ಗಂಗಾವತಿ ಶಾಸಕರಿಂದ ಜೀರೋ ಟ್ರಾಫಿಕ್ ಇದ್ದಾಗಲೂ ನಿಯಮ ಉಲ್ಲಂಘನೆ: ಶಿಸ್ತು ಕ್ರಮಕ್ಕೆ ಆಗ್ರಹ
ಗಂಗಾವತಿ: ಜೀರೋ ಟ್ರಾಫಿಕ್ ಇದ್ದಾಗಲೂ ಶಿ?ಚಾರ ಮುರಿದು ರೋಡ್ ಡಿವೈಡರ್ ಹತ್ತಿಸಿ ಮುಖ್ಯಮಂತ್ರಿಗಳ ಭದ್ರತೆ, ಸುರಕ್ಷತೆಯ ಬೆಂಗಾವಲು ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ಗಂಗಾವತಿ ಶಾಸಕ ಜನಾರ್ಧನರೆಡ್ಡಿ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸಿ.ಪಿ.ಐ.ಎಂ.ಎಲ್ ಲಿಬರೇಷನ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ವಿಜಯ್ ದೊರೆರಾಜು ಒತ್ತಾಯಿಸಿದರು.
ಅಕ್ಟೋಬರ್-೫ ಶನಿವಾರ ಮಾನ್ಯ ಮುಖ್ಯಮಂತ್ರಿಗಳು ಗಂಗಾವತಿ ಮಾರ್ಗವಾಗಿ ಕೊಪ್ಪಳಕ್ಕೆ ತೆರಳುವ ಸಂದರ್ಭದಲ್ಲಿ ಜೀರೋ ಟ್ರಾಫಿಕ್ ಉಲ್ಲಂಘಿಸಿ ಶಾಸಕ ಜನಾರ್ದನರೆಡ್ಡಿಯವರು ರೋಡ್ ಡಿವೈಡರ್ ಹತ್ತಿಸಿ ಕಾರು ಚಲಾಯಿಸಿಕೊಂಡು ರಾಂಗ್ ರೂಟ್‌ನಲ್ಲಿ ಕಾನ್ವೆ ಕಾರ್‌ಗೆ ಎದುರು ಬಂದಿರುವುದು ಕಾನೂನು ಬಾಹಿರವಾಗಿದೆ. ಉನ್ನತ ಹುದ್ದೆಯಲ್ಲಿರುವ ಪ್ರಧಾನಮಂತ್ರಿ, ಮುಖ್ಯ ಮಂತ್ರಿಯವರಂತಹ ವ್ಯಕ್ತಿಗಳು ಸಂಚರಿಸುವ ಮಾರ್ಗದಲ್ಲಿ ಹಾಗೂ ಕೆಲವೊಂದು ವೈದ್ಯಕೀಯ ಹಾಗೂ ಇನ್ನಿತರ ತುರ್ತು ಪರಿಸ್ಥಿತಿಯಲ್ಲಿ ಝಡ್-ಶ್ರೇಣಿಯ ಭದ್ರತೆಯ ಉದ್ದೇಶಕ್ಕೆ ಜೀರೋ ಟ್ರಾಫಿಕ್ ಮಾಡಿ ಸಾರ್ವಜನಿಕರ ಓಡಾಟಕ್ಕೆ ನಿಬಂಧ ಹೇರಲಾಗುತ್ತದೆ. ಆದರೆ ಜನಾರ್ಧನರೆಡ್ಡಿಯವರನ್ನು ಪೊಲೀಸರು ತಡೆದು ನಿಲ್ಲಿಸಿದರೂ ಸಹ ಪೊಲೀಸರ ಭದ್ರತೆ ಬೇಧಿಸಿಕೊಂಡು ಹೋಗಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಒಬ್ಬ ಶಾಸಕರೇ ಈ ರೀತಿ ವರ್ತಿಸಿದರೆ ಜನರಿಗೆ ಏನು ಸಂದೇಶ ಕೊಟ್ಟಂತಾಗುತ್ತದೆ. ಇದೇ ರೀತಿ ಜನಸಾಮಾನ್ಯರು ಮಾಡಿದ್ದರೆ ಸುಮ್ಮನೆ ಬಿಡುತ್ತಿರಲಿಲ್ಲ. ಈ ಬಗ್ಗೆ ಪರಿಶೀಲಿಸಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶಾಸಕ ಜನಾರ್ಧನರೆಡ್ಡಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನಮ್ಮ ಸಿ.ಪಿ.ಐ.ಎಂ.ಎಲ್ ಪಕ್ಷ ಒತ್ತಾಯಿಸುತ್ತದೆ ಎಂದು ತಿಳಿಸಿದರು.
Comments are closed.