ತಳ ಸಮುದಾಯದ ಮೊದಲ ಆಶಾ ಕಿರಣ ಬಸವಣ್ಣ: ಶರಣೇಗೌಡ ಪೊ.ಪಾ.

Get real time updates directly on you device, subscribe now.

ಗಂಗಾವತಿ: ಇಡಿ ದೇಶವೇ ಜಾತಿ ವ್ಯವಸ್ಥೆಯಲ್ಲಿ ನಲುಗಿ ಹೋಗುತ್ತಿರುವಾಗ ಹನ್ನೆರೆಡನೇ ಶತಮಾನದಲ್ಲಿ ತುಳತಕ್ಕೊಳಗಾದ ದೇಶದ ತಳ ಸಮುದಾಯದ ಜನತೆಗೆ ಮೊದಲ ಆಶಾ ಕಿರಣದಂತೆ ಕಲ್ಯಾಣ ಕ್ರಾಂತಿಯ ಹರಿಕಾರ ಬಸವಣ್ಣ ಗೋಚರಿಸಿದರು ಎಂದು ಕನ್ನಡ ಸಾಹಿತ್ಯ ಪರಿಷತ್ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಅಭಿಪ್ರಾಯಪಟ್ಟರು.
ಅವರು ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಭಾನುವಾರ ಬಸವರಾಜ್ ಹೇರೂರ್ ರವರ ಬಸವ ಬೆಳಗು ನಾಟಕ ಕೃತಿ ಲೋಕಾರ್ಪಣೆ, ಸರಿಗನ್ನಡ ವೇದಿಕೆ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ, ಕವಿಗೋಷ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದಾರಿ ಅಂಧಕಾರದಲ್ಲಿ ಮುಳುಗಿದ್ದ ಜನತೆಗೆ ಮಹಾನ್ ದೀವಿಗೆಯಾಗಿ ಬೆಳಕು ತೋರಿದ ಬಸವಣ್ಣ, ಆತ್ಮ ಸ್ಥೈರ್ಯ ತುಂಬಿದರು. ಬಸವಣ್ಣ ಆರ್ಥಿಕ ತಜ್ಞ, ಯೋಧ, ವಾಗ್ಮಿ, ಸಾಹಿತಿ, ಆರ್ಥ ಶಾಸ್ತ್ರಜ್ಞ ಎಲ್ಲವೂ ಆಗಿದ್ದರು. ಜಗತ್ತಿಗೆ ಸಂಸತ್ತಿನ ಪರಿಕಲ್ಪನೆ ಕಟ್ಟಿಕೊಟ್ಟ ಶ್ರೇಷ್ಠತೆ ಈತನಿಗೆ ಸಲ್ಲುತ್ತದೆ, ಸರ್ವರಿಗು ಸಮಬಾಳು, ಸಮಪಾಲು, ಕಾಯಕವೇ ಕೈಲಾಸ ಎನ್ನುವ ನಿಡಿಯೊಂದಿಗೆ ಕಾಯಕ ಜಾಗೃತಿ ಮೂಡಿಸಿದ್ದ ಬಸವಣ್ಣ ಅನುಕರಣೀಯ ವ್ಯಕ್ತಿತ್ವವುಳ್ಳವರಾಗಿದ್ದರು, ವಚನಗಳ ಮೂಲಕ ಇಡೀ ಸಮಾಜದ ಅಂಕುಡೊಂಕುಗಳನ್ನು ಸರಳವಾಗಿ ತಿದ್ದಿ ಬುದ್ಧಿ ಹೇಳಿದರು ಎಂದು ಗುಣಗಾನ ಮಾಡಿದರು.
ಸಿರಿಗನ್ನಡ ವೇದಿಕೆಯ ರಾಜ್ಯಧ್ಯಕ್ಷ ಜಿ.ಎಸ್.ಗೋನಾಳ್ ಮಾತನಾಡಿ, ಕನ್ನಡ ಸಾಹಿತ್ಯ, ಕಲೆ, ಜಾನಪದ ಹಾಡುಗಳು ಸೇರಿದಂತೆ ನೆಲ ಜಲ ಭಾಷೆ ವಿಷಯದಲ್ಲಿ ನಿರಂತರ ಹೋರಾಟ, ಮಕ್ಕಳಲ್ಲಿ ಜಾಗೃತಿ, ಓದುವ ಹವ್ಯಾಸ ಹೆಚ್ಚಿಸುವುದು ನಮ್ಮ ಸಂಘಟನೆಯ ಧ್ಯೇಯವಾಗಿದ್ದು ಪದಾಧಿಕಾರಿಗಳು ಇದಕ್ಕೆ ಪೂರಕವಾಗಿ ನಿರಂತರ ಕಾರ್ಯನಿರ್ವಹಿಸಬೇಕೆಂದು ಕಿವಿಮಾತು ಹೇಳಿದರು.
ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿರಿಗನ್ನಡ ವೇದಿಕೆ ಕೊಪ್ಪಳ ಜಿಲ್ಲಾಧ್ಯಕ್ಷ ಮಂಜುನಾಥ ಚಿತ್ರಗಾರ್ ಮಾತನಾಡಿ, ಕನ್ನಡದ ಕೆಲಸ ಸಂಘಟನೆಗಳು, ಸಾಹಿತಿಗಳಿಗೆ ಮಾತ್ರ ಸೀಮಿತವಲ್ಲ, ಈ ನೆಲದಲ್ಲಿ ವಾಸಿಸುವ ಪ್ರತಿಯೊಬ್ಬರು ಕನ್ನಡಕ್ಕೆ ದುಡಿಯಬೇಕು, ಪುಸ್ತಕಗಳಿಂದ, ಕಾದಂಬರಿಗಳಿಂದ ಕನ್ನಡ ಭಾಷೆ ಉಳಿಯುವುದಿಲ್ಲ, ಅನ್ಯ ಭಾಷಿಕರು ನಮ್ಮ ನಾಡಿಗೆ ಉದರ ಪೋಷಣೆಗಾಗಿ ಬಂದರೆ ಅವರಿಗೆ ಕನ್ನಡ ಕಲಿಸುವ ಮುಖೇನ ನಮ್ಮ ಭಾಷಾ ಹಿರಿಮೆ ಹಿಗ್ಗಿಸಬೇಕು, ಆಂಗ್ಲರ ವ್ಯಾಮೋಹ ನಮಗೂ ಬರಬೇಕು, ಭಾಷಾ ಪ್ರೇಮದಿಂದ ಮಾತ್ರ ಕನ್ನಡತನ ಉಳಿಯಲು ಸಾಧ್ಯ ಎಂದು ಸಲಹೆ ನೀಡಿದರು.
