ಮಕ್ಕಳ ಕಾಯಿಲೆ, ಕುಂಠಿತ ಬೆಳವಣಿಗೆ ತೊಂದರೆಗಳ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡಿ: ನಲಿನ್ ಅತುಲ್
ಮಕ್ಕಳ ಕಾಯಿಲೆಗಳು ಮತ್ತು ಕುಂಠಿತ ಬೆಳವಣಿಗೆಯ ತೊಂದರೆ ಬಗ್ಗೆ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡಲು ಶ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ಪ್ರಯುಕ್ತ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಕ್ಟೋಬರ್ 09ರಂದು ಹಮ್ಮಿಕೊಂಡಿದ್ದ ಅಂತರ ಇಲಾಖೆ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ತಾಯಂದಿರ ಮತ್ತು ಶಿಶುಗಳ ಮರಣ ಪ್ರಮಾಣ ಕಡಿಮೆ ಮಾಡಲು ಒತ್ತು ನೀಡಲಾಗುತ್ತಿದೆ. ಹುಟ್ಟುವ ಮಕ್ಕಳಲ್ಲಿ ಆ ಜನ್ಮ ನ್ಯೂನ್ಯತೆ 100ಕ್ಕೆ 6ರಿಂದ 7 ಮಕ್ಕಳಲ್ಲಿದ್ದು, ಶೇ.10ರಷ್ಟು ಮಕ್ಕಳಲ್ಲಿ ಕುಂಠಿತ ಬೆಳವಣಿಗೆ ಇರುತ್ತದೆ. ಪೌಷ್ಠಿಕ ಆಹಾರದ ಕೊರತೆ ಇತರೆ ಕಾಯಿಲೆಗಳು ಬಂದು ಮಕ್ಕಳ ಮರಣ ಸಂಭವಿಸುವ ಸಾಧ್ಯತೆಯಿದ್ದು, ಇದನ್ನು ತಪ್ಪಿಸುವ ಉದ್ದೇಶದಿಂದ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ಆರಂಭವಾಗಿದೆ. ಹುಟ್ಟಿದ ಮಗುವಿನಿಂದ ಹಿಡಿದು 18 ವರ್ಷದವರೆಗಿನ ಮಕ್ಕಳಿಗೆ ಆಜನ್ಮ ನ್ಯೂನ್ಯತೆ, ಮಕ್ಕಳ ಕಾಯಿಲೆಗಳು ಮತ್ತು ಕುಂಠಿತ ಬೆಳವಣಿಗೆಯ ತೊಂದರೆ ಬಗ್ಗೆ ತಪಾಸಣೆ ಮತ್ತು ಚಿಕಿತ್ಸೆ ಒದಗಿಸಲು ವೈದ್ಯಕೀಯ ಶಾಲಾ ಆರೋಗ್ಯ ತಂಡವನ್ನು ರಚಿಸಲಾಗಿದೆ. ಈ ತಂಡಗಳು ಅಂಗನವಾಡಿ ಕೇಂದ್ರಗಳಲ್ಲಿ ಹಾಗೂ ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ವೈದ್ಯಕೀಯ ತಪಾಸಣೆ ನಡೆಸುವಂತಾಗಬೇಕು. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮತ್ತು ವೈದ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
0 ರಿಂದ 6 ವಾರದ ಮಕ್ಕಳಲ್ಲಿ ಹುಟ್ಟಿದಾಗಿನ ಯಾವುದೇ ರೀತಿಯ ನ್ಯೂನ್ಯತೆಗಳು ಕಂಡುಬಂದಲ್ಲಿ ಅಂತಹ ಮಕ್ಕಳಿಗೆ ತಕ್ಷಣ ಆಸ್ಪತ್ರೆಗೆ ದಾಖಲಿಸಲು ಆಶಾ ಕಾರ್ಯಕತೆಯರ ಮನೆ ಭೇಟಿ ಮೂಲಕ ಕ್ರಮ ಕೈಗೊಳ್ಳಿ. ಸ್ಥಳೀಯ ಅಂಗನವಾಡಿ ಕೇಂದ್ರ ಹಾಗೂ ಶಾಲೆಗಳಲ್ಲಿ ಆರೋಗ್ಯ ತಪಾಸಣೆ ನಡೆಸುವ ಸಂದರ್ಭದಲ್ಲಿ 6 ವರ್ಷದೊಳಗಿನ ಎಲ್ಲಾ ಮಕ್ಕಳ ತಪಾಸಣೆಗೆ ಕ್ರಮ ಜರುಗಿಸಬೇಕು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣಾಧಿಕಾರಿಗಳಾದ ಡಾ ಟಿ.ಲಿಂಗರಾಜು ಅವರು ಮಾತನಾಡಿ, ಆಜನ್ಮ ನ್ಯೂನ್ಯತೆಯಲ್ಲಿ ನರದೋಷ, ಡೌನ್ ಸಿಂಡ್ರೋಮ್, ಸೀಳು ತುಟಿ, ವಕ್ರಪಾಸ, ಜನ್ಮಜಾತ ಕಣ್ಣಿನ ಪೊರೆ, ಕಿವುಡು, ಹೃದಯ ಕಾಯಿಲೆ ಸಮಸ್ಯೆಗಳು ಒಳಗೊಂಡಿದೆ. ಕುಂಠಿತ ಬೆಳವಣಿಗೆಯಲ್ಲಿ ದೃಷ್ಟಿ , ಶ್ರವಣ, ಜ್ಞಾನ ಗ್ರಹಣ, ಭಾಷೆ ನಡವಳಿಕೆ, ಕಲಿಕೆ ಇತ್ಯಾದಿ. ಪೌಷ್ಠಿಕಾಂಶದ ಕೊರತೆಯಿಂದ ಅಪೌಷ್ಠಿಕತೆ, ಎ ಮತ್ತು ಡಿ ಅನ್ನಾಂಗದ ಕೊರತೆಯಿಂದ ದೃಷ್ಟಿ ಹೀನತೆ, ಚರ್ಮಕ್ಕೆ ಸಂಬಂಧಿಸಿದ ತೊಂದರೆ, ಅಯೋಡಿನ್ ಕೊರತೆಯಿಂದ ಗಳಗಂಡ ರೋಗ ಬರಬಹುದು. ಮಕ್ಕಳಲ್ಲಿ ಕಿವಿ ಸೋರುವುದು, ಹಲ್ಲಿನ ಸಮಸ್ಯೆ, ಸಾಮಾನ್ಯ ಜ್ವರ, ಶ್ವಾಸಕೋಶದ ಸೋಂಕು, ಚರ್ಮದ ಕಾಯಿಲೆ ಮುಂತಾದ ಸಮಸ್ಯೆ ಕಾಣಿಸಿಕೊಂಡರೆ ಈ ಕಾರ್ಯಕ್ರಮದಡಿ ತಪಾಸಣೆ, ಪತ್ತೆ ಹಚ್ಚುವಿಕೆ, ಚಿಕಿತ್ಸೆ, ರೆಫರಲ್ ಹಾಗೂ ಅನುಸರಣೆಯನ್ನು ಉಚಿತವಾಗಿ ಬಿಪಿಎಲ್ ಹಾಗೂ ಎಪಿಎಲ್ ಕುಟುಂಬಕ್ಕೆ ಒದಗಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ.ಪ್ರಕಾಶ ವಿ., ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ರವಿಂದ್ರನಾಥ ಎಂ.ಹೆಚ್., ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ.ನಂದಕುಮಾರ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿಗಳಾದ ಡಾ ಪ್ರಕಾಶ್ ಹೆಚ್., ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳಾದ ಡಾ ಶಶೀಧರ ಎ. ಸೇರಿದಂತೆ ವಿವಿಧ ತಾಲ್ಲೂಕುಗಳ ತಾಲ್ಲೂಕಾ ಆರೋಗ್ಯಾಧಿಕಾರಿಗಳು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು, ಜಿಲ್ಲಾಸ್ಪತ್ರೆಯ ತಜ್ಞವೈದ್ಯರು, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
Comments are closed.