ಪಾಪದ ಕೋಟೆಗೆ ಪುಣ್ಯ “ಕೋಟಿ” ಯ ಪ್ರವೇಶ… ಸಿನಿಮಾ ವಿಮರ್ಶೆ
Rating : ***
ವಿಮರ್ಶೆ: ಬಸವರಾಜ ಕರುಗಲ್
ಚಿತ್ರದ ಆರಂಭ ಮತ್ತು ಅಂತ್ಯದಲ್ಲಿ ಎರಡು ಚಿಕ್ಕ ಸಿಕ್ವೇನ್ಸ್ ಚಿತ್ರದ ಹೈಲೈಟ್. ಅವೇನೆಂದರೆ ಬಿಕ್ಕಳಿಕೆ ಮತ್ತು ರೆಡಿಯೋದಲ್ಲಿ ಕೇಳಿಸುವ, “ಅಮ್ಮಾ ದೇವರಾಣೆ ನಾನು ಬೆಣ್ಣೆ ಕದ್ದಿಲ್ಲಮ್ಮ…” ಎಂಬ ಹಾಡಿನ ಸಾಲು…
ಇಡೀ ಸಿನಿಮಾವನ್ನು ಪ್ರೇಕ್ಷಕನ ಅರಿವಿಗೆ ಬಾರದಂತೆ ಹೊತ್ತೊಯ್ಯುವುದೇ ಈ ಎರಡು ಅಂಶಗಳು. ಸಿನಿಮಾದ ನಾಯಕನ ಹೆಸರೇ ಕೋಟಿ. ಕೊಟೇಶ್ ಇಲ್ಲವೇ ಕೊಟ್ರೇಶ್ ಎಂಬ ಹೆಸರು ಕೋಟಿಯಂತಾಗಿದೆ ಎಂಬುದಕ್ಕೆ ಸಿನಿಮಾದಲ್ಲಿ ಯಾವ ಪುರಾವೆಗಳು ಇಲ್ಲ. ಆದರೆ ಸಿನಿಮಾ ಕಮರ್ಷಿಯಕ್ ಚೌಕಟ್ಟು ಮೀರದಿರಲಿ ಎಂಬ ಕಾರಣಕ್ಕಾಗಿ ಟೈಟಲ್ ಕೋಟಿ ಎಂದು ರಿಜಿಸ್ಟರ್ ಆಗಿದೆ ಎಂಬುದನ್ನು ಅರಿಯದಷ್ಟು ದಡ್ಡ, ಕನ್ನಡ ಪ್ರೇಕ್ಷಕನಲ್ಲ.
ಮತ್ತೊಮ್ಮೆ ಡಾಲಿ ಬಡ-ಮಧ್ಯಮ ವರ್ಗದ ಹುಡುಗನಾಗಿ ಗಮನ ಸೆಳೆಯುವ ಅಭಿನಯ ನೀಡುವ ಮೂಲಕ ಇಷ್ಟವಾಗುತ್ತಾರೆ. ಬಡವರ ಮಕ್ಳು ಬೆಳೀಬೇಕ್ರಯ್ಯಾ ಎಂದಿದ್ದ ಡಾಲಿ ಧನಂಜಯ್ ಕೋಟಿಯಲ್ಲಿ ಪ್ರಾಮಾಣಿಕತೆಯ ಪುಣ್ಯಕೋಟಿಯಂತೆ ಭಾಸವಾಗುತ್ತಾರೆ.
ಬದುಕಿನಲ್ಲಿ ಕೋಟಿ ಹಣ ಗಳಿಸುವ ಆಸೆ ಯಾರಿಗಿರಲ್ಲ ಹೇಳಿ. ಅದರಲ್ಲೂ ಬಡ-ಮಧ್ಯಮ ವರ್ಗದ ಹುಡುಗರ ಮಹಾ ಕನಸೆಂದರೆ ಅದೇ. ಆದರೆ ಆ ಹಣ ಗಳಿಸಲು ಆಯ್ಕೆ ಮಾಡಿಕೊಳ್ಳುವ ಹಾದಿ ಎಂಥದ್ದು ಎಂಬುದರ ಮೇಲೆ ಕೋಟಿ ಹಣವೋ! ಕೋಟ್ಯಾನುಗಟ್ಟಲೇ ಹಣವೋ? ಎಂಬುದು ನಿರ್ಧಾರ ಆಗುತ್ತದೆ. ಆದರೆ ಈ ಚಿತ್ರದ ನಾಯಕ ಕೋಟಿ ರೂಪಾಯಿ ಗಳಿಸಲು ಆಯ್ಕೆ ಮಾಡಿಕೊಂಡದ್ದು ಪ್ರಾಮಾಣಿಕತೆಯ ಮಾರ್ಗ. ಚಿಕ್ಕಂದಿನಿಂದಲೂ ಚಿಕ್ಕ ಪೆನ್ಸಿಲ್ ಕದಿಯದ ಕೋಟಿಗೆ ಕಳ್ಳತನ ಎಂದರೆ ಕೆಂಡದಂಥ ಕೋಪ. ಪ್ರತಿಯೊಬ್ಬ ಮನುಷ್ಯನಲ್ಲೂ ಒಬ್ಬ ಕಳ್ಳ ಇದ್ದಾನೆ ಎಂದು ಸರ್ವಜನ ಹೇಳಿದರೆ ಪ್ರತಿಯೊಬ್ಬ ಮನುಷ್ಯನಲ್ಲೂ ಒಬ್ಬ ಮಗು ಇದ್ದಾನೆ ಎಂದು ಸಾಬೀತುಪಡಿಸುವ ಯತ್ನ ಕೋಟಿಯದ್ದು. ಈ ಯತ್ನದಲ್ಲಿ ನಾಯಕ ಕೋಟಿ ಸಫಲನೋ? ವಿಫಲನೋ? ಎಂಬುದಕ್ಕೆ ಉತ್ತರವೊ, ಸಮಜಾಯಿಷಿಯೋ, ವಾಸ್ತವವೊ ಎಂಬ ಅಂಶ ಚಿತ್ರದಲ್ಲಿದೆ.