ಹಿರಿಯ ಸಾಹಿತಿ ಅಜ್ಮೀರ್ ನಂದಾಪುರ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಬಸವಣ್ಣನೆಂಬ ಬೆಳಗು ನಾಟಕ ಕೃತಿಯು ಬಸವರಾಜ್ ಹೇರೂರು ಅವರ ನಾಜೂಕಿನ ನಿರೂಪಣೆಗೆ ಹಿಡಿದ ಕನ್ನಡಿ, ಕವಿ ತನ್ನತನವನ್ನು ಈ ಕೃತಿಯಲ್ಲಿ ತೋರಿಸಿದ್ದು, ಇದು ರಂಗರೂಪಕ್ಕೆ ಬರಬೇಕು ಅಂದಾಗ ಇದರ ಶ್ರೇಷ್ಠತೆ ಜನರ ಅರಿವಿಗೆ ಬರಲಿದೆ ಎಂದರು.
ಬಸವನೆಂಬ ಬೆಳಕು ನಾಟಕ ಕೃತಿಯ ಕತೃ ಬಸವರಾಜ್ ಹೇರೂರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅರಳಹಳ್ಳಿ ಶ್ರೀ ರಾಜರಾಜೇಶ್ವರಿ ಬೃಹನ್ಮಠದ ಶ್ರೀ ರೇವಣಸಿದ್ದಯ್ಯ ತಾತಾ ಇವರು ವಹಿಸಿದ್ದರು. ಸಾಹಿತಿ ಜಾಜಿ ದೇವೆಂದ್ರಪ್ಪ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗಂಗಾವತಿ ತಾಲೂಕು ಅಧ್ಯಕ್ಷ ನಾಗರಾಜ್ ಇಂಗಳಗಿ, ಮಾದ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೆ.ನಿಂಗಜ್ಜ, ಸಾಹಿತಿ ಶರಣಪ್ಪ ತಳ್ಳಿ, ಹಿರಿಯ ಸಾಹಿತಿ ಮಮ್ತಾಜ್ ಬೇಗಂ, ಚಲನಚಿತ್ರ ಸಾಹಿತಿ ಮಹೇಶ್ ಮನ್ನಾಪುರ, ಗಜಲ್ ಕವಿ ಅಲ್ಲಾಗಿರಿರಾಜ್, ಸಿರಿಗನ್ನಡ ವೇದಿಕೆ ಗೌರವಧ್ಯಕ್ಷ ಮಹೇಶ್ ಸಿಂಗನಾಳ್, ಹನುಮಂತಪ್ಪ ಡಗ್ಗಿ ಇತರರಿದ್ದರು.
ಈ ಸಂದರ್ಭದಲ್ಲಿ ಸಿರಿಗನ್ನಡ ವೇದಿಕೆ ಗಂಗಾವತಿ ತಾಲೂಕು ಘಟಕದ ಮಹೇಶ್ ಸಿಂಗನಾಳ್ (ಗೌರವಧ್ಯಕ್ಷ), ಎಸ್.ಬಸವರಾಜ್ ಹೇರೂರು (ಅಧ್ಯಕ್ಷ), ಹನುಮಂತಪ್ಪ ಡಗ್ಗಿ (ಉಪಾಧ್ಯಕ್ಷ), ಮಂಜುನಾಥ ಹೊಸಕೇರಾ (ಉಪಾಧ್ಯಕ್ಷ), ಸಣ್ಣ ಯಮನೂರಪ್ಪ ಜಂಗಮರ ಕಲ್ಗುಡಿ (ಕೋಶಾಧ್ಯಕ್ಷ), ಶರಣಯ್ಯಸ್ವಾಮಿ ಕರಡಿಮಠ (ಮಾದ್ಯಮ ಸಲಹೆಗಾರ) ಶಕುಂತಲಾ ನಾಯಕ (ಗೌರವ ಕಾರ್ಯದರ್ಶಿಗಳಾಗಿ) ಪದಗ್ರಹಣ ಸ್ವೀಕರಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಕೊಪ್ಪಳ ಜಿಲ್ಲಾಧ್ಯಕ್ಷ ಶರಣೇಗೌಡ ಪೊ.ಪಾ. ಹಾಗು ಬಸವಣ್ಣನೆಂಬ ಬೆಳಗು ಕೃತಿ ರಚನೆಯ ಎಸ್.ಬಸವರಾಜ್ ಹೇರೂರ್ ಇವರನ್ನು ಸನ್ಮಾನಿಸಲಾಯಿತು.

 

 

Get real time updates directly on you device, subscribe now.

Comments are closed.

error: Content is protected !!
%d bloggers like this: