ಆತ್ಮ ಸಾಕ್ಷಿಯ ಮುಂದೆ ನಡೆದ ವಿಶಿಷ್ಟ ಮದುವೆಗೆ ಸಾಕ್ಷಿಯಾದ ಕೊಪ್ಪಳದ ಜನತೆ…
ಕೊಪ್ಪಳವು ವಿಶಿಷ್ಟ ಮದುವೆಗೆ ಸಾಕ್ಷಿಯಾಯಿತು. ಎಸ್.ಯು.ಸಿ.ಐ. ಕಮ್ಯುನಿಸ್ಟ್ ಪಕ್ಷದ ಸದಸ್ಯರಾದ ಶರಣು ಗಡ್ಡಿ ಹಾಗೂ ಮಂಜುಳಾ ಎಂ ಅವರ ವಿವಾಹ ಸಂತೋಷಕೂಟವು ಪಾನಗಂಟಿ ಕಲ್ಯಾಣ ಮಂಟಪದಲ್ಲಿ ಜರುಗಿತು. ಈ ಸಂದರ್ಭದಲ್ಲಿ ದಂಪತಿಗಳಿಗೆ ಶುಭಕೋರಿ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಕಾಮ್ರೆಡ್ ಕೆ. ಉಮಾ ಅವರು ಮಾತನಾಡಿ, ದುಡಿಯುವ ಜನಗಳ ವಿಮೋಚನೆಗಾಗಿ ಕಾಮ್ರೇಡ್ ಶಿವದಾಸ್ ಘೋಷ್ ರವರ ಚಿಂತನೆಗಳ ಅಡಿಯಲ್ಲಿ ಸಾಮಾಜಿಕ ಚಳುವಳಿಯ ಉದ್ದೇಶಕ್ಕೆ ತಮ್ಮ ಜೀವನವನ್ನು ಮುಡುಪಾಗಿಟ್ಟು ಕೊಪ್ಪಳದಲ್ಲಿ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷವನ್ನು ಕಟ್ಟುತ್ತಿರುವ ಪಕ್ಷದ ಸದಸ್ಯರಾದ ಶರಣು ಗಡ್ಡಿ ಹಾಗೂ ಮಂಜುಳಾ ಎಂ ಅವರು ಚಳುವಳಿಗೆ ಪೂರಕವಾಗಿ ಪರಸ್ಪರರನ್ನು ಇಷ್ಟಪಟ್ಟಿದ್ದು, ವಿಶೇಷ ಮದುವೆ ನೋಂದಣಿ ಕಾಯ್ದೆಯಡಿ ವಿವಾಹ ನೋಂದಣಿ ಮಾಡಿಸಲಾಗಿದೆ. ಅದರ ಅಂಗವಾಗಿ ಇಂದು ಸಂತೋಷಕೂಟವನ್ನು ಹಮ್ಮಿಕೊಳ್ಳಲಾಗಿದೆ. ಈ ಮದುವೆಯು ಅತ್ಯಂತ ವಿಶಿಷ್ಟವಾಗಿದ್ದು ಯಾವುದೇ ಸಂಪ್ರದಾಯಗಳಿಲ್ಲದ, ವರದಕ್ಷಿಣೆಯ ಸೋಂಕಿಲ್ಲದ, ಜಾತಿ, ಧರ್ಮ ಬೇದವಿಲ್ಲದ, ಅಗ್ನಿಸಾಕ್ಷಿ ಇಲ್ಲದ ಕೇವಲ ಮನಸ್ಸಾಕ್ಷಿ ಆಧಾರದಲ್ಲಿ ನಡೆದ ಮದುವೆಯಾಗಿದೆ. ಪ್ರಜಾತಾಂತ್ರಿಕ ಮೌಲ್ಯಗಳ ಆಧಾರದಲ್ಲಿ ಈ ಮದುವೆ ನಡೆದಿದ್ದು, ಸಾಮಾಜಿಕ ಬದಲಾವಣೆಗೆ ಅವಶ್ಯಕ ವಿರುವ ಸಾಂಸ್ಕೃತಿಕ ಚಳುವಳಿಯ ಭಾಗವೇ ಇದಾಗಿದೆ. ಸಮಾಜದಲ್ಲಿ ನೆಲೆಸಿರುವ ಜಾತಿ ತಾರತಮ್ಯ, ಧರ್ಮ ಭೇದಗಳನ್ನು ಹೋಗಲಾಡಿಸಲು ಇಂತಹ ಮದುವೆಗಳ ಅವಶ್ಯಕತೆ ಇಂದು ಸಮಾಜಕ್ಕಿದೆ. ಇನ್ನೊಂದೆಡೆ ಹೆಣ್ಣು ಹೆತ್ತವರ ವರದಕ್ಷಣೆಯ ಸಂಕಟಕ್ಕೂ ಇಂತಹ ಮದುವೆಗಳು ಪರಿಹಾರವಾಗಲಿವೆ. ಆ ದಿಕ್ಕಿನಲ್ಲಿ ಸಮಾಜದಲ್ಲಿ ಇಂತ ಮದುವೆಗಳು ನಡೆಯಲಿ ಎಂದು ಹೇಳಿದರು.
ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ಕಾಮ್ರೇಡ್ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷವು ವೈಚಾರಿಕತೆಯ ಆಧಾರದಲ್ಲಿ ಸಂಘಟನೆಯನ್ನು ದೇಶ ವ್ಯಾಪಿ ಕಟ್ಟುತ್ತಿದ್ದು, ಉದಾತ್ತ ಚಿಂತನೆಗಳನ್ನು ಕೇವಲ ಬೋಧಿಸುವುದಕ್ಕೆ ಸೀಮಿತಗೊಳಿಸದೆ, ಪಕ್ಷದ ಸದಸ್ಯರು ಕಾರ್ಯಕರ್ತರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ. ಅದಕ್ಕೆ ಈ ಮದುವೆ ಸಾಕ್ಷಿಯಾಗಿದೆ. ಒಂದು ವಿಶಿಷ್ಟ ಪ್ರಯತ್ನಗಳು ನಡೆಯುವ ಸಂದರ್ಭದಲ್ಲಿ, ಹಳೆಯ ಆಲೋಚನೆ ಚಿಂತನೆಗಳುಳ್ಳ ಜನರಿಂದ ವಿರೋಧ ವ್ಯಕ್ತವಾಗುವುದು ಸಹಜ. ಆದರೆ ಸಮಾಜವು ನಿಂತ ನೀರಾಗದೆ ಸಮಾಜದಲ್ಲಿನ ಮೌಲ್ಯಗಳ ಬದಲಾವಣೆಗೆ, ಪ್ರಗತಿ ಎಡೆಗೆ ಸಾಗಬೇಕಾದರೆ ಇಂತಹ ಮದುವೆಗಳು ಸಾಂಸ್ಕೃತಿಕ ಚಳುವಳಿಯ ರೂಪದಲ್ಲಿ ಇನ್ನು ಹೆಚ್ಚಾಗಿ ಆಗಬೇಕು. ಅದಕ್ಕೆ ಈ ಮದುವೆಗೆ ಶುಭಕೋರಲು ಆಗಮಿಸಿರುವ ಇಂತಹ ಪ್ರಯತ್ನಕ್ಕೆ ಕೈ ಜೋಡಿಸಬೇಕು ಎಂದರು.
ಹಿರಿಯ ಬಂಡಾಯ ಸಾಹಿತಿಗಳು ಹೋರಾಟಗಾರರು ಆದ ಶ್ರೀ ಅಲ್ಲಮಪ್ರಭು ಬೆಟ್ಟದೂರು ಅವರು ಮಾತನಾಡಿ, ಹಲವಾರು ವರ್ಷಗಳಿಂದ ಹೋರಾಟದ ಒಡನಾಡಿಗಳಾಗಿದ್ದವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವುದು ಅತ್ಯಂತ ಸಂತಸದ ಸಂಗತಿಯಾಗಿದೆ. ಜಾತಿ ವ್ಯವಸ್ಥೆ ಆಳವಾಗಿ ಬೇರೂರು ಇರುವ ಇಂದಿನ ಸಮಾಜದಲ್ಲಿ, ಅದನ್ನು ತೊಡೆದು ಹಾಕುವ ದಿಕ್ಕಿನಲ್ಲಿ ಇಂತಹ ಪ್ರಯತ್ನಗಳು ದಿಟ್ಟ ಹೆಜ್ಜೆಯಾಗಿವೆ. ಈ ದಂಪತಿಗಳು ಇದಕ್ಕೆ ಅಭಿನಂದನಾರ್ಹರು. ಮುಂದೆಯೂ ಸಮಾಜ ಬದಲಾವಣೆಯ, ಶೋಷಿತ ಜನಗಳಿಗೆ ದನಿಯಾಗುವ ಹೋರಾಟಗಳಲ್ಲಿ ಜೊತೆಯಾಗಿ ಮುನ್ನಡೆಯಲಿ ಎಂದು ಹಾರೈಸಿದರು.