ನಾಯಕಿ ನವಮಿ (ಮೋಕ್ಷಾ ಕುಶಾಲ್) ಚಾರ್ಟೆಡ್ ಅಕೌಂಟೆಂಟ್. ನಾಯಕ ಕೋಟಿ (ಡಾಲಿ ಧನಂಜಯ) ಲಗೇಜ್ ಶಿಫ್ಟರ್ ಕಮ್ ಡ್ರೈವರ್. ನಾಯಕಿಗೆ ಆಗಾಗ ಬರುವ ಬಿಕ್ಕಳಿಕೆ, ನೀರು ಕುಡಿದರೆ ನಿಲ್ಲದು. ಯಾರದಾದರೂ, ಯಾವುದಾದರೂ ವಸ್ತುವನ್ನು ಕಳ್ಳತನ ಮಾಡಿದರೆ ಮಾತ್ರ ಬಿಕ್ಕಳಿಕೆ ನಿಲ್ಲುವ ವಿಚಿತ್ರ ಕಾಯಿಲೆ. ನಾಯಕಿಗೆ ಬೇರೊಬ್ಬನ ಜೊತೆ ನಿಗದಿಯಾಗಿದ್ದ ಮದುವೆ ಈ ಕಾರಣಕ್ಕೇನೇ ಮುರಿದು ಬೀಳುತ್ತದೆ. ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಬಿಕ್ಕಳಿಕೆಯ ಅಂಶವೇ ಗೇಮ್ ಚೇಂಜರ್ ಆಗುತ್ತದೆ. ಅದು ಹೇಗೆ ಎಂಬುದನ್ನು ಸಿನಿಮಾ ನೋಡಿ ತಿಳಿದುಕೊಳ್ಳಬೇಕು.
ಚಿತ್ರದ ನಾಯಕನ ಅಮ್ಮನಿಗೆ ಕಿವಿಯ ಸಮಸ್ಯೆ, ತಂಗಿಗೆ ಮದುವೆ ಮಾಡಿಸುವ, ತಮ್ಮನಿಗೆ ಕೆಲಸ ಕೊಡಿಸುವ ಹೊಣೆಗಾರಿಕೆ ಕೋಟಿ ಮೇಲೆ. ಇದಕ್ಕಾಗಿ ಫೇನಾನ್ಷಿಯರ್ ಸಾವ್ಕಾರ ಬಳಿ ಬಡ್ಡಿಯಂತೆ ಸಾಲ ಮಾಡುವ ಕೋಟಿಗೆ ಪ್ರಾಮಾಣಿಕತೆಯ ಹಾದಿಯಲ್ಲೇ ಅದನ್ನೆಲ್ಲ ತೀರಿಸಬಲ್ಲೆ ಎಂಬ ವಿಶ್ವಾಸ. ಸಾವ್ಕಾರ ಹಣಕ್ಕಾಗಿ ಕೊಡುವ ಸುಪಾರಿಯನ್ನು ಕೋಟಿ ತಿರಸ್ಕರಿಸಿದ ಕ್ಷಣದಿಂದ ಸಂಕಷ್ಟಗಳ ಕೋಟೆ ಆತನ ಬದುಕಲ್ಲಿ ಕಟ್ಟಿಕೊಳ್ಳುತ್ತದೆ. ಕೋಟಿ ಅಲ್ಲಿಂದ ಪಾರಾದನಾ? ಕೋಟೆಯಲ್ಲೇ ಬಂಧಿಯಾದನಾ? ಕೋಟಿ ಸಂಪಾದಿಸಿದನಾ? ಎಂಬ ಕಥಾವಸ್ತುವೇ ಈ ಸಿನಿಮಾ.
