ಎಸ್ಸಿ, ಎಸ್ಟಿ ಅಲೆಮಾರಿ ಸಮುದಾಯದವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕಿದೆ: ಪಲ್ಲವಿ ಜಿ.

Get real time updates directly on you device, subscribe now.

ಸರ್ಕಾರದ ವಿವಿಧ ಯೋಜನೆಗಳನ್ನು ಬಳಸಿಕೊಂಡು ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯದವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕಿದೆ ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಲ್ಲವಿ ಜಿ. ಹೇಳಿದರು.
 ಅವರು ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯದವರ ಅಹವಾಲು ಸ್ವೀಕರಿಸಲು ಹಾಗೂ ಅವರ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ವಿವಿಧ ಜಿಲ್ಲೆಗಳಲ್ಲಿ ಅಲೆಮಾರಿಗಳು ಹೀನಾಯ ಸ್ಥಿತಿಯಲ್ಲಿ ಜೀವನ ಮಾಡುತ್ತಿದ್ದಾರೆ. ಇಂತಹ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ರಾಜ್ಯ ಸರ್ಕಾರವು ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ, ಅನುಷ್ಠಾನಾಧಿಕಾರಿಗಳ ನಿಷ್ಕಾಳಜಿಯಿಂದ ಈ ಎಲ್ಲಾ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಲೆಮಾರಿ ಸಮುದಾಯದವರು ವಾಸಿಸುವ ಸ್ಥಳಗಳಿಗೆ ಭೇಟಿ ನೀಡಿ, ಅವರ ಜೀವನ ಸ್ಥಿತಿಯನ್ನು ಖುದ್ದಾಗಿ ಪರಿಶೀಲಿನೆ ನಡೆಸುತ್ತಿದ್ದೇನೆ ಎಂದು ಹೇಳಿದರು.
ಪರಿಶಿಷ್ಟ ಜಾತಿಗೆ ಸೇರಿದ 51 ಜಾತಿಗಳು, ಪರಿಶಿಷ್ಟ ಪಂಗಡಕ್ಕೆ ಸೇರಿದ 23 ಜಾತಿಗಳು ಹಾಗೂ 25 ಆದಿವಾಸಿ ಸಮುದಾಯಗಳು ಅಲೆಮಾರಿ ನಿಗಮಕ್ಕೆ ಬರುತ್ತವೆ. ಈಗಾಗಲೇ ಕೊಪ್ಪಳ ಜಿಲ್ಲೆಯ ಕಾರಟಗಿ, ಗಂಗಾವತಿ, ಕುಷ್ಟಗಿ ಹಾಗೂ ಕೊಪ್ಪಳ ನಗರದ ವಿವಿಧೆಡೆ ವಾಸವಿರುವ ಅಲೆಮಾರಿ ಸಮುದಾಯದ ಕುಟುಂಬಗಳ ಸ್ಥಳ ವೀಕ್ಷಣೆ ಮಾಡಿದ್ದು, ಗಂಗಾವತಿಯಲ್ಲಿ ಬುಡಗಜಂಗಮ, ಶಿಳ್ಯೆಕ್ಯಾತ, ಸುಡಗಾಡ ಸಿದ್ದರು ಹಾಗೂ ಸಿಂದೋಳು ಸೇರಿದಂತೆ ಸುಮಾರು 130 ಕುಟುಂಬಗಳು ವಾಸಿಸುತ್ತಿದ್ದ, ಈ ಪ್ರದೇಶಕ್ಕೆ ಯಾವುದೇ ಅಧಿಕಾರಿಗಳು ಭೇಟಿ ನೀಡಿರುವುದಿಲ್ಲ. ಜಿಲ್ಲೆಯ ಇತರ ಪ್ರದೇಶಗಳಿಗೂ ಭೇಟಿ ನೀಡಿದಾಗ, ಕೆಲವು ಪ್ರದೇಶಗಳಲ್ಲಿ ಯಾವುದೇ ರೀತಿಯ ಮೂಲಸೌಕರ್ಯಗಳಿಲ್ಲ. ಸ್ವಂತ ಮನೆ, ನಿವೇಶನವಿಲ್ಲ. ಸಂಪರ್ಕ ರಸ್ತೆ, ವಿದ್ಯುತ್ ದೀಪಗಳಿಲ್ಲ. ಯಾವುದೇ ಆರೋಗ್ಯ ಭದ್ರತೆಗಳಿಲ್ಲ. ಇದರ ಜೊತೆಗೆ ಬಹು ವರ್ಷಗಳಿಂದ ಚರಂಡಿ ಸ್ವಚ್ಛಗೊಳಿಸದೆ ಇರುವುದು ಕಂಡುಬದಿಂದ್ದು, ಸಂಬಂಧ ಪಟ್ಟ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.
ನಿಗಮದಿಂದ ಭೂ ಒಡೆತನ ಯೋಜನೆ, ನಿವೇಶನ ಹಾಗೂ ಮನೆ ಸೌಲಭ್ಯ, ಬ್ಯಾಂಕ್‌ಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಸಾಲ ಯೋಜನೆ, ಮಕ್ಕಳಿಗೆ ಶೈಕ್ಷಣಿಕ ಹಾಗೂ ಹತ್ತು ಹಲವಾರು ಕಾರ್ಯಕ್ರಮಗಳಿದ್ದು, ಇವುಗಳ ಬಗ್ಗೆ ಅಲೆಮಾರಿ ಸಮುದಾಯದ ಜನರಿಗೆ ಅರಿವು ಮೂಡಿಸಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕಾಗಿದೆ ಎಂದು ಹೇಳಿದರು.
ಈ ಸುದ್ದಿಗೋಷ್ಠಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೋಗಲದ. ಅಧ್ಯಕ್ಷರ ವಿಶೇಷ ಕರ್ತವ್ಯಾಧಿಕಾರಿ ಆನಂದ ಏಕಲವ್ಯ. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶರಣಪ್ಪ ಚವ್ಹಾಣ. ಸೇರಿದಂತೆ ಇತರರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!