ಶಾಸಕ ಜನಾರ್ಧನ ರೆಡ್ಡಿ ವಿರುದ್ಧ ಕ್ರಮಕ್ಕೆ ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಸೇನೆ ಆಗ್ರಹ
ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಗಮನದ ಸಂದರ್ಭದಲ್ಲಿ ಝೀರೋ ಟ್ರಾಫಿಕ್ ಹಾಗೂ ಕಾನ್ ವೇ ನಿಯಮ ಉಲ್ಲಂಘಿಸಿ ದುರಹಂಕಾರ ಮೆರೆದ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಸೇನೆ ಸದಸ್ಯರು ಆಗ್ರಹಿಸಿದರು.
ಈ ಕುರಿತು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಎಲ್ ಅರಸಿದ್ದಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಸೇನೆಯ ಕೊಪ್ಪಳ ತಾಲೂಕಾ ಅಧ್ಯಕ್ಷ ಕುಬೇರ ಮಜ್ಜಿಗಿ ಮಾತನಾಡಿ, ಅಕ್ಟೋಬರ್ 5 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಿಂಧನೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮರಳಿ ಗಂಗಾವತಿ ಮೂಲಕ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಹೊರಟಿದ್ದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಬರುವ ಕೆಲವೇ ಸೆಕೆಂಡುಗಳ ಮೊದಲು ಎಡ ಬದಿ ಇದ್ದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರ ಕಾರು ದಿಡೀರನೆ ಡಿವೈಡರ್ ದಾಟಿ ವನ್ ವೇ ರಸ್ತೆಯಲ್ಲಿ ಚಲಾಯಿಸಿದ್ದಾರೆ. ಅದು ಕೂಡ ಜೀರೋ ಟ್ರಾಫಿಕ್ ಹಾಗೂ ಕಾನ್ ವೇ ಜಾರಿಯಲ್ಲಿದ್ದ ಸಂದರ್ಭದಲ್ಲಿ ಈ ರೀತಿ ದುರ್ವರ್ತನೆ ತೋರಿದ್ದು ಜನಾರ್ದನ ರೆಡ್ಡಿ ಅವರ ದರ್ಪ ಹಾಗೂ ದುರಹಂಕಾರವನ್ನು ಎತ್ತಿ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೆಡ್ಡಿ ಅವರ ಒಂದು ಕಾರು ಅಲ್ಲದೆ ಅವರ ಬೆಂಬಲಿಗರ 2 ಕಾರುಗಳು ಸಹ ಅವರನ್ನು ಹಿಂಬಾಲಿಸಿವೆ. ಅದೃಷ್ಟವಶಾತ್ ಈ ಅವಘಡದಿಂದ ನಡೆಯಬೇಕಿದ್ದ ಭಾರೀ ಅನಾಹುತ ಕೂದಲೆಳೆಯ ಅಂತರದಲ್ಲಿ ತಪ್ಪಿದೆ.
ರಾಜ್ಯ ಹಾಗೂ ರಾಷ್ಟ್ರದ ಅತಿ ಗಣ್ಯರು ಆಗಮಿಸುವ ವೇಳೆ ಅವರ ಭದ್ರತೆ ಹಾಗೂ ಸಮಯ ಪಾಲನೆಗಾಗಿ ಝೀರೋ ಟ್ರಾಫಿಕ್ ಹಾಗೂ ಕಾನ್ ವೇಯಂತಹ ಕಾನೂನು ಜಾರಿಗೆ ತರಲಾಗಿದೆ. ಹೀಗಿದ್ದರೂ ಹಾಲಿ ಶಾಸಕರು ಹಾಗೂ ಮಾಜಿ ಮಂತ್ರಿ ಆಗಿ ಕೆಲಸ ಮಾಡಿದ ಜನಾರ್ಧನ ರೆಡ್ಡಿ ಅವರು ಶಿಷ್ಟಾಚಾರ ಹಾಗೂ ಕಾನೂನು ಉಲ್ಲಂಘಿಸಿದ್ದು ಅವರ ಗುಂಡಾ ಮನಸ್ಥಿತಿಯನ್ನು ತೋರುತ್ತದೆ.
ಮೊದಲಿನಿಂದಲೂ ಸಿದ್ದರಾಮಯ್ಯನವರ ವಿರುದ್ಧ ದ್ವೇಷದ ರಾಜಕಾರಣವನ್ನು ಮಾಡುತ್ತಾ ಬಂದಿರುವುದನ್ನು ಗಮನಿಸಿದ್ದೇವೆ. ಹಾಗಾಗಿ ಸಿದ್ದರಾಮಯ್ಯನವರ ಜೀವಕ್ಕೆ ಧಕ್ಕೆ ತರುವ ದುರುದ್ದೇಶ ಕಂಡು ಬರುತ್ತದೆ ರಾಜ್ಯದ ಮುಖ್ಯಮಂತ್ರಿಗಳಿಗೆ ಈ ರೀತಿ ಆದರೆ ಸಾಮಾನ್ಯರ ಗತಿ ಏನು ಎನ್ನುವ ಪ್ರಶ್ನೆ ಮೂಡುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಕಾನೂನು ಉಲ್ಲಂಘಿಸಿ ಮುಖ್ಯಮಂತ್ರಿಗಳ ಪ್ರಾಣಕ್ಕೆ ಕುತ್ತು ತರಲು ಯತ್ನಿಸಿದ ಜನಾರ್ದನ್ ರೆಡ್ಡಿ ಅವರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಹನುಮಂತಪ್ಪ ಕೌದಿ, ಗವಿಸಿದ್ದಪ್ಪ ಮುದ್ದಿ, ಸೀಮಣ್ಣ ಗಬ್ಬೂರ, ಮಂಜುನಾಥ್ ಬಂಗಾಳಿ, ನಿಂಗಪ್ಪ ಮೂಗಿನ, ಮಲ್ಲೇಶ್ ಹದ್ದಿನ್, ಮಂಜುನಾಥ ಮ್ಯಾಗಳಮನಿ, ಆನಂದ ಹಳ್ಳಿಗುಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
Comments are closed.