ಗದಗ-ವಾಡಿ & ಮುನಿರಾಬಾದ್-ಮಹೆಬೂಬನಗರ ರೈಲ್ವೆ ಲೈನ್‌ಗಳು ಬರುವ ಮೂರು ವರ್ಷಗಳಲ್ಲಿ ಪೂರ್ಣಗೊಳ್ಳಲಿವೆ: ಬಸವರಾಜ ರಾಯರಡ್ಡಿ

0

Get real time updates directly on you device, subscribe now.

ನಮ್ಮ ಕಲ್ಯಾಣ ಕರ್ನಾಟಕ ಭಾಗದ ಗದಗ-ವಾಡಿ ಮತ್ತು ಮುನಿರಾಬಾದ್-ಮಹೆಬೂಬನಗರ ರೈಲ್ವೆ ಲೈನ್‌ಗಳು ಮುಂಬರುವ ಮೂರು ವರ್ಷಗಳಲ್ಲಿ ಪೂರ್ಣಗೊಳ್ಳಲಿವೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ಕ್ಷೇತ್ರದ ಶಾಸಕರಾದ ಬಸವರಾಜ ರಾಯರಡ್ಡಿ ಹೇಳಿದರು.
 ಅವರು ಮಂಗಳವಾರ ಕೊಪ್ಪಳ ನಗರದ ಪ್ರವಾಸಿ ಮಂದಿರದಲ್ಲಿ ಹುಬ್ಬಳ್ಳಿ-ಕುಷ್ಟಗಿ ರೈಲು ಆರಂಭವಾಗಲಿರುವ ಹಿನ್ನೆಲೆಯಲ್ಲಿ ಪತ್ರಕರ್ತರಿಗೆ ಮಾಹಿತಿ ನೀಡಲು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಗದಗ-ವಾಡಿ ರೈಲ್ವೆ ಲೈನ್, ಉತ್ತರ ಕರ್ನಾಟಕ ಭಾಗದ ಮಹತ್ವದ ರೈಲ್ವೆ ಮಾರ್ಗಗಳಲ್ಲಿ ಒಂದಾಗಿದ್ದು, ಇದು ಮುಂಬೈ ಕರ್ನಾಟಕದಿಂದ ನಮ್ಮ ಕಲ್ಯಾಣ ಕರ್ನಾಟಕ ಭಾಗಕ್ಕೆ ನೇರವಾಗಿ ರೈಲು ಸಂಪರ್ಕ ಕಲ್ಪಿಸುವ ಯೋಜನೆಯಾಗಿದೆ. ಇದಲ್ಲದೆ ಹುಬ್ಬಳ್ಳಿ, ಗದಗ, ಯಲಬುರ್ಗಾ, ಕುಕನೂರು, ಕುಷ್ಟಗಿ, ಮುದಗಲ್, ಲಿಂಗಸೂರು, ಹಟ್ಟಿ ಚಿನ್ನದ ಗಣಿ, ಸುರಪುರ, ಶಹಪುರದಿಂದ ವಾಡಿ ವರೆಗಿನ ಈ ಮಾರ್ಗವು ಮುಂದಿನ ದಿನಮಾನಗಳಲ್ಲಿ ಉತ್ತಮವಾದ ವಾಣಿಜ್ಯ ರೈಲ್ವೆ ಮಾರ್ಗಗಳಿಗೆ ಸಂಪರ್ಕ ಕೊಂಡಿಯಾಗಲಿದೆ. ಭವಿಷ್ಯದಲ್ಲಿ ರೈಲುಗಳು ಗೋವಾದಿಂದ ಹೈದ್ರಾಬಾದ್, ಗೋವಾದಿಂದ ದೆಹಲಿಗೆ ವಾಯಾ ಇದೇ ಮಾರ್ಗವಾಗಿ ರೈಲುಗಳು ಸಂಚರಿಸಲು ಅನುಕೂಲವಾಗಲಿದೆ. ಹುಬ್ಬಳ್ಳಿಯಿಂದ ಸೋಲಾಪುರ, ಹುಬ್ಬಳ್ಳಿಯಿಂದ ಬೀದರ್ ರೈಲ್ವೆ ಮಾರ್ಗಕ್ಕೆ ಇದು ಪರ್ಯಾವ ಲೈನ್ ಆಗಲಿದ್ದು, ಇದರಿಂದ ನಮ್ಮ ಜನಕ್ಕೆ ಬಹಳಷ್ಟು ಅನುಕೂಲವಾಗಲಿದೆ. ಈ ಹಿಂದೆ ನಾನು ಲೋಕಸಭಾ ಸದಸ್ಯನಾಗಿದ್ದ ಸಂದರ್ಭದಲ್ಲಿ ಮುನಿರಾಬಾದ್-ಮಹೆಬೂಬ್ ನಗರ ಮತ್ತು ಗದಗ-ವಾಡಿ ಎರಡು ರೈಲ್ವೆ ಲೈನ್‌ಗಳಿಗೆ ಶಿಪಾರಸ್ಸು ಮಾಡಿದ್ದೆ. ಮಲ್ಲಿಕಾರ್ಜುನ ಖರ್ಗೆ ರವರು ಅಂದು ರೈಲ್ವೆ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಈ ಎರಡು ಮಾರ್ಗಗಳನ್ನು ಸೇರಿಸುವಲ್ಲಿ ಅವರ ಪ್ರಯತ್ನವು ಇದ್ದು, ಈ ಸಂದರ್ಭದಲ್ಲಿ ನಾವು ಅವರನ್ನು ನೆನಪಿಸಿಕೊಳ್ಳಬೇಕಿದೆ ಎಂದರು.
