ಅಖಿಲ ಕರ್ನಾಟಕ ನಾಲ್ಕನೇ ಕವಿಕಾವ್ಯ ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ, ಸಂಶೋಧಕ ಡಾ. ಜಾಜಿ ದೇವೇಂದ್ರಪ್ಪ ಆಯ್ಕೆ

0

Get real time updates directly on you device, subscribe now.

 

ಗಂಗಾವತಿ: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ), ಬೆಂಗಳೂರು ಕೊಪ್ಪಳ ಜಿಲ್ಲಾ ಘಟಕ ಹಾಗೂ ಗಂಗಾವತಿ ತಾಲ್ಲೂಕು ಘಟಕಗಳ ಸಹಯೋಗದಲ್ಲಿ ೨೦೨೫ ಜನವರಿ-೧೨ ರಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಹಮ್ಮಿಕೊಳ್ಳಲಿರುವ ಅಖಿಲ ಕರ್ನಾಟಕ ನಾಲ್ಕನೇ ಕವಿಕಾವ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಹಿರಿಯ ಸಾಹಿತಿ, ಸಂಶೋಧಕ, ಸಂಶೋಧನಾ ಮಾರ್ಗದರ್ಶಿ ಡಾ. ಜಾಜಿ ದೇವೇಂದ್ರಪ್ಪನವರನ್ನು ಆಯ್ಕೆ ಮಾಡಲಾಗಿದೆ ಎಂದು ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಂಗಾವತಿಯ ನೀಲಕಂಠೇಶ್ವರ ದೇವಾಲಯ ಆವರಣದಲ್ಲಿ ನಡೆದ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ, ದಿನಾಂಕ, ಸ್ಥಳ ಹಾಗೂ ರೂಪುರೇಷೆಗಳ ಕುರಿತು ಚರ್ಚಿಸಲಾಗಿ ಸಮ್ಮೇಳನಾಧ್ಯಕ್ಷರ ಆಯ್ಕೆಗೆ ಹಿರಿಯ ಸಾಹಿತಿ ಹೇಮಾ ಪಟ್ಟಣಶೆಟ್ಟಿ, ಅಲ್ಲಮಪ್ರಭು ಬೆಟ್ಟದೂರು, ಶರಣಪ್ಪ ಮೆಟ್ರಿ, ವಿನಯ ಒಕ್ಕುಂದ, ಡಾ. ಜಾಜಿ ದೇವೇಂದ್ರಪ್ಪ, ಡಾ. ಮಮ್ತಾಜ್ ಬೇಗಂ, ರಾಘವೇಂದ್ರ ದಂಡಿನ್, ಪವನ್ ಕುಮಾರ್ ಗುಂಡೂರು, ಎಸ್.ವಿ. ಪಾಟೀಲ್ ಗುಂಡೂರು ಕುರಿತು ಪ್ರಮುಖವಾಗಿ ಚರ್ಚಿಸಲಾಯಿತು. ಅಂತಿಮವಾಗಿ ಹಿರಿಯ ಸಾಹಿತಿ, ಸಂಶೋಧಕ, ಸಂಶೋಧನಾ ಮಾರ್ಗದರ್ಶಿ ಡಾ. ಜಾಜಿ ದೇವೇಂದ್ರಪ್ಪನವರನ್ನು ಅಖಿಲ ಕರ್ನಾಟಕ ನಾಲ್ಕನೇ ಕವಿಕಾವ್ಯ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್, ರಾಜ್ಯ ಕಾರ್ಯದರ್ಶಿ ಡಾ. ದಿವಾಕರ ನಾರಾಯಣ, ಪದಾಧಿಕಾರಿ ಎಸ್. ಪರಶುರಾಮಪ್ಪ, ವೇದಿಕೆಯ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷೆ ಅನಸೂಯ ಜಹಗೀರದಾರ, ತಾಲ್ಲೂಕು ಘಟಕದ ಅಧ್ಯಕ್ಷ ಶರಣಪ್ಪ ತಳ್ಳಿ ಕುಪ್ಪಿಗುಡ್ಡ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಗಂಗಾವತಿ ತಾಲ್ಲೂಕು ಪದಾಧಿಕಾರಿಗಳಾದ ಮಹಾದೇವ ಮೋಟಿ, ಯಲ್ಲಪ್ಪ ಕಲಾಲ್, ಶ್ರೀಧರ ತಳವಾರ, ವಿಜಯಲಕ್ಷ್ಮೀ ವೈ. ಕಲಾಲ್ ದಿಗ್ಗಾವಿ, ಗಂಗಾವತಿ ತಾಲ್ಲೂಕು ಕಸಾಪ ಅಧ್ಯಕ್ಷ ಶ್ರೀನಿವಾಸ ಅಂಗಡಿ, ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಪ್ರಾಂತೀಯ ಸಂಚಾಲಕ ಅಶೋಕ್ ಕುಮಾರ್ ರಾಯ್ಕರ್ ಮುಂತಾದವರು ಹಾಜರಿದ್ದರು.

