ಸೆ.17 ರಂದು ಸಂಗನಹಾಲ ಚಲೋ : ಬಸವರಾಜ್ ಸೂಳಿಬಾವಿ
ಸಮಾನ ಬದುಕಿನತ್ತ ಅರಿವಿನ ಜಾಥಾ’
ಕೊಪ್ಪಳ : ಕೊಪ್ಪಳ ಜಿಲ್ಲಾ ದಲಿತ ದಮನಿತರ ದೌರ್ಜನ್ಯಗಳ ವಿರೋಧಿ ಒಕ್ಕೂಟ,ದಲಿತ ದಮನಿತರ ಮೇಲಿನ ದೌರ್ಜನ್ಯ ವಿರೋಧಿಸಿ ಸಂಗನಹಾಲದ ದಲಿತ ಯುವಕ ಯಮನಪ್ಪನ ಕೊಲೆ ಖಂಡಿಸಿ ಸೆಪ್ಟೆಂಬರ 17 ರಿಂದ ‘ಸಮಾನ ಬದುಕಿನತ್ತ ಅರಿವಿನ ಜಾಥಾ’ ಕೊಪ್ಪಳ ಜಿಲ್ಲಾಡಳಿತದ ಕಚೇರಿಯಿಂದ ಸಂಗನಹಾಲ ತನಕ ‘ಸಂಗನಹಾಲ ಚಲೋ ಮತ್ತು
ಸೆಪ್ಟೆಂಬರ 18 ರಂದು ಸಂಗನಹಾಲದಲ್ಲಿ ಸೌಹಾರ್ದತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂಗನಹಾಲ ಚಲೋ ಸಂಚಾಲಕರಾದ ಬಸವರಾಜ ಸೂಳಿಬಾವಿ ಹೇಳಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ, ಉದ್ದೇಶಿಸಿ ಮಾತನಾಡಿ ಕೊಪ್ಪಳ ಜಿಲ್ಲೆಯನ್ನು ದಲಿತರ ದೌರ್ಜನ್ಯ ಪೀಡಿತ ಜಿಲ್ಲೆಯೆಂದು ಘೋಷಿಸಬೇಕು. ಸರ್ಕಾರ ಜಿಲ್ಲೆಯ ಈ ಸಮುದಾಯಗಳಿಗೆ ಸೂಕ್ತ ರಕ್ಷಣೆ ಒದಗಿಸುವ ವ್ವವಸ್ಥೆ ಮಾಡಿ ಸ್ವತಂತ್ರವಾಗಿ ಬದುಕಲು ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಕೆಲಸ ಮಾಡಬೇಕು,ಕಲ್ಯಾಣ ಕರ್ನಾಟಕವಾಗಲು ಈ ಭಾಗದ ನೆಲವಿನ್ನೂ ಸಿದ್ಧವಾಗಿಲ್ಲ. ಅದಕ್ಕೆ ತಕ್ಕುದಾದ ಜನರ ಮನಸ್ಥಿತಿ ರೂಪಿಸಲು ಸರ್ಕಾರಗಳು ಕೆಲಸ ಮಾಡಿರುವುದಿಲ್ಲ. ಮತ ರಾಜಕಾರಣಕ್ಕಾಗಿ ಘೋಷಣೆ ಮಾಡಿದ ಕಲ್ಯಾಣ ಕರ್ನಾಟಕ ಹೆಸರು ಹಿಂಪಡೆದು ಚಾರಿತ್ರಿಕವಾಗಿ ಸರಿಯಾಗಿರುವ “ಹೈದರಾಬಾದ ಕರ್ನಾಟಕ” ಹೆಸರನ್ನು ಪುನರ್ ಘೋಷಣೆಯಾಗಬೇಕು. ಆ ಹೆಸರು ಈ ಭಾಗದ ಜನರ ವಿಮೋಚನೆಯ ಹೋರಾಟದ ಜತೆಗೆ ತಳಕು ಹಾಕಿಕೊಂಡಿದೆ,ಅಸ್ಪೃಶ್ಯತೆಯ ನಿವಾರಣೆಗೆ ಶಾಶ್ವತ ಪರಿಹಾರವನ್ನು ಹುಡುಕಬೇಕಾಗಿದೆ.ಅದಕ್ಕೆ ಕಾನೂನು ತಿದ್ದುಪಡಿಗಳನ್ನು ತರಬೇಕು, ಕೊಪ್ಪಳ ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಕಳೆದ 10 ವರ್ಷಗಳಿಂದ ಬೀಡುಬಿಟ್ಟಿರುವ ಕೆಳಹಂತದ ಅಧಿಕಾರಿಗಳಾದ ರೈಟರ್,ಜಮಾದಾರ,ಪೇದೆಗಳನ್ನು ಬೇರೆ ಜಿಲ್ಲೆಗಳಿಗೆ ವರ್ಗ ಮಾಡಬೇಕು, ದಲಿತರ ಮೇಲೆ ಹಲ್ಲೆ,ಗಲಭೆಗಳು ನಡೆದಾಗ ಹಲ್ಲೆಗೊಳಗಾದವರ ಮೇಲೆ ಪ್ರತಿ ದೂರು ( ಕೌಂಟರ್ ಕೇಸ್) ದಾಖಲಿಸುವ ಪ್ರವೃತ್ತಿ ನಿಲ್ಲಬೇಕು ಹಾಗೂ ಈ ಹಿಂದೆ ದಾಖಲಾಗಿರುವ ಎಲ್ಲಾ ಕೌಂಟರ್ ಕೇಸ್ ಗಳನ್ನು ಸರಕಾರ ಹಿಂಪಡೆಯಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಟಿ. ರತ್ನಾಕರ್ ,ಅಲ್ಲಮಪ್ರಭು ಬೆಟ್ಟದೂರು,ಡಿ.ಎಚ್ ಪೂಜಾರ್ ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಬಸವರಾಜ್ ಶೀಲವಂತರ್,ಮುದ್ದಣ್ಣ ಸಂಗನಹಾಲ, ಶುಕರಾಜ್ ತಾಳಿಕೇರಿ,ವೆಂಕಟೇಶ್ ,ಹನುಮೇಶ್,ಸಂಜಯ್ ದಾಸ್ , ಮಹಾಂತೇಶ್ ಕೊತಬಾಳ,ಶಿವಪ್ಪ ಹಡಪದ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Comments are closed.