ಪಕ್ಷ ಸಂಘಟಿಸಿ, ಜನ ಸಂಪರ್ಕದಲ್ಲಿರಿ: ಹೆಚ್ಡಿಕೆ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಜೆಡಿ (ಎಸ್) ಪಕ್ಷವು ಉತ್ತಮವಾಗಿ ಸಂಘಟನೆಯಾಗಿದ್ದು ಮುಂಬರುವ ದಿನಗಳಲ್ಲಿ ಪಕ್ಷಕ್ಕೆ ಉಜ್ವಲ ಭವಿಷ್ಯವಿದೆ ಎಂದು ನೂತನವಾಗಿ ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಹೆಚ್ ಡಿ ಕುಮಾರಸ್ವಾಮಿ ಅವರು ಇಂದು ನವದೆಹಲಿಯಲ್ಲಿ ಹೇಳಿದರು.
ಜೆಡಿ (ಎಸ್) ಕೋರ್ ಕಮಿಟಿ ಸದಸ್ಯರಾದ ಸಿವಿಚಂದ್ರಶೇಖರ್ ಹಾಗೂ ಮಾಜಿ ಮಂತ್ರಿಗಳಾದ ವೆಂಕನಗೌಡ ನಾಡಗೌಡ ಅವರಿಂದ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಜೆಡಿ (ಎಸ್) – ಬಿಜೆಪಿ ಮೈತ್ರಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ರಾಜ್ಯ ಮುಂದಿನ ದಿನಗಳಲ್ಲಿ ಹಲವಾರು ಚುನಾವಣೆಗಳನ್ನು ಕಾಣಲಿದೆ. ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯಲ್ಲಿ ನಿರಂತರವಾಗಿ ನಾಯಕರು ಜನ ಸಂಪರ್ಕದಲ್ಲಿದ್ದು ಪಕ್ಷವನ್ನು ಸಂಘಟಿಸಬೇಕು ಎಂದು ಹೇಳಿದರು.
ಸಿ ವಿ ಚಂದ್ರಶೇಖರ್ ಹಾಗೂ ವೆಂಕನಗೌಡ ನಾಡಗೌಡ ಅವರು ಒಂದು ತಿಂಗಳ ಕಾಲ ನಿರಂತರವಾಗಿ ಪ್ರಚಾರ ನಡೆಸಿ ಪಕ್ಷದ ಗೆಲುವಿಗಾಗಿ ಶ್ರಮಿಸಿದ್ದಾರೆ. ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಪ್ರಗತಿ ಎದ್ದು ಕಾಣುತ್ತಿದೆ. ಪಕ್ಷವು ಬಿಜೆಪಿ ಜೊತೆಗೆ ಉತ್ತಮ ಸಂಬಂಧವನ್ನು ಹೊಂದಿದ್ದು ಈ ಮೈತ್ರಿ ಉಭಯ ಪಕ್ಷಗಳಿಗೆ ಲಾಭ ತಂದು ಕೊಡಲಿದೆ ಎಂದರು. ತಾವು ರಾಜ್ಯದ ಜನತೆಗೆ ವಿನೂತನ ಯೋಜನೆಗಳನ್ನು ಅನುಷ್ಠಾನಗೊಳಿಸಲಿದ್ದು ಅದರಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಆದ್ಯತೆ ಕೊಡುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಿ ವಿ ಚಂದ್ರಶೇಖರ್ ಅವರು ನೂತನವಾಗಿ ಲೋಕಸಭೆಗೆ ಆಯ್ಕೆಯಾದ ಪಕ್ಷದ ಕೋಲಾರ ಅಭ್ಯರ್ಥಿ ಮಲ್ಲೇಶ್ ಬಾಬು, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಡಾ ಸಿ ಎನ್ ಮಂಜುನಾಥ್ ಅವರನ್ನು ಮತ್ತು ನೂತನ ಕೇಂದ್ರ ಸಚಿವರಾಗಿ ಅಧಿಕಾರವಹಿಸಿಕೊಂಡ ಪ್ರಹ್ಲಾದ ಜೋಶಿ ಅವರನ್ನು ಭೇಟಿ ಮಾಡಿ ಅಭಿನಂದನೆ ತಿಳಿಸಿದರು. ಎನ್ ಡಿ ಎ ಒಕ್ಕೂಟದ ಮೂರನೇ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚಿನ ಕೊಡುಗೆ ನೀಡುವಂತೆ ಜೋಶಿ ಅವರಲ್ಲಿ ಮನವಿ ಮಾಡಿದರು. ಕೊಪ್ಪಳ ಅತ್ಯಂತ ತ್ವರಿತವಾಗಿ ಅಭಿವೃದ್ಧಿ ಹೊಂದುತ್ತಿದ್ದು ಇನ್ನಷ್ಟು ಯೋಜನೆಗಳು ಬಂದರೆ ಉದ್ಯೋಗ ಸೃಷ್ಟಿಗೆ ಸಹಾಯಕವಾಗಲಿದೆ ಎಂದರು. ಸರಕಾರದ ಹೊಸ ಯೋಜನೆಗಳನ್ನು ಕೊಪ್ಪಳ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಗೆ ತರುವುದಾಗಿ ಭರವಸೆ ನೀಡಿದರು.
Comments are closed.