ಕೊಪ್ಪಳದಲ್ಲಿ ಬಿಸಿಯೂಟ ತಯಾರಕರಿಂದ ಪ್ರತಿಭಟನೆ

0

Get real time updates directly on you device, subscribe now.

ಕೊಪ್ಪಳ : ಜಿಲ್ಲೆಯ ಬಿಸಿಯೂಟ ತಯಾರಕರು ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಒಕ್ಕೂಟದ (ಎಐಟಿಯುಸಿ ಸಂಯೋಜಿತ) ನೇತೃತ್ವದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
         ಕೊಪ್ಪಳದ ಇಂದಿರಾ ಕ್ಯಾಂಟೀನ್ ಮುಂಭಾಗದಿಂದ ತಹಶೀಲ್ದಾರ ಕಛೇರಿಯವರಿಗೆ ಪ್ರತಿಭಟನಾ ಮೆರವಣಿಗೆಯನ್ನು ಹೊರಟು ಶಿರಸ್ತೇದಾರ್ ಅವರ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
        ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನೂರಾರು ಬಿಸಿಯೂಟ ತಯಾರಕರು ಸರಕಾರದ ಮಹಿಳಾ ವಿರೋಧಿ ಧೋರಣೆಯನ್ನು ಖಂಡಿಸಿ, ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
2O23ರ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ 6ನೇ ಗ್ಯಾರಂಟಿ ಜಾರಿ ಮಾಡುವುದಾಗಿ ಅಂದರೆ ಬಿಸಿಯೂಟ ನೌಕರರ ಈಗಿರುವ ಗೌರವಧನವನ್ನು 6000 ರೂಪಾಯಿಗೆ ಹೆಚ್ಚಿಸುವುದಾಗಿ ಹೇಳಿದ್ದರು. ಅದು ತಕ್ಷಣ ಜಾರಿಯಾಗಲಿ.ಬೇಸಿಗೆ ರಜೆಯಲ್ಲಿ ನೌಕರರು  ಎರಡು ತಿಂಗಳು ಕೆಲಸ ಮಾಡಿದ್ದು, ಆ ಎರಡು ತಿಂಗಳ ಗೌರವಧನವನ್ನು ತಕ್ಷಣ ಪಾವತಿಸಬೇಕು.ತರಬೇತಿಗೆ ಹಾಜರಾದವರ ಪ್ರಯಾಣ ಭತ್ಯೆ ಸಮರ್ಪಕವಾಗಿ ಖಾತೆಗೆ ಜಮಾ ಆಗಿರುವುದಿಲ್ಲ. ಕೇಳಿದರೆ ಅಧಿಕಾರಿಗಳು ಹಾರಿಕೆಯ ಉತ್ತರವನ್ನು ನೀಡುತ್ತಿದ್ದಾರೆ. ಈ ಭ್ರಷ್ಟಾಚಾರ ಕುರಿತಂತೆ  ತನಿಖೆಯನ್ನು ನಡೆಸಬೇಕು. ಬೇಗ ಪ್ರಯಾಣ ಭತ್ಯೆ ಅವರವರ ಖಾತೆಗೆ ಜಮಾ ಮಾಡಬೇಕು ಈ ಮುಂಚೆ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಮುಖ್ಯ ಅಡುಗೆಯವರ ಹೆಸರಲ್ಲಿ ಜಂಟಿ ಬ್ಯಾಂಕ್ ಇತ್ತು. ಈಗ ಮುಖ್ಯ ಅಡುಗೆಯವರನ್ನು ಕೈಬಿಟ್ಟು ಎಸ್ಡಿಎಂಸಿ ಅವರನ್ನು ಸೇರಿಸಿ ಆದೇಶ ಹೊರಡಿಸಿದ್ದಾರೆ, ಈ ಹೊಸ ಆದೇಶವನ್ನು ಕೈಬಿಟ್ಟು ಸರ್ಕಾರ ಮೊದಲಿದ್ದಂತೆ ಮುಖ್ಯ ಅಡುಗೆಯವರ ಜೊತೆಗಿನ ಜಂಟಿ ಖಾತೆಯನ್ನೆ ಮುಂದುವರಿಸಬೇಕು.
