ಮುದ್ದಾಬಳ್ಳಿ ಸಂಗೀತ ಸಂಸ್ಥೆಯ ೧೦ನೇ ವಾರ್ಷಿಕೋತ್ಸವ

Get real time updates directly on you device, subscribe now.


ಸಂಗೀತ ಕಲೋತ್ಸವ: ಶಿವಬಸನಗೌಡ ಪಾಟೀಲ್ ಉದ್ಘಾಟನೆ
ಗಂಗಾವತಿ.
ಸಂಗೀತ ಕಲೆ ಪ್ರತಿಯೊಬ್ಬರ ಹೃದಯದಲ್ಲಿ ಹಾಸು ಹೊಕ್ಕಾಗಿದೆ. ಅಂತಹ ಸಂಗೀತ ಕಲೆಯನ್ನು ಮಕ್ಕಳಲ್ಲಿ ಬಿತ್ತರಿಸುವ ಕೆಲಸ ಪಾಲಕರು ಮಾಡಬೇಕು. ಕಲಾವಿದ ಮಹ್ಮದ್ ರಿಜ್ವಾನ್ ಮುದ್ದಾಬಳ್ಳಿ ಅವರು ಮನೆ ಮನೆಗಳಲ್ಲಿ ಸಂಗೀತದ ಆಸಕ್ತಿ ಮೂಡಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಎಲ್‌ಐಸಿ ಸಿಎಂಎಸ್ ಕ್ಲಬ್, ಎಂಡಿಆರ್‌ಟಿ(ಯುಎಸ್‌ಎ)ಮೆಂಬರ್ ಮತ್ತು ಸಿಎಲ್‌ಐಎ, ಎಲ್‌ಐಎಎಫ್‌ಐನ ಗಂಗಾವತಿ ಬ್ರಾಂಚ್ ಯುನಿಯನ್ ಅಧ್ಯಕ್ಷ ಶಿವಬಸನಗೌಡ ಪಿ.ಪಾಟೀಲ್ ಹೇಳಿದರು.
ಡಾ|| ಎಫ್.ಎಂ.ಮುದ್ದಾಬಳ್ಳಿ ಹಾಗೂ ಡಾ|| ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ ಸಂಗೀತ ಸಂಸ್ಥೆ ಗಂಗಾವತಿಯ ಹತ್ತನೇ ವಾರ್ಷಿಕೋತ್ಸವ ಹಾಗೂ ಶ್ರೀ ಹಾನಗಲ್ ಗುರುಕುಮಾರ ಮಹಾಸ್ವಾಮಿಗಳವರ ೯೫ನೇ, ಗಾನಯೋಗಿ ಪಂಡಿತ್ ಪಂಚಾಕ್ಷರಿ ಗವಾಯಿಗಳವರ ೮೦ನೇ ಹಾಗೂ ಡಾ|| ಪಂಡಿತ್ ಪುಟ್ಟರಾಜ ಕವಿಗವಾಯಿಗಳವರ ೧೪ನೇ ಪುಣ್ಯ ಸ್ಮರಣೋತ್ಸವ ನಿಮಿತ್ಯ ಶನಿವಾರ ನಗರದ ಗದಿಗೆಪ್ಪ ಕಾಲೋನಿಯ ವರಸಿದ್ಧಿ ವಿನಾಯಕ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ’ಸಂಗೀತ ಕಲೋತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣದ ಜೊತೆಗೆ ಮಕ್ಕಳಿಗೆ ಸಂಗೀತ ಕಲೆಯ ಶಿಕ್ಷಣವನ್ನು ಒದಗಿಸಬೇಕು. ಇಂತಹ ಕಾರ್ಯಕ್ರಮಗಳಿಗೆ ನಾನು ಸದಾ ಸಹಕಾರ ನೀಡುತ್ತೇನೆ ಎಂದರು.
