ನೀಟ್ ಪರೀಕ್ಷೆಯಲ್ಲಿ ಅಕ್ರಮದ ಶಂಕೆ ಪಾರದರ್ಶಕತೆ ಮತ್ತು ನಿಷ್ಪಕ್ಷಪಾತ ತನಿಖೆಗೆ SFI ಆಗ್ರಹ

Get real time updates directly on you device, subscribe now.

ನೀಟ್‌ ಫಲಿತಾಂಶದಲ್ಲಿ ಭಾರಿ ಅಕ್ರಮದ ನಡೆದಿರಬಹುದಾದ ಶಂಕೆ ದೇಶಾದ್ಯಂತ ವ್ಯಕ್ತವಾಗುತ್ತಿದ್ದು, ಪರೀಕ್ಷೆ ಬರೆದಿರುವ 24 ಲಕ್ಷ ಯುವಜನರು, ಅವರ ಪೋಷಕರಲ್ಲಿ ಮೂಡಿರುವ ಆತಂಕಕ್ಕೆ, ಪರೀಕ್ಷೆಯ ವಿಶ್ವಾಸಾರ್ಹತೆ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ಎನ್‌ಟಿಎ ಆಗಲಿ, ಕೇಂದ್ರದ ನರೇಂದ್ರ ಮೋದಿಯವರ ಸರ್ಕಾರವಾಗಲೀ ಉತ್ತರಿಸದೆ ಲಕ್ಷಾಂತರ ಯುವಜನರ ಭವಿಷ್ಯವನ್ನು ಮಣ್ಣುಪಾಲು ಮಾಡಲು ಹೊರಟಿದೆ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (SFI) ರಾಜ್ಯ ಅಧ್ಯಕ್ಷ ಅಮರೇಶ ಕಡಗದ ಆರೋಪಿಸಿದ್ದಾರೆ.
ನೀಟ್ ಪರೀಕ್ಷೆಯಲ್ಲಿ 67 ಅಭ್ಯರ್ಥಿಗಳಿಗೆ 720ಕ್ಕೆ 720 ಅಂಕಗಳು ಬಂದಿವೆ. ಅಂದರೆ 100% ಅಂಕಗಳು‌ ಬಂದಿದೆ. ಆದರೆ ಈ ಹಿಂದೆ ಬಂದ ಟಾಪರ್‍‌ಗಳ ಸಂಖ್ಯೆ ಎಷ್ಟು? ಎಂಬುದನ್ನು ಹೋಲಿಕೆ ಮಾಡಿ ನೋಡಿದರೆ ಈ ಬಾರಿಯ ಫಲಿತಾಂಶದಲ್ಲಿ ಅಕ್ರಮದ ವಾಸನೆ ಬಡಿಯುತ್ತದೆ ಎಂದು ಆರೋಪಿಸಿದರು.
