ಓದುಗ ವಲಯದ ಒಡನಾಡಿ ದೇವೇಂದ್ರಪ್ಪ ಎನ್ ಡೊಳ್ಳಿನ, ಪುಸ್ತಕ ಪ್ರಿಯ ಬಿ.ಆರ್.ತುಬಾಕಿ ಸರ್

Get real time updates directly on you device, subscribe now.

3

 

ಅಕ್ಷರದ ಮೂಲಕ ಮಾತ್ರ ಅರಿವು,ಪ್ರಜ್ಞೆಯ ವಿಸ್ತರಣೆ ಮಾಡಿಕೊಂಡು,ಬದುಕನ್ನು ಹಸನಾಗಿಟ್ಟುಕೊಳ್ಳಲು ಸಾಧ್ಯ ಎಂಬ ಅಚಲ ನಂಬಿಕೆ ಹೊಂದಿದ್ದ ದೇವೇಂದ್ರಪ್ಪ ಎನ್.ಡೊಳ್ಳಿನ , ಮೂಲತಃ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಪಶುಪತಿಹಾಳ ಗ್ರಾಮದವರು.ತೀವ್ರ ಬಡತನ,ಸಂಕಷ್ಟಗಳನ್ನು ಎದುರಿಸಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಸೇವೆಗೆ ಸೇರಿದ ಬಳಿಕ ಕೊಪ್ಪಳದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಇಲ್ಲಿಯೇ ನೆಲೆ ನಿಂತರು.

ಸಾರ್ವಜನಿಕ ಗ್ರಂಥಾಲಯಗಳಿಗೆ ಬರುತ್ತಿದ್ದ ಓದುಗರ ಆಸಕ್ತಿ,ಅಭಿರುಚಿ ಗುರುತಿಸಿ , ಪ್ರೋತ್ಸಾಹಿಸುತ್ತಿದ್ದ ಇವರು ಅಂತಹ ನೂರಾರು ಓದುಗರು ಉನ್ನತ ಸ್ಥಾನಕ್ಕೇರಲು ಒತ್ತಾಸೆಯಾಗಿ ನಿಂತು ನೀರೆರೆದುದನ್ನು ಅನೇಕರು ಸ್ಮರಿಸುತ್ತಾರೆ.ಯುವ ಓದುಗರ ಹಸಿವು ಅರಿತು ಅದಕ್ಕೆ ಸ್ಪಂದಿಸುತ್ತಿದ್ದ ಇವರ ಮನೋಭಾವವೇ ಇವರನ್ನು ಓದುಗ ವಲಯದ ಒಲವಿನ ಒಡನಾಡಿಯನ್ನಾಗಿಸಿತು.

ಅನ್ಯಾಯದ ವಿರುದ್ಧ ಸಿಡಿದೇಳುವ ,ಸಂಘಟಿತವಾಗಿ ಹೋರಾಡುವ ಗುಣವನ್ನು ಹುಟ್ಟಿನಿಂದಲೇ ಬೆಳೆಸಿಕೊಂಡಿದ್ದ ಡಿ.ಎನ್.ಡೊಳ್ಳಿನ ಅವರು,ಕೊಪ್ಪಳ ಭಾಗದಲ್ಲಿ ದಲಿತ ಸಂಘರ್ಷ ಸಮಿತಿ,ವಾಲ್ಮೀಕಿ ಕ್ಷೇಮಾಭಿವೃದ್ಧಿ ಸಂಘಗಳ ಸ್ಥಾಪನೆ ಸೇರಿದಂತೆ ಶೋಷಿತ ಸಮುದಾಯಗಳ ಸಂಘಟನೆಯಲ್ಲಿ ಇವರು ನಿರ್ವಹಿಸಿದ ಪಾತ್ರ ಪ್ರಮುಖವಾಗಿದೆ.