 

ಸಮ್ಮೇಳನಾಧ್ಯಕ್ಷರ ಸಂಕ್ಷಿಪ್ತ ಪರಿಚಯ

ಡಾ. ಜಾಜಿ ದೇವೇಂದ್ರಪ್ಪನವರು ಈಗಿನ ಆಂದ್ರಪ್ರದೇಶದ ಕರ್ನೂಲು ಜಿಲ್ಲೆಯ ಯಳ್ಳಾರ್ತಿಯಲ್ಲಿ ೧೯೭೬ ನವೆಂಬರ್-೦೨ ರಂದು ಜನಿಸಿದರು. ಗುಲ್ಬರ್ಗಾ ವಿವಿಯಲ್ಲಿ ಕನ್ನಡ ಸ್ನಾತಕೋತ್ತರ ಪದವಿಯನ್ನು ಚಿನ್ನದ ಪದಕದೊಂದಿಗೆ ತೇರ್ಗಡೆಯಾಗಿ, ಹಂಪಿ ಕನ್ನಡ ವಿವಿಯಿಂದ ಡಾಕ್ಟರೇಟ್ ಪದವಿ ಪಡೆದ ಇವರು ಹಂಪಿ ಕನ್ನಡ ವಿವಿಯಲ್ಲಿ ಹಸ್ತಪ್ರತಿ ವಿಭಾಗದಲ್ಲಿ ಸಂಶೋಧನಾ ಸಹಾಯಕರಾಗಿ, ಕಲಘಟಕಿ ಗುಡ್ ನ್ಯೂಸ್ ಪದವಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ, ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಉಪನ್ಯಾಸಕರಾಗಿ, ಗಂಗಾವತಿ ಪದವಿ ಕಾಲೇಜಿನ ಪ್ರಾಂಶುಪಾಲರಾಗಿ, ಸದ್ಯ ಸಿಂಧನೂರಿನ ಪದವಿ ಕಾಲೇಜಿನ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಟಿ ಶರ್ಟ್ ಬರಹಗಳು ಭಾಷೆ ಎಂಬ ಲೇಖನ ರಾಣಿ ಚೆನ್ನಮ್ಮ ವಿವಿಯ ಬಿ.ಕಾಂ. ಎರಡನೇ ಸೆಮಿಸ್ಟರ್ ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಇವರು ಈಗಾಗಲೇ ಬಾನ ಬೆಡಗು(ಕಾವ್ಯ), ವಿಜಲುಗಳು(ಕಾವ್ಯ), ಆಂದ್ರ ಕರ್ನಾಟಕ ಗಡಿ ಪ್ರದೇಶದ ಸ್ಥಳನಾಮಗಳು(ಸಂಶೋಧನೆ), ಶ್ರೀಶೈಲ ಶಾಸನ ಸಮೀಕ್ಷೆ (ಅನುವಾದ), ಆಂದ್ರರು ಚಿತ್ರಿಸಿದ ಬಸವಣ್ಣ(ಅನುವಾದ), ಪ್ರಸ್ತಾವನೆ(ಸಂಶೋಧನೆ), ಕಾವ್ಯ ಮದಾರ(ಸಂಪಾದಿತ), ನೇಕಾರ ಮಹಿಳೆ ಮತ್ತು ಸಂಸ್ಕೃತಿ(ಸಂಶೋಧನೆ), ಕೂರಿಗೆ(ಸಾಹಿತ್ಯ ಚಿಂತನೆಗಳು), ಪಡಿಪದಾರ್ಥ (ಸಾಹಿತ್ಯ ಚಿಂತನೆಗಳು), ತಿಳಿದಷ್ಟೇ ಬಯಲು (ಸಂಶೋದನಾ ಲೇಖನಗಳು) ಮುಂತಾದ ಇಪ್ಪತ್ತಕ್ಕೂ ಹೆಚ್ಚು ಮೌಲ್ಯಭರಿತ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.

Get real time updates directly on you device, subscribe now.

Leave A Reply

Your email address will not be published.

error: Content is protected !!