ಹಾನಿಯಾದ ಮನೆ, ಬೆಳೆಗಳಿಗೆ ತ್ವರಿತವಾಗಿ ಪರಿಹಾರ ನೀಡಿ: ಕೆ.ಪಿ. ಮೋಹನ್ ರಾಜ್
: ಮಳೆಯಿಂದಾಗಿ ಹಾನಿಯಾದ ಮನೆ ಮತ್ತು ಬೆಳೆಗಳಿಗೆ ತ್ವರಿತವಾಗಿ ಪರಿಹಾರ ನೀಡಿ, ಯಾವುದೇ ಪ್ರಕರಣಗಳನ್ನು ಬಾಕಿ ಉಳಿಯದಂತೆ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ. ಮೋಹನ್ ರಾಜ್ ಸೂಚನೆ ನೀಡಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷ ವಹಿಸಿ ಮಾತನಾಡಿದರು.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾದ ಬೆಳೆಗಳಿಗೆ ಬೇಕಾಗುವ ರಸಗೊಬ್ಬರವನ್ನು ರೈತರ ಬೇಡಿಕೆಯಂತೆ ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು. ಬೆಳೆಗಳಲ್ಲಿ ಕಂಡುಬರುವ ರೋಗಗಳ ನಿಯಂತ್ರಣ, ಹತೋಟಿ ಕ್ರಮಗಳ ಕುರಿತು ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ಸೂಕ್ತ ಜಾಗೃತಿ ಮೂಡಿಸಬೇಕು. ಇದಲ್ಲದೆ ಜಾನುವಾರುಗಳಲ್ಲಿ ಕಂಡುಬರುವ ಕಾಲು-ಬಾಯಿ ರೋಗ ಹಾಗೂ ಇತರೆ ಕಾಯಿಲೆಗಳ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಕುರಿ, ಮೇಕೆ, ದನಕರುಗಳಿಗೆ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕು. ಲಸಿಕೆಯ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು ಎಂದು ಕೃಷಿ ಹಾಗೂ ಪಶುಪಾಲನಾ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಕಾಲ ಮತ್ತು ಐಪಿಜಿಆರ್‌ಎಸ್ ಅರ್ಜಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಸರ್ಕಾರದ ಯೋಜನೆಗಳನ್ನು ಪಡೆಯಲು ಅರ್ಜಿ ಸಲ್ಲಿಸುವ ಸಾರ್ವಜನಿಕರಿಗೆ ಅವಶ್ಯಕ ದಾಖಲೆಗಳ ಮಾಹಿತಿಯನ್ನು ಮೊದಲೇ ತಿಳಿಸಬೇಕು. ಸಕಾಲ ನಿರ್ವಹಣೆಗಾಗಿಯೇ ಒಬ್ಬ ಅಧೀನ ಅಧಿಕಾರಿ ಅಥವಾ ಸಿಬ್ಬಂದಿಯನ್ನು ನಿಯೋಜಿಸಬೇಕು. ಕಂದಾಯ, ಜಿಲ್ಲಾ ಪಂಚಾಯತ್ ಅಡಿ ಬರುವ ಎಲ್ಲ ಇಲಾಖೆಗಳು ಅರ್ಜಿಯನ್ನು ಕಡ್ಡಾಯವಾಗಿ ಸ್ವೀಕರಿಸಬೇಕು. ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡಬೇಕು. ಯಾವುದೇ ಸೂಕ್ತ ಕಾರಣಗಳಿಲ್ಲದೆ ಅರ್ಜಿ ತಿರಸ್ಕಾರ ಮಾಡುವಂತಿಲ್ಲ. ಸಕಾಲದಲ್ಲಿ ಕೇವಲ ಅರ್ಜಿ ವಿಲೇವಾರಿಗಳಷ್ಟೇ ಅಲ್ಲ, ಬಾಕಿ ಉಳಿದ, ತಿರಸ್ಕರಿಸಿದ ಅರ್ಜಿಗಳ ಸಂಖ್ಯೆಯನ್ನು ಸಹ ಪರಿಗಣಿಸಲಾಗುವುದರಿಂದ ಜಿಲ್ಲೆಯ ಸೂಚ್ಯಂಕದಲ್ಲಿ ಇದು ಋಣಾತ್ಮಕ ಅಂಶವನ್ನು ತೋರಿಸುತ್ತದೆ. ಆದ್ದರಿಂದ ಸಕಾಲ ಅರ್ಜಿಗಳ ವಿಲೇವಾರಿಗೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.
ಜಿಲ್ಲೆಯ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಅವಶ್ಯವಿರುವ ಬೆಡ್‌ಗಳ ವ್ಯವಸ್ಥೆ ಮಾಡಬೇಕು. ಬಿಪಿಎಲ್ ನಿಂದ್ ಎಪಿಎಲ್ ಹಾಗೂ ಆದಾಯ ತೆರೆಗಿ ಪಾವತಿದಾರರ ಕಾರ್ಡ್‌ಗಳು ರದ್ದಾಗಿದ್ದು, ಈ ಬಗ್ಗೆ ಪರಿಶೀಲಿಸಬೇಕು. ರದ್ದಾದ ಪಟ್ಟಿಯಲ್ಲಿ ಕೊಪ್ಪಳ ಜಿಲ್ಲೆಯ ಯಾವುದೇ ಅರ್ಹ ಫಲಾನುಭವಿಗಳ ಪಡಿತರ ಚೀಟಿ ಸೇರಿದ್ದರೆ ಅವರಿಗೆ ಮತ್ತೆ ಬಿಪಿಎಲ್ ಕಾರ್ಡ್ ನೀಡಲು ನಿಯಮಾನುಸಾರ ಕ್ರಮ ಕೈಗೊಳ್ಳಿ. ಗೃಹಲಕ್ಷ್ಮಿ ಯೋಜನೆಯಡಿ ಸೌಲಭ್ಯ ಪಡೆಯದೆ ಬಾಕಿ ಉಳಿದ ಪ್ರಕರಣಗಳ ಸಮಸ್ಯೆಗಳನ್ನು ಬಗೆಹರಿಸಬೇಕು. ಸರ್ಕಾರದ ವಿವಿಧ ಯೋಜನೆಗಳ ಲಾಭವು ಜನತೆಗೆ ತಲುಪುವ ನಿಟ್ಟಿನಲ್ಲಿ ನಾನಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಕ್ರಿಯಾಶೀಲರಾಗಿ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್ ಅರಸಿದ್ದಿ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಪ್ರಕಾಶ ವಡ್ಡರ, ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತಿತರರಿದ್ದರು.
Comments are closed.