ಮಕ್ಕಳ ಸಂಖ್ಯೆಗೆ ಅನುಗುಣವಾಗಿ ನೇಮಕಾತಿ ನಡೆಯಬೇಕು. ಬಳಸಲು ಯೋಗ್ಯವಲ್ಲದ ಒಲೆ, ಅಡುಗೆ ಸಾಮಾಗ್ರಿಗಳನ್ನು ತಕ್ಷಣ ಬದಲಾಯಿಸಲು ಕ್ರಮವಹಿಸಬೇಕು.
ನೌಕರರಿಂದ ಅಡುಗೆ ಕೆಲಸವನ್ನು ಬಿಟ್ಟು ಬೇರೆ ಯಾವುದೇ ಕೆಲಸವನ್ನು ಹಚ್ಚಬಾರದು.ಅಡುಗೆಗೆ ಬಳಸಲು ಯೊಗ್ಯವಾದ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳು ವಿತರಣೆ ಆಗಬೇಕು. ಆಹಾರ( ರೇಷನ್) ಸಾಮಗ್ರಿಗಳನ್ನು ವಿತರಿಸುವ ವೇಳೆ ತೂಕ ಮಾಡಬೇಕು.ಬಿಸಿಯೂಟ ತಯಾರಕರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ. ನೆಪಗಳನ್ನು ಹುಡುಕಿ ಬಿಸಿಯೂಟ ತಯಾರಕರನ್ನು ಕೆಲಸದಿಂದ ತಗೆದು ಹಾಕುತ್ತಿದ್ದಾರೆ. ಇದು ನಿಲ್ಲಬೇಕು. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಿಜಕಲ್ಲ ಶಾಲೆಯ ಬಿಸಿಯೂಟ ನೌಕರರನ್ನು ಸರಿಯಾದ ಕಾರಣವಿಲ್ಲದೆ, ವಿಚಾರಣೆಯನ್ನು ನಡೆಸದೆ, ನೌಕರರ  ಅಭಿಪ್ರಾಯಕ್ಕೂ ಅವಕಾಶವನ್ನು ನೀಡದೆ  ನಿಯಮಬಾಹಿರವಾಗಿ ಕೆಲಸದಿಂದ ತೆಗೆದು ಹಾಕಲಾಗಿದೆ. ಕಾರಣ ಅವರನ್ನು ಮತ್ತೆ ಕೆಲಸಕ್ಕೆ ಹಾಜರಾಗಲು ಕ್ರಮವಹಿಸಬೇಕು.ಸೇವಾ ಭದ್ರತೆಯನ್ನು ಒದಗಿಸಬೇಕು.ಈ ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಅನಿವಾರ್ಯವಾದರೆ ಮತ್ತೆ ಬೀದಿಗಿಳಿದು ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.
        ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಒಕ್ಕೂಟದ ಹಿರಿಯ ಮುಖಂಡ ಬಸವರಾಜ್ ಶೀಲವಂತರ್. ಅಧ್ಯಕ್ಷೆ ಪುಷ್ಪಾ ಮೇಸ್ತ್ರಿ, ಮುಖಂಡ ಗಾಳೆಪ್ಪ ಮುಂಗೋಲಿ, ಸಂಜಯ್ ದಾಸ್ ಕೌಜಗೇರಿ, ರಾಮಲಿಂಗಾ ಶಾಸ್ತ್ರಿ ಮಠ, ಮುತ್ತು ಹಡಪದ, ಮಕಬೂಲ್ ರಾಯಚೂರು, ಶೇಖಪ್ಪ ಬೇಟಗೇರಿ, ಸುಮಂಗಲಾ ಕೊತಬಾಳ, ನೀಲಮ್ಮ ಕಾರಟಗಿ, ತಾಹೇರಾ ಗಂಗಾವತಿ, ರೇಣುಕಾ ಕಾರಟಗಿ, ನಿರ್ಮಲಾ, ದುರ್ಗಮ್ಮ, ಶರಣಮ್ಮ ಮುಂತಾದವರು ಈ ಹೋರಾಟದ ನೇತೃತ್ವ ವಹಿಸಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!
%d bloggers like this: