ಸುದ್ದಿಮನೆಯಲ್ಲಿ ಅಧ್ಯಯನಶೀಲತೆಗೆ ಆದ್ಯತೆ ನೀಡಲು ಕರೆ-ಡಿ.ಎಂ.ಭಟ್
ಕೆಯುಡಬ್ಲೃಜೆ ವತಿಯಿಂದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ : ಮನೆಯಂಗಳದಲ್ಲಿ ಹಿರಿಯ ಪತ್ರಕರ್ತ ಡಿಎಂ ಭಟ್‌ಗೆ ಸನ್ಮಾನ
ಬೆಂಗಳೂರು:
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಹಿರಿಯ ಪತ್ರಕರ್ತರಾದ ದತ್ತಾತ್ತೇಯ ಮಹಬಲೇಶ್ವರ ಭಟ್ (ಡಿ.ಎಂ.ಭಟ್) ಅವರನ್ನು ಅವರ ಮನೆಯ ಅಂಗಳದಲ್ಲಿಯೇ ಗೌರವಿಸುವ ಮೂಲಕ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.
ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಡಿ.ಎಂ.ಭಟ್ 1977ರಲ್ಲಿ ವೃತ್ತಿ ಹರಸಿ ಬೆಂಗಳೂರಿಗೆ ಬಂದು ಇಲ್ಲಿಯೇ ನೆಲೆ ನಿಂತವರು. ಸತತ 37 ವರ್ಷಗಳ ಕಾಲ ಕನ್ನಡಪ್ರಭ ಪತ್ರಿಕೆಯಲ್ಲಿ ಮತ್ತು ವಿಶ್ವವಾಣಿ ಪತ್ರಿಕೆ ಸೇರಿದಂತೆ ಮಾಧ್ಯಮದಲ್ಲಿ 4 ದಶಕಗಳ ಕಾಲ ಸಲ್ಲಿಸಿರುವ ಸೇವೆಯನ್ನು ಸ್ಮರಿಸಿ ಡಿ.ಎಂ.ಭಟ್ ಮತ್ತು ಗೌರಿ ದಂಪತಿಗಳನ್ನು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಿ.ಎಂ.ಭಟ್, ಕನ್ನಡಪ್ರಭ ಪತ್ರಿಕೆಯ ಸಂಪಾದಕರಾದ ಖಾದ್ರಿ ಶಾಮಣ್ಣ ಅವರು ನನಗೆ ಉದ್ಯೋಗ ಕಲ್ಪಿಸಿದರು. ಆ ಸಂದರ್ಭದಲ್ಲಿ ನನ್ನ ನೆರವಿಗೆ ನಿಂತವರು ಬಿವಿಎಂ ಎಂದು ಹಳೆಯ ದಿನಗಳ ನೆನಪನ್ನು ಮೆಲುಕು ಹಾಕಿದರು.
ಅಧ್ಯಯನಶೀಲತೆ ಮುಖ್ಯ
ಪತ್ರಕರ್ತರಾದವರು ಶಬ್ಧಕೋಶ ವೃದ್ಧಿಸಿಕೊಳ್ಳಬೇಕು ಜೊತೆಗೆ ಅಧ್ಯಯನಶೀಲತೆ ಬಹಳ ಮುಖ್ಯ. ಹಿಂದೆ ಪತ್ರಕರ್ತರಿಗೆ ಇದ್ದ ಅಧ್ಯಯನ ತುಡಿತ ಈಗಿಲ್ಲ. ಇಂದಿನ ಪತ್ರಕರ್ತರಲ್ಲಿ ಆ ಅಧ್ಯಯನಶೀಲತೆ ಕಡಿಮೆ ಆಗುತ್ತಿದೆ. ಈ ಬಗ್ಗೆ ಸುದ್ದಿಮನೆ ಗಂಭೀರವಾಗಿ ಗಮನಿಸಬೇಕು. ಮಾಹಿತಿ ಪೂರ್ಣವಿರುವ ಹಾಗೂ ಸರಿಯಾದ ವೃತ್ತಿ ನಿರತ ಪತ್ರಕರ್ತರನ್ನು ರೂಪಿಸಲು ಆದ್ಯತೆ ನೀಡಬೇಕಾಗಿದೆ ಎಂದರು.
5 ವಿಶೇಷ ಪುಟ ಕವರೇಜ್
ನಾಡಿನ ಉದ್ದಗಲಕ್ಕೂ ಕ್ರೀಡಾಕೂಟ ವರದಿಗಳನ್ನು ಮಾಡಿದ್ದೇನೆ. ಒಮ್ಮೆ ಗ್ರಾಮೀಣ ಕ್ರೀಡಾಕೂಟದ ಕವರೇಜ್ ಗಾಗಿ ಹೋಗಿದ್ದಾಗ 5 ಪುಟಗಳ ಸುದ್ದಿಯನ್ನು ನಾನೇ ಕೊಟ್ಟಿದ್ದೆ. ನಾಡಹಬ್ಬ ಮೈಸೂರು ದಸರಾ ಕವರೇಜ್‌ಗಾಗಿ ಹೋಗಿದ್ದಾಗಲೂ ಅಷ್ಟೆ. 5 ಪುಟಗಳ ಸುದ್ದಿಯನ್ನು ನಾನೇ ಕೊಟ್ಟಿದ್ದೆ. ಇದು ನನಗೆ ವೃತ್ತಿ ಜೀವನದ ಸವಾಲಾಗಿತ್ತು ಎಂದರು.
