ಕೊಪ್ಪಳ ಆರ್ ಟಿಓ , ದಿದಿಎಲ್ ಆರ್ ಅಧಿಕಾರಿಯನ್ನು ಸಸ್ಪೆಂಡ್ ಮಾಡಲು ಶಿವರಾಜ್ ಎಸ್.ತಂಗಡಗಿ ಆದೇಶ
ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರೂ ಆದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್.ತಂಗಡಗಿ ಅವರ ನೇತೃತ್ವದಲ್ಲಿ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಪಾಯಿಂಟ್ಸ್
ಕುಷ್ಟಗಿ ತಾವರೇಗೆರೆ ತಾಲ್ಲೂಕು ಆಸ್ಪತ್ರೆಯಲ್ಲಿ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಗರ್ಭಿಣಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೇ ವರದಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರಿಂದ ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚನೆ.
ವೈದ್ಯೆಯನ್ನು ಕರೆದು ನಾನು ಕೂಡ ಎಚ್ಚರಿಕೆ ನೀಡುತ್ತೇನೆ. ಮುಂದಿನ ದಿನಗಳಲ್ಲಿ ತಮ್ಮ ಕಾರ್ಯ ವೈಖರಿಯಲ್ಲಿ ಬದಲಾವಣೆ ಆಗದಿದ್ದರೆ ವರ್ಗಾವಣೆ ಮಾಡಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ನಿಂಗರಾಜು ಅವರಿಗೆ ಎಚ್ಚರಿಕೆ.
ಕೊಪ್ಪಳ ಜಿಲ್ಲೆಯಲ್ಲಿ ಕೊರತೆ ಇರುವ 68 ವೈದ್ಯರನ್ನು ಕೂಡಲೇ ಭರ್ತಿ ಮಾಡುವ ಸಂಬಂಧ ಕ್ರಮಕೈಗೊಳ್ಳಬೇಕು. ಜನರ ಅನುಕೂಲಕ್ಕಾಗಿ ಖಾಲಿ ಇರುವ ಹುದ್ದೆಗಳಿಗೆ ತುರ್ತಾಗಿ ನಿವೃತ್ತ ವೈದ್ಯರನ್ನು ನೇಮಿಸಿಕೊಂಡು ನಿತ್ಯ ಮೂರ್ನಾಲ್ಕು ತಾಸು ಕೆಲಸ ಮಾಡಿಸುವಂತೆ ಸಚಿವರ ಸಲಹೆ. ಯಾವುದೇ ಕಾರಣಕ್ಕೂ ಜನತೆಗೆ ತೊಂದರೆಯಾಗದಂತೆ ಎಚ್ಚರಿಕೆವಹಿಸುಂತೆ ನಿರ್ದೇಶನ.
ಕಾರಟಗಿ, ಕನಕಗಿರಿ ಹಾಗೂ ಕೂಕನೂರು ತಾಲ್ಲೂಕಿನಲ್ಲಿ 100 ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಿಸಲಾಗುವುದು. ಈಗಾಗಲೇ ಕಾರಟಗಿಯಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳ ಕೂಡ ಗುರುತಿಸಲಾಗಿದೆ. ಕನಕಗಿರಿ ಹಾಗೂ ಕೂಕನೂರಿನಲ್ಲೂ ಸ್ಥಳ ಗುರುತಿಸಿ ಪ್ರಸ್ತಾವನೆ ಸಲ್ಲಿಸಿ. ಆಸ್ಪತ್ರೆ ನಿರ್ಮಾಣಕ್ಕೆ ಕೆಕೆಆರ್ ಡಿಬಿಯಿಂದ ಅನುದಾನ ಒಗಿಸಲಾಗುವುದು.