2019ರಲ್ಲಿ ಒಬ್ಬ ವಿದ್ಯಾರ್ಥಿ, 2020ರಲ್ಲಿ ಒಬ್ಬ, 2021ರಲ್ಲಿ ಮೂವರು, 2022ರಲ್ಲಿ ಒಬ್ಬ, 2023ರಲ್ಲಿ ಇಬ್ಬರು ವಿದ್ಯಾರ್ಥಿಗಳು ನೂರಕ್ಕೆ ನೂರು ಪ್ರತಿಶತ ಅಂಕ ಪಡೆದಿದ್ದರೆ ಈ ವರ್ಷ – 67 ವಿದ್ಯಾರ್ಥಿಗಳು ಟಾಪರ್​​ಗಳಾಗಿ ಹೊರಹೊಮ್ಮಿದ್ದಾರೆ. ನೀಟ್‌ ಪರೀಕ್ಷೆಯಲ್ಲಿ ಪ್ರತಿ ತಪ್ಪು ಉತ್ತರಕ್ಕೆ ಋಣಾತ್ಮಕ ಅಂಕಗಳಿರುವ ಕಾರಣ ಇಷ್ಟೊಂದು ಮಂದಿ ನೂರು ಪ್ರತಿಶತ ಅಂಕ ಗಳಿಸುವುದು ಅಸಾಧ್ಯ ಎನ್ನಿಸುತ್ತದೆ. ಇದು ಕಾಕತಾಳೀಯವೋ ಅಥವಾ ಹೊಸ ಪ್ರಯೋಗವೋ? ಇದನ್ನು  ಕೇಂದ್ರ ಸರ್ಕಾರವೇ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡಬೇಡಿ ನೀಟ್‌ನ 67 ಟಾಪರ್‌ಗಳಲ್ಲಿ 44 ಮಂದಿ ‘ಗ್ರೇಸ್‌ಮಾರ್ಕ್‌’ ಆಧಾರದ ಮೇಲೆ ಟಾಪರ್‌ಗಳಾಗಿದ್ದಾರೆ. ಗ್ರೇಸ್ ಅಂಕಗಳ ಆಧಾರದ ಮೇಲೆ ಇಷ್ಟೊಂದು ಪರೀಕ್ಷಾರ್ಥಿಗಳು ಟಾಪರ್‌ಗಳಾದಾಗ, ‘ಮಾರ್ಕಿಂಗ್ ಪ್ರಕ್ರಿಯೆ’ ಮತ್ತು ‘ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆ ಮತ್ತು ಸಿಂಧುತ್ವ’ದ ಮೇಲೆ ಪ್ರಶ್ನೆ ಹುಟ್ಟುಹಾಕುವುದಿಲ್ಲವೆ?, ಇನ್ನೊಂದು ಅಚ್ಚರಿಯ ವಿಷಯವೇನೆಂದರೆ 62 ರಿಂದ 69 ರವರೆಗಿನ ಸರಣಿ ಸಂಖ್ಯೆಗಳೊಂದಿಗೆ ನೀಟ್‌ ಟಾಪರ್‌ಗಳು ಹರಿಯಾಣದ ಫರಿದಾಬಾದ್‌ನಲ್ಲಿರುವ ಒಂದೇ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದವರು. ಈ ಪೈಕಿ 6 ಜನರು 720/720 ಅಂಕಗಳೊಂದಿಗೆ ನೀಟ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ ಮತ್ತು 718 ಮತ್ತು 719 ಅಂಕಗಳನ್ನು 2 ಮಂದಿ ಪಡೆದಿದ್ದಾರೆ. ಮೇಲ್ನೋಟಕ್ಕೆ ಪರೀಕ್ಷಾ ಅಕ್ರಮ ನಡೆದಿರುವುದು ಕಂಡುಬಂದರೂ ಎನ್‌ಟಿಎ  ಈ ಫಲಿತಾಂಶವನ್ನು ಸಮರ್ಥಿಸುತ್ತಿದೆ. ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡಲು ಹೊರಟಿರುವ