ಪುಸ್ತಕ ಪ್ರಿಯ ಬಿ.ಆರ್.ತುಬಾಕಿ ಸರ್

ಕೊಪ್ಪಳದ ಕನ್ನಡ ಪುಸ್ತಕಾಲಯದ ಬಿ.ಆರ್.ತುಬಾಕಿ ಅವರು ಕನ್ನಡ ನಾಡಿನ ಸಾಹಿತ್ಯದ ಗಂಭೀರ ವಿದ್ಯಾರ್ಥಿಗಳಿಗೆಲ್ಲ ಪರಿಚಿತ ಹೆಸರು. ಓದು, ಪುಸ್ತಕ ಸಂಗ್ರಹದ ಅಭಿರುಚಿಯನ್ನೇ ಅಪರೂಪದ ವ್ಯಾಪಾರವಾಗಿಸಿಕೊಂಡು, ವಾಣಿಜ್ಯೀಕರಣ ಸೋಂಕಿಲ್ಲದೇ ಕನ್ನಡದ ಪುಸ್ತಕಗಳನ್ನು ಒದಗಿಸುತ್ತಿದ್ದರು.

ಪುಸ್ತಕಗಳು, ಅವುಗಳ ಮಹತ್ವವನ್ನು ಸರಳವಾಗಿ ಹೊಸಬರಿಗೂ ತಿಳಿಯುವಂತೆ ವಿವರಿಸುತ್ತ, ಪುಸ್ತಕ ಸಂಸ್ಕೃತಿ ಹರಡುತ್ತಿದ್ದರು.

ಶಿಕ್ಷಕರಾಗಿ ಸರಳತೆಯನ್ನೇ ಮೈವೆತ್ತಂತೆ ಇದ್ದ ತುಬಾಕಿ ಅವರು, ವಿಜಯನಗರ ಸಾಮ್ರಾಜ್ಯದ ಹೊಂಗನಸು ಕಂಡ ಗಂಡುಗಲಿ ಕುಮಾರರಾಮನ ಕುರಿತ ಅಧಿಕೃತ ಮಾಹಿತಿಗಳನ್ನು ಕರಗತ ಮಾಡಿಕೊಂಡಿದ್ದರು.

ಇತಿಹಾಸ ಇವರ ನಾಲಿಗೆಯಲ್ಲಿ ನಲಿದಾಡುತ್ತಿತ್ತು.

ಇಂತಹ ಪುಸ್ತಕದಲ್ಲಿ ಈ ಮಾಹಿತಿ ಸಿಗುತ್ತದೆ ಎನ್ನುವ ಅವರ ಕಾರಾರುವಕ್ಕು ಮಾತಿನಲ್ಲೇ ಅವರ ಪುಸ್ತಕ ಪ್ರೀತಿ ಕಾಣುತ್ತಿತ್ತು. ನಡೆದಾಡುವ ಪರಾಮರ್ಶನದಂತಿದ್ದರು.

ಇಂತಹ ಅಪರೂಪದ ಅಸ್ಮಿತೆಯ ತುಬಾಕಿ ಸರ್ ಕೂಡ ಇನ್ನೂ ಹಲವು ವರ್ಷ ನಮ್ಮನ್ನೆಲ್ಲ ರೂಪಿಸಬಲ್ಲ ಶಕ್ತಿ ಹೊಂದಿದ್ದರು.

ಕೊಪ್ಪಳದಲ್ಲಿ ಮೇ 25 ಮತ್ತು 26 ರಂದು ನಡೆಯಲಿರುವ 10ನೇ ಮೇ ಸಾಹಿತ್ಯ ಮೇಳದಲ್ಲಿ ಪುಸ್ತಕ ಪ್ರದರ್ಶನದ ಮಳಿಗೆಗೆ ಇವರಿಬ್ಬರ ಹೆಸರಿಟ್ಟು ಗೌರವಿಸುತ್ತಿದೆ. ಅವರ ಸಾಂಸ್ಕೃತಿಕ ಹಿರಿಮೆಯನ್ನು ನೆನೆಯುತ್ತಿದೆ..

Get real time updates directly on you device, subscribe now.

Comments are closed.

error: Content is protected !!