ಪಿಎಸ್‌ಐ ಪರುಶುರಾಮ ಕುಟುಂಬಕ್ಕೆ ಆರ್ಥಿಕ ನೆರವು, ಸರ್ಕಾರಿ ಉದ್ಯೋಗ: ಡಾ ಜಿ.ಪರಮೇಶ್ವರ
ಮೃತ ಪೊಲೀಸ್ ಅಧಿಕಾರಿ ನಿವಾಸಕ್ಕೆ ಗೃಹ ಸಚಿವರ ಭೇಟಿ: ಕುಟುಂಬಕ್ಕೆ ಸಾಂತ್ವನ
ಕುಟುಂಬದವರಿಗೆ ಭೇಟಿ ಮಾಡಿ ನಂತರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಸಚಿವರು, ಮೃತ ಪಿ.ಎಸ್.ಐ ಪರುಶುರಾಮ್ ರವರು ಓರ್ವ ದಕ್ಷ ಪೊಲೀಸ್ ಅಧಿಕಾರಿಯಾಗಿದ್ದರು. ತುಂಬಾ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ ವಿವಿಧ ಪರೀಕ್ಷೆಗಳನ್ನು ಬರೆದು, ಕಾನೂನು ರಕ್ಷಣೆ ಹಾಗೂ ಜನ ಸೇವೆಗಾಗಿ ಪೊಲೀಸ್ ವೃತ್ತಿಯನ್ನು ಆಯ್ಕೆ ಮಾಡಿಕೊಂಡು, 2017ರಲ್ಲಿ ಪೊಲೀಸ್ ಸೇವೆಗೆ ಸೇರ್ಪಡೆಯಾಗಿದ್ದರು. ಕುಟುಂಬದ ಬೆನ್ನೆಲುಬಾಗಿದ್ದ ಪರುಶುರಾಮ್ ನಿಧನದಿಂದಾಗಿ ಅವರ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಇಂತಹ ಪೊಲೀಸ್ ಅಧಿಕಾರಿಯನ್ನು ಕಳೆದುಕೊಂಡ ಪೊಲೀಸ್ ಇಲಾಖೆಗೂ ಸಹ ಅಪಾರ ನಷ್ಟ ಉಂಟಾಗಿದ್ದು, ಮೃತರ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ಸೂಚಿಸುತ್ತೇನೆ ಎಂದರು.
ಪರುಶುರಾಮ್ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ 50 ಲಕ್ಷ ರೂ. ಆರ್ಥಿಕ ನೆರವು ನೀಡಲು ಮುಖ್ಯಮಂತ್ರಿಗಳೊAದಿಗೆ ಮಾತನಾಡಿ ಕೂಡಲೇ ಕ್ರಮಕೈಗೊಳ್ಳಲಾಗುವುದು. ಇದಲ್ಲದೆ ಮೃತರ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು. ಶ್ವೇತಾ ಅವರು ಬಿಇ ಎಲೆಕ್ಟ್ರಾನಿಕ್ ಪದವಿ ಹೊಂದಿರುವುದರಿಂದ ಜೆಸ್ಕಾಂ ಅಥವಾ ರಾಯಚೂರು ವಿಶ್ವವಿದ್ಯಾಲಯದಲ್ಲಿ ಉದ್ಯೋಗ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸರ್ಕಾರದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾದ ಆರ್.ಹಿತೇಂದ್ರ, ಬಳ್ಳಾರಿ ವಲಯದ ಪೊಲೀಸ್ ಮಹಾ ನಿರೀಕ್ಷಕರಾದ ಲೋಕೇಶ್ ಕುಮಾರ್, ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಮ್ ಎಲ್ ಅರಸಿದ್ದಿ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಆರ್.ಹೇಮಂತ್ ಕುಮಾರ್, ಗಂಗಾವತಿ ಡಿವೈಎಸ್ಪಿ ಸಿದ್ದನಗೌಡ ಪಾಟೀಲ್, ಕಾರಟಗಿ ಪೊಲೀಸ್ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Comments are closed.