ಸಫಾಯಿ ಕರ್ಮಚಾರಿಗಳಿಗೆ ಅಗತ್ಯ ಮಾಹಿತಿ ಹೊಂದಿರುವ ಗುರುತಿನ ಚೀಟಿ ನೀಡಿ : ಡಿಸಿ ನಲಿನ್ ಅತುಲ್
ಸಫಾಯಿ ಕರ್ಮಚಾರಿಗಳ ಜಿಲ್ಲಾ ಮಟ್ಟದ ವಿಜಿಲೆನ್ಸ್ ಕಮಿಟಿ ಸಭೆ
ಸಫಾಯಿ ಕರ್ಮಚಾರಿಗಳಿಗಾಗಿ ಇರುವ ಸರ್ಕಾರದ ವಿವಿಧ ಸವಲತ್ತು ಪಡೆಯಲು ಸಫಾಯಿ ಕರ್ಮಚಾರಿ/ಪೌರ ಕಾರ್ಮಿಕರಿಗೆ ಗುರುತಿನ ಚೀಟಿ ಅವಶ್ಯಕವಾಗಿದೆ. ಆದ್ದರಿಂದ ಅವರಿಗೆ ಮೂಲ ಹಾಗೂ ಅವಶ್ಯಕ ಮಾಹಿತಿ ಇರುವ, ಭಾವಚಿತ್ರ ಹೊಂದಿರುವ ಗುರುತಿನ ಚೀಟಿಯನ್ನು ನಗರ ಸ್ಥಳೀಯ ಸಂಸ್ಥೆಗಳು ವಿತರಿಸಬೇಕು. ಪೌರ ಕಾರ್ಮಿಕರಿಗೆ ನಿಯಮಿತವಾಗಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಿ, ಆರೋಗ್ಯ ತಪಾಸಣೆ ಮಾಡಿಸಬೇಕು. ಇದರೊಂದಿಗೆ ಕಾರ್ಯಾಗಾರಗಳನ್ನು ಆಯೋಜಿಸಿ ಆರೋಗ್ಯ ರಕ್ಷಣೆಯ ಕ್ರಮಗಳು, ನಿಯಮಿತ ತಪಾಸಣೆಯ ಮಹತ್ವವನ್ನು ಪೌರಕಾರ್ಮಿಕರಿಗೆ ತಿಳಿಸಬೇಕು. ಗುಣಮಟ್ಟದ ಕೈಗವಸು, ಬೂಟುಗಳು, ಮಾಸ್ಕ್ ಸೇರಿದಂತೆ ನಿಯಮಾನುಸಾರ ರಕ್ಷಣಾ ಪರಿಕರಗಳನ್ನು ಒದಗಿಸಬೇಕು. ಪೌರ ಕಾರ್ಮಿಕರ ಮಕ್ಕಳಿಗೆ ವಸತಿ ನಿಲಯಗಳಲ್ಲಿ ವಿಶೇಷ ಮೀಸಲಾತಿ, ಪ್ರೋತ್ಸಾಹಧನ ಮುಂತಾದ ವಿದ್ಯಾರ್ಥಿ ಸಂಬAಧಿತ ಸೌಲಭ್ಯಗಳ ಬಗ್ಗೆ ತಿಳಿದಿರುವುದಿಲ್ಲ. ಈ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ತಿಳಿಸಿದರು.