ಮುನಿರಾಬಾದ್ ನಿಂದ ಗಂಗಾವತಿಗೆ ಹೋಗುವ ಮಾರ್ಗದಲ್ಲಿ ಗುಡ್ಡಗಳಿರುವುದರಿಂದ ಅಲ್ಲಿ ಸುರಂಗ ಮಾರ್ಗಕ್ಕೆ ತೊಂದರೆಯಾದ ಕಾರಣದಿಂದ ಮುನಿರಾಬಾದ್-ಮಹೆಬೂಬ್ ನಗರ ರೈಲ್ವೆ ಲೈನ್ ಅನ್ನು ಮುನಿರಾಬಾದ್ ಬದಲಿಗೆ ಗಿಣಿಗೇರಾವನ್ನು ಸೇರಿಸಲಾಯಿತು. ಗಿಣಿಗೇರಾ ಮಹೆಬೂಬ್ ನಗರ ರೈಲ್ವೆ ಮಾರ್ಗಕ್ಕೆ ಸಂಬಂಧಿಸಿದಂತೆ ಆಂದ್ರಪ್ರದೇಶದಲ್ಲಿ ಕಾಮಗಾರಿಯು ಪೂರ್ಣಗೊಂಡಿದೆ. ನಮ್ಮ ರಾಜ್ಯದಲ್ಲಿ ಭೂಸ್ವಾಧಿನ ಪ್ರಕ್ರಿಯೆ ನಿಧಾನವಾಗಿ ನಡೆಯುತ್ತಿರುವುದರಿಂದ ವಿಳಂಭವಾಗಿದೆ. ಇದು ಶೀಘ್ರದಲ್ಲಿಯೇ ಇತ್ಯರ್ಥವಾಗಲಿದೆ. ಈ ರೈಲ್ವೆ ಲೈನ್ ವಾಯಾ ಗಂಗಾವತಿ, ಸಿಂಧನೂರು, ಮಾನ್ವಿ, ರಾಯಚೂರು ಮಾರ್ಗವಾಗಿ ಹೋಗಲಿದ್ದು, ಇದರಿಂದ ಜನರ ಪ್ರಯಾಣದ ಜೊತೆಗೆ ಈ ಭಾಗದ ವಾಣಿಜ್ಯ ವ್ಯವಹಾರಗಳಿಗೆ ಅನುಕೂಲವಾಗಲಿದೆ. ಗದಗ-ವಾಡಿ ಹಾಗೂ ಗಿಣಿಗೇರಾ-ಮಹೆಬೂಬನಗರ ರೈಲ್ವೆ ಮಾರ್ಗವು ನಮ್ಮ ಭಾಗದ ದೊಡ್ಡ ರೈಲ್ವೆ ಲೈನ್ ಆಗಲಿವೆ. ಈ ರೈಲ್ವೆ ಲೈನ್‌ಗಳು ಪೂರ್ಣಗೊಳ್ಳುತ್ತಿರುವುದು ಸಂತೋಷದ ವಿಚಾರವಾಗಿದೆ. ಎಂದು ಹೇಳಿದರು.
ಗದಗ-ವಾಡಿ ರೈಲ್ವೆ ಮಾರ್ಗದ ತಳಕಲ್ ನಿಂದ ಕುಕನೂರು, ಯಲಬುರ್ಗಾ, ಕುಷ್ಟಗಿ ವರೆಗೆ ಸುಮಾರು 58 ಕಿ.ಮೀ ವರೆಗೆ ಕಾಮಗಾರಿಯು ಪೂರ್ಣಗೊಂಡಿದೆ. ವಾಡಿಯಿಂದ ಶಹಪುರ ವರೆಗೆ 48 ರೈಲ್ವೆ ಲೈನ್ 3 ರಿಂದ 6 ತಿಂಗಳಲ್ಲಿ ಮುಕ್ತಾಯವಾಗಲಿದ್ದು, ಇದರಿಂದ ಒಟ್ಟು 106 ಕಿ.ಮೀ ವರೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಇದರ ಮಧ್ಯದಲ್ಲಿರುವ 165 ಕಿ.ಮೀ ಕಾಮಗಾರಿಗೆ ರಾಜ್ಯ ಸರ್ಕಾರವು ಪತ್ರ ಬರೆದಿದ್ದು, ಕೇಂದ್ರ ಸರ್ಕಾರವು ಸಿಂಗಲ್ ಟೆಂಡರ್ ಕರೆದಿದೆ. ಇದಕ್ಕೆ ರಾಜ್ಯ ಸರ್ಕಾರವು ಹಣ ನೀಡಲಿದೆ. ಗದಗ-ವಾಡಿ ರೈಲ್ವೆ ಮಾರ್ಗದ ಪೂರ್ಣಗೊಂಡಿರುವ 58 ಕಿ.ಮೀ ರೈಲ್ವೆ ಲೈನ್‌ನಲ್ಲಿ ಹುಬ್ಬಳ್ಳಿಯಿಂದ ರೈಲ್ವೆ ಆರಂಭಿಸಬೇಕೆAದು ರಾಜ್ಯ ಸರ್ಕಾರದಿಂದ ಕೇಂದ್ರ ರೈಲ್ವೆ ಮಂತ್ರಿಗಳಿಗೆ ಪತ್ರ ಬರೆಯಲಾಗಿದೆ. ಇದರ ಜೊತೆಗೆ ರೈಲ್ವೆ ಸಹಾಯಕ ಸಚಿವರಾದ ವಿ.ಸೋಮಣ್ಣನವರೊಂದಿಗೆ ಚರ್ಚಿಸಿದ್ದು, ಬರುವ ಮೇ ತಿಂಗಳಿನ 15 ರೊಳಗಾಗಿ ಹುಬ್ಬಳ್ಳಿ-ಕುಷ್ಟಗಿ ರೈಲು ಉದ್ಘಾಟನಾ ಕಾರ್ಯಕ್ರಮವನ್ನು ಆದಷ್ಟು ಶೀಘ್ರದಲ್ಲಿಯೇ ಹಮ್ಮಿಕೊಳ್ಳಲಾಗುವುದು ಎಂದರು.
ಕೊಪ್ಪಳ ಸಂಸದರಾದ ಕೆ.ರಾಜಶೇಖರ ಬಸಬವರಾಜ ಹಿಟ್ನಾಳ ಅವರು ಮಾತನಾಡಿ, ಗದಗ-ವಾಡಿ ರೈಲ್ವೆ ಲೈನ್ ಮಹತ್ವಕಾಂಕ್ಷಿ ಯೋಜನೆಯಾಗಿದೆ. ಇದರಿಂದ ಎಲ್ಲಾ ಭಾಗಗಳ ತ್ವರಿತ ಅಭಿವೃದ್ಧಿಯಾಗಲಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ತಲಾ ಶೇ.50 ರಷ್ಟು ಅನುದಾನವನ್ನು ನೀಡಿದೆ. ಈಗಾಗಲೇ ಗದಗ-ವಾಡಿ ರೈಲ್ವೆ ಲೈನ್ ಕಾಮಗಾರಿ ತಳಕಲ್‌ನಿಂದ ಕುಷ್ಟಗಿ ವರೆಗೆ ಮುಗಿದಿದ್ದು, ರೈಲು ಪ್ರಾಯೋಗಿಕವಾಗಿ ಸಂಚರಿಸಿದೆ. ಆದಷ್ಟು ಬೇಗನೆ ಇದರ ಉದ್ಘಾಟನೆಯನ್ನು ನೆರವೇರಿಸಲಾಗುವುದು. ಗದಗ-ವಾಡಿ ರೈಲು ಲೈನ್ ನಿಂದ ನಮ್ಮ ಭಾಗದ ಅಭಿವೃದ್ಧಿಗೆ ತುಂಬಾ ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಕೊಪ್ಪಳ ನಗರಸಭೆ ಸದಸ್ಯರಾದ ಮಹೇಂದ್ರ ಛೋಪ್ರಾ ಹಾಗೂ ಮುತ್ತುರಾಜ ಕುಷ್ಟಗಿ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರಾದ ಹೇಮಂತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕರಾದ ಡಾ. ಸುರೇಶ್ ಜಿ. ಸೇರಿದಂತೆ ಇತರರು ಉಪಸ್ಥಿತರಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!