ಭಾರತ-ಪಾಕಿಸ್ಥಾನ ಮ್ಯಾಚ್
ಆಗಿನ ಕಾಲಘಟ್ಟದಲ್ಲಿ ರಣಜಿ ಕ್ರಿಕೆಟ್ ಮ್ಯಾಚ್ ಅಂದರೆ ಬಾರಿ ಮಹತ್ವದ್ದು. ಕರ್ನಾಟಕ ಮತ್ತು ತಮಿಳುನಾಡು ನಡುವೆ ಮ್ಯಾಚ್ ಇದ್ದರೆ ಅದು ಭಾರತ ಪಾಕಿಸ್ಥಾನ ನಡುವೆ ನಡೆಯುವ ಮ್ಯಾಚ್ ರೀತಿ ಇರುತಿತ್ತು. ಆ ಮ್ಯಾಚ್‌ನಲ್ಲಿ ಅಂಪೈರ್, ಕರ್ನಾಟಕ ತಂಡದ ಜಿ.ಆರ್.ವಿಶ್ವನಾಥ್ ಔಟ್ (ನಿಜವಾಗಿ ಔಟ್ ಆಗಿರಲಿಲ್ಲ)ಕೊಟ್ಟಾಗ ದೊಡ್ಡ ಗದ್ದಲವೇ ಸೃಷ್ಟಿಯಾಯಿತು. ಆಗ ಪೊಲೀಸ್ ಕಮಿಷನರ್ ಸಾಂಗ್ಲಿಯಾನ ಮಧ್ಯ ಪ್ರವೇಶ ಮಾಡಿ ಗಲಾಟೆಯನ್ನು ನಿಯಂತ್ರಿಸದೆ ಇದ್ದಿದ್ದರೆ ದೊಡ್ಡ ರದ್ದಾಂತವೇ ನಡೆಯುತಿತ್ತು ಎಂದರು.
ರಾಷ್ಟ್ರೀಯ ಪತ್ರಿಕಾ ದಿನ
ದೇಶದ ಪತ್ರಿಕಾ ಸ್ವಾತಂತ್ರವನ್ನು ಎತ್ತಿ ಹಿಡಿಯುವ ಉದ್ದೇಶದಿಂದ 1966 ನವೆಂಬರ್ 16ರಂದು ಪತ್ರಿಕಾ ಮಂಡಳಿಯನ್ನು ಅಸ್ಥಿತ್ವಕ್ಕೆ ತಂದ ದಿನವನ್ನು ರಾಷ್ಟ್ರೀಯ ಪತ್ರಿಕಾ ದಿನಾಚರಣೆಯಾಗಿದೆ. ಈ ದಿನ ಹಿರಿಯ ಪತ್ರಕರ್ತರನ್ನು ಗೌರವಿಸುವ ಮೂಲಕ ರಾಷ್ಟ್ರೀಯ ಪತ್ರಿಕಾ ದಿನವನ್ನು ಕೆಯುಡಬ್ಲೂೃಜೆ ಸರಳವಾಗಿ ಆಚರಣೆ ಮಾಡುತ್ತಿದೆ ಎಂದರು. ನಾಲ್ಕು ದಶಕಗಳ ಕಾಲ ಮಾಡಿರುವ ಡಿ.ಎಂ.ಭಟ್ ಅವರ ವೃತ್ತಿ ಸೇವೆಯನ್ನು ಸ್ಮರಿಸಿದರು.
ಸರಳ ವ್ಯಕ್ತಿತ್ವ
IFWJ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಮಾತನಾಡಿ, ಡಿ.ಎಂ.ಭಟ್ ಅವರದ್ದು ಸರಳ ವ್ಯಕ್ತಿತ್ವ. ಅವರು ಬೆಂಗಳೂರಿಗೆ ಬಂದ ದಿನದಿಂದಲೇ ಅವರನ್ನು ನಾನು ಗಮನಿಸುತ್ತಲೇ ಬಂದಿದ್ದೇನೆ. ಒಟ್ಟಿಗೆ ಕೆಲಸ ಮಾಡಿದ್ದೇವೆ. ಯಾರಿಗೆ ತೊಂದರೆ ಕೊಡದೆ, ಸದಾ ವೃತ್ತಿಪರವಾಗಿ ಕೆಲಸ ಮಾಡಿಕೊಂಡು ಬಂದಿರುವುದು ಶ್ಲಾಘನೀಯ ಎಂದರು.
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಸ್ವಾಗತಿಸಿದರು. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ದೇವರಾಜು ವಂದಿಸಿದರು. ಬೆಂಗಳೂರು ನಗರ ಘಟಕದ ಶಿವರಾಜು, ಶರಣು ಬಸಪ್ಪ ಮತ್ತಿತರರು ಹಾಜರಿದ್ದರು.