ಸ್ವಾತಂತ್ರ್ಯ ಕಾಪಾಡುವ ಹೊಣೆಗಾರಿಕೆ ಮಾಧ್ಯಮಗಳದ್ದು: ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ

0

Get real time updates directly on you device, subscribe now.


ಬೆಂಗಳೂರು, ನವೆಂಬರ್‌ 16-
ಮಾಧ್ಯಮಗಳನ್ನು ನಾಶಪಡಿಸಲು ಸಾಧ್ಯವಾಗದು. ಅಂತೆಯೇ ಸಂವಿಧಾನದತ್ತವಾಗಿ ದೊರೆತಿರುವ ಸ್ವಾತಂತ್ರ್ಯವನ್ನು ಕಾಪಾಡುವ ಹೊಣೆಗಾರಿಕೆ ಮಾಧ್ಯಮಗಳದ್ದು ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಅವರು ಅಭಿಪ್ರಾಯಪಟ್ಟರು.
ಅವರು ಇಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ “ಬದಲಾಗುತ್ತಿರುವ ಪತ್ರಿಕಾ ಮಾಧ್ಯಮದ ಸ್ವರೂಪ ಎಂಬ ವಿಷಯದ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ಮಾಧ್ಯಮಗಳನ್ನು ಹತ್ತಿಕ್ಕಲು ನಡೆಯುವ ಪ್ರಯತ್ನವನ್ನು ಅಂಕಿ ಅಂಶಗಳ ಸಮೇತ ವಿವರಿಸಿದ ವೀರಪ್ಪ ಮೊಯ್ಲಿಅವರು ಭಾರತದಲ್ಲಿ ಮಹಾತ್ಮಾಗಾಂಧಿಯವರಂತ ನೇತಾರರು ಪತ್ರಿಕೋದ್ಯಮಕ್ಕೆ ಭದ್ರ ಬುನಾದಿ ಹಾಕಿದ್ದಾರೆ. ಪ್ರಜಾಪ್ರಭುತ್ವದ ಯಶಸ್ಸಿಗೆ ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗದ ಜೊತೆಗೆ ಮಾಧ್ಯಮಗಳೂ ಅತಿ ಅಗತ್ಯ ಎಂದು ಅವರು ನುಡಿದರು.
ʼಅಸಹಾಯಕತೆ ನೀಗಿಸಲು ಪತ್ರಿಕೆಗಳು ಬೇಕುʼ
ಸಾಮಾನ್ಯ ಮನುಷ್ಯನ ಅಸಹಾಯಕತೆ ನೀಗಿಸಲು ಪತ್ರಿಕೆಗಳು ಅತಿ ಅಗತ್ಯ ಎಂದು ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಎ. ನಾರಾಯಣ ಅಭಿಪ್ರಾಯ ಪಟ್ಟರು.
ಇಂದು ಪತ್ರಿಕೆಗಳ ಸ್ಥಿತಿಗತಿಯ ಕುರಿತು ಅವಲೋಕಿಸಿದಾಗ, ಪತ್ರಿಕಾರಂಗ ಸೊರಗಿ ಹೋಗಿದೆ, ಆತ್ಮಹತ್ಯೆ ಮಾಡಿಕೊಳ್ಳುತ್ತಿದೆ ಎಂದು ಮುಂತಾದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಆದರೆ ಪತ್ರಿಕಾ ರಂಗಕ್ಕೆ ಅಂತ್ಯವಿಲ್ಲ, ಭವಿಷ್ಯವಿದೆ ಎಂದು ಅವರು ನುಡಿದರು.
ಪತ್ರಿಕೆಗಳು ಇಂದಿನ ದಿನ ಓದುಗರಿಗೆ, ಜಾಹೀರಾತುದಾರರಿಗೆ, ಸರ್ಕಾರಕ್ಕೆ, ರಾಜಕಾರಣಿಗಳಿಗೆ ಅಗತ್ಯವಿಲ್ಲ ಎಂದೆನಿಸಬಹುದು. ಆದರೆ ಪತ್ರಿಕೆಗಳು ಸಮಾಜಕ್ಕೆ , ಜನರಿಗೆ ಅನಿವಾರ್ಯ. ಪತ್ರಿಕೆಗಳನ್ನು ಓದುವುದರಿಂದ ವಿಶ್ವವೇ ನಮ್ಮ ಜೊತೆಗಿದೆ ಎಂಬ ಭಾವವಿರುತ್ತದೆ. ಪತ್ರಿಕೆಯಲ್ಲಿ ಸುದ್ದಿಯನ್ನು ಬಳಸುವ ವಿಷಯದಲ್ಲಿ ವಿವೇಕ, ವಿವೇಚನೆ ಇರುತ್ತದೆ. ಆದ್ದರಿಂದ ಪತ್ರಿಕೆಗಳು ಅತಿ ಅಗತ್ಯ ಎಂದು ನಾರಾಯಣ್‌ ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್‌ ಎಂ. ನಿಂಬಾಳ್ಕರ್‌ ಅವರು ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಸೇವಾ ಭಾವದಿಂದ ಕಾರ್ಯನಿರ್ವಹಿಸುತ್ತಿದ್ದ ಪತ್ರಿಕೆಗಳು ಇಂದು ವ್ಯಾವಹಾರಿಕವಾಗಿವೆ. ಇಂದಿನ ಪತ್ರಿಕೋದ್ಯಮ ಒಂದು ಪರಿವರ್ತನೆಯ ಶಿಖರದಲ್ಲಿದೆ. ಮುಂದಿನ ದಿನಗಳಲ್ಲಿ ಮತ್ತೆ ಉತ್ತಮಗೊಳ್ಳಲಿದೆ ಎಂದು ಆಶಾಭಾವ ವ್ಯಕ್ತಪಡಿಸಿದರು.
ಅಕಾಡೆಮಿಯ ಅಧ್ಯಕ್ಷರಾದ ಆಯೇಶಾ ಖಾನ್‌ ಅವರು ಪ್ರಾಸ್ತಾವಿಕವಾಗಿ ರಾಷ್ಟ್ರೀಯ ಪತ್ರಿಕಾ ದಿನದ ಔಚಿತ್ಯದ ಕುರಿತು ಮಾತನಾಡಿದರು. ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಸಹನಾ ಎಂ. ಸ್ವಾಗತಿಸಿದರು. ಅಕಾಡೆಮಿಯ ಸದಸ್ಯರಾದ ಎಂ.ಸಿ. ಶೋಭಾ ವಂದಿಸಿದರು.

Get real time updates directly on you device, subscribe now.

Leave A Reply

Your email address will not be published.

error: Content is protected !!