ಪೌರ ಕಾರ್ಮಿಕರು ನಿವೃತ್ತಿ ಹೊಂದಿದ ನಂತರ ಪಿಂಚಣಿಗಾಗಿ ತಿಂಗಳುಗಟ್ಟಲೆ ಕಾಯುತ್ತಾರೆ. ಇದನ್ನು ತಪ್ಪಿಸಲು ಅವರು ನಿವೃತ್ತಿಯಾಗುವ ಮೂರರಿಂದ ನಾಲ್ಕು ತಿಂಗಳುಗಳ ಮುಂಚಿತವಾಗಿ ಅವರ ಸೇವಾ ದಾಖಲೆಗಳ ಪರಿಶೀಲನೆ, ಪಿಂಚಣಿ ದಾಖಲೆಗಳನ್ನು ಸಿದ್ದಪಡಿಸಿ, ನಿವೃತ್ತಿ ದಿನವೇ ಪಿಂಚಣಿ ಆದೇಶವನ್ನು ನೀಡುವಂತೆ ಕ್ರಮ ವಹಿಸಿ. ಅನಗತ್ಯ ವಿಳಂಬ ಮಾಡಬೇಡಿ. ಜಿಲ್ಲೆಯ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರಿಗೆ ಸರ್ಕಾರದ ವಸತಿ ಯೋಜನೆಯಡಿ ನಿವೇಶನ ಒದಗಿಸಿ, ಮನೆ ನಿರ್ಮಾಣಕ್ಕೆ ಅನುಕೂಲ ಕಲ್ಪಿಸಿಕೊಡಿ. ಕಾರ್ಮಿಕರು ಕಾರ್ಯನಿರ್ವಹಿಸುವ ಸ್ಥಳಕ್ಕೆ ನಿವೇಶನ ಹತ್ತಿರದಲ್ಲಿರುವಂತೆ ಜಾಗೆಯನ್ನು ಗುರುತಿಸಿ ಹಂಚಿಕೆ ಮಾಡಿ. ಬೆಳಗಿನ ಉಪಹಾರವನ್ನು ಕಡ್ಡಾಯವಾಗಿ ನೀಡಬೇಕು. ಯಾವುದೇ ಸಮಸ್ಯೆಯೊಂದಿಗೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅವರೊಂದಿಗೆ ಸೌಜನ್ಯದಿಂದ ವರ್ತಿಸಿ, ಅವರ ಸಮಸ್ಯೆಗೆ ಸ್ಪಂದಿಸಬೇಕು. ನಿಯಮಗಳ ಚೌಕಟ್ಟಿನಲ್ಲಿ ಲಭ್ಯವಿರುವ, ನೀಡಬಹುದಾದ ಎಲ್ಲ ಸೌಲಭ್ಯಗಳನ್ನು ಅಧಿಕಾರಿಗಳು ಪೌರ ಕಾರ್ಮಿಕರಿಗೆ ಒದಗಿಸಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಅಲೆಮಾರಿ/ಅರೆ ಅಲೆಮಾರಿ ಜನಾಂಗದ ಫಲಾನುಭವಿಗಳಿಗೆ ವಸತಿ ಯೋಜನೆಯಡಿ ನಿವೇಶನ ಹಂಚಿಕೆ ಮಾಡುವ ಸಲುವಾಗಿ ತಾಲ್ಲೂಕುವಾರು ಅರ್ಜಿಗಳನ್ನು ಆಹ್ವಾನಿಸಿದಾಗ, ಸಂಬAಧಿಸಿದ ತಾಲ್ಲೂಕಿನ ನಗರ ಸ್ಥಳೀಯ ಸಂಸ್ಥೆಗಳು, ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಲು, ಕಾರ್ಯ ನಿರ್ವಾಹಕ ಅಧಿಕಾರಿಗಳು ಫಲಾನುಭವಿಯ ನೈಜತೆಯ ಬಗ್ಗೆ ಕಡ್ಡಾಯವಾಗಿ ಪರಿಶೀಲನೆ ನಡೆಸಿ, ಅರ್ಹ ಫಲಾನುಭವಿಯ ಪಟ್ಟಿಯನ್ನು ಸಿದ್ದಪಡಿಸಬೇಕು. ಇದು ಮಾತ್ರವಲ್ಲದೆ ಜಿಲ್ಲೆಯ ಯಾವುದೇ ಯೋಜನೆಯ ಫಲಾನುಭವಿಯ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸುವಾಗ ಅಧಿಕಾರಿಗಳು ಫಲಾನುಭವಿಯ ನೈಜತೆಯನ್ನು ಕಡ್ಡಾಯವಾಗಿ ಪರಿಶೀಲಿಸಿ, ಅರ್ಹ ಫಲಾನುಭವಿಗೆ ಮಾತ್ರ ಯೋಜನೆಯ ಲಾಭ ತಲುಪಿಸಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ತಿಳಿಸಿದರು.
ಖಾಯಂ ನೇಮಕಾತಿ ಆದೇಶ ಪ್ರತಿ ವಿತರಣೆ :
ಜಿಲ್ಲೆಯ ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಯಂ ನೇಮಕಾತಿ ಹೊಂದಿದ ಪೌರ ಕಾರ್ಮಿಕರಿಗೆ ಸಾಂಕೇತಿಕವಾಗಿ ಖಾಯಂ ನೇಮಕಾತಿ ಆದೇಶ ಪತ್ರವನ್ನು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ವಿತರಣೆ ಮಾಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ರತ್ನಂ ಪಾಂಡೆಯ, ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಕಾವ್ಯಾರಾಣಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ರಾಜು ತಳವಾರ, ಸಫಾಯಿ ಕರ್ಮಚಾರಿಗಳ ಜಿಲ್ಲಾ ಮಟ್ಟದ ವಿಜಿಲೆನ್ಸ್ ಕಮಿಟಿಯ ಸದಸ್ಯರಾದ ರಗಡಪ್ಪ ಹುಲಿಹೈದರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರರು ಉಪಸ್ಥಿತರಿದ್ದರು.
Comments are closed.