ಡಾ.ಸರೋಜಿನಿ ಮಹಿಷಿ ವರದಿ ಜಾರಿಯಾಗಲಿ- ಕರವೇ ಜಿಲ್ಲಾಧ್ಯಕ್ಷ ಬಿ.ಗಿರೀಶಾನಂದ

Get real time updates directly on you device, subscribe now.


ಕೊಪ್ಪಳ,ಜೂ.೦೯: ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿದ್ದು, ಅದು ಸರ್ಕಾರದ ಮಟ್ಟದಲ್ಲಿ ಅನುಷ್ಠಾನವಾಗಬೇಕು. ನಾಡ ಭಾಷೆ ಉಳಿಸಲು ಹಲವಾರು ಸರ್ಕಾರದ ಆಯೋಗಗಳು, ಸಮಿತಿಗಳು ಇದ್ದರೂ ಸಹ ಡಾ.ಸರೋಜಿನಿ ಮಹಿಷಿ ವರದಿ ಸೇರಿದಂತೆ ಎಲ್ಲ ವರದಿಗಳು ಯಥಾವತ್ತಾಗಿ ಜಾರಿಯಾಗಬೇಕಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಬಿ.ಗಿರೀಶಾನಂದ ಜ್ಞಾನಸುಂದರ ಹೇಳಿದರು.
ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡರ ೫೮ನೇ ಹುಟ್ಟುಹಬ್ಬದ ಅಂಗವಾಗಿ ರವಿವಾರದಂದು ಕುವೆಂಪು ನಗರದ ಹೂವಿನಾಳ ರಸ್ತೆಯಲ್ಲಿ ಇರುವ ಸುರಭಿ ವೃದ್ಧಾಶ್ರಮದಲ್ಲಿ ಜಿಲ್ಲಾ ಘಟಕದಿಂದ ಹಣ್ಣು-ಹಂಪಲು ಮತ್ತು ಬ್ರೇಡ್ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಆಂದ್ರಪ್ರದೇಶ, ತಮಿಳುನಾಡು, ಕೇರಳ, ಉತ್ತರ ಪ್ರದೇಶ ಅಲ್ಲಿಯ ಸರ್ಕಾರ ಶೇ.೮೦% ರಷ್ಟು ಸ್ಥಳೀಯರಿಗೆ ಉದ್ಯೋಗ ನೀಡಿದೆ. ಅದೇರೀತಿ ಈ ನಾಡಿನ ಕನ್ನಡಿಗರಿಗೆ ಉದ್ಯೋಗದಲ್ಲಿ ಮಾನ್ಯತೆ ದೊರಕಲಿ ಇದು ನಮ್ಮ ನೆಲದ ಮಕ್ಕಳ ಬದುಕಿನ ಪ್ರಶ್ನೆಯಾಗಿದೆ. ಕನ್ನಡ ನಾಡಿನಲ್ಲಿ ನವಾಬರ ಕಾಲದಲ್ಲಿ ಶಾಲೆಯ ಹೊರಗಡೆ ಉರ್ದು ನಾಮಫಲಕ ಹಾಕಿ, ಒಳಗಡೆ ಕನ್ನಡ ಕಲಿಸಿದ ಉದಾಹರಣೆಗಳಿವೆ. ಆದರೆ ಇಂದು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಕಲಿಸುತ್ತಿರುವ ಶಾಲೆಗಳು ಇವೆ. ಕನ್ನಡ ಕೇವಲ ಹೆಸರಿಗೆ ಸೀಮಿತವಾಗದೇ ಅನ್ನದ ಭಾಷೆಯಾಗಬೇಕು. ಕನ್ನಡದ ಎಲ್ಲಾ ಸಮಿತಿಗಳ ವರದಿಗಳು ಸರ್ಕಾರದಲ್ಲಿ ದೂಳು ತಿನ್ನುತ್ತಿವೆ. ಅವುಗಳ ಅನುಷ್ಠಾನ ಮಾಡಿದಾಗ ಮಾತ್ರ ಕನ್ನಡ ನಾಡಿನಲ್ಲಿ ಕನ್ನಡ ಪರಕೀಯವಾಗುವುದನ್ನು ತಡೆಯಬಹುದು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನೆಲದ ಮಕ್ಕಳ ಭವಿಷ್ಯಕ್ಕಾಗಿ ಮಹಿಷಿ ವರದಿ ಅನುಷ್ಠಾನಕ್ಕೆ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡರ ನೇತೃತ್ವದಲ್ಲಿ ರಾಜ್ಯವ್ಯಾಪಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದ ಅವರು ಕರವೇ ರಾಜ್ಯಾಧ್ಯಕ್ಷರ ಹುಟ್ಟು ಹಬ್ಬದಂದು ಪ್ರತಿ ವರ್ಷ ಕೊಪ್ಪಳ ಜಿಲ್ಲಾ ಘಟಕವು ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ. ರಕ್ತದಾನ ಶಿಬಿರ, ಪರಿಸರ ಕಾಳಜಿಗೆ ಸಸಿ ನಡುವ ಕಾರ್ಯಕ್ರಮ, ಅನ್ನದಾನ, ವಸ್ತ್ರದಾನ, ಬಂಧಿಖಾನೆಯ ವಾಸಿಗಳಿಗೆ ಮನರಂಜನೆ ಕಾರ್ಯಕ್ರಮ, ಕನ್ನಡ ಮಾಧ್ಯಮದಲ್ಲಿ ಪ್ರತಿಭಾವಂತರಿಗೆ ಸನ್ಮಾನಿಸಿ ಪ್ರೂತ್ಸಾಹಿಸುವುದು, ಬಡ ರೋಗಿಗಳಿಗೆ ಚಿಕಿತ್ಸಾ ವೆಚ್ಚ ಭರಿಸುವುದು, ಗ್ರಾಮೀಣ ಶಾಲೆಗಳಲ್ಲಿ ಗ್ರಂಥಾಲಯ ನಿರ್ಮಾಣ ಹೀಗೆ ಹತ್ತು ಹಲವಾರು ಸಮಾಜಮುಖಿ ಕಾರ್ಯಗಳನ್ನು ಕರವೇ ಮಾಡುತ್ತಿದೆ ಎಂದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಯುವ ಘಟಕದ ಜಿಲ್ಲಾಧ್ಯಕ್ಷ ಹನುಮಂತ ಬೆಸ್ತರ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಸಂಜಯ ಖಟವಟೆ, ಮಹಿಳಾ ಜಿಲ್ಲಾಧ್ಯಕ್ಷೆ ಭುವನೇಶ್ವರಿ ಮೊಟಗಿ, ಮಹಿಳಾ ತಾಲೂಕಾಧ್ಯಕ್ಷೆ ಸಾವಿತ್ರಮ್ಮ ದಳವಾಯಿ, ಗಂಗಮ್ಮ ಕುಂಬಾರ, ಅಪೂರ್ವ ಮೊಟಗಿ, ತಾಲೂಕಾಧ್ಯಕ್ಷ ವಿನೋದ ಎಸ್ ಗಂಗಾ, ಸಾಮಾಜಿಕ ಜಾಲತಾಣ ಜಿಲ್ಲಾ ಸಂಚಾಲಕ ಸಿದ್ದು ಸಸಿಮಠ, ಕುಕನೂರು ತಾಲೂಕಾಧ್ಯಕ್ಷ ರಮೇಶ ಬಿಸರಳ್ಳಿ, ಕರವೇ ಮುಖಂಡರಾದ ಆನಂದ ಎಲಿಗಾರ, ಅಶೋಕ ಖಟವಟೆ, ಮಂಜುನಾಥ ಕಿನ್ನಾಳ, ಶಶಿ ಬೀಡನಾಳ, ಪ್ರಜ್ವಲ್ ಬೆಸ್ತರ, ಆನಂದ ಮಾಗಳಮನಿ, ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: