ತಾಲ್ಲೂಕಿನಲ್ಲಿ 3 ಸರ್ಕಾರಿ ಇಂಟರ್ ನ್ಯಾಷ್ನಲ್ ಮಾಡೆಲ್ ಶಾಲೆಗಳ ನಿರ್ಮಾಣಕ್ಕೆ ಕ್ರಮ: ಕೆ.ರಾಘವೇಂದ್ರ ಹಿಟ್ನಾಳ

Get real time updates directly on you device, subscribe now.

* ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಸಿ.ಬಿ.ಎಸ್.ಸಿ ವಸತಿ ಶಾಲೆ, ಪದವಿ ಪೂರ್ವ ಕಾಲೇಜು ಲೋಕಾರ್ಪಣೆ
* ಲಿಂಗದಳ್ಳಿಯಲ್ಲಿ ರೂ.25 ಕೋಟಿ ವೆಚ್ಚದ ಸುಸಜ್ಜಿತ ಕಟ್ಟಡ ನಿರ್ಮಾಣ: 560 ವಿದ್ಯಾರ್ಥಿಗಳಿಗೆ ಅನುಕೂಲ


ಹಿಟ್ನಾಳ, ಭಾಗ್ಯನಗರ ಮತ್ತು ಕೊಪ್ಪಳದ ಶಾಸಕರ ಮಾದರಿ ಶಾಲೆ ಸೇರಿ ತಾಲ್ಲೂಕಿನಲ್ಲಿ ಮೂರು ಕಡೆ ಪ್ರಾಥಮಿಕ, ಪ್ರೌಢ ಹಾಗೂ ಪಿಯು ಕಾಲೇಜು ಒಳಗೊಂಡಂತೆ ರೂ. 12 ಕೋಟಿ ರೂ ವೆಚ್ಚದಲ್ಲಿ ಸರ್ಕಾರಿ ಇಂಟರ್ ನ್ಯಾಷ್ನಲ್ ಮಾಡೆಲ್ ಶಾಲೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಕೊಪ್ಪಳ ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ “ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಸಿ.ಬಿ.ಎಸ್.ಸಿ ವಸತಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜು” ಕಟ್ಟಡವನ್ನು ಜುಲೈ 03ರಂದು ರಿಬ್ಬನ್ ಕತ್ತರಿಸುವುದರ ಮೂಲಕ ಲೋಕಾರ್ಪಣೆಗೊಳಿಸಿ, ಬಳಿಕ ನಡೆದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಲಿಂಗದಹಳ್ಳಿಯಲ್ಲಿಂದು ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಸಿ.ಬಿ.ಎಸ್.ಸಿ ವಸತಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ಉದ್ಘಾಟನೆಯಾಗಿದ್ದು, ಸಂತಸ ಮತ್ತು ಹರ್ಷದ ವಿಚಾರವಾಗಿದೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು 2015-16ನೇ ಸಾಲಿನ ಬಜೆಟ್‌ನಲ್ಲಿ ಎರಡು ಡಾ.ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಗಳನ್ನು ಘೋಷಣೆ ಮಾಡಿದ್ದು, ಇದರಲ್ಲಿ ಒಂದು ಶಾಲೆಯನ್ನು ಕೊಪ್ಪಳ ಕ್ಷೇತ್ರಕ್ಕೆ ನೀಡುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಅದರಂತೆ ಈ ವಸತಿ ಶಾಲೆಯನ್ನು ಕೊಪ್ಪಳಕ್ಕೆ ಮಂಜೂರಿಸಿ, ಕಾಮಗಾರಿ ಪ್ರಾರಂಭಿಸಿ, ಸಿ.ಬಿ.ಎಸ್.ಸಿ ಪಠ್ಯಕ್ರಮದ 6 ರಿಂದ 12ನೇ ತರಗತಿವರೆಗೆ ಮಕ್ಕಳ ಶೈಕ್ಷಣಿಕ ಅನುಕೂಲಕ್ಕೆ ಸುಸಜ್ಜಿತವಾದ ಕಟ್ಟಡವನ್ನು ಇಂದು ಲೋಕಾರ್ಪಣೆಗೊಳಿಸಲಾಗಿದೆ. ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಅನೇಕ ದೊಡ್ಡ-ದೊಡ್ಡ ಯೋಜನೆಗಳನ್ನು ತರುವಂತಹ ಕೆಲಸವಾಗಿದ್ದು, ಶೈಕ್ಷಣಿಕ ರಂಗದಲ್ಲಿ ಮೊರಾರ್ಜಿ ಶಾಲೆಗಳು, ಅಬ್ದುಲ್ ಕಲಾಂ ವಸತಿ ಶಾಲೆಗಳು ಹಾಗೂ ಇತರ ಹಾಸ್ಟೆಲ್‌ಗಳಿಗೆ ಈ ವರ್ಷ ರೂ. 60 ಕೋಟಿಗಳನ್ನು ಕೊಪ್ಪಳ ಕ್ಷೇತ್ರಕ್ಕೆ ತರುವಂತಹ ಕೆಲಸವಾಗಿದೆ. ಇದರಿಂದ ಕೆವಲ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಅಲ್ಲದೆ ಎಲ್ಲಾ ಜಾತಿಯ ಅರ್ಹ ವಿದ್ಯಾರ್ಥಿಗಳು ಶಿಕ್ಷಣ ಪಡೆಯಬಹುದಾಗಿದೆ ಎಂದು ಹೇಳಿದರು.
