ಬೆಳೆ ಹಾನಿ ರೈತರ ಖಾತೆಗಳಿಗೆ ಶೀಘ್ರ ಪರಿಹಾರ -ರೈತರು ಎದೆಗುಂದುವುದು ಬೇಡ: ತಂಗಡಗಿ

ಕನಕಗಿರಿ ವಿಧಾನಸಭಾ ಕ್ಷೇತ್ರದ ಕಾರಟಗಿ ತಾಲೂಕಿನ ನದಿ ಪಾತ್ರದ ಗ್ರಾಮಗಳಲ್ಲಿ ಇತ್ತೀಚಿಗೆ ಸುರಿದ ಭಾರಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರು ಆದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಾರಟಗಿ : ಭತ್ತದ ಬೆಳೆ ಹಾನಿಯಾಗಿರುವ ರೈತರಿಗೆ ಶೀಘ್ರವಾಗಿ ಅವರ ಖಾತೆಗಳಿಗೆ ನೇರವಾಗಿ ಪರಿಹಾರದ ಮೊತ್ತವನ್ನು ಹಾಕಲಾಗುವುದು. ಯಾವುದೇ ಕಾರಣಕ್ಕೂ ರೈತರು ಎದೆಗುಂದುವುದು ಬೇಡ ನಿಮ್ಮ ಜತೆಗೆ ನಾನು ಮತ್ತು ನಮ್ಮ ಸರಕಾರವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಭಾರೀ ಗಾಳಿ ಮಳೆಗೆ ಭತ್ತ ನೆಲಕಚ್ಚಿದ ಸಿದ್ದಾಪುರ ಹೋಬಳಿಯ ಉಳೆನೂರು, ಬೆನ್ನೂರು ಗ್ರಾಪಂ ವ್ಯಾಪ್ತಿಯಲ್ಲಿ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಮಾತನಾಡಿದರು. ಈಗಾಗಲೇ ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸರ್ವೇ ಮಾಡಿದ್ದಾರೆ. ತಾಲೂಕಿನ ವ್ಯಾಪ್ತಿಯ ಸಿದ್ದಾಪುರ ಹೋಬಳಿಯಲ್ಲಿ 1238 ಹೆಕ್ಟರ್ ಹಾಗೂ ಕಾರಟಗಿ ಹೋಬಳಿಯಲ್ಲಿ 72 ಹೆಕ್ಟರ್ ಪ್ರದೇಶದಲ್ಲಿ ಭತ್ತ ನಾಶವಾಗಿರುವ ಬಗ್ಗೆ ಅಧಿಕಾರಿಗಳು ಸರ್ವೇ ನಡೆಸಿ ವರದಿ ನೀಡಿದ್ದಾರೆ. ಇನ್ನು ಎರಡು ದಿನಗಳಕಾಲ ಸರ್ವೇ ನಡೆಸಿ ಸಂಪೂರ್ಣ ವರದಿ ಸಲ್ಲಿಸಲಿದ್ದಾರೆ. ಎಲ್ಲಾ ರೈತರಿಗೂ ಪರಿಹಾರ ಒದಗಿಸಲಾಗುವುದು ಎಂದರು. ಸ್ಥಳದಲ್ಲಿದ್ದ ತಹಸೀಲ್ದಾರ್ ಎಂ ಕುಮಾರಸ್ವಾಮಿ ಹಾಗೂ ಕೃಷಿ ಸಹಾಯಕ ನಿರ್ದೇಶಕ ಸಂತೋಷ ಪಟ್ಟದಕಲ್ಲು ಅವರಿಗೆ ಸೂಚನೆ ನೀಡಿ ಈ ಭಾಗದಲ್ಲಿ ಶೆ.80 ರಿಂದ 90 ರಷ್ಟು ಬೆಳೆ ಹಾಳಾಗಿದೆ ಹೀಗಾಗಿ ಎಲ್ಲವನ್ನೂ ಸರಿಯಾಗಿ ಅಪ್ ಲೋಡ್ ಮಾಡಿ ನಾನು ಈಗಾಗಲೇ ಸಿಎಂ ಸಿದ್ದರಾಮಯ್ಯ ಹಾಗೂ ಕೃಷಿ ಸಚಿವರ ಜತೆಗೆ ಮಾತನಾಡಿದ್ದೇನೆ. ಅ. 28 ಕ್ಕೆ ಸಚಿವ ಸಂಪುಟ ಸಭೆ ಇದ್ದು ಅಲ್ಲಿ ಮತ್ತೊಮ್ಮೆ ಈ ಬಗ್ಗೆ ಚರ್ಚಿಸಿ ರೈತರಿಗೆ ಶೀಘ್ರ ಪರಿಹಾರ ನೀಡಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು. ಈ ವೇಳೆ ರೈತರು ಈ ಹಿಂದೆ ಹಾನಿಯಾದ ಭತ್ತಕ್ಕೆ ಅರ್ಧ ಜನರಿಗೆ ಮಾತ್ರ ಪರಿಹಾರ ಬಂದಿದ್ದು, ಇನ್ನು ಅರ್ಧ ರೈತರಿಗೆ ಪರಿಹಾರ ಬಂದಿಲ್ಲ ಸರ್ ಇದೀಗ ಮತ್ತೆ ನಮ್ಮ ಭತ್ತ ಬಿದ್ದು ಹಾನಿಯಾಗಿದೆ ಎಂದು ಸಚಿವರ ಮುಂದೆ ಕೆಲ ರೈತರು ಅಲವತ್ತುಕೊಂಡರು ಈ ವೇಳೆ ಸಚಿವರು ಟೇಕ್ನಿಕಲ್ ಸಮಸ್ಯೆಯಿಂದ ತಡೆಹಿಡಿಯಲಾಗಿತ್ತು. ಮುಂದಿನ ವಾರದೊಳಗೆ ಎಲ್ಲಾ ರೈತರ ಖಾತೆಗಳಿಗೆ ಪರಿಹಾರದ ಹಣ ಜಮೆಯಾಗಲಿದೆ ಎಂದು ತಿಳಿಸಿದರು.
ರಸ್ತೆಗೆ ಭೂಮಿ ಪೂಜೆ, ಆಸ್ಪತ್ರೆ ಉದ್ಘಾಟನೆ : ಸಿದ್ದಾಪುರ -ನಂದಿಹಳ್ಳಿ ರಸ್ತೆ ತೀವ್ರ ಹಾಳಾಗಿ ಹೋಗಿದೆ. ಜನ ಸಾಮಾನ್ಯರು ತಿರುಗಾಡಲು ಕಷ್ಟವಾಗುತ್ತಿದೆ. ರಸ್ತೆ ನಿರ್ಮಾಣ ಮಾಡಿಕೊಡುವಂತೆ ಉಳೆನೂರು, ಬೆನ್ನೂರು ಗ್ರಾಮಸ್ಥರು ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದಿಸಿದ ಸಚಿವ ತಂಗಡಗಿ ಈಗಾಗಲೇ ಸಿದ್ದಾಪುರ -ನಂದಿಹಳ್ಳಿ ರಸ್ತೆಗೆ ಹಣ ಮಂಜೂರು ಮಾಡಲಾಗಿದೆ. ಆದರೆ ದಸರಾ ಹಬ್ಬ ಹಾಗೂ ಕನ್ನಡ ರಾಜ್ಯೋತ್ಸವ ಇರುವ ಹಿನ್ನೆಲೆಯಲ್ಲಿ ನನಗೆ ಎರಡು ತಿಂಗಳುಗಳ ಕಾಲ ಬಿಡುವು ಇರಲಿಲ್ಲ. ಹೀಗಾಗಿ ಕನ್ನಡ ರಾಜ್ಯೋತ್ಸವ ಮುಗಿದ ಬಳಿಕ ರಸ್ತೆಗೆ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಾಗುವುದು. ಜತೆಗೆ ಬೆನ್ನೂರು ಗ್ರಾಮದಲ್ಲಿ ನಿರ್ಮಾಣವಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟನೆ ಮಾಡಲಾಗುವುದು ಎಂದು ತಿಳಿಸಿದರು.
ಈ ವೇಳೆ ತಹಸೀಲ್ದಾರ್ ಎಂ. ಕುಮಾರಸ್ವಾಮಿ, ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್ಲು, ಬೆನ್ನೂರು ಗ್ರಾಪಂ ಅಧ್ಯಕ್ಷ ಬಸಪ್ಪ ಶಾಲಿಗನೂರು ಬ್ಲಾಕ್ ಅಧ್ಯಕ್ಷ ಶರಣೆಗೌಡ ಮಲಿಪಾಟೀಲ್ ಮುಖಂಡರಾದ ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥ ರಡ್ಡಿ ಹೊಸಮನಿ, ಜಿಪಂ ಮಾಜಿ ಉಪಾಧ್ಯಕ್ಷ ಬಿ. ಬಸವರಾಜಪ್ಪ, ಕೆ. ಎನ್ ಪಾಟೀಲ್, ಸಿದ್ದನಗೌಡ, ಹನುಮಂತಪ್ಪ ಶಾಲಿಗನೂರು, ಅಂಬಣ್ಣ ನಾಯಕ , ಶರಣಪ್ಪ ಸಾಹುಕಾರ ಕಕ್ಕರಗೋಳ, ಶಿವಮೂರ್ತಿ ಬರ್ಸಿ, ದೊಡ್ಡ ಸುಂಕ್ಲಯ್ಯ,ಹುಲುಗಪ್ಪ ಪಾಳೆ, ಗವಿಸಿದ್ದಪ್ಪ ನಾಯಕ, ಈರಣ್ಣ ಈಡಿಗೇರ್, ನಾಗೇಶಪ್ಪ ಮಡಿವಾಳ, ಲಕ್ಷ್ಮಣ ನಾಯಕ, ಪಂಪಪಾತಿ ಕುರಿ, ಮುದಿಯಪ್ಪ ಕಕ್ಕರಗೋಳ, ರಾಜ ಸಾಬ್ ಪಿಂಜಾರ್, ಹುಲುಗಪ್ಪ ಪೂಜಾರಿ, ಗಂಗಾಧರ್ ಕೊಮಾರೆಪ್ಪ, ಮಲ್ಲಿಕಾರ್ಜುನ ಬಾದರ್ಲಿ ಸೇರಿ ಉಳೆನೂರು, ಬೆನ್ನೂರು ಗ್ರಾಮದ ರೈತರಿದ್ದರು.
Comments are closed.