ಹಿರಿಯ ನ್ಯಾಯವಾದಿ ಡಿ.ಎ.ಹಾಲಸಮುದ್ರ ಮಾತನಾಡಿ, ನಮ್ಮ ಕಾಲೋನಿಯ ಗಣಪತಿ ದೇವಸ್ಥಾನದ ಸಮುದಾಯದಲ್ಲಿ ಮುದ್ದಾಬಳ್ಳಿ ಕುಟುಂಬದವರು ಸಂಗೀತ ಪಾಠ ಶಾಲೆ ಪ್ರಾರಂಭಿಸಿ ಇಂದು ಈ ಭಾಗದ ನೂರಾರು ವಿದ್ಯಾರ್ಥಿಗಳನ್ನು ಕಲಾವಿದರನ್ನಾಗಿ ನಿರ್ಮಾಣ ಮಾಡಿರುವುದು ಸಂತೋಷದ ವಿಷಯವಾಗಿದೆ. ನಾವು ನಮ್ಮ ವೈಯಕ್ತಿಕ ಜೀವನಕ್ಕಾಗಿ ಸಾಧನೆ ಮಾಡಿ ಆರ್ಥಿಕ ಅಭಿವೃದ್ಧಿ ಹೊಂದಬಹುದು. ಆದರೆ ರಾಜಾಸಾಬ್ ಮುದ್ದಾಬಳ್ಳಿ ಅವರು ಮಾಡುತ್ತಿರುವ ಸಂಗೀತ ಸೇವೆ ಸಮಾಜಮುಖಿಯಾಗಿದೆ ಎಂದರು.
ಮಾಜಿ ತಾಪಂ ಅಧ್ಯಕ್ಷ ಮಹ್ಮದ್‌ರಫಿ ಮಾತನಾಡಿ, ಗಂಗಾವತಿಯಲ್ಲಿ ಸಂಗೀತ ಸಾಧನೆ ಹೆಚ್ಚುತ್ತಿದೆ. ಸಂಗೀತದಿಂದ ಮನುಷ್ಯನ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಮೋಬೈಲ್, ಟಿವಿ ಭರಾಟೆಯಲ್ಲೂ ನೂರಾರು ಮಕ್ಕಳು ನಿತ್ಯ ಇಂತಹ ಸಂಗೀತ ಶಾಲೆಗೆ ಬಂದು ಕಲಾವಿದರಾಗುತ್ತಿರುವುದು ಹೆಮ್ಮೆಯ ಸಂಗತಿ. ರಿಜ್ವಾನ್ ಮುದ್ದಾಬಳ್ಳಿ ಅವರು ಶ್ರೀರಾಮನಗರದಲ್ಲೂ ಸಂಗೀತ ಸೇವೆ ಮಾಡಲು ಎಲ್ಲಾ ಸಹಕಾರ ನೀಡುತ್ತೇವೆ ಎಂದರು. ಮರ್ಲಾನಹಳ್ಳಿಯ ಸಾಮಾಜಿಕ ಕಾರ್ಯಕರ್ತ ಹಾಗೂ ಕಾಂಗ್ರೆಸ್ ಯುವ ಮುಖಂಡ ಸೋಮನಾಥ ದೊಡ್ಡಮನಿ ಮಾತನಾಡಿ, ಸಂಗೀತ ಪ್ರತಿಯೊಬ್ಬರಿಗೂ ಅತ್ಯವಶ್ಯವಿದೆ. ಇಂತಹ ಸಂಗೀತ ಕಲೆಗೆ ನಾವು ಸದಾ ಪ್ರೋತ್ಸಾಹಿಸುತ್ತೇವೆ. ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿರುವ ಶಿವರಾಜ ತಂಗಡಗಿ ಮೂಲಕ ಈ ಸಂಗೀತ ಸಂಸ್ಥೆಗೆ ಸರಕಾರದ ಸಹಕಾರ ನೀಡುವಂತೆ ಮನವಿ ಮಾಡುತ್ತೇನೆ ಎಂದರು. ಕಲಾವಿದೆ ಮಹಾಲಕ್ಷ್ಮೀ ಕೆಸರಹಟ್ಟಿ ಮಾತನಾಡಿ, ಸಂಗೀತ ಕಲೆಗೆ ಹೆಚ್ಚು ಸಾಧನೆ ಬೇಕು. ಮಕ್ಕಳು ನಿತ್ಯ ಶ್ರದ್ಧೆಯಿಂದ ಸಂಗೀತವನ್ನು ಕಲಿಯಬೇಕು. ಮುದ್ಬಾಳ್ಳಿ ಸಂಗೀತ ಪಾಠ ಶಾಲೆಯ ಇಂತಹ ಕಾರ್ಯಕ್ರಮದಿಂದ ಮಕ್ಕಳಲ್ಲಿ ಸಂಗೀತ ಕಲೆಯಲ್ಲಿ ಹೆಚ್ಚಿನ ಆಸಕ್ತಿ ಮೂಡುತ್ತದೆ. ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿರುವ ಶಿವರಾಜ ತಂಗಡಗಿ ಅವರು ಗಂಗಾವತಿಯಲ್ಲಿ ಕಲಾ ಮಂದಿರ ನಿರ್ಮಾಣ ಮಾಡಲು ನಾವು ಒತ್ತಾಯಿಸುತ್ತೇವೆ. ಈ ವೇದಿಕೆಯಲ್ಲಿರುವ ಅವರ ಬೆಂಬಲಿಗರಾಗಿರುವ ಮಹ್ಮದ್ ರಫಿ ಮತ್ತು ದೊಡ್ಡಮನಿ ಅವರು ಕಲಾವಿದರ ಬಹುದಿನದ ಈ ಬೇಡಿಕೆಯನ್ನು ಸಚಿವರ ಗಮನಕ್ಕೆ ತರಬೇಕು ಎಂದರು. ಕಲಾವಿದ ವೀರನಗೌಡ ಯಲಬುರ್ಗಿ, ಪತ್ರಕರ್ತ ಹರೀಶ ಕುಲಕರ್ಣಿ ಮಾತನಾಡಿದರು.
ಕಾರ್ಯಕ್ರಮ ಅಧ್ಯಕ್ಷತೆವಹಿಸಿದ್ದ ಸಂಗೀತ ಶಾಲೆ ಅಧ್ಯಕ್ಷ ರಾಜಾಸಾಬ್ ಮುದ್ದಾಬಳ್ಳಿ ಮಾತನಾಡಿ, ನಮ್ಮ ಸಂಗೀತ ಸಂಸ್ಥೆಗೆ ಪ್ರತಿಯೊಬ್ಬರು ಸಹಕಾರ ನೀಡುತ್ತಿದ್ದಾರೆ. ಮಕ್ಕಳು ಹೆಚ್ಚು ಹೆಚ್ಚು ಸಂಗೀತ ಕಲೆಯನ್ನು ಕಲಿತರೆ ಅದು ನಮಗೆ ತೃಪ್ತಿ ಎಂದರು. ಸಂಸ್ಥೆಯ ಕಾರ್ಯದರ್ಶಿ ಮಹ್ಮದ್ ರಿಜ್ವಾನ್ ಮುದ್ದಾಬಳ್ಳಿಗೆ ವಾರ್ಷಿಕೋತ್ಸವ ನಿಮಿತ್ಯ ವಿದ್ಯಾರ್ಥಿಗಳು ಸನ್ಮಾನಿಸಿ ಗೌರವಿಸಿದರು. ಉದ್ಘಾಟನೆ ನಂತರ ಕೊಪ್ಪಳದ ಗವಿಸಿದ್ದೇಶ್ವರ ಸ್ವರಸಂಚಾರ ಕಲಾತಂಡದ ಕು.ವೈಷ್ಣವಿ ಕಮ್ಮಾರ್, ಕು.ಸನ್ನಿಧಿ ಕೊಪ್ಪಳ ಅವರಿಂದ ವಿಶೇಷ ಹಿಂದೂಸ್ಥಾನಿ ಗಾಯನ ನಡೆಯಿತು. ಮತ್ತು ಸಂಗೀತ ಪಾಠ ಶಾಲೆಯ ವಿದ್ಯಾರ್ಥಿಗಳು, ವಿವಿಧ ಕಲವಿದರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಸಂಗೀತ ಶಿಕ್ಷಕ ಪಂಚಾಕ್ಷರ ಕುಮಾರ ಬೊಮ್ಮಲಾಪುರ ನಿರ್ವಹಿಸಿ ವಂದಿಸಿದರು. ಯುವರಾಜ ಕುರಗೋಡ ಹಾರ್ಮೋನಿಯಂ ಸಾತ್ ನೀಡಿದರು. ಕಲಾವಿದರಾದ ಪ್ರಾಣೇಶ ಪೂಜಾರ, ಶಿವಲಿಂಗಯ್ಯಶಾಸ್ತ್ರಿ, ನಾಗೇಶ್ವರರಾವ್ ಜುಜ್ಜುವರಪು, ರಾಮಾಂಜನೇಯಲು, ಸಿ.ಮಹಾಲಕ್ಷ್ಮೀ, ಬಸವರಾಜಸ್ವಾಮಿ, ದೊಡ್ಡಬಸವರಾಜ ನಾಗಲೀಕರು, ರಿಜ್ವಾನ್ ಮುದ್ದಾಬಳ್ಳಿ, ಮತ್ತಿತರು ಸಂಗೀತ ಸೇವೆ ಸಲ್ಲಿಸಿದರು.

Get real time updates directly on you device, subscribe now.

Comments are closed.

error: Content is protected !!