 ಫರಿದಾಬಾದ್‌ನ ನೀಟ್‌ ಪರೀಕ್ಷಾ ಕೇಂದ್ರದಲ್ಲಿ ತಪ್ಪು ಪತ್ರಿಕೆಯನ್ನು ವಿತರಿಸಲಾಗಿತ್ತು. ಇದರಿಂದಾಗಿ ಅಭ್ಯರ್ಥಿಗಳು 45 ನಿಮಿಷಗಳನ್ನು ಕಳೆದುಕೊಳ್ಳವಂತಾಯಿತು. ಹಾಗಾಗಿ ಈ ಸಮಯಕ್ಕೆ ಪ್ರತಿಯಾಗಿ ಎನ್‌ಟಿಎ ಈ ಕೇಂದ್ರದ ಅಭ್ಯರ್ಥಿಗಳಿಗೆ ‘ಗ್ರೇಸ್‌ಮಾರ್ಕ್‌’ ನೀಡಿದೆ. ಇದು ನೂರು ಪ್ರತಿಶತ ಅಂಕ ಗಳಿಕೆಗೆ ಕಾರಣ ಎಂದು ಕೇಂದ್ರ ಸರ್ಕಾರ ಸಮಜಾಯಿಷಿ ನೀಡುತ್ತಿದೆ. ‘ಎನ್‌ಟಿಎ ಪ್ರಾಸ್ಪೆಕ್ಟಸ್’, ‘ನೀಟ್ ಬ್ರೋಷರ್’ ಮತ್ತು ‘ಸರ್ಕಾರಿ ಸೂಚನೆಗಳಲ್ಲಿ’ ಈ ರೀತಿಯಲ್ಲಿ ಗ್ರೇಸ್ ಅಂಕಗಳನ್ನು ನೀಡುವ ಅವಕಾಶ ಇರುವ ಕುರಿತು ಯಾವುದೇ ಮಾಹಿತಿ ಇಲ್ಲ. ಹಾಗಾದರೆ ಈ ಗ್ರೇಸ್ ಮಾರ್ಕ್‌ಗಳನ್ನು ಯಾವ ಆಧಾರದ ಮೇಲೆ ನೀಡಲಾಗಿದೆ? ಈ ಬಗ್ಗೆ ಕೇಂದ್ರ ಸರ್ಕಾರದಿಂದ ಸಾರ್ವಜನಿಕ ಸೂಚನೆ ಅಥವಾ ಜಾಹೀರಾತು ನೀಡಲಾಗಿದೆಯೇ? ಬೇರೆ ಯಾವುದಾದರೂ ಕೇಂದ್ರದಲ್ಲಿ ಇದೇ ರೀತಿ ಗ್ರೇಸ್ ಮಾರ್ಕ್ಸ್ ನೀಡಲಾಗಿದೆಯೇ? ಎಂಬಿತ್ಯಾದಿ ಮಾಹಿತಿಯನ್ನು ಆತಂಕದಲ್ಲಿರುವ ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ನೀಡಬೇಕು ಎಂದು SFI ಸಂಘಟನೆ ಒತ್ತಾಯ ಮಾಡಿದೆ.
ಲಕ್ಷಾಂತರ ಯುವಕರ ಕನಸುಗಳು ನುಚ್ಚುನೂರು: 2019 ರಿಂದ 2023 ರವರೆಗೆ, ನೀಟ್‌ ಪರೀಕ್ಷೆಯಲ್ಲಿ 600 ಅಂಕಗಳನ್ನು ಗಳಿಸಿದವರು ಕೈಗೆಟುಕುವ ಶುಲ್ಕದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸುಲಭವಾಗಿ ಪ್ರವೇಶ ಪಡೆದಿದ್ದರು. ಈ ವರ್ಷ ನೀಟ್ ಪರೀಕ್ಷೆಯ ಅಂಕಮಿತಿಯು 137 ಅಂಕಗಳಿಂದ 164 ಕ್ಕೆ ಏರಿಕೆಯಾಗಿದೆ. ಈ ಬಾರಿ 660 ಅಂಕ ಗಳಿಸಿದ ಅಭ್ಯರ್ಥಿಗಳು ಮಾತ್ರ ಕೈಗೆಟಕುವ ಶುಲ್ಕದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಬಹುದು. ನೀಟ್ ಪರೀಕ್ಷೆಗೆ ಹಾಜರಾಗಿರುವ 24 ಲಕ್ಷಕ್ಕೂ ಹೆಚ್ಚು ಯುವಕರು ಬಹುತೇಕ ಬಡ-ಮಧ್ಯಮ ವರ್ಗದ ಕುಟುಂಬಗಳಿಂದ ಬಂದವರು. ವೈದ್ಯರಾಗುವ ಹಂಬಲ ಹೊಂದಿದವರು. ಆದರೆ ಈ ಪರೀಕ್ಷಾ ಗೊಂದಲದಿಂದಾಗಿ ಲಕ್ಷಾಂತರ ಯುವಕರ ಕನಸುಗಳು ನುಚ್ಚುನೂರಾಗಿದೆ ಎಂದು ಸಂಘಟನೆ ಆತಂಕ ವ್ಯಕ್ತಪಡಿಸಿದೆ.
ಕೇಂದ್ರ ಸರ್ಕಾರ ವೈದ್ಯಕೀಯ ಶಿಕ್ಷಣ ಪಠ್ಯಕ್ರಮದಲ್ಲಿ ಗಮನಾರ್ಹವಾದ ಕಡಿತ ಮಾಡುತ್ತಾ ಕಾಲೇಜ್ ಶುಲ್ಕಗಳನ್ನು ಹೆಚ್ಚಿಸುತ್ತಾ ಹಣವುಳ್ಳವರಿಗೆ ಮಾತ್ರ ವೈದ್ಯಕೀಯ ಶಿಕ್ಷಣ ಎಂಬ ಖಾಸಗೀಕರಣ ನೀತಿಗಳನ್ನು ಎನ್.ಎಂ.ಸಿ, ಮತ್ತು ಎನ್.ಟಿ.ಎ ಸಂಸ್ಥೆಗಳು ಜಂಟಿಯಾಗಿ ಪ್ರೋತ್ಸಾಹಿಸುತ್ತಿವೆ ಇದು ದೇಶದ ಭವಿಷ್ಯಕ್ಕೆ ತುಂಬಾ ಅಪಾಯಕಾರಿಯಾಗಿದೆ, ವೈದ್ಯಕೀಯ ಕ್ಷೇತ್ರದಲ್ಲಿ ರಾಜ್ಯ ಆಧಾರಿತ ಪ್ರವೇಶ ಪರೀಕ್ಷೆ ಪದ್ದತಿಯನ್ನು ಬದಲಾಯಿಸಲು ಭ್ರಷ್ಟಾಚಾರ ನಡೆಯುತ್ತದೆ ಎಂದು ಹೇಳಲಾಗಿತ್ತು ಈಗ NEET- UG ಗೆ ಸಂಬಂಧಿಸಿದಂತೆ ಇದೇ ಆರೋಪ ಕೇಳಿಬರುತ್ತದೆ.
  ಈ ಘಟನೆಗೆ ಸಂಬಂಧಿಸಿದಂತೆ ಕೂಡಲೇ ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆಯನ್ನು ಮಾಡಬೇಕೆಂದು  ಎನ್ ಟಿಎಯನ್ನು ರದ್ದುಪಡಿಸಲು ಮತ್ತು ಇಲ್ಲಿಯವರೆಗಿನ ಅದರ ಎಲ್ಲಾ ಹಗರಣಗಳನ್ನು ತನಿಖೆ ಮಾಡಲು SFI ರಾಜ್ಯ ಸಮಿತಿ ಒತ್ತಾಯ ಮಾಡುತ್ತದೆ. ಹಾಗೆಯೇ ಇಡೀ ರಾಜ್ಯಾದ್ಯಂತ NTA ಮೂಲಕ ಶಿಕ್ಷಣದ ಕೇಂದ್ರೀಕರಣ ಮಾಡುತ್ತಿರುವುದರ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಸಂಘಟನೆಯ ರಾಜ್ಯಾಧ್ಯಕ್ಷರಾದ ಅಮರೇಶ ಕಡಗದ, ಪ್ರಮುಖರಾದ ಗ್ಯಾನೇಶ ಕಡಗದ, ಶಿವಕುಮಾರ, ವಿರೇಶ, ಶರೀಫ್, ಬಾಲಜಿ, ಮಂಜುನಾಥ ಇತರರು ಪತ್ರಿಕೆ ಪ್ರಕಟಣೆ ಮೂಲಕ ತಿಳಿಸಿದ್ದಾರೆ

Get real time updates directly on you device, subscribe now.

Comments are closed.

error: Content is protected !!
%d bloggers like this: