ಶ್ರೀ ಚೈತನ್ಯ ಕಾಲೇಜಿನ ಸಾಹಿತ್ಯಗೆ ಎರಡು ಚಿನ್ನದ ಪದಕ
ಕೊಪ್ಪಳ: ಬಳ್ಳಾರಿಯ ಶ್ರೀ ಚೈತನ್ಯ ಗ್ರೂಪ್‌ನ ಇಲ್ಲಿನ ಶ್ರೀ ಚೈತನ್ಯ ಪಿಯು ಕಾಲೇಜಿನ ಪ್ರಥಮ ವರ್ಷದ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕು. ಸಾಹಿತ್ಯ ಎಂ. ಗೊಂಡಬಾಳ ಪಿಯು ತಾಲೂಕ ಮಟ್ಟದ ಕ್ರೀಡಾಕೂಟದಲ್ಲಿ ಕರಾಟೆಯ ಕುಮಿತೆ ೫೬ಕೆಜಿ ವಿಭಾಗ ಮತ್ತು ಜಂಪ್ ರೋಪ್ ೩೦ ಸೆಕೆಂಡ್ಸ್ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆ ಆಗಿದ್ದಾಳೆ.
ಜಿಲ್ಲಾ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗ ಮತ್ತು ಕಾಳಿದಾಸ ಸಂಯುಕ್ತ ಪದವಿಪೂರ್ವ ಕಾಲೇಜುಗಳ ಆಶ್ರಯದಲ್ಲಿ ನಡೆಯುತ್ತಿರುವ ಪದವಿಪೂರ್ವ ಕಾಲೇಜುಗಳ ತಾಲೂಕ ಮಟ್ಟದಲ್ಲಿ ಕ್ರೀಡಾಕೂಟದಲ್ಲಿ ಎರಡು ಬಹುಮಾನ ಪಡೆದಿದ್ದಾಳೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ್ ಜಾಬ್‌ಗೌಡರ್, ರಾಷ್ಟ್ರೀಯ ಸಿಲಾತ್ ತರಬೇತುದಾರ ರಜಾಕ್ ಹುಸೇನ್ ಹನುಮಸಾಗರ್, ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ತಿರುಪತಿ ನಾಯಕ, ಮಲ್ಲಪ್ಪ, ಅಂಬರೀಶ ಇತರರು ಬಹುಮಾನ ಪಾರಿತೋಷಕ ವಿತರಿಸಿದರು.
ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ಕಾಲೇಜಿನ ವಿದ್ಯಾರ್ಥಿನಿಯನ್ನು ಬಳ್ಳಾರಿ ಶ್ರೀ ಚೈತನ್ಯ ಗ್ರೂಪ್‌ನ ಚೇರಮನ್ ಡಾ. ಟಿ. ರಾಧಾಕೃಷ್ಣ, ಪ್ರಾಂಶುಪಾಲರಾದ ಕೆ. ಸತೀಶಕುಮಾರ, ಕ್ರೀಡಾ ವಿಭಾಗದ ಮುಖ್ಯಸ್ಥರಾದ ಶಿವಕುಮಾರ ತತ್ತಿ ಕಾಲೇಜಿನ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.