ಹಿರಿಯ ಸಾಹಿತಿಗಳಾದ ಈಶ್ವರ್ ಅತ್ತಿ, ದಂಪತಿಗಳಿಗೆ ಶುಭ ಕೋರಿ ಮಾತನಾಡಿ, ಮದುವೆ ಎಂಬುದು ಈ ದಿನಮಾನಗಳಲ್ಲಿ ಪ್ರತಿಷ್ಠೆಯ ಸಮಾರಂಭಗಳಾಗುತ್ತಿದ್ದು ಅನಾವಶ್ಯಕ ಒಂದು ದುಂದು ವೆಚ್ಚ ಮಾಡಲಾಗುತ್ತಿದೆ. ಎಷ್ಟೋ ಕುಟುಂಬಗಳು ಮದುವೆಯ ಸಾಲದಲ್ಲಿ ಸಿಲುಕಿ ವಿವಾಹದ ಸಂತೋಷದಿಂದ ವಂಚಿತರಾಗುತ್ತಿರುವುದು ನೋವಿನ ಸಂಗತಿ. ಈ ದಂಪತಿಗಳು ಸರಳ ವಿವಾಹಕ್ಕೆ ಮನಸ್ಸು ಮಾಡಿ ಅತ್ಯಂತ ವಿಶಿಷ್ಟ ಎನ್ನುವ ರೀತಿಯಲ್ಲಿ ವೈವಾಹಿಕ ಬದುಕಿಗೆ ಪ್ರವೇಶಿಸುತ್ತಿರುವ ಈ ನಡೆ ಪ್ರಸಂಶನೀಯ, ಅಷ್ಟೇ ಅಲ್ಲದೇ ಇದು ಸಮಾಜಕ್ಕೆ ಮಾದರಿಯಾಗಿದೆ. ಪೂಜಾರಿಗಳಿಲ್ಲದ, ಮಂತ್ರಗಳಿಲ್ಲದ, ಮದುಮಕ್ಕಳ ಕೊರಳಲ್ಲಿ ಹಾರಗಳಿಲ್ಲದ, ನಿಜಕ್ಕೂ ಒಂದು ಅಪರೂಪದ ಮದುವೆ ಇದಾಗಿದೆ. ಅವರಿಬ್ಬರ ನಡುವಿನ ಒಲವೇ ಎಲ್ಲವೂ ಆಗಿತ್ತು. ಅವರ ಇದುವರೆಗಿನ ಹೋರಾಟದ ಬದುಕನ್ನು ವೈವಾಹಿಕ ಬದುಕಿನಲ್ಲಿಯೂ ಮುಂದುವರೆಸಿಕೊಂಡು ಹೋಗುವ ಬದ್ಧತೆಯನ್ನು ತೋರಿಸಿದ್ದು ನಿಜಕ್ಕೂ ಅಭಿಮಾನದ ಸಂಗತಿ. ಇಂತಹ ಸರಳ ವಿವಾಹಗಳು ಸಮಾಜದಲ್ಲಿ ಮತ್ತಷ್ಟು ನಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಕೊಪ್ಪಳದ ಹಿರಿಯ ಸಾಹಿತಿಗಳಾದ ಎಂ. ಮದಿರಿ, ಈಶ್ವರ್ ಹತ್ತಿ, SUCI (ಕಮ್ಯುನಿಸ್ಟ್) ಪಕ್ಷದ ರಾಜ್ಯ ನಾಯಕರಾದ ಕಾ. ರಾಮಾಂಜನಪ್ಪ ಆಲ್ದ ಳ್ಳಿ, ಎ ಐ ಎಂ ಎಸ್ ಎಸ್(AIMSS )ನ ರಾಜ್ಯ ಅಧ್ಯಕ್ಷರಾದ ಕಾ. ಮಂಜುಳಾ, ಎ ಐ ಡಿ ವೈ ಓ (AIDYO ) ನ ರಾಜ್ಯ ಕಾರ್ಯದರ್ಶಿಗಳಾದ ಸಿದ್ದಲಿಂಗ ಬಾಗೇವಾಡಿ, ಆಶಾ ಕಾರ್ಯಕರ್ತೆಯರ ರಾಜ್ಯ ಕಾರ್ಯದರ್ಶಿಗಳಾದ ಕಾ. ಡಿ. ನಾಗಲಷ್ಮಿ, ರೈತ ಕೃಷಿ ಕಾರ್ಮಿಕರ ಸಂಘಟನೆಯ (AIKKMS) ನ ರಾಜ್ಯ ಅಧ್ಯಕ್ಷರಾದ ಕಾ. ಬಿ. ಭಗವಾನ್ ರೆಡ್ಡಿ ಕೊಪ್ಪಳದ ವಿವಿಧ ಎಡ, ಪ್ರಗತಿಪರ ಮತ್ತು ರೈತ ಹಾಗೂ ಕನ್ನಡ ಪರ ಸಂಘಟನೆ ನಾಯಕರುಗಳು, ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು, ಯುವಜನರು, ಕಾರ್ಮಿಕರು ಸೇರಿ 400 ಕ್ಕೂ ಹೆಚ್ಚು ಜನರು ಉಪಸ್ಥಿತರಿದ್ದರು…
ಈ ಸಂತೋಷ ಕೂಟಕ್ಕೆ ಆಗಮಿಸಿದ್ದ ಪಕ್ಷದ ನಾಯಕರು, ಹಿತೈಷಿಗಳು, ಬೆಂಬಲಿಗರು, ನಾಗರಿಕರು ನವದಂಪತಿಗಳಿಗೆ ಶುಭ ಕೋರಿದರು.
Comments are closed.