ಸಚಿವರಿಂದ ತರಾಟೆ
ಕೊಪ್ಪಳ ಜಿಲ್ಲಾಆಸ್ಪತ್ರೆಯಲ್ಲಿ ಸ್ವಚ್ಛತೆ ಇಲ್ಲ, ಬೆಡ್ ಸಮಸ್ಯೆ, ಮೂಲಸೌಲಭ್ಯ ಕೊರತೆ, ರೋಗಿಗಳಿಗೆ ಸಿಬ್ಬಂದಿ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಮೂಳೆ ಶಸ್ತ್ರಚಿಕಿತ್ಸೆಗೆ ತಿಂಗಳಾನುಗಟ್ಟಲೇ ಸಮಯ ಕೊಡುತ್ತೀರಾ ಎಂದರೆ ಪರಿಸ್ಥಿತಿ ಹೇಗಿದೆ ಎಂದು ಕೆಡಿಪಿ ಸಭೆಯಲ್ಲಿ ಕಿಮ್ಸ್ ನಿರ್ದೇಶಕ ವೈಜನಾಥ್ ಪಾಟೀಲ್ ಅವರನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಸಮಾಜಾಯಿಷಿ ನೀಡಲು ಮುಂದಾದ ಕಿಮ್ಸ್ ನಿರ್ದೇಶಕರ ವಿರುದ್ಧ ಹರಿಹಾಯ್ದ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು, ನಿನ್ನ ಬಗ್ಗೆ ಒಂದು ಇತಿಹಾಸದ ಪುಸ್ತಕ ಇದೆ. ಪ್ರತಿ ದಿನ ಕಿಮ್ಸ್ ಅವ್ಯವಹಾರದ ಬಗ್ಗೆ ಮಾಧ್ಯಮಗಳಲ್ಲಿಸುದ್ದಿ ಬಿತ್ತರವಾಗುತ್ತಿದೆ. ಮನುಷ್ಯತ್ವದಿಂದ ಕೆಲಸ ಮಾಡುವುದನ್ನು ಕಲಿಯಿರಿ. ಒಬ್ಬ ರೋಗಿಗೆ ಎರಡ್ಮೂರು ತಿಂಗಳು ಸಮಯ ಕೊಡುತ್ತೀರಾ. ಆ ರೋಗಿ ಮೂರು ತಿಂಗಳಲ್ಲಿ ಮರಣ ಹೊಂದಬೇಕಾ ಎಂದು ತರಾಟೆಗೆ ತೆಗೆದುಕೊಂಡರು.
ವೈದ್ಯರು, ಮೂಲಭೂತ ಸೌಲಭ್ಯ ಎಲ್ಲವನ್ನೂ ಸರ್ಕಾರ ಕೊಡುತ್ತದೆ. ಸಾಮಾನ್ಯ ರೋಗಿಗಳನ್ನು ನೋಡಲು ಒಂದೆರೆಡು ಕೌಂಟರ್ ತೆರೆಯಲು ಸಾಧ್ಯವಾಗದಿದ್ದರೆ ನಿರ್ದೇಶಕನಾಗಿ ಏನು ಮಾಡುತ್ತಿದ್ಯಾ ಎಂದು ಸಚಿವರು ಪ್ರಶ್ನಿಸಿದರು.
ಆಸ್ಪತ್ರೆಯಲ್ಲಿ ಶುಚಿತ್ವ ಮೊದಲು ಕಾಪಾಡಿ. ನಿಮ್ಮಲ್ಲಿನ ಶೌಚಾಲಯದ ಪರಿಸ್ಥಿತಿ ಹೇಗಿದೆ ಎಂಬುದನ್ನು ನೋಡಿದ್ದೀರ. ಹಿಂದೆಯೂ ಕೂಡ ನಿಮಗೆ ಎಚ್ಚರಿಕೆ ನೀಡಲಾಗಿದ್ದರೂ ಅದನ್ನೇ ಮುಂದುವರೆಸಿದ್ದೀರ. ನಿಮ್ಮಲ್ಲಿ ಬದಲಾವಣೆ ಆಗದಿದ್ದರೆ ನಿಮ್ಮ ಮೇಲೆ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಎಸ್ ಸಿಪಿ ಮತ್ತು ಟಿಎಸ್ಪಿ ಅನುದಾನದಲ್ಲಿ ಕಿಯೋನಿಕ್ಸ್ ಮೂಲಕ ಲ್ಯಾಪ್ ಟಾಪ್ ಖರೀದಿಯಲ್ಲಿ ಅವ್ಯಾವಹಾರ ನಡೆದಿರುವ ಬಗ್ಗೆ ಬಂದಿರುವ ದೂರಿನ ಬಗ್ಗೆ ಸಭೆಯಲ್ಲಿ ಸಚಿವರು ಪ್ರಶ್ನಿಸಿದರು. ಈ ವೇಳೆ ಸೂಕ್ತ ಉತ್ತರ ನೀಡಲು ನಿರ್ದೇಶಕರು ತೊಡರಿಸಿದರು. ಇದರಿಂದ ಕೋಪಗೊಂಡ ಸಚಿವರು ನೀವು ಯಾವ ನಿರ್ದೇಶಕ ಎಂದು ಹರಿಹಾಯ್ದರು.
