ಅವಸರದಲ್ಲಿ ಉದ್ಘಾಟಿಸಿದ್ದಕ್ಕೆ ಅಯೋಧ್ಯೆ ಶ್ರೀರಾಮ ಮಂದಿರ ಸೋರುತ್ತಿದೆ; ಸಚಿವ ಶಿವರಾಜ್ ತಂಗಡಗಿ
ಕೊಪ್ಪಳ: ಜೂ.25
ಬಿಜೆಪಿಯವರು ಲೋಕಸಭಾ ಚುನಾವಣೆಗಾಗಿ ಅವಸರದಲ್ಲಿ ಅಯೋಧ್ಯೆಯಲ್ಲಿ ರಾಮಂದಿರ ನಿರ್ಮಿಸಿ ಉದ್ಘಾಟನೆ ಮಾಡಿದ್ದರಿಂದ ಈಗ ಸೋರುವ ಪರಿಸ್ಥಿತಿ ಬಂದಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರೂ ಆದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಗಂಗಾವತಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ದೇವಸ್ಥಾನ ಕಟ್ಟಿಸಲಿ. ದೇವರ ಬಗ್ಗೆ ನಮಗೂ ಗೌರವ, ಭಕ್ತಿ ಇದೆ. ಆದರೆ, ಶ್ರೀರಾಮ, ಆಂಜನೇಯನನ್ನು ರಾಜಕಾರಣಕ್ಕೆ ತಂದು ಅವರಸರ ಮಾಡಿದ್ದಕ್ಕೆ ಇವತ್ತು ರಾಮಮಂದಿರ ಸೋರುವ ಪರಿಸ್ಥಿತಿ ಬಂದಿದೆ. ರಾಮಂದಿರ ಕಟ್ಟಿರುವ ಅಯೋಧ್ಯೆಯಲ್ಲಿ ಸಮಾಜವಾದಿ ಪಾರ್ಟಿ ಗೆದ್ದಿದೆ. ಕೊಪ್ಪಳದಲ್ಲಿ ಆಂಜನೇಯನನ್ನು ರಾಜಕಾರಣಕ್ಕೆ ತಂದಿದ್ದಕ್ಕೆ ಕಾಂಗ್ರೆಸ್ ಗೆದ್ದಿದೆ ಎಂದು ತೀಕ್ಷ್ಣವಾಗಿ ಹೇಳಿದರು.
ಕಾಂಗ್ರೆಸ್‌ನಲ್ಲಿ ಮೂರು ಉಪಮುಖ್ಯಮಂತ್ರಿ ಚರ್ಚೆಗೆ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಉಪಮುಖ್ಯಮಂತ್ರಿ ಚರ್ಚೆ ಅಗತ್ಯವಿಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಉಪಮುಖ್ಯಮಂತ್ರಿ ಹುದ್ದೆ ಬಗ್ಗೆ ಹೈಕಮಾಂಡ್ ಮತ್ತು ಮುಖ್ಯಮಂತ್ರಿ ತೀರ್ಮಾನ ಕೈಗೊಳ್ಳುತ್ತಾರೆ. ರಾಜ್ಯದಲ್ಲಿ ಸರ್ಕಾರ ಬಹಳ ಚೆನ್ನಾಗಿ ನಡೆಯುತ್ತಿದೆ. ಸಿಎಂ ಮತ್ತು ಡಿಸಿಎಂ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಅಭಿವೃದ್ಧಿ ಬಗ್ಗೆ ಚರ್ಚೆಯಾಗಬೇಕೇ ಹೊರತು ಡಿಸಿಎಂ ಕುರಿತ ಚರ್ಚೆಯಲ್ಲ ಎಂದು ತಿಳಿಸಿದರು.
ದೇವೇಗೌಡರ ಕುಟುಂಬಕ್ಕೆ ಹೀಗಾಗಿದ್ದು ನೋವಿನ ಸಂಗತಿ:
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ಬಗ್ಗೆ ಕೇಳಲಾದ ಪ್ರಶ್ನೆಗೆ, ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿ ಪ್ರಧಾನ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಅವರ ಮನೆಯಲ್ಲಿ ಈ ರೀತಿ ಆಗಿರುವುದು ನೋವಿನ ಸಂಗತಿ. ಆದರೆ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಇದು ಕಾಂಗ್ರೆಸ್ ಷಡ್ಯಂತ್ರ ಎನ್ನುತ್ತಾರೆ. ಹೀಗೆ ಮಾಡಿ ಎಂದು ನಾವು ಹೇಳಿದ್ದೇವಾ? ಇದರಲ್ಲಿ ಯಾರ ಪಾತ್ರವೂ ಇಲ್ಲ. ಇವರ ತಪ್ಪು ಮಾಡಿ ಸಿಕ್ಕಿಬಿದ್ದಿದ್ದಕ್ಕೆ ನಮ್ಮ ಪಕ್ಷದದತ್ತ ಬೊಟ್ಟು ಮಾಡುವುದು ಸರಿಯಲ್ಲ ಎಂದು ತಿಳಿಸಿದರು.
ಕ್ಷೇತ್ರದ ಗ್ರಾಪಂಗಳಿಗೆ ಭೇಟಿ:
ಕ್ಷೇತ್ರದಲ್ಲಿ ಚುನಾವಣೆ ಗೆದ್ದ ಬಳಿಕ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಬೇಕು. ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಬೇಕು ಎಂದು ನಿರ್ಧರಿಸಿದ್ದೇವು. ಅದರಂತೆ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡುತ್ತಿದ್ದೇವೆ. ಕ್ಷೇತ್ರದಲ್ಲಿ ಒಟ್ಟು 32 ಗ್ರಾಮ ಪಂಚಾಯಿತಿಗಳಿವೆ. ಈಗಾಗಲೇ 27 ಗ್ರಾಮ ಪಂಚಾಯಿತಿಗಳಿಗೆ ಭೇಟಿ ಮಾಡಿದ್ದೇನೆ. ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಸಣ್ಣಪುಟ್ಟ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲಾಗುತ್ತಿದೆ ಎಂದರು.
ಜಿಲ್ಲಾ ಸಂಪರ್ಕ ಸಭೆ:
ಇನ್ನು ಜಿಲ್ಲಾ ಕೇಂದ್ರಗಳಲ್ಲಿ ಜನ ಸಂಪರ್ಕ ಸಭೆ ಮಾಡುತ್ತೇವೆ. ತಾಲೂಕು ಮಟ್ಟದಲ್ಲಿ ಜಿಲ್ಲಾಧಿಕಾರಿ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಜನ ಸಂಪರ್ಕ ಸಭೆ ಮಾಡಲು ಆದೇಶ ನೀಡಿದ್ದೇವೆ. ಇದರಲ್ಲಿ ಆಯಾ ಶಾಸಕರು ಭಾಗಿಯಾಗಬಹುದು ಎಂದು ಸಚಿವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಇನ್ನು ಪ್ರಗತಿನಗರ ಶುಗರ್ ಫ್ಯಾಕ್ಟರಿ ಸಂಬಂಧ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈಗಾಗಲೇ ಚರ್ಚಿಸಲಾಗಿದೆ. ಹಕ್ಕು ಪತ್ರ ಕೊಡಿಸಲು ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ. ಜನರಿಗೆ ಯಾವುದೇ ತೊಂದರೆಯಾಗದಂತೆ ನಾನು ನೋಡಿಕೊಳ್ಳುತ್ತೇನೆ ಎಂದು ಸಚಿವ ಶಿವರಾಜ್ ತಂಗಡಗಿ ತಿಳಿಸಿದರು.
Comments are closed.