ಕೊಪಳದಲ್ಲಿ ವೈದ್ಯಕೀಯ ಕಾಲೇಜು ಅಷ್ಟೇ ಅಲ್ಲದೇ ರೂ. 192 ಕೋಟಿ ವೆಚ್ಚದಲ್ಲಿ 450 ಹಾಸಿಗೆಯ ಆಸ್ಪತ್ರೆಯ ಕಟ್ಟಡವನ್ನು ಕಟ್ಟುವಂತಹ ಕೆಲಸವಾಗಿದ್ದು, ಶೀಘ್ರ ಆಸ್ಪತ್ರೆ ಪ್ರಾರಂಭಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಕೊಪ್ಪಳಕ್ಕೆ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯನ್ನು ಕೊಡಲೇಬೇಕೆಂದು ಮುಖ್ಯಮಂತ್ರಿಗಳ ಬಳಿ ಪ್ರಸ್ತಾವನೆ ಇಡಲಾಗಿದೆ. ಕೊಪ್ಪಳ ವಿಧಾನಸಭಾ ಕ್ಷೇತ್ರದ 104 ಗ್ರಾಮಗಳಲ್ಲಿ 24*7 ಶುದ್ಧ ಕುಡಿಯುವ ನೀರು ಒದಗಿಸಲು ರೂ. 245 ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭಿಸಲಾಗಿದ್ದು, ಭಾಗ್ಯನಗರ-ಕೊಪ್ಪಳಕ್ಕೆ ಕುಡಿಯುವ ನೀರಿಗಾಗಿ 145 ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭಿಸಲಾಗುತ್ತಿದೆ. ನೀರಾವರಿಗಾಗಿ ರೂ. 780 ಕೋಟಿ ಅನುದಾನದಲ್ಲಿ ಕಾಮಗಾರಿಯನ್ನು ರೂಪಿಸಲಾಗುತ್ತಿದೆ. ಅಳವಂಡಿ-ಬೆಟಗೇರಿ ಹಾಗೂ ಬಹದ್ದೂರ್‌ಬಂಡಿ-ನವಕಲಬಂಡಿ ನೀರಾವರಿಗಾಗಿ ಈ ವರ್ಷದ ಬಜೆಟ್‌ನಲ್ಲಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಏತ ನೀರಾವರಿಯಿಂದಾಗಿ ಕೊಪ್ಪಳ ಕ್ಷೇತ್ರವು ನೀರಾವರಿಯಾಗಲಿದೆ. ಲಿಂಗದಹಳ್ಳಿ ಮತ್ತು ಬೆವಿನಹಳ್ಳಿ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಸೇರಿದಂತೆ ಇತರ ಕಾರ್ಯಕ್ರಮಗಳಿಗಾಗಿ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಮುಂದಿನ ದಿನಮಾನಗಳಲ್ಲಿ ಸರ್ಕಾರದಿಂದ ಅನುದಾನವನ್ನು ತಂದು ಗ್ರಾಮಗಳ ಅಭಿವೃದ್ಧಿಗಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮಾಜಿ ಸಂಸದರಾದ ಕರಡಿ ಸಂಗಣ್ಣ ಅವರು ಮಾತನಾಡಿ, ಲಿಂಗದಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಸಿ.ಬಿ.ಎಸ್.ಸಿ ವಸತಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ಕಟ್ಟಡವು ಉತ್ತಮ ಗುಣಮಟ್ಟದಿಂದ ನಿರ್ಮಿಸಲಾಗಿದ್ದು, ಸಂತಸ ತಂದಿದೆ. ಈ ವಸತಿ ಶಾಲೆಯನ್ನು ಕೊಪ್ಪಳ ಕ್ಷೇತ್ರಕ್ಕೆ ತಂದಿರುವ ಶಾಸಕರ ಕಾರ್ಯವು ಶ್ಲ್ಯಾಘನೀಯವಾಗಿದೆ. ಮಕ್ಕಳಿಗೆ ಬದುಕನ್ನು ಕಟ್ಟಿಕೊಳ್ಳಲು ಶಾಲೆಗಳು ಪೂರಕವಾಗಿವೆ. ವಸತಿ ಶಾಲೆಗಳು, ವಸತಿ ನಿಲಯಗಳು ಸೇರಿ ಕೊಪ್ಪಳ ಜಿಲ್ಲೆಗೆ ಹೊಸದಾಗಿ ಒಟ್ಟು 13 ಹೊಸ ವಸತಿ ಸಂಸ್ಥೆಗಳು ಮಂಜೂರಾಗಿದ್ದು, ಇದರಲ್ಲಿ ಕೊಪ್ಪಳ ಕ್ಷೇತ್ರಕ್ಕೆ 6 ಸಂಸ್ಥೆಗಳು ಮಂಜೂರಾಗಿರುವುದಕ್ಕೆ ಶಾಸಕರು ಶ್ರಮಿಸಿದ್ದಾರೆ. ತಾಂತ್ರಿಕ ಶಿಕ್ಷಣವು ಸಹ ಅತ್ಯಂತ ಮುಖ್ಯವಾಗಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಜಿ.ಟಿ.ಟಿ.ಸಿ ಕಾಲೇಜು ಕಲಬುರಗಿಯ ಜೊತೆಗೆ ಕೊಪ್ಪಳದಲ್ಲಿಯೂ ಇರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳಾದ ಸುರೇಶ ಕೊಕರೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಸಿ.ಬಿ.ಎಸ್.ಸಿ ವಸತಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ಕಟ್ಟಡವನ್ನು ರೂ. 25 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಪ್ರಸ್ತುತ ವಿದ್ಯಾರ್ಥಿಗಳ ಹಾಜರಾತಿ ಸಂಖ್ಯೆ 560 ಆಗಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಅಲ್ಪಸಂಖ್ಯಾತರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಮುಖ್ಯವಾಗಿ ಶೈಕ್ಷಣಿಕ ಹಾಗೂ ಸಮುದಾಯ ಕಾರ್ಯಕ್ರಮಗಳು, ವಿದ್ಯಾರ್ಥಿ ವೇತನದಂತಹ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ. ಜಿಲ್ಲೆಯಲ್ಲಿ 7 ಮೌಲಾನ ಆಜಾದ್ ಮಾದಿರಿ ಶಾಲೆಗಳು, 9 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಮತ್ತು 10 ಕಾಲೇಜುಗಳು ಹಾಗೂ ಹಾಸ್ಟೆಲ್‌ಗಳಿವೆ. ವಸತಿ ಶಾಲೆ ಸೇರಿದಂತೆ ಈ ವರ್ಷ ಜಿಲ್ಲೆಗೆ 13 ಹೊಸ ಶಿಕ್ಷಣ ಸಂಸ್ಥೆಗಳು ಮಂಜೂರಾಗಿದ್ದು, ಕೊಪ್ಪಳ ತಾಲ್ಲೂಕಿಗೆ ಒಂದು ಮೊರಾರ್ಜಿ ದೇಸಾಯಿ ವಸತಿ ಶಾಲೆ, 3 ಹಾಸ್ಟೆಲ್‌ಗಳು, 2 ಮೌಲಾನಾ ಆಜಾದ್ ಮಾದರಿ ಶಾಲೆಗಳನ್ನು ಮಂಜೂರು ಮಾಡಲಾಗಿದೆ. ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗಾಗಿ ಸರ್ಕಾರವು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ಸಮುದಾಯದವರು ಈ ಎಲ್ಲಾ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಕೊಪ್ಪಳ ತಾಲ್ಲೂಕ ಗ್ಯಾರೆಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಬಾಲಚಂದ್ರನ್, ಬೆವಿನಾಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ತಿಪ್ಪವ್ವ ಶಿವಪ್ಪ ನಾಯಕ, ಉಪಾಧ್ಯಕ್ಷರಾದ ಮುರಳಿ ಬಿಸರಳ್ಳಿ, ಸದಸ್ಯರಾದ ಅಂಜನಪ್ಪ ಲಿಂಗದಹಳ್ಳಿ, ಕೊಪ್ಪಳ ತಹಶೀಲ್ದಾರರಾದ ವಿಠ್ಠಲ್ ಚೌಗಲಾ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ದುಂಡಪ್ಪ ತುರಾತಿ, ಮಾಜಿ ಜಿಪಂ ಅಧ್ಯಕ್ಷರಾದ ಎಸ್.ಬಿ.ನಾಗರಳ್ಳಿ ಹಾಗೂ ಟಿ.ಜರ್ನಾಧನ ಹುಲಿಗಿ ಸೇರಿದಂತೆ ಹಲವು ಗಣ್ಯರು, ಜನಪ್ರತಿನಿಧಿಗಳು,  ಉಪಸ್ಥಿತರಿದ್ದರು.
ಉಪನ್ಯಾಸಕರಾದ ನಾಗಭೂಷಣ ಅವರು ಕಾರ್ಯಕ್ರಮ ನಿರೂಪಿಸಿದರು. ಪ್ರಾಂಶುಪಾಲರಾದ ದೊಡ್ಡಬಸಪ್ಪ ವಾಲ್ಮೀಕಿ ಅವರು ಸ್ವಾಗತಿಸಿದರೆ, ಬಾಲರಾಜ ಮುಗಳಕರ್ ಅವರು ವಂದಿಸಿದರು.

Get real time updates directly on you device, subscribe now.

Comments are closed.

error: Content is protected !!