ಕೆಡಿಪಿ ಸಭೆಗೆ ಬರುವಾಗ ವಾರ್ಷಿಕ ಆರ್ಥಿಕ ವೆಚ್ಚದ ಬಗ್ಗೆ ಮಾಹಿತಿ ನೀಡಬೇಕು. ಇಂತಹ ಮಾಹಿತಿ ಇಲ್ಲದೆ, ಸಭೆಗೆ ಏಕೆ ಬರುತ್ತೀರ. ಕಿಮ್ಸ್ ಆಸ್ಪತ್ರೆಯಲ್ಲಿ ಬಳಕೆ ಮಾಡಲಾಗಿರುವ ಕೋಟ್ಯಂತರ ರೂಪಾಯಿಗೆ ಲೆಕ್ಕವೇ ಇಲ್ಲ ಎಂದರೆ ಹೇಗೆ ಎಂದು ನಿರ್ದೇಶಕ ವಿಜಯ್ ನಾಥ್ ಪಾಟೀಲ್ ಅವರ ವಿರುದ್ಧ ಕಿಡಿಕಾರಿದರು.
ನೀರಾವರಿ ಇಲಾಖೆ ಕಟ್ಟಡ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಕೆಂಡಾಮಂಡಲ.
ಗಂಗಾವತಿ-ಸಿದ್ಧಾಪುರದಲ್ಲಿ ನಿರ್ಮಾಣ ಮಾಡಲಾಗಿರುವ ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡದ ಕಾಮಗಾರಿ ಬಗ್ಗೆ ನೀರಾವರಿ ಇಲಾಖೆ ಅಧಿಕಾರಿಯನ್ನು ಪ್ರಶ್ನಿಸಿದ ಸಚಿವರು. ಅಲ್ಲಪ್ಪಾ, ಕಟ್ಟಡದ ಅಡಿಪಾಯ ನೋಡಿದ್ಯಾ. ಅಡಿಪಾಯ ಹಾಕುವಾಗ ಕನಿಷ್ಠ ಸಾಮಾನ್ಯ ಜ್ಞಾನ ಇಲ್ಲ. ನಿಮಗೆಲ್ಲ ನಾಚಿಯಾಕೆ ಆಗಬೇಕು. ಈ ಸಂಬಂಧ ಸ್ಥಳ ಪರಿಶೀಲನೆ ನಡೆಸಿ ಒಂದು ವಾರದಲ್ಲಿ ವರದಿ ನೀಡಬೇಕು. ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು ಎಂದು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ರಾಜ್ಯದ ಮಹತ್ವದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 57.84 ಲಕ್ಷ ಮಹಿಳಾ ಪ್ರಯಾಣಿಕರು ಯೋಜನೆಯ ಉಪಯೋಗ ಪಡೆದಿದ್ದಾರೆ ಎಂದು ಅಧಿಕಾರಿಗಳು ಕೆಡಿಪಿ ಸಭೆಯ ಗಮನಕ್ಕೆ ತಂದರು.
ಈ ವೇಳೆ ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ್ ಅವರು, ಮಹಿಳೆಯೊಬ್ಬರು ತಾವು ತೆರಳುವ ಸ್ಥಳವೊಂದಕ್ಕೆ ಟಿಕೆಟ್ ಪಡೆದು ಮಾರ್ಗ ಮಧ್ಯಯೇ ಬಸ್ ನಿಂದ ಇಳಿದರೆ ನಿರ್ವಾಹಕನಿಗೆ ದಂಡ ಹಾಕಲಾಗುತ್ತಿದೆ ಎಂದರು. ಆ ರೀತಿ ಇದ್ದರೆ ಸಂಬಂಧಪಟ್ಟ ಅಧಿಕಾರಿಗಳ ಬಳಿ ಮಾತನಾಡಿ ಬಗೆಹರಿಸುವುದಾಗಿ ಶಿವರಾಜ್ ತಂಗಡಗಿ ಅವರು ಭರವಸೆ ನೀಡಿದರು.
ಇದಕ್ಕೆ ಹೇಮಲತಾ ನಾಯಕ್ ಅವರು, ಇಷ್ಟು ಉಚಿತ ಕೊಟ್ಟು ಕೂಡ ಸಾರಿಗೆ ಇಲಾಖೆ ಲಾಭದಲ್ಲಿ ಇದೆ ಎಂದು ಹೇಳುತ್ತೀರಾ ಅದು ಹೇಗೆ ಎಂದು ಪ್ರಶ್ನಿಸಿದರು. ಇದಕ್ಕೆ ಮರು ಪ್ರತಿಕ್ರಿಯಿಸಿದ ಸಚಿವರು, ಅಕ್ಕ ನೀವು ಮಹಿಳೆಯರು ಮತ್ತು ಬಡವರ ವಿರುದ್ಧ ಇರುವ ಹಾಗೇ ಇದೆ ಎಂದು ಮಾತಿನಲ್ಲಿ ತಿವಿದರು. ಕೂಡಲೇ ಎಚ್ಚೆತ್ತ ಹೇಮಲತಾ ನಾಯಕ್ ಅವರು, ‘ಏ ಇಲ್ಲ ಇಲ್ಲ, ನಾವು ಮಹಿಳೆಯರು ಮತ್ತು ಬಡವರ ಪರ ಇದ್ದೇವೆ ಎಂದಾಗ ಸಭೆಯೂ ನಗೆಗಡಲಿಗೆ ಜಾರಿತು.
ಇನ್ನು ಜಿಲ್ಲೆಯಲ್ಲಿ ಮಾರ್ಚ್ 2024ರ ಅಂತ್ಯಕ್ಕೆ ಗೃಹ ಲಕ್ಷ್ಮೀ ಯೋಜನೆಯಡಿ ಒಟ್ಟು 3,17,762 ಫಲಾನುಭವಿಗಳು ಯೋಜನೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಇಲ್ಲಿ ತನಕ ಒಟ್ಟು 578,08,38,000 ಹಣವನ್ನು ಫಲಾನುಭವಿಗಳಿಗೆ ಡಿಬಿಟಿ ಮಾಡಲಾಗಿದ್ದು, ಇನ್ನುಳಿದ ಫಲಾನುಭವಿಗಳ ಖಾತೆಗೆ ಶೀಘ್ರವೇ ಹಣ ಜಮೆ ಮಾಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಉಳಿದಂತೆ ಜಿಲ್ಲೆಯಲ್ಲಿ 3,27,110 ಫಲಾನುಭವಿಗಳು ಅನ್ನಭಾಗ್ಯ ಯೋಜನೆಗೆ ಅರ್ಹರಿದ್ದಾರೆ. 2,96,404 ಕುಟುಂಬಗಳಿಗೆ ಅನ್ನಭಾಗ್ಯ ಡಿಬಿಟಿ ಯೋಜನೆಗೆ ಪ್ರತಿ ತಿಂಗಳು 18.10 ಕೋಟಿ ಡಿಬಿಟಿ ಹಣ ಜಮೆ ಮಾಡಲಾಗುತ್ತಿದೆ. ಇನ್ನು 6,804 ಕಾರ್ಡ್ ಗಳ ಫಲಾನುಭವಿಗಳಿಗೆ ಹಣ ಪಾವತಿಯಾಗದಿರುವ ಬಗ್ಗೆ ಸಚಿವರು ಪ್ರಶ್ನಿಸಿದರು. ಕೆಲ ಫಲಾನುಭವಿಗಳ ಕುಟುಂಬದವರ ಬಯೋಮೆಟ್ರಿಕ್ ಆಗಬೇಕು. ಆದರೆ ಆ ಕುಟುಂಬಗಳು ವಿಧ ಕಾರಣಗಳಿಂದ ಇತರ ಜಿಲ್ಲೆಗಳಿಗೆ ತೆರಳಿದ್ದು, ಅಂತಹವರ ಬಯೋ ಮೆಟ್ರಿಕ್ ಪಡೆದು ಯೋಜನೆಯ ಹಣ ಖಾತೆಗೆ ಜಮೆ ಮಾಡಿಸಲಾಗುವುದು ಎಂದು ಉತ್ತರಿಸಿದರು. ಗ್ಯಾರಂಟಿ ಯೋಜನೆಗಳಲ್ಲಿ ಯಾವುದೇ ರಾಜೀ ಇಲ್ಲ. ಅಧಿಕಾರಿ ವರ್ಗದವರು ನಿರಂತರವಾಗಿ ಯೋಜನೆಗಳು ಜನತೆಗೆ ಮುಟ್ಟುವಂತೆ ಕ್ರಮಕೈಗೊಳ್ಳಬೇಕು. ಈ ಬಗ್ಗೆ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿರಬೇಕು ಎಂದು ಸಚಿವರು ತಾಕೀತು ಮಾಡಿದರು.
Comments are closed.