ನಿರ್ದೇಶಕ ಪರಮೇಶ್ವರ ಗುಂಡ್ಕಲ್ ಕಿರುತೆರೆಯಲ್ಲಿ ಇಂಥ ಹಲವು ಕಥೆಗಳನ್ನು ಕಟ್ಟಿಕೊಟ್ಟು ಗೆದ್ದವರು. ಈಗ ಹಿರಿತೆರೆಗೆ ಕಥೆಯೊಂದನ್ನು ಕೊಟ್ಟಿದ್ದಾರೆ. ಕಥೆಯೆನೋ ಎಲ್ಲ ವರ್ಗದವರನ್ನು ಸೆಳೆಯುತ್ತದೆ. ಆದರೆ ಅಲ್ಲಲ್ಲಿ ಎಳೆದಂತೆ ಭಾಸವಾಗುತ್ತದೆ. ಹಿರಿಯ ನಟ ರಂಗಾಯಣ ರಘು ಪಾತ್ರಕ್ಕೆ ಇನ್ನಷ್ಟು ಸ್ಕೋಪ್ ಬೇಕಿತ್ತು. ನವನಟಿ ಮೋಕ್ಷಾ ಮೊದಲ ಚಿತ್ರದಲ್ಲೇ ತಕ್ಕಮಟ್ಟಿಗೆ ಸ್ಕೋರ್ ಮಾಡಿದ್ದಾರೆ. ಖಳನಟನಾಗಿ ರಮೇಶ್ ಇಂದಿರಾ ಅಭಿನಯ, ಸಪ್ತಸಾಗರದಾಚೆಯ ನಂತರ ಮತ್ತೊಂದು ಮಜಲು ಎನ್ನಿಸುವಷ್ಟು ಮನೋಜ್ಞ. ಸರ್ದಾರ್ ಸತ್ಯ, ಪೃಥ್ವಿ ಸಿಕ್ಕ ಪಾತ್ರದಲ್ಲೇ ಗಮನ ಸೆಳೆಯುತ್ತಾರೆ. ದುನಿಯಾ ವಿಜಯ್ ಗೌರವ ಪಾತ್ರದಲ್ಲಿ ನಟಿಸಿದ್ದಾರೆ ಆದರೆ ಆ ದೃಶ್ಯ ಕಥೆಗೆ ಅಷ್ಟೊಂದು ಪೂರಕ ಅನಿಸದು. ವಾಸುಕಿ ವೈಭವ್ ಹಾಡುಗಳು ಮತ್ತು ಸಂಗೀತಕ್ಕೆ ಗುನುಗುನಿಸುವ ಗುಣವಿದೆ. ಜಿ ಸ್ಟುಡಿಯೊದ ಹೆಸರಿನಲ್ಲಿ ಜ್ಯೋತಿ ದೇಶಪಾಂಡೆ ಕನ್ನಡದಲ್ಲೂ ಸಿನಿಮಾ ನಿರ್ಮಿಸುವ ಮೂಲಕ ಪ್ರಯೋಗಕ್ಕೆ ಮಾಡಿದ ಪ್ರಯತ್ನ ಕೈ ಹಿಡಿಯುವ ಸಾಧ್ಯತೆಯಂತು ಕಾಣುತ್ತಿದೆ. ಚಿತ್ರದ ಛಾಯಾಗ್ರಹಣ ಮನ ಸೆಳೆದರೆ ಸಂಕಲನ ಅನುಮಾನಗಳಿಗೆ ಆಸ್ಪದ ನೀಡದು.
ಒಟ್ಟಿನಲ್ಲಿ ಕೋಟಿ ಯಾವುದೇ ಮುಜುಗರ ಇಲ್ಲದೇ ಕುಟುಂಬ ಒಟ್ಟಿಗೆ ಕುಳಿತು ನೋಡಬಹುದಾದ ಸಿನಿಮಾ, ಒಂಚೂರು ತಾಳ್ಮೆ ಹೆಚ್ಚಿದ್ದರೆ..!
Rating : ***
———-
ರೇಟಿಂಗ್
*- ಚನ್ನಾಗಿಲ್ಲ
**-ಸುಮಾರು
*-ಚನ್ನಾಗಿದೆ
**-ತುಂಬಾ ಚನ್ನಾಗಿದೆ
***-ತಪ್ಪದೇ ನೋಡಿ
——————ಕೋಟಿ ಸಿನಿಮಾ
ತಾರಾಗಣ: ಡಾಲಿ ಧನಂಜಯ, ಮೋಕ್ಷಾ, ತಾರಾ, ರಮೇಶ್ ಇಂದಿರಾ, ರಂಗಾಯಣ ರಘು, ದುನಿಯಾ ವಿಜಯ್, ಪೃಥ್ವಿ.
ನಿರ್ದೇಶನ: ಪರಮೇಶ್ವರ್ ಗುಂಡ್ಕಲ್
ಸಂಗೀತ: ವಾಸುಕಿ ವೈಭವ್
ನಿರ್ಮಾಣ: ಜೀ ಸ್ಟುಡಿಯೋ
Comments are closed.