಯ ಎಲ್ಲಾ ಸ್ಪಿಲ್ ವೇ ಗೇಟ್ ಗಳ ಸಮಗ್ರ ಆರೋಗ್ಯ ತಪಾಸಣೆಯನ್ನು (Comprehensive health Checkup) ಕೈಗೊಂಡು ವರದಿಯನ್ನು ತುಂಗಭದ್ರಾ ಮಂಡಳಿಯ ಸಭೆಯ ಮುಂದೆ ಮಂಡಿಸಿ ಸದರಿ ಸಭೆಯಲ್ಲಿ ಅಣೆಕಟ್ಟಿನ ಎಲ್ಲಾ ಸ್ಪಿಲ್ ವೇ ಗೇಟುಗಳನ್ನು ಬದಲಾಯಿಸಲು ನಿರ್ಧರಿಸಲಾಯಿತು.

ತುಂಗಭದ್ರಾ ಮಂಡಳಿಯು 19ನೇ ಕ್ರಸ್ಟ್ ಗೇಟ್ ನ ಬದಲಾವಣೆ ಮಾಡುವ ಕಾಮಗಾರಿಯನ್ನು 2025ರ ಏಪ್ರಿಲ್ 23ರಂದು ಮ//ಹಾರ್ಡ್‌ ವೇರ್ ಟೂಲ್ಸ್ & ಮೆಷಿನರಿ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್ ಅಹಮದಾಬಾದ್ ಇವರಿಗೆ ವಹಿಸಲಾಯಿತು.

ಜೂನ್ 2025ರ ಮಾಹೆಯಲ್ಲಿ ಹೊಸ ಗೇಟುಗಳ ಫ್ಯಾಬ್ರಿಕೇಷನ್ ಕಾರ್ಯ ಆರಂಭಿಸಲಾಯಿತು.

ಜಲಾಶಯದಲ್ಲಿ ನೀರಿನ ಸಂಗ್ರಹಣ ಮಟ್ಟ ಕಡಿಮೆಯಾದ ನಂತರ ಗೇಟುಗಳ ಅಳವಡಿಕೆ ಕಾರ್ಯ ವನ್ನು 2025ರ ಡಿಸೆಂಬರ್ ತಿಂಗಳಲ್ಲಿ ಪ್ರಾರಂಭಿಸಿ 2026ರ ಏಪ್ರಿಲ್ ತಿಂಗಳಿಗೆ ಪೂರ್ಣಗೊಳಿಸಲಾಯಿತು.

ನಂತರ ಗೇಟ್ಗಳ ಸುರಕ್ಷಿತ ಮತ್ತು ಸಮರ್ಪಕ ಕಾರ್ಯನಿರ್ವಹಣೆಗೆ ಅಗತ್ಯವಿರುವ ಚೈಲ್ಡ್ ಲಿಂಕ್ಗಳ ಬದಲಾವಣೆ ಕಾರ್ಯವನ್ನು 2026ರ ಮೇ ತಿಂಗಳಿನಿಂದ ಪ್ರಾರಂಭಿಸಿ 2026ರ ಜೂನ್ 18ಕ್ಕೆ ಪೂರ್ಣಗೊಳಿಸಲಾಯಿತು.

ಹೊಸ ಚೈನ್ ಅಳವಡಿಕೆ ಪೂರ್ಣಗೊಂಡ ನಂತರ ಗೇಟುಗಳ ಟ್ರಯಲ್ ರನ್ 2026ರ ಜೂನ್ 19 ಮತ್ತು 20ರಂದು ಮಾಡಲಾಯಿತು. ಈ ಕ್ಷಿಪ್ರ ಕಾರ್ಯಾಚರಣೆಯ ಅಪ್ರತಿಮ ಸಾಧನೆಯೊಂದಿಗೆ ದೇಶದ ಅತ್ಯಂತ ಪ್ರಮುಖ ಜಲಾಶಯಗಳಲ್ಲಿ ಒಂದಾದ ತುಂಗಭದ್ರ ಅಣೆಕಟ್ಟಿನ ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಮತ್ತಷ್ಟು ಬಲಪಡಿಸುವ ಐತಿಹಾಸಿಕ ಮೈಲಿಗಲ್ಲು ನಿರ್ಮಾಣವಾಗಿದೆ.

ರೈತರ ಹಿತಾಸಕ್ತಿ, ಜಲಸಂಪನ್ಮೂಲಗಳ ಸಂರಕ್ಷಣೆ, ಜಲಶಿಸ್ತು, ಸುರಕ್ಷಿತ ಸುಸ್ಥಿರ ನಿರ್ವಹಣೆಯ ಹೊಸ ಆರಂಭ ಇದಾಗಿದೆ.

Get real time updates directly on you device, subscribe now.

Comments are closed.

error: Content is protected !!